Actor Suriya: ಸೆಟ್ಟೇರಿತು ಕಾಲಿವುಡ್ ನಟ ಸೂರ್ಯ ಅಭಿನಯದ ಹೊಸ ಸಿನಿಮಾ; ಮಲಯಾಳಂ ಬೆಡಗಿಗೆ ಬಂಪರ್ ಚಾನ್ಸ್
ತಮಿಳು ನಟ ಸೂರ್ಯ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ರಿಲೀಸ್ ಆದ ʼರೆಟ್ರೋʼ ಸಿನಿಮಾ ವಿಮರ್ಶಕರ ಗಮನ ಸೆಳೆದರೂ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸು ಪಡೆಯಿತು. ಇದೀಗ ಅವರು 46ನೇ ಚಿತ್ರಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವೆಂಕಿ ಅಟ್ಲುರಿ ಈ ಸಿನಿಮಾ ನಿರ್ದೇಶಿಸಲಿದ್ದು, ಸಿದ್ಧಾರ್ಥ ಎಂಟರ್ಟೈನ್ಮೆಂಟ್ ನಿರ್ಮಿಸಲಿದೆ. ಈ ಚಿತ್ರಕ್ಕೆ ಹೈದರಾಬಾದ್ನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ.
 
                                Suriya 46 -
 Pushpa Kumari
                            
                                May 19, 2025 7:49 PM
                                
                                Pushpa Kumari
                            
                                May 19, 2025 7:49 PM
                             
                    ತಮಿಳು ನಟ ಸೂರ್ಯ ಅವರ ಮುಂಬರುವ ಚಿತ್ರಕ್ಕೆ ತಾತ್ಕಾಲಿಕವಾಗಿ ʼಸೂರ್ಯ 46ʼ ಎಂದು ಹೆಸರಿಡಲಾಗಿದೆ. ಮೇ 19ರಂದು ಟೈಟಲ್ ಬೋರ್ಡ್ ಅನಾವರಣಗೊಳಿಸುವ ಮೂಲಕ ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ನಾಯಕಿಯಾಗಿ ಮಲಯಾಳಂ ಬೆಡಗಿ, ʼಪ್ರೇಮಲುʼ ಖ್ಯಾತಿಯ ಮಮಿತಾ ಬೈಜು ಆಯ್ದೆಯಾಗಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ನಾಯಕ ಸೂರ್ಯ, ಮಮಿತಾ ಬೈಜು, ವೆಂಕಿ, ನಾಗ ವಂಶಿ, ಜೆ.ವಿ.ಪ್ರಕಾಶ್, ಗುಂಟೂರ್ ಖಾರಮ್ ಖ್ಯಾತಿಯ ನಿರ್ದೇಶಕ ತ್ರಿವಿಕ್ರಮ್ ಉಪಸ್ಥಿತರಿದ್ದರು. ನಿರ್ದೇಶಕ ತ್ರಿವಿಕ್ರಮ್ ಮೊದಲ ಕ್ಲ್ಯಾಪ್ ಬೋರ್ಡ್ ಅನಾವರಣಗೊಳಿಸುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
 
                    ಬ್ಲಾಕ್ ಬ್ಲಸ್ಟರ್ ಹಿಟ್ ಸಿನಿಮಾ ʼಲಕ್ಕಿ ಭಾಸ್ಕರ್ʼ ಖ್ಯಾತಿಯ ನಿರ್ದೇಶಕ ವೆಂಕಿ ʼಸೂರ್ಯ 46ʼಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸೂರ್ಯ ಅವರಿಗೆ ನಾಯಕಿಯಾಗಿ ಮೊದಲ ಬಾರಿ ಮಮಿತಾ ಬೈಜು ನಟಿಸುತ್ತಿದ್ದಾರೆ. ಸೂರ್ಯ ಅವರ ʼಸೂರರೈ ಪೋಟ್ರುʼ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಜಿ.ವಿ.ಪ್ರಕಾಶ್ ಸುಮಾರು ನಾಲ್ಕು ವರ್ಷಗಳ ನಂತರ ಮತ್ತೆ ಅವರೊಂದಿಗೆ ಕೈಜೋಡಿಸಿದ್ದಾರೆ.
 
                    ʼಸೂರ್ಯ 46ʼ ಸಿನಿಮಾ ಸಿತಾರಾ ಎಂಟರ್ಟೈನ್ಮೆಂಟ್ ಬ್ಯಾನರಿನಡಿ ನಿರ್ಮಾಣವಾಗಲಿದೆ. ʼಕೆಜಿಎಫ್ 2ʼ, ʼಉಪೇಂದ್ರʼ ಸಿನಿಮಾ ಖ್ಯಾತಿಯ ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್, ರಾಧಿಕಾ ಶರತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ.
 
                    ಸಿತಾರಾ ಎಂಟರ್ಟೈನ್ಮೆಂಟ್ ತನ್ನ ಎಕ್ಸ್ ಖಾತೆಯಲ್ಲಿ ʼಸೂರ್ಯ 46ʼ ಸಿನಿಮಾದ ಪೂಜಾ ಕಾರ್ಯಕ್ರಮದ ಫೋಟೊ ಹಂಚಿಕೊಂಡಿದೆ. ಬಹು ನಿರೀಕ್ಷಿತ ʼಸೂರ್ಯ 46ʼ ಅನ್ನು ಅದ್ಧೂರಿ ಪೂಜಾ ಸಮಾರಂಭದೊಂದಿಗೆ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ವಿಶಿಷ್ಟ ಕಥೆಯ ಮೂಲಕ ಸೂರ್ಯ ಮತ್ತು ವೆಂಕಿ ಅಟ್ಲೂರಿ ಸಿನಿ ಪ್ರಿಯರ ಮನ ಗೆಲ್ಲಲಿದ್ದಾರೆ. ಸಿನಿಮಾಕ್ಕೆ ಶುಭಕೋರಿದ್ದ ತ್ರಿವಿಕ್ರಮ್ಗೆ ಧನ್ಯವಾದಗಳು ಎಂದು ಶೀರ್ಷಿಕೆಯಡಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.
 
                    ಕಾಲಿವುಡ್ ನಟ ಸೂರ್ಯ ಅವರಿಗೆ ʼರೆಟ್ರೋʼ ಸಿನಿಮಾ ಮೂಲಕ ಅಂದುಕೊಂಡಷ್ಟು ಯಶಸ್ಸು ಸಿಗಲಿಲ್ಲ. ಇದೀಗ ನಿರ್ದೇಶಕ ವೆಂಕಿ ಜತೆ ಸೂರ್ಯ ಕೈಜೋಡಿಸಿದ್ದು, ಯುವ ನಾಯಕಿ ʼಪ್ರೇಮಲುʼ ಸಿನಿಮಾ ಖ್ಯಾತಿಯ ಮಮಿತಾ ಬೈಜು ಜೊತೆ ಅಭಿನಯಿಸಲಿದ್ದಾರೆ. ಈ ಚಿತ್ರವು 2026ರ ಮೇ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
