Ayodhya Deepotsav 2025: ಅಯೋಧ್ಯೆಯ ಪವಿತ್ರ ಮಣ್ಣಿನಲ್ಲಿ, ಸರಯೂ ನದಿ ದಡದಲ್ಲಿ ಬೆಳಗಲಿವೆ 26 ಲಕ್ಷ ಹಣತೆಗಳು; ಯೋಗಿ ಸರ್ಕಾರದಿಂದ ಸಕಲ ಸಿದ್ಧತೆ
ದೀಪಾವಳಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 20ರಂದು ಹಬ್ಬ ಆರಂಭವಾಗಲಿದೆ. ಅದಕ್ಕೆ ಮುನ್ನುಡಿಯಾಗಿ ಭಾನುವಾರ (ಅಕ್ಟೋಬರ್ 19) ಅಯೋಧ್ಯೆಯಲ್ಲಿ ದೀಪೋತ್ಸವ ಆಯೋಜಿಸಲಾಗಿದೆ. ರಾತ್ರಿಯಾಗುತ್ತಿದ್ದಂತೆ ಸರಯೂ ನದಿ ದಡದಲ್ಲಿ ಲಕ್ಷ ಲಕ್ಷ ಹಣತೆ ಬೆಳಗಲಿವೆ. ಇದಕ್ಕಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಈ ಬಾರಿ ಬರೋಬ್ಬರಿ 26.11 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗುವ ಮೂಲಕ ವಿಶ್ವ ದಾಖಲೆ ಬರೆಯಲಾಗುತ್ತದೆ.

-


ಅಯೋಧ್ಯೆ ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸೇರಿದಂತೆ ಸುಮಾರು 33,000 ಸ್ವಯಂಸೇವಕರು ಬೆಳಕಿನ ಹಬ್ಬವನ್ನು ಚಂದಗಾಣಿಸಲು ಕೈ ಜೋಡಿಸಿದ್ದು, ರಾಮ್ ಕಿ ಪೈಡಿ ಘಾಟ್ ಸೇರಿದಂತೆ ಒಟ್ಟು ಇಲ್ಲಿನ 56 ಘಾಟ್ಗಳಲ್ಲಿ ದೀಪಗಳನ್ನು ಜೋಡಿಸುವ ಕಾರ್ಯ ಪೂರ್ಣಗೊಂಡಿದೆ.

ಏಕಕಾಲಕ್ಕೆ 26 ಲಕ್ಷದ 11 ಸಾವಿರದ 101 ಮಣ್ಣಿನ ಹಣತೆಗಳು ಬೆಳಗುವ ಮೂಲಕ ಗಂಧರ್ವ ಲೋಕವೇ ಸೃಷ್ಟಿಯಾಗಲಿದೆ. ಸರಯೂ ಘಾಟ್ನಿಂದ ರಾಮ್ ಕಿ ಪೈಡಿ, ಚೌಧರಿ ಚರಣ್ ಸಿಂ ಘಾಟ್ ಮತ್ತು ಲಕ್ಷ್ಮಣ ಕೋಟೆ-ಹೀಎ ಪ್ರತಿ ಘಾಟ್ನಲ್ಲೂ ದೀಪದ ಬೆಳಕು ಮೂಡಲಿದೆ. ಕಳೆದ ವರ್ಷ 25 ಲಕ್ಷ 12 ಸಾವಿರದ 585 ದೀಪ ಹಚ್ಚಿಡಲಾಗಿತ್ತು. 2023ರಲ್ಲಿ ಈ ಸಂಖ್ಯೆ 22 ಲಕ್ಷ 23 ಸಾವಿರವಾಗಿತ್ತು. 2022ರಲ್ಲಿ 15 ಲಕ್ಷ 76 ಸಾವಿರ ಹಣತೆ ಬೆಳಗಲಾಗಿತ್ತು.

ದೀಪೋತ್ಸವ ಕಾರಣದಿಂದ 40ಕ್ಕೂ ಹೆಚ್ಚು ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಕುಟುಂಬಕ್ಕೆ ಅನುಕೂಲವಾಗಿದೆ. ಅಯೋಧ್ಯೆ ಸಮೀಪದ ಜೈಸಿಂಗಪುರ, ಪುರ ಬಝಾರ್, ಗೊಸೈಂಗಂಜ್ ಮುಂತಾಸೆಡೆಗಳ ಕುಶಲಕರ್ಮಿಗಳಿಗೆ ಕೈತುಂಬ ಕೆಲಸ ಸಿಕ್ಕಿದೆ. ಮಹಿಳಾ ಸ್ವಸಹಾಯ ಸಂಘಗಳಿಂದಲೂ ಹಣತೆ ಖರೀದಿಸಲಾಗಿದೆ. ದೀಪ ಬೆಳಗಲು 73,000 ಲೀಟರ್ ಎಣ್ಣೆಯ ವ್ಯವಸ್ಥೆ ಮಾಡಲಾಗಿದೆ.

ರಾಮ್ ಕಿ ಪೈಡಿ ಘಾಟ್ನಲ್ಲಿ 16 ಲಕ್ಷ ದೀಪಗಳನ್ನು ಹಚ್ಚಲಾಗುತ್ತಿದ್ದು, ವಿಸ್ತೃತ ರಾಮ್ ಕಿ ಪೈಡಿಯಲ್ಲಿ 4.25 ಲಕ್ಷ ದೀಪಗಳು, ಚೌಧರಿ ಚರಣ್ ಸಿಂಗ್ ಘಾಟ್ನಲ್ಲಿ 4.75 ಲಕ್ಷ ದೀಪಗಳು, ಭಜನ್ ಸಂಧ್ಯಾ ಘಾಟ್ನಲ್ಲಿ 5.25 ಲಕ್ಷ ದೀಪಗಳು, ಲಕ್ಷ್ಮಣ್ ಕಿಲಾ ಘಾಟ್ ಮತ್ತು ಪಕ್ಕದ ಘಾಟ್ಗಳಲ್ಲಿ 1.25 ಲಕ್ಷ ದೀಪಗಳನ್ನು ಹಚ್ಚುವ ಯೋಜನೆಯನ್ನು ರೂಪಿಸಲಾಗಿದೆ.

ಗಿನ್ನೆಸ್ ವಿಶ್ವ ದಾಖಲೆಗಳ ಸಲಹೆಗಾರ ನಿಶ್ಚಲ್ ಬರೋಟ್ ನೇತೃತ್ವದ 150ಕ್ಕೂ ಜನರ ತಂಡ ಈಗಾಗಲೇ ನಾನಾ ಘಾಟ್ಗಳಲ್ಲಿ ಡ್ರೋನ್ಗಳನ್ನು ಬಳಸಿಕೊಂಡು ದಿಯಾಗಳನ್ನು ಎಣಿಸಲು ಪ್ರಾರಂಭಿಸಲಾಗಿದೆ. ಸೋಮವಾರ ಮಹಾ ಆರತಿ ಮೂಲಕ 4 ದಿನಗಳ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.