Photos: ʻನಾನಿಂದು ಏನಾಗಿದ್ದೇನೋ ಅದಕ್ಕೆ ನೀನೇ ಕಾರಣʼ; ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ನಟ ಚಿರಂಜೀವಿ
ಮೆಗಾ ಸ್ಟಾರ್ ಚಿರಂಜೀವಿ ಅವರ ಪತ್ನಿ ಸುರೇಖಾ ಅವರಿಗೆ ಇಂದು (ಫೆ.18) ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ತಮ್ಮ 46 ವರ್ಷಗಳ ಸಂಗಾತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ನಟ ಚಿರಂಜೀವಿ. "ಇಂದು ನಿನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ, ನನ್ನ ಹೃದಯಾಳದ ಮಾತು ಇಷ್ಟೇ, ʻನಾನಿಂದು ಏನಾಗಿದ್ದೇನೋ, ಅದಕ್ಕೆ ನೀನೇ ಕಾರಣʼ.. ಅಪಾರ ಪ್ರೀತಿಯೊಂದಿಗೆ, ಎಂದೆಂದಿಗೂ ನಿನ್ನವ.." ಎಂದು ಚಿರಂಜೀವಿ ಪ್ರೀತಿಯಿಂದ ಪತ್ನಿ ಸುರೇಖಾಗೆ ವಿಶ್ ಮಾಡಿದ್ದಾರೆ. ಇದೇ ವೇಳೆ ತಮ್ಮ ಬದುಕಿನ ಕೆಲವು ಅತ್ಯಮೂಲ್ಯವಾದ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಮನದಾಳದ ಕೆಲವು ಮಾತುಗಳನ್ನು ಚಿರಂಜೀವಿ ಹೇಳಿಕೊಂಡಿದ್ದಾರೆ.
-
"1980ರ ಫೆಬ್ರವರಿ 20 ರಂದು ನಾವು ಹಸೆಮಣೆ ಏರಿದ ದಿನದಿಂದ ಇಲ್ಲಿಯವರೆಗೂ ನೀನೇ ನನ್ನ ಅತಿದೊಡ್ಡ ಶಕ್ತಿ. ಇಂದು ನಿನ್ನ ಹುಟ್ಟುಹಬ್ಬ ಮತ್ತು ಮುಂಬರುವ ನಮ್ಮ ವಿವಾಹ ವಾರ್ಷಿಕೋತ್ಸವದ ಈ ಸುಂದರ ಸಂದರ್ಭದಲ್ಲಿ, ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿ ಬಂದಿದೆ" ಎಂದಿದ್ದಾರೆ ಚಿರಂಜೀವಿ.
"ನೀನು ನಮ್ಮ ಕುಟುಂಬದ ಕೇಂದ್ರಬಿಂದು, ನಮ್ಮೆಲ್ಲರನ್ನು ಪ್ರೀತಿಯಿಂದ ಒಂದಾಗಿ ಬೆಸೆದಿರುವವಳು. ನನ್ನ ಕುಟುಂಬದವರನ್ನು ನಿನ್ನವರಂತೆಯೇ ಅಪ್ಪಿಕೊಂಡೆ, ಪ್ರತಿ ಕ್ಷಣದಲ್ಲೂ ಅವರ ಬೆಂಬಲಕ್ಕೆ ನಿಂತೆ" ಎಂದ ಚಿರಂಜೀವಿ.
"ನನ್ನ ತಂದೆ-ತಾಯಿಗೆ ನೀನು ಕೇವಲ ಸೊಸೆಯಾಗದೆ ನಿಜವಾದ ಮಗಳಾದೆ; ಅವರೂ ಕೂಡ ನಿನ್ನನ್ನು ಅಷ್ಟೇ ವಾತ್ಸಲ್ಯದಿಂದ ಕಂಡರು" ಎಂದ ಚಿರಂಜೀವಿ.
"ಯಾರಾದರೂ ನನ್ನ ಯಶಸ್ಸಿನ ರಹಸ್ಯವೇನೆಂದು ಕೇಳಿದರೆ, ಅದು ನನ್ನ ಪ್ರತಿಭೆಯೂ ಅಲ್ಲ, ಕಠಿಣ ಪರಿಶ್ರಮವೂ ಅಲ್ಲ, ಅದು "ನೀನು" ಎಂದು ನಿಸ್ಸಂಕೋಚವಾಗಿ ಹೇಳುತ್ತೇನೆ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೀನು ಮೌನವಾಗಿ ಹಾಗೂ ಸಮರ್ಥವಾಗಿ ನಿಭಾಯಿಸಿದ್ದರಿಂದಲೇ, ನಾನು ನನ್ನ ವೃತ್ತಿಜೀವನದತ್ತ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಯಿತು" ಎಂದು ಚಿರಂಜೀವಿ ಹೇಳಿದ್ದಾರೆ.
"ಕಷ್ಟವಿರಲಿ, ಸುಖವಿರಲಿ, ನಮ್ಮ ಕುಟುಂಬವನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವುದು ನೀನೇ. ನೀನು ಕೇವಲ ನನ್ನ ಪತ್ನಿಯಲ್ಲ, ನೀನೇ ನನ್ನ ಶಕ್ತಿ, ನನ್ನ ಬೆಂಬಲ ಮತ್ತು ನನ್ನ ನೆಮ್ಮದಿ. ಇಂದು ನಿನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ, ನನ್ನ ಹೃದಯಾಳದ ಮಾತು ಇಷ್ಟೇ - ನಾನಿಂದು ಏನಾಗಿದ್ದೇನೋ, ಅದಕ್ಕೆ ನೀನೇ ಕಾರಣ" ಎಂದಿರುವ ಮೆಗಾ ಸ್ಟಾರ್.