ಮಂಗಳೂರು ಬಂದರಿಗೆ ಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ; ಮೀನು ವ್ಯಾಪಾರ ನಿಲ್ಲಿಸಿದ್ದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
CM DK Shivakumar: ನಾನು ಭೇಟಿ ನೀಡಿರುವ ಸಂದರ್ಭದಲ್ಲಿ ಮಂಗಳೂರಿನ ಬಂದರು ಚಟವಟಿಕೆಗಳು ಸ್ಥಬ್ದವಾಗಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಅರಿಯಲು ವರದಿ ನೀಡುವಂತೆ ಡಿಸಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಇದಕ್ಕೆ ಅಧಿಕಾರಿಗಳು ಕಾರಣರಾಗಿದ್ದಾರೆ ಅವರನ್ನು ಅಮಾನತು ಮಾಡುತ್ತೇನೆ. ಅಕ್ರಮಗಳನ್ನು ಮುಚ್ಚಿಡುವ ದೃಷ್ಟಿಯಿಂದ ಈ ಕೆಲಸ ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
-
ಮಂಗಳೂರು, ಸೆ. 19: ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar), ಶನಿವಾರ ಬೆಳ್ಳಂಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ, ಮೀನುಗಾರರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಬೆಳಗ್ಗೆ 6 ಗಂಟೆಗೆ ಬಂದರಿಗೆ ಭೇಟಿ ನೀಡಿದ ಸಿಎಂ, ಬಂದರು ಪ್ರದೇಶವನ್ನು ವೀಕ್ಷಿಸಿದರು. ಬೋಟ್‌ನಲ್ಲಿ ಪ್ರಯಾಣ ಮಾಡಿ ಬಂದರು ಅಭಿವೃದ್ಧಿಗೆ ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಮೀನುಗಾರರ ಮುಖಂಡರಿಂದ ಮಾಹಿತಿ ಪಡೆದರು.
ಸದ್ಯ 200 ಬೋಟ್‌ಗಳಿಗೆ ಡಾಕ್ ವ್ಯವಸ್ಥೆ ಇದ್ದು, ಫಲ್ಗುಣಿ, ನೇತ್ರಾವತಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ತ್ರಿವೇಣಿ ಸಂಗಮ ಜಾಗದಲ್ಲಿ ಬೋಟ್‌ಗಳಿಗೆ ಹೊಸ ಡಾಕ್‌ಗಳನ್ನು ಮಾಡಿದರೆ ಹೆಚ್ಚಿನ ಬೋಟ್‌ಗಳ ನಿಲ್ದಾಣಕ್ಕೆ ಅವಕಾಶವಾಗುತ್ತದೆ. ಇದಕ್ಕಾಗಿ ಡ್ರೆಡ್ಜಿಂಗ್ (ಹೂಳೆತ್ತುವುದು) ಮಾಡಬೇಕಾಗಿದೆ. 25 ವರ್ಷಗಳಿಂದ ಡ್ರೆಡ್ಜಿಂಗ್ ಆಗಿಲ್ಲ, ಎರಡು ನದಿ ಹಾಗೂ ಅಳಿವೆ ಬಾಗಿಲಲ್ಲಿ ಡ್ರೆಡ್ಜಿಂಗ್ ಮಾಡಬೇಕಾಗಿದೆ" ಎಂದು ಮೀನುಗರರ ಸಂಘದ ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಮೋಹನ್ ಬೆಂಗ್ರೆ ಅವರು ಸಿಎಂಗೆ ವಿವರಿಸಿದರು.
ಬಂದರಿನ ತಟ ಪ್ರದೇಶದಲ್ಲಿ ಮರಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ತೆಗೆಯಬೇಕು. ಈ ಭಾಗದಲ್ಲಿ ಎಲ್ಲಿ ಆಳವಾದ ಜಾಗ ಇದೆ ಎಂದು ಚಾನಲ್ ಮಾರ್ಕಿಂಗ್ ಬಾಯ್ಸ್‌ಗಳನ್ನು ಹಾಕಿದರೆ ಬೋಟ್‌ಗಳು ಸುಗಮವಾಗಿ ಸಾಗಲು ನೆರವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವ್ಯಾಪಾರ ಸ್ಥಗಿತ; ಸಿಎಂ ಸಿಡಿಮಿಡಿ
ಇನ್ನು ಸಿಎಂ ಭೇಟಿ ಹಿನ್ನೆಲೆಯಲ್ಲಿ ಬಂದರಿನಲ್ಲಿ ವ್ಯಾಪಾರ ಮಾಡಲು ಮೀನುಗಾರರಿಗೆ ಅವಕಾಶ ನೀಡದಿರುವುದನ್ನು ಗಮನಿಸಿದ ಸಿಎಂ ಸಿಡಿಮಿಡಿಗೊಂಡರು. ಯಾವುದೇ ಕಾರಣಕ್ಕೂ ವ್ಯಾಪಾರ ನಿಲ್ಲಬಾರದು. ಇದರಿಂದ ಮೀನುಗಾರರು ಹಾಗೂ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗಲಿದೆ. ವ್ಯಾಪಾರ ಪ್ರಾರಂಭಿಸಿ ಎಂದು ಸೂಚಿಸಿದರು.
Cabinet Meeting: ಕರಾವಳಿ ಭಾಗಕ್ಕೆ ಭರ್ಜರಿ ಗಿಫ್ಟ್: 32,611 ಕೋಟಿ ರೂ. ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ!
ವ್ಯಾಪಾರ ನಿಲ್ಲಿಸಿದವರ ವಿರುದ್ಧ ಕ್ರಮ
ನಾನು ಭೇಟಿ ನೀಡಿರುವ ಸಂದರ್ಭದಲ್ಲಿ ಮಂಗಳೂರಿನ ಬಂದರು ಚಟವಟಿಕೆಗಳು ಸ್ಥಬ್ದವಾಗಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಅರಿಯಲು ವರದಿ ನೀಡುವಂತೆ ಡಿಸಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಇದಕ್ಕೆ ಅಧಿಕಾರಿಗಳು ಕಾರಣರಾಗಿದ್ದಾರೆ ಅವರನ್ನು ಅಮಾನತು ಮಾಡುತ್ತೇನೆ. ಅಕ್ರಮಗಳನ್ನು ಮುಚ್ಚಿಡುವ ದೃಷ್ಟಿಯಿಂದ ಈ ಕೆಲಸ ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನನಗೆ ಯಾವ ಭದ್ರತೆ ಅಗತ್ಯವಿಲ್ಲ. ನಾನು ಮೀನುಗಾರರು, ವರ್ತಕರು ಹಾಗೂ ದೋಣಿಯನ್ನೇ ನಂಬಿರುವ ಮೀನುಗಾರ ಸಮುದಾಯದ ವಾಸ್ತವ ಸ್ಥಿತಿಗತಿಯನ್ನು ಅರಿಯಲು ಬಂದಿದ್ದೇನೆ ಎಂದರು.
ಅಕ್ರಮ, ಕಾನೂನು ಉಲ್ಲಂಘಿಸಿದರೆ ಕ್ರಮ
ದೇಶದ ವಿವಿಧ ಮೂಲೆಗಳಿಂದ ಇಲ್ಲಿಗೆ ಬಂದು ವ್ಯಾಪಾರ ವಹಿವಾಟ ನಡೆಸುತ್ತಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಮೂಲ ಸೌಕರ್ಯಗಳು ದೊರೆಯಬೇಕು, ವಾಹನ ಸಂಚಾರ ಸುಗಮವಾಗಿರಬೇಕು. ಇಲ್ಲಿ ರಸ್ತೆಯನ್ನು ನಿರ್ಬಂಧಿಸಿರುವುದು, ಅಕ್ರಮವಾಗಿ ಕಾಂಪೌಂಡ್ ಹಾಕಿರುವುದೆಲ್ಲವೂ ನನ್ನ ಗಮನಕ್ಕೆ ಬಂದಿದೆ. ಕಾನೂನು ಉಲ್ಲಂಘಿಸಿರುವವರು ಎಷ್ಟೇ ದೊಡ್ಡವರಾಗಿದ್ದರೂ, ಪ್ರಭಾವಶಾಲಿಗಳಾದರು ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು. ಖಾಸಗಿ ಆಸ್ತಿಯಾಗಿದ್ದರೆ ದಾಖಲೆಗಳನ್ನು ನೋಡಿ ಸರ್ಕಾರದ ವಶಕ್ಕೆ ಪಡೆಯುತ್ತೇವೆ. ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಣ್ಣ ಮೀನುಗಾರರು ಬೋಟ್‌ಗಳನ್ನು ನಿಲ್ಲಿಸುವ ವಿಚಾರವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಮೀನುಗಾರರದ್ದು ದೊಡ್ಡ ಸಮುದಾಯ. ಎಲ್ಲಾ ವರ್ಗದ ಜನ ಸೌಹಾರ್ದತೆಯಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಶಕ್ತಿ ಕೇಂದ್ರ. ಈ ಸಮುದಾಯಕ್ಕೆ ಪ್ರೋತ್ಸಾಹ ಕೊಡಬೇಕು. ಹೀಗಾಗಿ, ಇಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುವುದು. ನಾವು ಈಗ ಇರುವ 40-50 ಸೀಟುಗಳನ್ನು 200ಕ್ಕೆ ಏರಿಕೆ ಮಾಡಲಾಗುವುದು, ವಿದ್ಯಾಭ್ಯಾಸ, ಸಮುದ್ರ ಮೆಟ್ರೋ, ನೀಲಿ ಆರ್ಥಿಕತೆಗೆ ಒತ್ತು ನೀಡುವ ಕುರಿತು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು.
16 ಸಾವಿರ ಕೋಟಿ ನಿಮ್ಮ ಮೂಲಸೌಕರ್ಯಕ್ಕೆ
ಈಗಾಗಲೇ 32 ಸಾವಿರ ಕೋಟಿ ಮೊತ್ತವನ್ನು ಅಭಿವೃದ್ಧಿಗಾಗಿ ಘೋಷಣೆ ಮಾಡಿದ್ದೇವೆ. ಇದರಲ್ಲಿ 16 ಸಾವಿರ ಕೋಟಿ ಇಲ್ಲಿನ ಗ್ರಾಮೀಣ ಭಾಗದ ರಸ್ತೆ, ನೀರಿನಂಥ ಮೂಲ ಸೌಕರ್ಯಕ್ಕೆ ನೀಡಲಾಗಿದೆ. ಮಂಗಳೂರು, ಕಾರವಾರಗಳಲ್ಲಿ ಎಲ್ಲೆಲ್ಲಿ ವಹಿವಾಟು ನಡೆಯುತ್ತದೆ ಎಂಬುದರ ಬಗ್ಗೆ ಸಮಗ್ರ ವರದಿ ಪಡೆದು, ಸಮುದ್ರ ಪಕ್ಕದ ಮೀನುಗಾರ ಕುಟುಂಬಕ್ಕೆ ಅಗತ್ಯ ತಾಂತ್ರಿಕ ನೆರವನ್ನು ನೀಡಲು ಯೋಜನೆ ರೂಪಿಸುತ್ತೇವೆ. ಕೆಲವೊಂದು ಸಮಸ್ಯೆಗಳನ್ನು ಮೀನುಗಾರರು ನೇರವಾಗಿ ಹಂಚಿಕೊಳ್ಳಲು ಸಾಧ್ಯವಾಗದೇ ಇರಬಹುದು. ಚಿಂತೆ ಇಲ್ಲ, ಗುಪ್ತ ವರದಿ ತರಿಸಿಕೊಳ್ಳುತ್ತೇನೆ. ಮಾಫಿಯಾಗಳು ಇದೆಯಾ. ತೊಂದರೆ ಆಗುತ್ತಿದೆಯಾ ಎನ್ನುವುದನ್ನು ಗಮನಿಸುತ್ತೇನೆ. ಒಟ್ಟಾರೆ, ನ್ಯಾಯ ಬದ್ಧವಾಗಿ ವ್ಯಾಪಾರ ವಹಿವಾಟು ನಡೆಯಬೇಕು. ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಗುರಿ ಎಂದರು.
ಅಳಿವೆಬಾಗಿಲಲ್ಲಿ 35 ವರ್ಷದಿಂದ ಹೂಳು ಎತ್ತಿಲ್ಲ ಅಪಾಯಕಾರಿಯಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ʼಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಅಲ್ಲಿ ದೋಣಿಯೊಂದು ನಿಂತಿದೆ. ಅದು ಇದೇ ಕಾರಣಕ್ಕೆ ಎನ್ನುವುದು ಸಚಿವ ಖಾದರ್ ಅವರು ವಿವರಿಸಿದ್ದಾರೆ. ಹೂಳನ್ನು ಸಮುದ್ರಕ್ಕೆ ಬಿಡಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಆ ಪ್ರದೇಶವನ್ನು ಮತ್ತಷ್ಟು ವಿಸ್ತಾರ ಮಾಡಿ ಎಂದೂ ಹೇಳಿದ್ದಾರೆ. ಕೇಂದ್ರದ ತಾಂತ್ರಿಕ ಸಮಿತಿ ಇದಕ್ಕೆ ಸಲಹೆ ಕೊಡಬೇಕಂತೆ. ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳುತ್ತೇವೆ. ಹೂಳು ತೆಗೆಯುವ ಪ್ರಕ್ರಿಯೆಗೆ ಲೀಸ್ ಪಡೆಯಬೇಕೆ ಅಥವಾ ಯಂತ್ರ, ದೋಣಿಗಳನ್ನು ಖರೀದಿಸಿ ಹೂಳು ತೆಗೆಸಬೇಕೆ ಎನ್ನುವುದನ್ನು ತೀರ್ಮಾನಿಸುತ್ತೇನೆ. ಈ ಹಿಂದೆ ಸರ್ಕಾರದಿಂದಲೇ ಹೂಳು ತೆಗೆಸುವ ವ್ಯವಸ್ಥೆ ಇತ್ತು. ಈಗಿಲ್ಲ ಎಂದರು.
ಕರಾವಳಿ ರಾಜ್ಯ ಮಾತ್ರವಲ್ಲ, ದೇಶದ ಸಂಪತ್ತು
ನಿನ್ನೆ ಸಚಿವ ಸಂಪುಟಕ್ಕೆ ಈ ಭಾಗದ ಜನರಿಂದ ಬೆಂಬಲ ವ್ಯಕ್ತವಾಗಿದೆಯೇ ಎಂದು ಕೇಳಿದಾಗ ʼಕರಾವಾಳಿ ರಾಜ್ಯದ ಸಂಪತ್ತು ಮಾತ್ರವಲ್ಲ ರಾಷ್ಟ್ರದ ಸಂಪತ್ತು ಕೂಡ ಆಗಿದೆ. ಇದನ್ನು ನಾವು ಕಾಪಾಡಬೇಕು. ಮಂಗಳೂರಿಗಾಗಿ ಅಭಿವೃದ್ಧಿಯ ಪಥ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಕರವಾಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದೆ. ಇದಕ್ಕಾಗಿ 3-4 ಹೊಸ ನೀತಿಗಳನ್ನು ಜಾರಿ ಮಾಡಲು ಚಿಂತನೆ ನಡೆಸಿದ್ದೇವೆ. ಕರಾವಳಿಯಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹ ಕೊಡಬೇಕು. ಹೊಸದಾಗಿ ಹೂಡಿಕೆ ಮಾಡುವವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಅವರು ಬಂದಾಗ ಉಳಿದುಕೊಳ್ಳುವುದಕ್ಕೆ ಒಳ್ಳೆಯ ಹೋಟೆಲ್‌ಗಳ ನಿರ್ಮಾಣ ಮಾಡಬೇಕು. ಇರುವ ಜಾಗವನ್ನು ಗುರುತಿಸಿ ಕಾನೂನಿನ ಚೌಕಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ವಿವರಿಸಿದರು.
ಆರ್. ಅಶೋಕ್ ಅವರಿಗೆ ಮೀನು ಕಳುಹಿಸಿ ಆಸೆ ತೀರಿಸೋಣ
ವಿರೋಧ ಪಕ್ಷ ನಾಯಕ ಅಶೋಕ್ ಅವರಿಗೆ ಮೀನು ತಿನ್ನುವ ಆಸೆಯಾಗಿದೆ. ಅವರಿಗೆ ಮೀನು ಬೇಕಂತೆ. ಮಂಗಳೂರಿನಿಂದಲೇ ಮೀನನ್ನು ಕಳುಹಿಸಿ, ಅವರ ಆಸೆ ತೀರಿಸೋಣ ಎಂದು ತಿರುಗೇಟು ನೀಡಿದರು.
ನಾವು ಕರಾವಳಿ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ನಮ್ಮ ಅಭಿವೃದ್ಧಿಯ ಪ್ರವಾಸದ ಬಗ್ಗೆ ಕುಹಕಿ ಮಾತುಗಳನ್ನು ಆಡುತ್ತಿವೆ. ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗಳು ಮೀನು ತಿನ್ನೋಕೆ ಮಂಗಳೂರಿಗೆ ಹೋಗಿದ್ದಾರೆ ಎಂದಿದ್ದಾರೆ. ನಾನು ಮೀನು ತಿನ್ನುವುದನ್ನು ಬಿಟ್ಟು ಬಹಳ ವರ್ಷಗಳಾಯಿತು. ಇವರಿಗೆ ಅಭಿವೃದ್ಧಿ ಬೇಕಿಲ್ಲʼ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ತುಳು ಭಾಷೆ ಈ ಭಾಗದ ಜನರ ಹೆಮ್ಮೆ
ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ ಮಾಡಿರುವ ಬಗ್ಗೆ ಕೇಳಿದಾಗ, ʼತುಳು ಭಾಷೆ ಈ ಭಾಗದ ಜನರ ಹೆಮ್ಮೆ. ಇದು ಈ ಭಾಗದ ಜನರ ನಿರೀಕ್ಷೆಯಗಿತ್ತು. ಎಲ್ಲಾ ಪಕ್ಷದ ನಾಯಕರು ಇದನ್ನು ಬಯಸಿದ್ದರು. ಹೀಗಾಗಿ ನಮ್ಮ ಸರ್ಕಾರ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ತೀರ್ಮಾನ ಮಾಡಿದ್ದೇವೆʼ ಎಂದು ತಿಳಿಸಿದರು.
ಕಸ್ತೂರಿ ರಂಗನ್ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿರುವೆ
ಕಸ್ತೂರಿ ರಂಗನ್ ವಿಚಾರವಾಗಿ ತೀರ್ಥಹಳ್ಳಿ ಸೇರಿದಂತೆ ಇತರ ಭಾಗಗಳಿಗೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದಾಗ, ʼಈ ವಿಚಾರವಾಗಿ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಲಾಗಿದೆ. ಅಲ್ಲಿ ಚರ್ಚೆ ಮಾಡುವ ಮುನ್ನ ಈ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಲು ಭೇಟಿ ನೀಡುತ್ತಿರುವೆ. ಅವರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ನಾವು ಕೇಂದ್ರದ ಅಧಿಸೂಚನೆ ವಿರುದ್ಧ ಕಠಿಣ ನಿಲುವು ತಾಳಬೇಕಾಗುತ್ತದೆಯೇ ಎಂದು ತೀರ್ಮಾನ ಮಾಡಲಾಗುವುದು. ನಮಗೆ ನಮ್ಮ ಜನರ ಬದುಕು ಮುಖ್ಯ ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆʼ ಎಂದರು.
ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ, ಸಚಿವ ಸಂಪುಟ ಯೋಜನೆಗಳಿಗೆ ಹಣ ಹೇಗೆ ಹೊಂದಿಸುತ್ತಾರೆ ಎಂಬ ಪ್ರಶ್ನೆ ಬಗ್ಗೆ ಕೇಳಿದಾಗ, ʼನಾವು ನುಡಿದಂತೆ ನಡೆಯುತ್ತೇವೆ. ಅದೇ ನಮ್ಮ ಶಕ್ತಿʼ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.