ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್ನ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ; ಇಲ್ಲಿದೆ ಕಲರ್ಫುಲ್ ಫೋಟೊಸ್
ಅಸ್ಸಾಂನ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾದ ಹೊಸ ಟರ್ಮಿನಲ್ ಕಟ್ಟಡವನ್ನು ಶನಿವಾರ (ಡಿಸೆಂಬರ್ 20) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವಿಶೇಷ ಎಂದರೆ ಇದು ಪ್ರಕೃತಿ ಥೀಮ್ನಲ್ಲಿ ನಿರ್ಮಾಣವಾದ ದೇಶದ ಮೊದಲ ಟರ್ಮಿನಲ್. ಈ ವಿಮಾನ ನಿಲ್ದಾಣವನ್ನು 2032ರ ವೇಳೆಗೆ ಪ್ರತಿ ವರ್ಷ 1.31 ಕೋಟಿ ಪ್ರಯಾಣಿಕರು ಬಳಸುವಂತೆ ಮಾಡುವ ಗುರಿ ಹೊಂದಲಾಗಿದೆ. ಸದ್ಯ ಈ ಟರ್ಮಿನಲ್ನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗುವಾಹಟಿಯ ವಿಮಾನ ನಿಲ್ದಾಣ. ಒಳ ಚಿತ್ರದಲ್ಲಿ ನರೇಂದ್ರ ಮೋದಿ. -
5,000 ಕೋಟಿ ರುಪಾಯಿ ವೆಚ್ಚ
5,000 ಕೋಟಿ ರುಪಾಯಿ ಮೊತ್ತದ ಪ್ರಾಜೆಕ್ಟ್ ಇದಾಗಿದ್ದು, ಈ ಪೈಕಿ 1,000 ಕೋಟಿ ರುಪಾಯಿ ನಿರ್ವಹಣೆಗೆ ಮೀಸಲಿಡಲಾಗಿದೆ. ಈ ವಿಮಾನ ನಿಲ್ದಾಣ ಈಶಾನ್ಯದ ಪ್ರಮುಖ ವಾಯುಯಾನ ಕೇಂದ್ರವಾಗಿ ಬದಲಾಗುವ ನಿರೀಕ್ಷೆ ಇದೆ.
ಮುಂದಿನ ವರ್ಷ ಸಂಪೂರ್ಣ ಕಾರ್ಯಾಚರಣೆ
ಈ ಹೊಸ ಟರ್ಮಿನಲ್ ಫೆಬ್ರವರಿಯಿಂದ ಸಂಪೂರ್ಣವಾಗಿ ಕಾರ್ಯಾಚರಿಸಲಿದೆ. ಇಲ್ಲಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಲಿವೆ. ಅಸ್ತಿತ್ವದಲ್ಲಿರುವ ಟರ್ಮಿನಲ್ ಅನ್ನು ಸರಕು ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸುಧಾರಿತ ತಂತ್ರಜ್ಞಾನದ ಬೆಂಬಲ
ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ, ಆಧುನಿಕ ತಂತ್ರಜ್ಞಾನದಲ್ಲಿ ತಲೆ ಎತ್ತಿರುವ ಈ ಹೊಸ ಟರ್ಮಿನಲ್ 1.4 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ʼʼಸುಧಾರಿತ ತಂತ್ರಜ್ಞಾನದ ಮೂಲಕ ಸುಗಮ ಪ್ರಯಾಣದ ಅನುಭವವನ್ನು ಇದು ನೀಡಲಿದೆʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಜೀವ ವೈವಿಧ್ಯ, ಸಾಂಸ್ಕೃತಿಕ ಪರಂಪರೆಯೇ ಸ್ಫೂರ್ತಿ
ಭಾರತೀಯ ವಾಸ್ತುಶಿಲ್ಪಿಗಳಿಂದ ವಿನ್ಯಾಸಗೊಳಿಸಲ್ಪಟ್ಟ ಈ ಟರ್ಮಿನಲ್, ಅಸ್ಸಾಂನ ಶ್ರೀಮಂತ ಜೀವವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಸ್ಫೂರ್ತಿ ಪಡೆದಿದೆ. ಪ್ರಕೃತಿಯ ಥೀಮ್ನಲ್ಲಿ ನಿರ್ಮಿಸಲಾದ ದೇಶದ ಮೊದಲ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. 'ದಿ ಬಾಂಬೂ ಆರ್ಕಿಡ್' ಹೆಸರಿನ ಇದರ ವಿನ್ಯಾಸವು ಅಸ್ಸಾಂನ ಐಕಾನಿಕ್ 'ಕೊಪೌ ಫೂಲ್' (ಫಾಕ್ಸ್ಟೇಲ್ ಆರ್ಕಿಡ್) ಮತ್ತು ಸ್ಥಳೀಯ ಬಿದಿರಿನ ಪ್ರಭೇದಗಳಾದ ಅಸ್ಸಾಂನ ಭೋಲುಕಾ ಬಿದಿರು ಮತ್ತು ಅರುಣಾಚಲ ಪ್ರದೇಶದ ಅಪತಾನಿ ಬಿದಿರುಗಳಿಂದ ಪ್ರೇರಣೆ ಪಡೆದಿದೆ. ಇದು ಈಶಾನ್ಯದ ಪರಿಸರ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿನಿಧಿಸುತ್ತದೆ.
140 ಮೆಟ್ರಿಕ್ ಟನ್ ಬಿದಿರು ಬಳಕೆ
ಬಿದಿರಿನಿಂದ ಪ್ರೇರಿತವಾದ ಒಳಾಂಗಣಕ್ಕೆ ಸುಮಾರು 140 ಮೆಟ್ರಿಕ್ ಟನ್ ಸ್ಥಳೀಯವಾಗಿ ಮೂಲದ ಈಶಾನ್ಯ ಬಿದಿರನ್ನು ಬಳಸಿಕೊಳ್ಳಲಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ಪ್ರೇರಿತವಾದ ಭೂದೃಶ್ಯಗಳನ್ನು ಪ್ರತಿಫಲಿಸುವ ದೃಶ್ಯಗಳು, ಅಸ್ಸಾಂನ ಕಾಡುಗಳನ್ನು ಪ್ರತಿಬಿಂಬಿಸುವ ಹಚ್ಚ ಹಸಿರಿನ ವಾತಾವರಣವನ್ನು ಟರ್ಮಿನಲ್ನಲ್ಲಿ ಕಟ್ಟಿ ಕೊಡಲಾಗಿದೆ.