ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mohan Vishwa Column: ಮೈ ಡಿಯರ್‌ ಎಡ್ವಿನಾ ಮೌಂಟ್‌ ಬ್ಯಾಟನ್‌ !

ಕದ್ರಿಯವರು ಹೇಳುವಂತೆ ಸೋನಿಯಾ ಗಾಂಧಿಯವರು ತೆಗೆದುಕೊಂಡು ಹೋಗಿದ್ದ ಪೆಟ್ಟಿಗೆ ಗಳಲ್ಲಿ ನೆಹರು ಅವರು ಎಡ್ವಿನಾ ಮೌಂಟ್ ಬ್ಯಾಟನ್, ಆಲ್ಬರ್ಟ್ ಐನ್‌ಸ್ಟೀನ್, ಜಯಪ್ರಕಾಶ್ ನಾರಾಯಣ, ಪದ್ಮಜಾ ನಾಯ್ಡು, ವಿಜಯ ಲಕ್ಷ್ಮಿ ಪಂಡಿತ್ ಮತ್ತು ಬಾಬು ಜಗಜೀವನ್ ರಾಮ್ ಅವರಿಗೆ ಬರೆದ ಪತ್ರಗಳಿದ್ದು, ಅಷ್ಟೂ ಪತ್ರಗಳನ್ನು ಹಿಂದಿರುಗಿಸಿದರೆ ಅನೇಕ ಸಂಶೋಧನೆಗಳಿಗೆ ಉಪಯೋಗವಾಗಲಿದೆ.

Mohan Vishwa Column: ಮೈ ಡಿಯರ್‌ ಎಡ್ವಿನಾ ಮೌಂಟ್‌ ಬ್ಯಾಟನ್‌ !

-

ವೀಕೆಂಡ್‌ ವಿತ್‌ ಮೋಹನ್

ಪ್ರಧಾನಮಂತ್ರಿಗಳ ಗ್ರಂಥಾಲಯವು ಕಳೆದ ವರ್ಷ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಜವಾಹರಲಾಲ್ ನೆಹರು ಅವರು ಎಡ್ವಿನಾ ಮೌಂಟ್ ಬ್ಯಾಟನ್ ಅವರಿಗೆ ಬರೆದಿದ್ದ ಪತ್ರಗಳನ್ನು ಹಿಂದಿರುಗಿಸುವಂತೆ ಕೇಳಿತ್ತು. ಇದರ ಜತೆಗೆ ನೆಹರು ಅವರು ಜಯಪ್ರಕಾಶ್ ನಾರಾಯಣ್ ಮತ್ತು ಆಲ್ಬರ್ಟ್ ಐನ್‌ಸ್ಟೀನ್ ಅವರಿಗೆ ಬರೆದ ಪತ್ರಗಳನ್ನೂ ಹಿಂದಿರುಗಿಸು ವಂತೆ ಅದು ಕೇಳಿದೆ.

51 ಪೆಟ್ಟಿಗೆಗಳಲ್ಲಿ ತುಂಬಿದ್ದ ಪತ್ರಗಳನ್ನು 2008ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ದಲ್ಲಿದ್ದಾಗ ಸೋನಿಯಾ ಗಾಂಧಿಯವರ ಮನೆಗೆ ಗ್ರಂಥಾಲಯದಿಂದ ತರಿಸಿಕೊಳ್ಳಲಾಗಿತ್ತು. ಅಂದಿನಿಂದ ಇಂದಿನವರೆಗೂ ಆ ಪತ್ರಗಳನ್ನು ಸೋನಿಯಾ ಗಾಂಧಿಯವರು ಹಿಂದಿರುಗಿ ಸಿಲ್ಲ.

2025ರ ಡಿಸೆಂಬರ್ 10ರಂದು ಪ್ರಧಾನಮಂತ್ರಿಗಳ ಗ್ರಂಥಾಲಯದ ಸದಸ್ಯರಾದ ರಿಜ್ವಾನ್ ಕದ್ರಿ ಅವರು ರಾಹುಲ್ ಗಾಂಧಿಯವರಿಗೆ ಪತ್ರ ಬರೆದು, ಸೋನಿಯಾ ಗಾಂಧಿಯವರು ಪಡೆದಿದ್ದ ಮೂಲಪತ್ರವನ್ನು ಹಿಂದಿರುಗಿಸಲು ಹೇಳಿದ್ದರು ಅಥವಾ ಪತ್ರಗಳನ್ನು ಫೋಟೋಕಾಪಿ ಅಥವಾ ಡಿಜಿಟಲ್ ರೂಪದಲ್ಲಿ ವಾಪಸ್ ನೀಡುವಂತೆ ಕೇಳಿದ್ದರು.

ಗ್ರಂಥಾಲಯದ ಸದಸ್ಯರು ಕಳುಹಿಸಿದ ಪತ್ರಕ್ಕೆ ಸ್ಪಂದಿಸದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ನೆಹರು ಬರೆದಿರುವ ಪತ್ರಗಳನ್ನು ಇಂದಿಗೂ ಹಿಂದಿರುಗಿಸಿಲ್ಲ. ಕದ್ರಿಯವರು ಹೇಳುವಂತೆ ಸೋನಿಯಾ ಗಾಂಧಿಯವರು ತೆಗೆದುಕೊಂಡು ಹೋಗಿದ್ದ ಪೆಟ್ಟಿಗೆಗಳಲ್ಲಿ ನೆಹರು ಅವರು ಎಡ್ವಿನಾ ಮೌಂಟ್ ಬ್ಯಾಟನ್, ಆಲ್ಬರ್ಟ್ ಐನ್‌ಸ್ಟೀನ್, ಜಯಪ್ರಕಾಶ್ ನಾರಾಯಣ, ಪದ್ಮಜಾ ನಾಯ್ಡು, ವಿಜಯ ಲಕ್ಷ್ಮಿ ಪಂಡಿತ್ ಮತ್ತು ಬಾಬು ಜಗಜೀವನ್ ರಾಮ್ ಅವರಿಗೆ ಬರೆದ ಪತ್ರಗಳಿದ್ದು, ಅಷ್ಟೂ ಪತ್ರಗಳನ್ನು ಹಿಂದಿರುಗಿಸಿದರೆ ಅನೇಕ ಸಂಶೋಧನೆಗಳಿಗೆ ಉಪಯೋಗವಾಗಲಿದೆ.

ಇದನ್ನೂ ಓದಿ: Mohan Vishwa Column: ಜಿನ್ನಾ ಓಲೈಕೆ, ವಂದೇ ಮಾತರಂಗೆ ಕತ್ತರಿ

ಸೋನಿಯಾ ಗಾಂಧಿಯವರು 2008ರಲ್ಲಿ, ನೆಹರು ಬರೆದ ಪತ್ರಗಳಿದ್ದ 51 ಪೆಟ್ಟಿಗೆಗಳನ್ನು ಪ್ರಧಾನಮಂತ್ರಿಗಳ ಗ್ರಂಥಾಲಯದಿಂದ ಅಧಿಕೃತವಾಗಿ ಹೊತ್ತೊಯ್ದದ್ದು ಯಾಕೆ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ಸಿನ ನೆಹರು ಎಡ್ವಿನಾ ಮೌಂಟ್ ಬ್ಯಾಟನ್‌ಗೆ ಬರೆದಿದ್ದ ಪತ್ರದಲ್ಲಿ ಅಂಥದ್ದೇನಿದೆ? ಭಾರತದ ಮೊದಲ ಪ್ರಧಾನಿಯಾಗಿದ್ದ ನೆಹರು ಬರೆದಿದ್ದ ಪತ್ರದಲ್ಲಿರುವ ಅಂಶವನ್ನು ತಿಳಿಯುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ.

ಜೈಲಿನಲ್ಲಿ ಐಷಾರಾಮಿ ಸೆರೆವಾಸ ಅನುಭವಿಸಿದ್ದ ನೆಹರುರಿಗೆ ಇಂದಿರಾ ಗಾಂಧಿಯವರು ಚಿಕ್ಕ ವಯಸ್ಸಿನಲ್ಲಿ ಬರೆದಿದ್ದ ಪತ್ರವನ್ನು ಶಾಲಾ ಮಕ್ಕಳ ಪಠ್ಯದಲ್ಲಿ ಸೇರಿಸಿದ್ದ ಕಾಂಗ್ರೆಸ್ ಪಕ್ಷವು, ನೆಹರು ಅವರು ಎಡ್ವಿನಾ ಮೌಂಟ್ ಬ್ಯಾಟನ್‌ರಿಗೆ ಬರೆದಿದ್ದ ಪತ್ರದ ಬಗ್ಗೆ ಕೇಳಿದಾಗ ಮಾತ್ರ ಗಪ್ʼಚುಪ್ ಆಗಿದ್ದೇಕೆ? ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವೆಂದು ಬುರುಡೆ ಬಿಡುವ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿಯವರು, ನೆಹರು ಬರೆದ ಪತ್ರಗಳನ್ನು ಯಾಕೆ ಗ್ರಂಥಾಲಯಕ್ಕೆ ಹಿಂದಿರುಗಿಸಿಲ್ಲ? ಎಡ್ವಿನಾ ಮೌಂಟ್ ಬ್ಯಾಟನ್ ಅವರು, ಭಾರತದ ಕೊನೆಯ ಬ್ರಿಟಿಷ್ ವೈಸ್‌ರಾಯ್ ಆಗಿದ್ದ ಮೌಂಟ್ ಬ್ಯಾಟನ್‌ರ ಹೆಂಡತಿ; 1947ರಲ್ಲಿ ಬ್ರಿಟಿಷರಿಂದ ವಾಪಸ್ ಅಧಿಕಾರ ಹಸ್ತಾಂತರವಾಗುವ ಸಂದರ್ಭದಲ್ಲಿ ಅವರು ಭಾರತಕ್ಕೆ ಬಂದಿದ್ದರು.

ಈ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಅನೇಕ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳ ಲಾಗಿತ್ತು. ಪ್ರಮುಖವಾಗಿ ಅಖಂಡ ಭಾರತದ ವಿಭಜನೆಯಾಗಿತ್ತು. ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ನೆಹರು ಮತ್ತು ಇತರ ನಾಯಕರ ನಡುವೆ ಅನೇಕ ಪತ್ರ ವ್ಯವಹಾರಗಳು ನಡೆದಿದ್ದವು.

ok

ನೆಹರು ಹಾಗೂ ಎಡ್ವಿನಾ ಮೌಂಟ್ ಬ್ಯಾಟನ್ ನಡುವೆ ಪತ್ರದ ಮೂಲಕ ಅನೇಕ ವಿಷಯ ಗಳ ಬಗ್ಗೆ ಚರ್ಚೆಯಾಗಿರಬಹುದು. ಆ ವಿಷಯಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಸಂಚಿನ ಭಾಗವಾಗಿ ಸೋನಿಯಾ ಗಾಂಧಿಯವರ ಕಡೆಯಿಂದ, ಪತ್ರಗಳಿದ್ದ 51 ಪೆಟ್ಟಿಗೆ ಗಳನ್ನು ಪ್ರಧಾನಿಯವರ ಗ್ರಂಥಾಲಯದಿಂದ 2008ರಲ್ಲಿ ಹೊತ್ತೊಯ್ಯಲಾಗಿತ್ತೆಂದು ಹೇಳಲಾಗುತ್ತಿದೆ.

ಪ್ರಧಾನಮಂತ್ರಿಗಳ ಗ್ರಂಥಾಲಯದ ಸದಸ್ಯ ಕದ್ರಿಯವರು ಸೋನಿಯಾ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ, ಸ್ವತಃ ಇಂದಿರಾ ಗಾಂಧಿಯವರು 1971ರಲ್ಲಿ ನೆಹರು ಅವರ ಪತ್ರಗಳನ್ನು ಜೋಪಾನವಾಗಿ ಗ್ರಂಥಾಲಯದಲ್ಲಿ ಎತ್ತಿಡಲು ಸೂಚನೆ ನೀಡಿದ್ದರೆಂದು ಹೇಳಿದ್ದಾರೆ.

ನೆಹರು ಅವರು ಎಡ್ವಿನಾ ಮೌಂಟ್ ಬ್ಯಾಟನ್ ಅವರಿಗೆ ಬರೆದಿರುವ ಪತ್ರಗಳನ್ನು ಸೋನಿಯಾ ಗಾಂಧಿಯವರು ತೆಗೆದುಕೊಂಡು ಹೋಗಿರುವ ಕಾರಣಕ್ಕೆ, ಪತ್ರದಲ್ಲಿನ ವಿಷಯದ ಬಗ್ಗೆ ಗ್ರಂಥಾಲಯದಲ್ಲಿ ಮಾಹಿತಿಯಿಲ್ಲ. ಆದರೆ ಎಡ್ವಿನಾ ಮೌಂಟ್ ಬ್ಯಾಟನ್ ಮಗಳು ಪಮೇಲಾ ಹಿಕ್ಸ್ ಅವರು ಕೆಲವು ಪತ್ರಗಳನ್ನು ಓದಿರುವುದಾಗಿ ಹೇಳಿದ್ದಾರೆ.

Daughter of Empire: Life as a Mountbatten ಎಂಬ ತಮ್ಮ ಪುಸ್ತಕದಲ್ಲಿ ಅವರು ಈ ಬಗ್ಗೆ ಉಲ್ಲೇಖಿಸಿದ್ದಾರೆ. ಪಿಟಿಐ ವರದಿಯ ಪ್ರಕಾರ, ತಮ್ಮ ತಾಯಿ ಮತ್ತು ನೆಹರು ನಡುವೆ ಆಳವಾದ ಸ್ನೇಹವಿತ್ತು; ಅದು 1947ರಲ್ಲಿ ತಮ್ಮ ಪತಿ ಮತ್ತು ಭಾರತದ ಕೊನೆಯ ವೈಸರಾಯ್ ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಅವರೊಂದಿಗೆ ಎಡ್ವಿನಾ ಭಾರತಕ್ಕೆ ಬಂದಿಳಿದಾಗ ಪ್ರಾರಂಭವಾಯಿತು ಎಂದು ಪಮೇಲಾ ಬರೆದಿದ್ದಾರೆ.

ಎಡ್ವಿನಾ ಅವರು ನೆಹರುರಲ್ಲಿ ತಾವು ಬಯಸುತ್ತಿದ್ದ ಒಡನಾಟ, ಸಮಾನತೆ ಮತ್ತು ಬುದ್ಧಿ ಶಕ್ತಿಯನ್ನು ಕಂಡುಕೊಂಡರು ಎಂದು ಪಮೇಲಾ ಹೇಳಿದ್ದಾರೆ. ಎಡ್ವಿನಾ ಮೌಂಟ್ ಬ್ಯಾಟನ್ ಭಾರತವನ್ನು ತೊರೆಯಲು ಸಜ್ಜಾದಾಗ, ನೆಹರುರಿಗೆ ಪಚ್ಚೆ ಉಂಗುರವನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರು. ಆದರೆ ನೆಹರು ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿದಿದ್ದ ಕಾರಣಕ್ಕೆ, ಅದನ್ನು ಅವರ ಮಗಳು ಇಂದಿರಾ ಗಾಂಧಿಗೆ ನೀಡಿದ್ದರು.

ಪಮೇಲಾ ತಮ್ಮ ಪುಸ್ತಕದಲ್ಲಿ ಚರ್ಚಿಸುವ, ಎಡ್ವಿನಾ ಕುರಿತಾದ ನೆಹರು ಅವರ ವಿದಾಯ ಭಾಷಣವು ಕೂಡ ಆಸಕ್ತಿದಾಯಕವಾಗಿದೆ. ‘ನೀವು ಎಲ್ಲಿಗೆ ಹೋದರೂ ಸಾಂತ್ವನವನ್ನು ತಂದಿದ್ದೀರಿ, ನೀವು ಭರವಸೆ ಮತ್ತು ಪ್ರೋತ್ಸಾಹವನ್ನು ತಂದಿದ್ದೀರಿ’ ಎಂದು ನೆಹರು ಎಡ್ವಿನಾ ಕುರಿತು ತಮ್ಮ ಭಾಷಣದಲ್ಲಿ ಹೇಳಿದ್ದರು.

‘ಭಾರತದ ಜನರು ನಿಮ್ಮನ್ನು ಪ್ರೀತಿಸಬೇಕು, ನಿಮ್ಮನ್ನು ತಮ್ಮಲ್ಲಿ ಒಬ್ಬರಾಗಿ ನೋಡಬೇಕು ಮತ್ತು ನೀವು ಹೋಗುತ್ತಿರುವುದಕ್ಕೆ ದುಃಖಿಸಬೇಕು’ ಎಂದು ಕೂಡ ನೆಹರು ಹೇಳಿದ್ದಾರೆಂದು ಹೇಳುತ್ತಾರೆ. ಮೌಲಾನಾ ಅಬ್ದುಲ್ ಕಲಾಂ ಅವರು ತಮ್ಮ ಆತ್ಮಚರಿತ್ರೆಯ ಪುಸ್ತಕದಲ್ಲಿ- 1947ರಲ್ಲಿ ಭಾರತ ಸ್ವತಂತ್ರಗೊಂಡ ಸಂದರ್ಭದಲ್ಲಿ ಎಡ್ವಿನಾ ಮೌಂಟ್ ಬ್ಯಾಟನ್ ದೊಡ್ಡ ಪ್ರಭಾವ ಬೀರಿದ್ದರೆಂದು ಬರೆದಿದ್ದಾರೆ.

‘ಜವಾಹರಲಾಲ್ ನೆಹರು ಅವರು ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ಪ್ರಭಾವಿತ ರಾಗಿದ್ದರು. ಆದರೆ ಲೇಡಿ ಮೌಂಟ್ ಬ್ಯಾಟನ್ ಅವರ ಪ್ರಭಾವ ಇನ್ನೂ ಹೆಚ್ಚಾಗಿರಬಹುದು. ಅವರು ಬುದ್ಧಿವಂತರು ಮಾತ್ರವಲ್ಲ, ಅತ್ಯಂತ ಆಕರ್ಷಕ ಮತ್ತು ಸ್ನೇಹಪರ ಸ್ವಭಾವವನ್ನು ಹೊಂದಿದ್ದರು’ ಎಂದು ಕೂಡ ಈ ಪುಸ್ತಕದಲ್ಲಿ ಬರೆಯಲಾಗಿದೆ.

ಪಮೇಲಾ ಮೌಂಟ್ ಬ್ಯಾಟನ್ ತಮ್ಮ ಮನೆಯಲ್ಲಿ ಸಿಕ್ಕ ಡೈರಿಗಳಲ್ಲಿ ಬರೆದಿದ್ದ ವಿಷಯ ಗಳು ಮತ್ತು ಅವರ ಕುಟುಂಬದ ಆಲ್ಬಮ್‌ಗಳಿಂದ ಆಯ್ದ ಭಾಗಗಳನ್ನು ಬಳಸಿ ‘ಇಂಡಿಯಾ ರಿಮೆಂಬರ್ಡ್: ಎ ಪರ್ಸನಲ್ ಅಕೌಂಟ್ ಆಫ್ ದಿ ಮೌಂಟ್ ಬ್ಯಾಟನ್ಸ್ ಡ್ಯೂರಿಂಗ್ ದ ಪವರ್ ಟ್ರಾನ್ಸ್‌ʼಫರ್’ ಎಂಬ ಪುಸ್ತಕವನ್ನು ಅವರು ಬರೆದಿದ್ದಾರೆ.

ಪಮೇಲಾ ನೆಹರುರನ್ನು ಪ್ರೀತಿಯಿಂದ ’ಮಾಮು’ ಎಂದು ಕರೆಯುತ್ತಿದ್ದರು, ಎಡ್ವಿನಾ-ನೆಹರು ಸಂಬಂಧದ ಕುರಿತು ಲಾರ್ಡ್ ಮೌಂಟ್ ಬ್ಯಾಟನ್ ಜೂನ್ 1948ರಲ್ಲಿ ತಮ್ಮ ಅಕ್ಕನಿಗೆ ಬರೆದ ಪತ್ರವನ್ನು ಪಮೇಲಾ ಉಲ್ಲೇಖಿಸುತ್ತಾ ಹೀಗೆ ಹೇಳುತ್ತಾರೆ: ‘ಅವಳು ಮತ್ತು ಜವಾಹರಲಾಲ್ ಒಟ್ಟಿಗೆ ತುಂಬಾ ಚೆನ್ನಾಗಿರುತ್ತಾರೆ, ಪಮ್ಮಿ ಮತ್ತು ನಾನು ನಮ್ಮ ಕೈಲಾ ದಷ್ಟು ಸಹಾಯ ಮಾಡುತ್ತಿದ್ದೇವೆ. ಅಮ್ಮ ಇತ್ತೀಚೆಗಂತೂ ನಂಬಲಾರದಷ್ಟು ಆನಂದ‌ ವಾಗಿದ್ದಾಳೆ ಮತ್ತು ನಾವೆಲ್ಲರೂ ತುಂಬಾ ಸಂತೋಷದ ಕುಟುಂಬವಾಗಿದ್ದೇವೆ’.

ನೆಹರು ಸುಂದರ ಇಂಗ್ಲಿಷ್ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ ಎಂದು ಭಾವಿಸಿದ್ದ ಪಮೇಲಾ, ಮಾರ್ಚ್ 1957ರಲ್ಲಿ ನೆಹರು ಎಡ್ವಿನಾಗೆ ಬರೆದ ಪತ್ರವನ್ನು ಸಹ ಉಲ್ಲೇಖಿಸುತ್ತಾ ಹೇಳುತ್ತಾರೆ: ‘ನಮ್ಮ ನಡುವೆ ಆಳವಾದ ಬಾಂಧವ್ಯವಿದೆ ಎಂದು ನಾನು ಇದ್ದಕ್ಕಿದ್ದಂತೆ ಅರಿತುಕೊಂಡೆ (ಬಹುಶಃ ನೀವು ಸಹ ಹಾಗೆ ಮಾಡಿರಬಹುದು), ಯಾವುದೋ ಅನಿಯಂತ್ರಿತ ಶಕ್ತಿ, ಅದರ ಬಗ್ಗೆ ನನಗೆ ಮಂದವಾಗಿ ತಿಳಿದಿತ್ತು, ನಂತರ ನಮ್ಮನ್ನು ಪರಸ್ಪರ ಸೆಳೆಯಿತು, ಈ ಹೊಸ ಆವಿಷ್ಕಾರದಿಂದ ನಾನು ಉತ್ಸುಕನಾಗಿದ್ದೆ.

ಯಾವುದೋ ಮುಸುಕು ತೆಗೆದಂತೆ ಮತ್ತು ಭಯ ಅಥವಾ ಮುಜುಗರವಿಲ್ಲದೆ ಪರಸ್ಪರರ ಕಣ್ಣುಗಳನ್ನು ನೋಡಬಹುದೆಂಬಂತೆ ನಾವು ಹೆಚ್ಚು ಆತ್ಮೀಯವಾಗಿ ಮಾತನಾಡಿದೆವು’- ಎಡ್ವಿನಾ ಮೌಂಟ್ ಬ್ಯಾಟನ್ ಅವರ ಮಗಳು ಹೇಳುವ ವಿಷಯಗಳನ್ನು ಗಮನಿಸಿದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಹತ್ತು ವರ್ಷಗಳ ನಂತರವೂ, ಅಂದರೆ 1957ರ ವರೆಗೂ ನೆಹರು ಮತ್ತು ಎಡ್ವಿನಾ ನಡುವೆ ನಿರಂತರವಾದ ಪತ್ರ ವ್ಯವಹಾರವಿರುವುದು ತಿಳಿದು ಬರುತ್ತದೆ.

ಬ್ರಿಟಿಷರ ವಿರುದ್ಧ ಹೋರಾಡಿದ ಪಕ್ಷವೆಂದು ಹೇಳುವ ಕಾಂಗ್ರೆಸ್ʼನ ನೆಹರು ಅವರು ಬ್ರಿಟಿಷ್ ವೈಸರಾಯ್ ಹೆಂಡತಿಯ ಜತೆ ಸ್ವಾತಂತ್ರ್ಯಾನಂತರವೂ ನಡೆಸಿದ್ದ ಪತ್ರ ಸಂಭಾ ಷಣೆ ನಿಜವಾಗಿದ್ದರೆ, ಆ ಪತ್ರಗಳಲ್ಲಿ ಸ್ವತಂತ್ರ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವಿಷಯಗಳು ಇದ್ದಿರಬಹುದೆಂಬ ಅನುಮಾನ ಯಾರಿಗಾದರೂ ಮೂಡುವುದು ಸಹಜ.

ಅದಕ್ಕೆ ಹೆದರಿ ಸೋನಿಯಾ ಗಾಂಧಿಯವರು ಆ ಪತ್ರಗಳನ್ನು ಪ್ರಧಾನಿಗಳ ಗ್ರಂಥಾಲಯ ದಿಂದ 2008ರಲ್ಲಿ ತೆಗೆದುಕೊಂಡು ಹೋಗಿರುವ ಅನುಮಾನ ಕಾಡುವುದು ಸಹಜ. ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ್ದ ವೀರ ಸಾವರ್ಕರ್ ಅವರನ್ನು ಪುರಾವೆಗಳಿಲ್ಲದೆ ‘ಬ್ರಿಟಿಷರ ಏಜೆಂಟ್’ ಎಂದು ಹಸಿಸುಳ್ಳು ಹೇಳುವ ಕಾಂಗ್ರೆಸ್ಸಿಗರು, ತಮ್ಮ ಪಕ್ಷದ ನೆಹರು ಮತ್ತು ಎಡ್ವಿನಾ ಮೌಂಟ್ ಬ್ಯಾಟನ್ ಅವರ ನಡುವಿನ ಪತ್ರ ಸಂಭಾಷಣೆಯ ಬಗ್ಗೆ ಏನೆನ್ನುತ್ತಾರೆ? 1947ರ ಸಂದರ್ಭದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳ ಹಿಂದೆ ಎಡ್ವಿನಾ ಮೌಂಟ್ ಬ್ಯಾಟನ್‌ರ ಕಾಣದ ಕೈ ಕೆಲಸ ಮಾಡಿರಬಹುದು.

ಬ್ರಿಟಿಷ್ ವೈಸ್‌ರಾಯ್ ಹೆಂಡತಿ ಮೇಲಿನ ವ್ಯಾಮೋಹದಿಂದ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಅನೇಕ ನಿರ್ಧಾರಗಳನ್ನು ನೆಹರು ಕೈಗೊಂಡಿರುವ ಅನುಮಾನಗಳು ಇದರಿಂದ ಮೂಡುತ್ತದೆ. ಬ್ರಿಟಿಷರು ಪೂರ್ವನಿಯೋಜಿತವಾಗಿ ಬೇಕಂತಲೇ ಒಂದು ಹೆಣ್ಣನ್ನು ಮುಂದೆ ಬಿಟ್ಟು ತಾವಂದುಕೊಂಡ ಕೆಲಸವನ್ನು ಸಾಧಿಸಿಬಿಟ್ಟಿರಬಹುದೆಂಬ ಪ್ರಶ್ನೆಯೂ ಕಾಡುತ್ತದೆ. ನೆಹರು ಮತ್ತು ಎಡ್ವಿನಾ ನಡುವಿನ ಪತ್ರಗಳು ಬಹಿರಂಗಗೊಂಡರೆ ಬ್ರಿಟಿಷರ ಏಜೆಂಟರಂತೆ ವರ್ತಿಸುದ್ದು ಯಾರೆಂಬ ಸತ್ಯ ತಿಳಿಯುತ್ತದೆ.