ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Special Session: ಜ.22 ರಿಂದ 31ರವರೆಗೆ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟ ನಿರ್ಧಾರ

Karnataka Cabinet Meeting: ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚಿಸಲು ಜ.22 ರಿಂದ 31ರವರೆಗೆ ವಿಶೇಷ ಅಧಿವೇಶನ ಕರೆಯಲಾಗಿದೆ. ಜನವರಿ 22ರಂದು ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ಜ.22 ರಿಂದ 31ರವರೆಗೆ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟ ನಿರ್ಧಾರ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌. (ಸಂಗ್ರಹ ಚಿತ್ರ) -

Prabhakara R
Prabhakara R Jan 14, 2026 5:13 PM

ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆಯ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚಿಸಲು ಜ.22 ರಿಂದ 31ರವರೆಗೆ ವಿಶೇಷ ಅಧಿವೇಶನ (Special Session) ನಡೆಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ತುರ್ತು ಸಚಿವ ಸಂಪುಟ​​ ಸಭೆಯಲ್ಲಿ (Cabinet Meeting) ಈ ಬಗ್ಗೆ ತೀರ್ಮಾನಿಸಲಾಗಿದೆ.

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸಂಪುಟದಲ್ಲಿ ಮೂರು ಮುಖ್ಯ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿಧಾನಮಂಡಲ ಅಧಿವೇಶನವನ್ನು ಜ. 22ರಿಂದ ಕರೆಯಲು ತೀರ್ಮಾನಿಸಲಾಗಿದೆ. ಅಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರನ್ನು ಆಹ್ವಾನಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ರಾಜ್ಯಪಾಲರು ಮಾಡಲಿರುವ ಭಾಷಣವನ್ನು ಅನುಮೋದಿಸಲು ಸಚಿವ ಸಂಪುಟವು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದೆ ಎಂದು ತಿಳಿಸಿದರು.

ವಿಬಿಜಿ ರಾಮ್ ಜಿ ಕಾಯ್ದೆಯು ಸಮಾಜದ ಮೇಲೆ ಬೀರಿರುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಹಾಗೂ ಜಾಗೃತಿ ಮೂಡಿಸಲು ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಿ, ನೂತನ ಕಾಯ್ದೆಯ ಕುರಿತು ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ. ಜಂಟಿ ಸದನ 22 ರಂದು ಗುರುವಾರ ಬೆಳಗ್ಗೆ 11.00 ಗಂಟೆಗೆ ಕರೆಯಲು ತೀರ್ಮಾನಿಸಿದೆ. ಜ. 22 ರಿಂದ 31 ರವರಿಗೆ ಜಂಟಿ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

Rahul Gandhi: ಸಿಎಂ- ಡಿಸಿಎಂ ಪ್ರತ್ಯೇಕವಾಗಿ ಭೇಟಿಯಾದ ರಾಹುಲ್‌ ಗಾಂಧಿ, ಎರಡೇ ನಿಮಿಷ ಮಾತುಕತೆ!

ಜನಹಿತ, ರಾಜ್ಯದ ಹಿತ ಕಾಪಾಡಲು ಸೂಕ್ತವಾದ ಹೆಜ್ಜೆ

ಜನಹಿತ, ರಾಜ್ಯದ ಹಿತ ಕಾಪಾಡಲು ಸೂಕ್ತವಾದ ಹೆಜ್ಜೆಯನ್ನು ಸರ್ಕಾರ ಇಡಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯದ ಜನರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾದರೆ ಸರ್ಕಾರ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದರು.

ಸರ್ಕಾರ ಅಧಿವೇಶನ ಕರೆಯದೇ ಬಿಡಲು ಸಾಧ್ಯವಿಲ್ಲ. ಅರಿವು ಹಾಗೂ ಜಾಗೃತಿ ಮೂಡಿಸಲು ಹಾಗೂ ಕೇಂದ್ರ ಸರ್ಕಾರದ ಮೇಲೆ MNREGA ಕಾಯ್ದೆಯ ಮರುಸ್ಥಾಪನೆಗಾಗಿ ಒತ್ತಡ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಿಬಿಜಿ ರಾಮ್ ಜಿ ಬಗ್ಗೆ ಆರೇಳು ರಾಜ್ಯಗಳು ತಮ್ಮ ಸ್ಪಷ್ಟ ನಿಲುವು ಹಾಗೂ ಅಸಮಾಧಾನವನ್ನು ಹೊರಹಾಕಿವೆ. ಇತರ ರಾಜ್ಯಗಳು ತಕರಾರು ತೆಗೆದಿಲ್ಲ ಎಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಪಂಜಾಬ್, ತಮಿಳುನಾಡು ಸರ್ಕಾರ ಧ್ವನಿ ಎತ್ತಿವೆ ಎಂದರು. ಆರೇಳು ರಾಜ್ಯಗಳು ತಮ್ಮ ಸ್ಪಷ್ಟ ನಿಲುವು ಹಾಗೂ ಅಸಮಾಧಾನವನ್ನು ಹೊರಹಾಕಿವೆ ಎಂದರು.

MNREGA ಕಾಯ್ದೆಯಡಿ ಕೇವಲ ಕೆಲಸ ಕೊಡುವುದು ಮಾತ್ರವಲ್ಲ, ಕೆಲಸ ಕೊಡದೇ ಹೋಗಿದ್ದರೆ, ಫಲಾನುಭವಿ ಉದ್ಯೋಗ ಭತ್ಯೆಯನ್ನು ಕೇಳಬಹುದಾಗಿತ್ತು. ಪಂಚಾಯಿತಿಗಳಿಗೆ ಕೆಲಸಗಳ ಬಗ್ಗೆ ತೀರ್ಮಾನಿಸುವ ಹಕ್ಕು ಇತ್ತು. ಹೊಸ ಕಾಯ್ದೆಯಡಿ ಪಂಚಾಯಿತಿಗಳಿಗೆ ಅಧಿಕಾರವಿಲ್ಲ. ಪಂಚಾಯಿತಿಗಳ ವ್ಯಾಪ್ತಿಗೂ ಬರುವುದಿಲ್ಲ. ಕೇಂದ್ರ ಸರ್ಕಾರವೇ ಎಲ್ಲಿ ಕಾಮಗಾರಿ ನಡೆಯಬೇಕೆಂದು ನಿರ್ಧರಿಸಲಿದೆ. ಗ್ರಾಮೀಣ ಆಸ್ತಿಯನ್ನು ಸೃಷ್ಟಿಸಲೆಂದು ಬಳಸಲಾಗುತ್ತಿದ್ದ ಕಾರ್ಮಿಕರನ್ನು ರಸ್ತೆ, ಟನಲ್ ನಿರ್ಮಾಣಕ್ಕೆ ಗುತ್ತಿಗೆದಾರರ ಬಳಿ ಕೆಲಸ ಮಾಡಬೇಕು ಎಂದರು.

ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಕೊಡಲಿ ಏಟು

ಜನರ ಕೆಲಸದ ಹಕ್ಕನ್ನು ಕಿತ್ತುಕೊಂಡು, ಪಂಚಾಯಿತಿಗಳಿಗೆ ನಿರ್ಣಯದ ಅಧಿಕಾರವನ್ನು ಕಸಿದುಕೊಂಡು, ಪಂಚಾಯಿತಿಗಳಿಗೆ ನೀಡಲಾಗಿದ್ದ ಅಧಿಕಾರವನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೇಂದ್ರದಲ್ಲಿ ಅಧಿಕಾರವಿಟ್ಟುಕೊಳ್ಳುವುದು ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಕೊಡಲಿ ಏಟು ಕೊಡಲಾಗಿದೆ ಎಂದರು.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ

ವಿಬಿಜಿ ರಾಮ್ ಜಿ ಬಗ್ಗೆ ವಿಶೇಷ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ ಮಾಡಲಾಗಿದೆ. ಜನರ ನ್ಯಾಯಾಲಯಕ್ಕೆ ಮಾತ್ರವಲ್ಲದೆ ಕಾನೂನಿನ ನ್ಯಾಯಾಲಯದ ಮೊರೆ ಹೋಗಲು ನಿರ್ಣಯಿಸಲಾಗಿದೆ ಎಂದು ಹೇಳಿದರು.

ಲೆಕ್ಕ ಪರಿಶೋಧನೆಯ ಉದ್ದೇಶವೇ ಅವ್ಯವಹಾರಗಳನ್ನು ಪತ್ತೆಹಚ್ಚುವುದು

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರಕ್ಕೆ ಸವಾಲು ಹಾಕಿರುವ ಬಗ್ಗೆ ಮಾತನಾಡಿ, ನಮ್ಮ ರಾಜ್ಯದಲ್ಲಿ ಲೆಕ್ಕ ಪರಿಶೋಧನೆಯ ಉದ್ದೇಶವೇ ಅವ್ಯವಹಾರಗಳನ್ನು ಪತ್ತೆ ಹಚ್ಚಬೇಕೆನ್ನುವುದಾಗಿದೆ. ರಾಜ್ಯದಲ್ಲಿ ಈ ಬಗ್ಗೆ ಕ್ರಮವನ್ನೂ ಕೈಗೊಳ್ಳಲಾಗಿದೆ. ಮೋದಿಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನರೇಗಾ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ್ದರು. ಮುಂದಿನ 12 ವರ್ಷಗಳಲ್ಲಿ ಇದೇ ಯೋಜನೆಯನ್ನು ಹೊಗಳಿದ್ದರು ಎಂದರು.

10 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ: ಸಿಎಂ ಸಿದ್ದರಾಮಯ್ಯ

ಜನರಿಗೆ ಅನ್ಯಾಯ ಮಾಡುವ ಕಾನೂನನ್ನು ಬಿಜೆಪಿ ಒಪ್ಪಬಾರದಿತ್ತು

ಬಿಜೆಪಿಯವರು ಮಾಡಿರುವುದು ರಾಜಕೀಯ ಆರೋಪ. ಇಂಥ ಕರಾಳ ಕಾನೂನು ರೂಪಿಸಿದಾಗ ಜನರ ಹಿತ ಕಾಪಾಡಬೇಕೆಂಬ ಉದ್ದೇಶವಿದ್ದರೆ, ಕಾಯ್ದೆಯ ಅನಾನುಕೂಲತೆಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿತ್ತು. ಜನರಿಗೆ ಅನ್ಯಾಯ ಮಾಡುವ ಈ ಕಾನೂನನ್ನು ಅವರು ಒಪ್ಪಬಾರದಿತ್ತು ಎಂದರು. ಭಾವನಾತ್ಮಕ ಅಂಶದಡಿ ಆಶ್ರಯ ಪಡೆಯುತ್ತಿರುವುದು ದುರದೃಷ್ಟಕರ

ರಾಜಕೀಯವಾಗಿ ಕೆಲವರು ಕಾಯ್ದೆಯನ್ನು ವಿಬಿಜಿ ರಾಮ್ ಜಿ ಎನ್ನುತ್ತಾರೆ. ಇದರಲ್ಲಿ ರಾಮ್ ಎಲ್ಲಿಂದ ಬರುತ್ತದೆ? ಬರೆಯುವಾಗ, ಹೇಳುವಾಗ ತಪ್ಪು ಏಕೆ ಮಾಡುತ್ತಾರೆ? ಭಾವನಾತ್ಮಕ ಅಂಶದಡಿ ಆಶ್ರಯ ಪಡೆಯುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.