ಇರಾನ್ ಯುದ್ಧ, ಎಲ್‌ಪಿಜಿ ಪೂರೈಕೆ: ಕಾಂಗ್ರೆಸ್‌ನಲ್ಲಿ ಭಿನ್ನಮತ, ರಾಹುಲ್ ಗಾಂಧಿಗೆ ಹಿರಿಯ ನಾಯಕರ ಸೆಡ್ಡು
ಪಶ್ಚಿಮ ಏಷ್ಯಾ ಯುದ್ಧ ಮತ್ತು ಎಲ್‌ಪಿಜಿ ಪೂರೈಕೆ ವಿಚಾರದಲ್ಲಿ ಕಾಂಗ್ರೆಸ್‌ನೊಳಗೆ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸುತ್ತಿದ್ದರೆ, ಶಶಿ ತರೂರ್, ಮನೀಶ್ ತಿವಾರಿ, ಕಮಲ್ ನಾಥ್ ಸೇರಿದಂತೆ ಹಿರಿಯ ನಾಯಕರು ನಿಲುವನ್ನು ಬೆಂಬಲಿಸಿದ್ದಾರೆ. ಎಲ್‌ಪಿಜಿ ಕೊರತೆ ಕುರಿತು ಪಕ್ಷದ ಹೇಳಿಕೆಯನ್ನು ಕಮಲ್ ನಾಥ್ ತಳ್ಳಿಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗಳು ಕಾಂಗ್ರೆಸ್‌ನ ಆಂತರಿಕ ಬಿರುಕುಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿವೆ.
ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ -
ದೆಹಲಿ, ಏ. 4: ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಯುದ್ಧ ಮತ್ತು ದೇಶದ ಎಲ್‌ಪಿಜಿ (LPG) ಪೂರೈಕೆ ವಿಚಾರದಲ್ಲಿ ಕಾಂಗ್ರೆಸ್ (Congress) ಒಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ರಾಹುಲ್ ಗಾಂಧಿ (Rahul Gandhi) ಕಟುವಾಗಿ ಟೀಕಿಸುತ್ತಿದ್ದರೆ, ಶಶಿ ತರೂರ್ (Shashi Tharoor), ಕಮಲ್ ನಾಥ್ (Kamalnath), ಆನಂದ್ ಶರ್ಮ (An and Dharma) ಮತ್ತು ಮನೀಶ್ ತಿವಾರಿ (Manish Tiwari) ಅವರಂತಹ ಹಿರಿಯ ನಾಯಕರು ಸರ್ಕಾರದ ನಡೆಯನ್ನು ಬಹಿರಂಗವಾಗಿ ಬೆಂಬಲಿಸುವ ಮೂಲಕ ರಾಹುಲ್ ನಿಲುವಿಗೆ ವ್ಯತಿರಿಕ್ತವಾಗಿ ಮಾತನಾಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ವಿಚಾರದಲ್ಲಿ ಭಾರತದ ರಾಜತಾಂತ್ರಿಕ ನಿಲುವನ್ನು ರಾಹುಲ್ ಗಾಂಧಿ ''ರಾಜಿಯಾದ ನೀತಿ'' ಎಂದು ಕರೆದಿದ್ದಾರೆ. ಆದರೆ ಶಶಿ ತರೂರ್ ಇದನ್ನು "ಜವಾಬ್ದಾರಿಯುತ ರಾಜತಾಂತ್ರಿಕತೆ" ಎಂದು ಬಣ್ಣಿಸುವ ಮೂಲಕ ಪಕ್ಷದ ಅಧಿಕೃತ ನಿಲುವಿನಿಂದ ದೂರ ಸರಿದಿದ್ದಾರೆ. ಇರಾನ್ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಕೇಂದ್ರ ಸರ್ಕಾರ ಖಂಡಿಸಬೇಕು ಎಂದು ರಾಹುಲ್ ಆಗ್ರಹಿಸಿದ್ದರು. ಆದರೆ ಕೇಂದ್ರ ಸರ್ಕಾರವು ರಾಜತಾಂತ್ರಿಕ ಶಿಷ್ಟಾಚಾರದಂತೆ ಸಂತಾಪ ಸೂಚಿಸಿ ಸಮತೋಲನ ಕಾಯ್ದುಕೊಂಡಿದೆ. ಇದನ್ನು ಮನೀಶ್ ತಿವಾರಿ ಸೇರಿ ಹಲವು ನಾಯಕರು ಶ್ಲಾಘಿಸಿದ್ದಾರೆ.
ಭಾರಿ ಕಾರ್ಯಾಚರಣೆ, ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು
ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆಯಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಜನರಲ್ಲಿ ಆತಂಕ ಮೂಡಿಸುತ್ತಿರುವ ಬೆನ್ನಲ್ಲೇ, ಮಧ್ಯ ಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ "ಯಾವುದೇ ಅನಿಲ ಕೊರತೆಯಿಲ್ಲ, ಸುಖಾಸುಮ್ಮನೆ ರಾಜಕೀಯ ಲಾಭಕ್ಕಾಗಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ" ಎಂದು ಹೇಳಿರುವುದು ಪಕ್ಷಕ್ಕೆ ದೊಡ್ಡ ಮುಜುಗರ ತಂದಿದೆ. ಇದನ್ನು ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು, ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಸುದ್ದಿ ಹರಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಭಿನ್ನಮತ ಇದೇ ಮೊದಲಲ್ಲ. 2025ರಲ್ಲಿ ಪಾಕಿಸ್ತಾನದ ಮೇಲೆ ನಡೆದ 'ಆಪರೇಷನ್ ಸಿಂದೂರ್' ವೇಳೆಯೂ ಶಶಿ ತರೂರ್ ಮತ್ತು ಮನೀಶ್ ತಿವಾರಿ ಸರ್ಕಾರದ ಪರ ನಿಂತು ರಾಹುಲ್ ಗಾಂಧಿ ಅವರ ಟೀಕೆಗಳನ್ನು ತಳ್ಳಿ ಹಾಕಿದ್ದರು. ರಾಷ್ಟ್ರೀಯ ಹಿತಾಸಕ್ತಿ ಮತ್ತು ಭದ್ರತೆಯ ವಿಷಯದಲ್ಲಿ ರಾಹುಲ್ ಗಾಂಧಿ ಅವರ ನಿಲುವಿಗಿಂತ ಸರ್ಕಾರದ ನಿಲುವೇ ಸರಿಯಾಗಿದೆ ಎಂದು ಹಿರಿಯ ನಾಯಕರು ಪದೇ ಪದೆ ಪ್ರತಿಪಾದಿಸುತ್ತಿರುವುದು ಕಾಂಗ್ರೆಸ್‌ನ ಆಂತರಿಕ ಬಿರುಕನ್ನು ಎತ್ತಿತೋರಿಸಿದೆ. ಆನಂದ್ ಶರ್ಮ ಸರ್ಕಾರದ ರಾಜತಾಂತ್ರಿಕತೆಯನ್ನು "ಪರಿಪಕ್ವ ಮತ್ತು ಕೌಶಲ್ಯಪೂರ್ಣ" ಎಂದು ಕರೆದಿದ್ದು, ರಾಷ್ಟ್ರೀಯ ವಿಷಯಗಳಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದು ಕಿವಿಮಾತು ಹೇಳಿದ್ದಾರೆ. ಇದು ಹೈಕಮಾಂಡ್‌ನ ಏಕಪಕ್ಷೀಯ ನಿರ್ಧಾರಗಳ ವಿರುದ್ಧದ ಬಂಡಾಯದಂತೆ ಗೋಚರಿಸುತ್ತಿದೆ.