Cabinet Meeting: ಕರ್ನಾಟಕದ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಸಚಿವ ಸಂಪುಟ ಒಪ್ಪಿಗೆ
Student Union Elections: ರಾಜ್ಯದ ಕಾಲೇಜು ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗೂಂಡಾಗಿರಿ ಮತ್ತು ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ 1989ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಿಷೇಧಿಸಿತ್ತು. ಇದೀಗ ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲು ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
-
ಬೆಂಗಳೂರು: ಕರ್ನಾಟಕದಲ್ಲಿ 37 ವರ್ಷಗಳ ಬಳಿಕ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ (Student Union Election) ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ವಿದ್ಯಾರ್ಥಿ ಸಂಘದ ಚುನಾವಣೆ, ಉದ್ಯೋಗ ಸೃಷ್ಟಿ ಸೇರಿ ಹಲವು ವಿಷಯಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಡಿಸಿಎಂ ಪರಮೇಶ್ವರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಲೇಜು ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗೂಂಡಾಗಿರಿ ಮತ್ತು ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ 1989ರಲ್ಲಿ ಆಗಿನ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಪ್ರಸ್ತುತ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, ನಿಷೇಧವನ್ನು ತೆರವುಗೊಳಿಸಿ ಚುನಾವಣೆ ನಡೆಸಲು ಮುಂದಾಗಿದೆ.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಸಲುವಾಗಿ ವಿದ್ಯಾರ್ಥಿ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಚುನಾವಣೆ ನಡೆಸುವ ಅಧಿಕಾರ ಕಾಲೇಜು ಆಡಳಿತ ಮಂಡಳಿಗೆ ಬಿಟ್ಟಿದೆ. ವಿದ್ಯಾರ್ಥಿ ಚುನಾವಣೆಯಲ್ಲಿ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡಬೇಕು. ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಉಪಾಧ್ಯಕ್ಷರು ಇರಬೇಕಾಗುತ್ತದೆ. ಒಬ್ಬ ಕಾರ್ಯದರ್ಶಿ, ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ಜಂಟಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಉದ್ಯೋಗ ನಿಧಿ ಯೋಜನೆಯಡಿ 10 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ
ಉದ್ಯೋಗ ನಿಧಿ ಯೋಜನೆಯಡಿ 10 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಉದ್ಯೋಗ ಸೃಷ್ಟಿಸಿದರೆ ಪ್ರತಿ ಉದ್ಯೋಗಿಗೆ ಎರಡು ವರ್ಷ ಪ್ರತಿ ತಿಂಗಳು 2,500 ಪ್ರೋತ್ಸಾಹ ಧನ ನೀಡಲಾಗುವುದು. 10 ಕೋಟಿ ಅನುದಾನದಲ್ಲಿ 182 ಕಡೆ ಟೆಲಿ ಐಸಿಯು ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದ್ದು, ಕರ್ನಾಟಕ ಡಿಜಿಟಲ್ ರೇಡಿಯೋಗ್ರಫಿ ಮಿಷನ್ ಹಂತ-1 ಜಾರಿಗೂ ಅನುಮೋದನೆ ನೀಡಲಾಗಿದೆ. ಇದರಡಿ 162 ಎಕ್ಸ್-ರೇ ಘಟಕಗಳನ್ನು ಡಿಜಿಟಲ್‌ಗೆ ಉನ್ನತೀಕರಣ ಮಾಡಲು 40.50 ಕೋಟಿ ಹಣ ವೆಚ್ಚಕ್ಕೆ ಕ್ಯಾಬಿನೆಟ್ ಸಮ್ಮತಿಸಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ಏರೋಸ್ಪೇಸ್ ಪಾಲಿಸಿಗೆ ಸಂಪುಟ ಅಸ್ತು
ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-31ಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಏರೋಸ್ಪೇಸ್, ಡಿಫೆನ್ಸ್, ಏವಿಯೇಷನ್ ಇದರ ಉತ್ಪಾದನೆ ಹಾಗೂ ನಾವೀನ್ಯತೆ ಕ್ಷೇತ್ರದಲ್ಲಿ ಕರ್ನಾಟಕವನ್ನು ಕೇಂದ್ರವನ್ನಾಗಿ ಸ್ಥಾಪಿಸುವ ಗುರಿ ಹೊಂದಲಾಗಿದೆ. 5 ವರ್ಷಗಳಲ್ಲಿ 60 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಫೋಕಸ್ ಏರಿಯಾ ಮತ್ತು ನಾನ್ ಫೋಕಸ್ ಏರಿಯಾ ಅಂತ ಮಾಡಿದ್ದು, ಹೂಡಿಕೆದಾರರಿಗೆ ಸಬ್ಸಿಡಿ ಕೊಡಲಾಗುತ್ತದೆ. ಎಚ್ಎಎಲ್ನಲ್ಲಿ 40 ಫ್ಲೈಟ್ ಉತ್ಪಾದನೆ ಮಾಡುವ ಯೋಜನೆಯೂ ಇದ್ದು, ಈ ರೀತಿಯ ಯೋಜನೆಗೆ ಯಾರು ಉತ್ಪಾದಕರು ಬರುತ್ತಾರೋ ಅವರಿಗೆ ಸಬ್ಸಿಡಿ ರೂಪದಲ್ಲಿ ಸಹಾಯ ಮಾಡಲು ಪಾಲಿಸಿ ಸೇರಿಸಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 42.83 ಕೋಟಿ ವೆಚ್ಚದಲ್ಲಿ ಡ್ರೋನ್ ಟೆಕ್ನಾಲಜಿ ಫೆಸಿಲಿಟಿ ಸೆಂಟರ್ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಬಡವರಿಗೆ ನಿವೇಶನ ಹಂಚಿಕೆ
ರಾಜ್ಯಾದ್ಯಂತ ಬಡವರಿಗೆ 15 ಲಕ್ಷ ನಿವೇಶನ ಹಂಚಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನ ಕೊಡಲು ನಿರ್ಧರಿಸಲಾಗಿದೆ. ಮೂರು ಹಂತದಲ್ಲಿ ಸೈಟ್ ಹಂಚಿಕೆ ನಡೆಯಲಿದ್ದು, ಸೆಪ್ಟೆಂಬರ್ನಲ್ಲಿ 5 ಲಕ್ಷ ಸೈಟ್ ಹಂಚಿಕೆ ಮಾಡಲಾಗುತ್ತೆ. 2ನೇ ಮತ್ತು 3ನೇ ಹಂತದಲ್ಲಿ ತಲಾ 5 ಲಕ್ಷ ಸೈಟ್ ಹಂಚಿಕೆ ನಡೆಯಲಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸ್ಮಾರ್ಟ್ಕಾರ್ಡ್
ಶಕ್ತಿ ಯೋಜನೆ ಸಂಬಂಧ ಸ್ಮಾರ್ಟ್ಕಾರ್ಡ್ ನೀಡಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಇದಕ್ಕೆ 237 ಕೋಟಿ ರೂ. ಖರ್ಚಾಗಲಿದ್ದು, ಸರ್ಕಾರ 100 ಕೋಟಿ ಹಣ ನೀಡಲಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ವಿತರಣೆ ನಡೆಯಲಿದ್ದು, ಇದರಿಂದ ಮಹಿಳೆಯರ ಉಚಿತ ಪ್ರಯಾಣದ ನಿಖರ ಮಾಹಿತಿ ಸಿಗಲಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.