ಕನ್ನಡದಲ್ಲೇ ಮಕರ ಸಂಕ್ರಾಂತಿ ಶುಭಾಶಯ ತಿಳಿಸಿದ ನರೇಂದ್ರ ಮೋದಿ; ಕೇಂದ್ರ ಸಚಿವ ತಿರು ಎಲ್. ಮುರುಗನ್ ನಿವಾಸದಲ್ಲಿ ಹಬ್ಬ ಆಚರಣೆ
ಹಿಂದೂಗಳ ಪ್ರಮುಖ ಹಬ್ಬ ಸಂಕ್ರಾಂತಿ. ಸೂರ್ಯ ಉತ್ತರಾಯಣಕ್ಕೆ ಪ್ರವೇಶಿಸುವ ಈ ಸಂಕ್ರಮಣ ಕಾಲವನ್ನು ಸುಗ್ಗಿಯ ಹಬ್ಬ ಎಂದೂ ಕರೆಯಲಾಗುತ್ತದೆ. ಈ ಬಾರಿ ಮಕರ ಸಂಕ್ರಾಂತಿ ಜನವರಿ 14ರ ಮಧ್ಯಾಹ್ನ ಆರಂಭವಾಗಿ 15ರವರೆಗೂ ವಿಸ್ತರಣೆಯಾಗಿರುವುದು ವಿಶೇಷ. ಹಬ್ಬದ ಪ್ರಯುಕ್ತ ದೆಹಲಿಯಲ್ಲಿರುವ ಕೇಂದ್ರ ಸಚಿವ ತಿರು ಎಲ್. ಮುರುಗನ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಜತೆಗೆ ಕನ್ನಡದಲ್ಲೇ ಕನ್ನಡಿಗರಿಗೆ ಮಕರ ಸಂಕ್ರಾಂತಿಯ ಶುಭಾಶಯ ತಿಳಿಸಿದರು.
ಸಂಕ್ರಾಂತಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ -
ಮೋದಿ ಹೇಳಿದ್ದೇನು?
ಕನ್ನಡಿಗರಿಗೆ ಪತ್ರ ಬರೆದ ಮೋದಿ, ʼʼಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಸಂಕ್ರಾಂತಿಯು ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆʼʼ ಎಂದಿದ್ದಾರೆ.
ಒಗ್ಗಟ್ಟಿನ ಭಾವನೆ
ಮುಂದುವರಿದು, ʼʼದೇಶಾದ್ಯಂತ ವಿವಿಧ ರೂಪಗಳಲ್ಲಿ, ಆದರೆ ಅಷ್ಟೇ ಉತ್ಸಾಹದಿಂದ ಆಚರಿಸಲಾಗುವ ಈ ಹಬ್ಬವು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಹಬ್ಬ ನಮ್ಮನ್ನೆಲ್ಲ ಒಟ್ಟಾಗಿ ಬೆಸೆಯುವ ಒಗ್ಗಟ್ಟಿನ ಭಾವನೆಯನ್ನು ನೆನಪಿಸುತ್ತದೆʼʼ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ಅನ್ನದಾತರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ
ʼʼಸಂಕ್ರಾಂತಿ ಹಬ್ಬವು ನಮ್ಮ ರೈತರು ಮತ್ತು ಅವರ ಕುಟುಂಬಗಳ ಜೀವನದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ. ಇದು ನಮ್ಮ ಅನ್ನದಾತರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮತ್ತು ಆ ಮೂಲಕ ನಮ್ಮ ಸಮಾಜವನ್ನು ಬಲಪಡಿಸುವ ಸಂದರ್ಭವಾಗಿದೆ. ಸಂಕ್ರಾಂತಿಯು ನಮ್ಮನ್ನು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನಿಮ್ಮ ಮುಂದಿನ ದಿನಗಳು ಯಾವಾಗಲೂ ಸಮೃದ್ಧಿ, ಸಕಾರಾತ್ಮಕತೆ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ. ನಿಮ್ಮ ಮನೆಯಲ್ಲಿ ಸಂತೋಷ ನೆಲೆಸಲಿ, ನಿಮ್ಮೆಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಮತ್ತು ಸಮಾಜದಲ್ಲಿ ಸಾಮರಸ್ಯ ಮೂಡಲಿʼʼ ಎಂದು ಮೋದಿ ಶುಭ ಹಾರೈಸಿದ್ದಾರೆ.
ತಮಿಳಿನಲ್ಲೂ ಶುಭ ಹಾರೈಕೆ
ಹಬ್ಬ ಆಚರಣೆ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ತಮಿಳಿನಲ್ಲೂ ಶುಭ ಕೋರಿದರು. ʼʼಪೊಂಗಲ್ ಹಬ್ಬವು ತಮಿಳು ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗಿನ ನಮ್ಮ ಬಾಂಧವ್ಯವನ್ನು ಬೆಸೆಯುತ್ತದೆ. ಈ ಹಬ್ಬವು ಪ್ರತಿಯೊಬ್ಬರ ಜೀವನಕ್ಕೂ ಸಮೃದ್ಧಿ ಮತ್ತು ಸಂತೋಷವನ್ನು ತರಲಿʼʼ ಎಂದರು.
ವಿವಿಧ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದರು. ಜತೆಗೆ ಭರತನಾಟ್ಯ ಸೇರಿದಂತೆ ಹಲವು ಕಲೆಗಳನ್ನು ಪ್ರದರ್ಶಿಸಲಾಯಿತು.