ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ನನ್ನ ಜತೆ ಬಾತ್‌ರೂಮ್‌ಗೂ ಬರ್ತೀರಾ?”: ಇಡಿ ದಾಳಿ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು ಮಾಧ್ಯಮಗಳ ವಿರುದ್ಧ ಹರಿಹಾಯ್ದ ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್

Keralam Ex-CM Pinarayi Vijayan: ನೀವು ನನ್ನ ಜತೆ ಬಾತ್‌ರೂಮ್‌ಗೂ ಬರ್ತೀರಾ? ಎಂದು ಮಾಧ್ಯಮಗಳ ವಿರುದ್ಧ ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ ಹರಿಹಾಯ್ದಿದ್ದಾರೆ. ಬುಧವಾರ ಚಂಗನಶೆರಿಗೆ ಪ್ರಯಾಣಿಸುತ್ತಿದ್ದ ವಿಜಯನ್ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ವಿಶ್ರಾಂತಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಇಡಿ ತನಿಖೆಯ ಬಗ್ಗೆ ಮಾಧ್ಯಮಗಳು ಪಿಣರಾಯಿ ವಿಜಯನ್ ಅವರನ್ನು ಪ್ರಶ್ನಿಸಿದವು. ಇದಕ್ಕೆ ಅವರು ಕುಪಿತರಾದರು.

ಮಾಧ್ಯಮಗಳ ವಿರುದ್ಧ ಪಿಣರಾಯಿ ವಿಜಯನ್ ಗರಂ

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ (ಸಂಗ್ರಹ ಚಿತ್ರ) -

Priyanka P
Priyanka P Sep 9, 2026 7:06 PM

ತಿರುವನಂತಪುರಂ, ಸೆ. 9: ʼʼನೀವು ನನ್ನ ಜತೆ ಬಾತ್‌ರೂಮ್‌ಗೂ ಬರ್ತೀರಾ?ʼʼ ಎಂದು ಮಾಧ್ಯಮಗಳ ವಿರುದ್ಧ ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಹರಿಹಾಯ್ದ ಘಟನೆ ನಡೆದಿದೆ. ಜಾರಿ ನಿರ್ದೇಶನಾಲಯವು (ED) ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಕೈಗೊಂಡಿರುವ ಇತ್ತೀಚಿನ ಕ್ರಮಗಳ ಕುರಿತು ಮಾಧ್ಯಮ ಪ್ರತಿನಿಧಿಗಳು ಸತತವಾಗಿ ಪ್ರಶ್ನೆಗಳನ್ನು ಕೇಳಿದಾಗ, ಅವರು ತಾಳ್ಮೆ ಕಳೆದುಕೊಂಡರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 66(2)ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಜಾರಿ ನಿರ್ದೇಶನಾಲಯವು ಈಗಾಗಲೇ ಪೂರಕ ಸಾಕ್ಷ್ಯಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ರವಾನಿಸಿದೆ. ಪಿಣಾರಾಯಿ, ಅವರ ಪುತ್ರಿ ಟಿ. ವೀಣಾ ಮತ್ತು ಅಳಿಯ, ಶಾಸಕ ಪಿ.ಎ. ಮೊಹಮ್ಮದ್ ರಿಯಾಸ್ ಸೇರಿ ಇತರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕೋರಲಾಗಿದೆ. ಈ ಕುರಿತು ಪ್ರಶ್ನಿಸಿದಾಗ ಅವರು ಕುಪಿತರಾದರು.

ಬುಧವಾರ (ಸೆಪ್ಟೆಂಬರ್‌ 9) ಚಂಗನಶೆರಿಗೆ ಪ್ರಯಾಣಿಸುತ್ತಿದ್ದ ವಿಜಯನ್ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ವಿಶ್ರಾಂತಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಇಡಿ ತನಿಖೆಯ ಬಗ್ಗೆ ಮಾಧ್ಯಮಗಳು ಪಿಣರಾಯಿ ವಿಜಯನ್ ಅವರನ್ನು ಪ್ರಶ್ನಿಸಿದವು. ವರದಿಗಾರರು ಸತತವಾಗಿ ಪ್ರಶ್ನಿಸುತ್ತಿದ್ದರೂ ಅವರು ಮೌನವಾಗಿಯೇ ಸರ್ಕಾರಿ ಸ್ವಾಮ್ಯದ ವಿಶ್ರಾಂತಿ ಗೃಹಕ್ಕೆ ಕಾಲಿಟ್ಟರು. ಆದರೂ ಅವರನ್ನು ಹಿಂಬಾಲಿಸಿದ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳುವುದನ್ನು ಮುಂದುವriಸಿದರು.

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್, ಪುತ್ರಿ ವೀಣಾ ವಿರುದ್ಧ ಲಂಚ ಆರೋಪ

ವಿಶ್ರಾಂತಿ ಗೃಹ ಪ್ರವೇಶಿಸುತ್ತಿದ್ದ ಪಿಣರಾಯಿ ವಿಜಯನ್‌ ಪ್ರಶ್ನೆಗಳಿಂದ ಸಿಟ್ಟಿಗೆದ್ದರು. ತಾನು ಇಲ್ಲಿಗೆ ನಿಮ್ಮನ್ನು ಭೇಟಿಯಾಗಲು ಬಂದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು. ಈ ವೇಳೆ, ʼʼನೀವು ನನ್ನ ಜತೆ ಬಾತ್‌ರೂಮ್‌ಗೂ ಬರ್ತೀರಾ?ʼʼ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು. ನಂತರ ವಿಶ್ರಾಂತಿ ಗೃಹದಿಂದ ಹೊರಬಂದ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಅಲ್ಲಿಂದ ಚಂಗನಶೆರಿಗೆ ತೆರಳಿದರು.

ಹೊಸ ನಡೆಯಲ್ಲ

ಮಾಧ್ಯಮಗಳೊಂದಿಗೆ ಮಾತನಾಡದೇ ಇರುವುದು ಪಿಣರಾಯಿ ಅವರ ಹೊಸ ನಡೆಯೇನೂ ಅಲ್ಲ. ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರು ಕ್ಯಾಬಿನೆಟ್ ನಂತರದ ಮಾಧ್ಯಮ ಸಭೆಯನ್ನು ರದ್ದುಗೊಳಿಸಿದ್ದರು. ಮಾಧ್ಯಮಗಳು ಬಯಸಿದಾಗ ಮಾತನಾಡುವ ಬದಲು, ಅವರಿಗೆ ಇಷ್ಟ ಬಂದಾಗ ಮಾತನಾಡುತ್ತಿದ್ದರು. 2017ರ ಜುಲೈನಲ್ಲಿ ವೈರಲ್ ಆದ ವಿಡಿಯೊವೊಂದರಲ್ಲಿ, ತಿರುವನಂತಪುರಂದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ನಾಯಕರೊಂದಿಗಿನ ಸಭೆಗೆ ಆಗಮಿಸಿದ್ದ ವಿಜಯನ್ ಮಾಧ್ಯಮ ಸಿಬ್ಬಂದಿಯನ್ನು ಕೋಪದಿಂದ ಹೊರಗೆ ಹೋಗುವಂತೆ ಹೇಳಿದ್ದರು.