ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಜಾಸೇವೆಗೆ ಚಾಲನೆ ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ: ಸಿಎಂ ಡಿ.ಕೆ. ಶಿವಕುಮಾರ್

ಜನಸೇವೆಯೇ ಜನಾರ್ಧನ ಸೇವೆ ಎಂಬುದನ್ನು ನಾವು ನಂಬಿದ್ದೇವೆ. ರಾಜ್ಯದ ಜನತೆ 136 ಶಾಸಕ ರನ್ನು ಗೆಲ್ಲಿಸಿ, ಇಡೀ ದೇಶಕ್ಕೇ ಮಾದರಿಯಾಗುವಂತಹ ಹೊಸ ದಾರಿಯಲ್ಲಿ ಸಾಗಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆಯುವ ಕಾಲ ಈಗ ಮುಗಿದಿದೆ.

ಪ್ರಜಾಸೇವಾ ಅಭಿಯಾನಕ್ಕೆ ಚಾಲನೆ--ಜನರ ಆಶೀರ್ವಾದ ಸದಾ ಇರಲಿ.

-

Profile
Ashok Nayak Sep 5, 2026 3:57 PM

ಹೊಸಪೇಟೆ: ರಾಜನ ಕಾಲ ಮುಗಿದು ಪ್ರಜಾಪ್ರಭುತ್ವ ಬಂದಿದೆ. ನನ್ನನ್ನು ‘ನಾಡಿನ ದೊರೆ’ ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆದರೆ ಅದು ನನಗೆ ಅತ್ಯಂತ ಸಂತೋಷ ತರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister D K Shivakumar) ತಿಳಿಸಿದರು.

ವಿಜಯನಗರ ಜಿಲ್ಲೆಯ ​ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ನೂತನ 'ಪ್ರಜಾ ಸೇವಾ ಇಲಾಖೆ'ಗೆ ಚಾಲನೆ ನೀಡಿ ಮಾತನಾಡಿದರು.

​ಜನಸೇವೆಯೇ ಜನಾರ್ಧನ ಸೇವೆ ಎಂಬುದನ್ನು ನಾವು ನಂಬಿದ್ದೇವೆ. ರಾಜ್ಯದ ಜನತೆ 136 ಶಾಸಕ ರನ್ನು ಗೆಲ್ಲಿಸಿ, ಇಡೀ ದೇಶಕ್ಕೇ ಮಾದರಿಯಾಗುವಂತಹ ಹೊಸ ದಾರಿಯಲ್ಲಿ ಸಾಗಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆಯುವ ಕಾಲ ಈಗ ಮುಗಿದಿದೆ. ಸರ್ಕಾರದ ಆಡಳಿತವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು ಎನ್ನುವ ಪವಿತ್ರ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸ ಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ; Hospet News: 'ನಾನು ಕರ್ನಾಟಕ ಆರಿಸಿಕೊಂಡಿಲ್ಲ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ': ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

​ವಿಧಾನಸೌಧ, ಡಿಸಿ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ಕುಳಿತು ಜನರಿಂದ ದೂರವಿದ್ದು ಆಡಳಿತ ನಡೆಸುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಚಿವರು, ಶಾಸಕರು ಅಥವಾ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನರ ಸಮಸ್ಯೆ ಗಳನ್ನು ಆಲಿಸಿ, ಸ್ಥಳದಲ್ಲೇ ನೇರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದರು.

​ಇದು ಕೇವಲ ಒಂದು ಸರ್ಕಾರಿ ಇಲಾಖೆಯಾಗದೆ, ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಜನಪರ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಭರವಸೆ ನೀಡಿದರು.

ಜನಸಾಮಾನ್ಯರು, ಶಾಸಕರು, ಮಂತ್ರಿಗಳು ಅಥವಾ ತಾಲೂಕು ಅಧಿಕಾರಿಗಳನ್ನು ಹುಡುಕಿಕೊಂಡು ಬರುವುದು ತಪ್ಪಬೇಕು. ಅಧಿಕಾರಿಗಳೇ ನೇರವಾಗಿ ಜನರ ಬಳಿಗೆ ತೆರಳಿ ಅವರ ಕುಂದುಕೊರತೆ ಗಳನ್ನು ಆಲಿಸಿ ಬಗೆಹರಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರದಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯದಲ್ಲಿದ್ದು ಕೆಲಸ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಸಚಿವರು ತಾಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.

ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ, ಸಣ್ಣ ಸಭೆಗಳನ್ನು ನಡೆಸಿ, ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಬೇಕು ಎಂದು ನಿರ್ದೇಶನ ನೀಡಿದರು.

​ಇದೇ ವೇಳೆ, ತಾವು ಕೂಡ್ಲಿಗಿಯಲ್ಲಿರುವ ಗಾಂಧೀಜಿಯವರ ಚಿತಾಭಸ್ಮ ಇಟ್ಟಿರುವ ಪವಿತ್ರ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಶುಕ್ರವಾರ ಬಸವಣ್ಣನವರ ಐಕ್ಯಸ್ಥಳಕ್ಕೆ ಭೇಟಿ ನೀಡಿದ್ದನ್ನು ಹಾಗೂ ಬರಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದ್ದನ್ನು ಸ್ಮರಿಸಿದರು.

"ಹೆಲಿಕಾಪ್ಟರ್ ಪ್ರವಾಸದ ಕುರಿತು ಬರುವ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡಿದ ಕೆಲಸಗಳು ಮಾತ್ರ ಉಳಿಯುತ್ತವೆ ಎಂದರು.

ಜನರ ಹತ್ತಿರಕ್ಕೆ ಆಡಳಿತವನ್ನು ಒಯ್ಯುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.

ಸಾರ್ವಜನಿಕರ ಅರ್ಜಿಗಳಿಗೆ ಕೇವಲ ಸ್ವೀಕೃತಿ ನೀಡುವುದು ಮುಖ್ಯವಲ್ಲ, ಅವರಿಗೆ ಸೂಕ್ತ ಪರಿಹಾರ ತಲುಪಿದಾಗ ಮಾತ್ರ ಯೋಜನೆಯ ನೈಜ ಯಶಸ್ಸು ಸಾಧ್ಯ ಎಂದು ತಿಳಿಸಿದರು.

​ವಿಜಯನಗರದ ಪವಿತ್ರ ಭೂಮಿಯಲ್ಲಿ ಈ ಜನಪರ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ತಿಂಗಳಿಗೆ ಎರಡು ದಿನ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಪಿಂಚಣಿ, ಭೂಮಿ ವ್ಯಾಜ್ಯ, ಸರ್ಕಾರದ ಸೌಲಭ್ಯಗಳು, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆಗಳು ಹಾಗೂ ಮನೆ-ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು. ಬಡವರು ಹಾಗೂ ಶೋಷಿತರಿಗೆ ತಹಶೀಲ್ದಾರ್, ಎಸಿ ಅಥವಾ ಡಿಸಿ ಮಟ್ಟದ ವ್ಯಾಜ್ಯಗಳಲ್ಲಿ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು. ಅರ್ಜಿ ತಿರಸ್ಕೃತಗೊಂಡರೆ ಅದಕ್ಕೆ ಕಾರಣವನ್ನು ಸ್ಪಷ್ಟಪಡಿಸ ಲಾಗುವುದು. ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಸಮಾಜದ ಪ್ರತಿಯೊಂದು ವರ್ಗಕ್ಕೂ ಅಂಬೇಡ್ಕರ್ ಅವರ ಚಿಂತನೆಯಂತೆ ಸಮಾನ ಗೌರವ ಸಿಗಬೇಕು ಎಂಬುದು ಸರ್ಕಾರದ ಆಶಯ. ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಅದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದೇವೆ. ಪ್ರಜಾಸೇವಾ ಯೋಜನೆಯೂ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

​ಶಿಕ್ಷಕರಿಗೆ ‘Tr’ ಗೌರವ: ದೇಶದ ಅಭಿವೃದ್ಧಿಗೆ ಸೈನಿಕ, ಕಾರ್ಮಿಕ ಹಾಗೂ ಕೃಷಿಕರಷ್ಟೇ ಶಿಕ್ಷಕರ ಕೊಡುಗೆಯೂ ಪ್ರಮುಖವಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಶಿಕ್ಷಕರ ಹೆಸರಿನ ಮುಂದೆ ‘Tr’ (Teacher) ಎಂದು ಸೇರಿಸಿ ಗೌರವಿಸುವ ಸಂಪ್ರದಾಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಸ್ಮರಿಸಿದ ಅವರು, "ರಾಜ್ಯದಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಜನ್ಮ ನೀಡಿದ ತಾಯಿ ಮತ್ತು ಅಕ್ಷರ ಕಲಿಸಿದ ಶಿಕ್ಷಕರಿಬ್ಬರೂ ನಮಗೆ ದೇವರು ಇದ್ದಂತೆ. ವೈದ್ಯರು, ಎಂಜಿನಿಯರ್‌ಗಳಿಗೆ ಸಿಗುವಂತೆ ಶಿಕ್ಷಕರಿಗೂ ಗೌರವ ನೀಡಲು, ಅವರ ಹೆಸರಿನ ಮುಂದೆ ‘ಟೀಚರ್’ ಎಂಬ ಬಿರುದು ಬಳಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಆದ್ಯತೆ: ಸಮಾಜವನ್ನು ಬದಲಾಯಿಸುವ ಶಕ್ತಿ ಶಿಕ್ಷಣ ಕ್ಷೇತ್ರಕ್ಕಿದೆ. ಸರ್ಕಾರಿ ಹಾಗೂ ಗ್ರಾಮೀಣ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಲು ಶೇ 15ರಷ್ಟು ಗ್ರಾಮೀಣ ಮೀಸಲಾತಿಯೊಂದಿಗೆ, ಹೆಚ್ಚುವರಿಯಾಗಿ ಶೇ 7.5ರಷ್ಟು ಆಂತರಿಕ ಮೀಸಲಾತಿ ನೀಡಲು ಸರ್ಕಾರ ಹೊಸ ರೂಪ ನೀಡುತ್ತಿದೆ ಎಂದರು.

​ಮನೆ ಬಾಗಿಲಿಗೆ ಇ-ಖಾತೆ ದಾಖಲೆ: ಪ್ರತಿಯೊಬ್ಬರ ಆಸ್ತಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ‘ಭೂಮಿ ಗ್ಯಾರಂಟಿ’ ಯೋಜನೆಯಡಿ ತಾಲೂಕಿನಲ್ಲಿ ಈಗಾಗಲೇ 25,276 ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ಆಸ್ತಿಗಳ ಅಳತೆ ಮಾಡಿ, ಮಾಲೀಕರ ಭಾವಚಿತ್ರದೊಂದಿಗೆ ಇ-ಖಾತೆ ದಾಖಲೆ ಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ ಎಂಬ ಧ್ಯೇಯವಾಕ್ಯದೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಬಡವರು ಮತ್ತು ಶಕ್ತಿ ಇಲ್ಲದವರಿಗೆ ನೆರವಾಗಲು ಉಚಿತ ಸರ್ಕಾರಿ ವಕೀಲರ ಸೌಲಭ್ಯ ಸೇರಿದಂತೆ ಕಾನೂನು ನೆರವು ನೀಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

​ಇದೇ ವೇಳೆ ಹಳ್ಳಿಗಳಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ನಾಯಕತ್ವದ ಪ್ರತಿಭೆಗಳನ್ನು ಹೊರತರುವ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವ ಉದ್ದೇಶದಿಂದ 'ಭಾರತ್ ಜೋಡೋ ಯುವಕ ಸಂಘ'ಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ಪ್ರತಿ ಪಂಚಾಯಿತಿ ಯಲ್ಲೂ ಗ್ಯಾರಂಟಿ ಯೋಜನೆಗಳ ಸಮಿತಿಗಳನ್ನು ರಚಿಸಿ, ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶೀಘ್ರ 2ನೇ ಹಂತದ ಬರಪೀಡತ ತಾಲ್ಲೂಕುಗಳ ಘೋಷಣೆ: ರಾಜ್ಯದ ಬರಪೀಡಿತ ತಾಲೂಕುಗಳ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಗಳ ಚೌಕಟ್ಟಿ ನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿಯ ಕುರಿತು ಎರಡನೇ ಹಂತದ ವರದಿ ಲಭ್ಯವಾಗಲಿದ್ದು, ಇನ್ನು 50ಕ್ಕೂ ಹೆಚ್ಚು ತಾಲೂಕುಗಳ ಸಮೀಕ್ಷೆ ಪ್ರಗತಿಯಲ್ಲಿದೆ. ನಿಯಮಗಳ ಪ್ರಕಾರ 21 ದಿನಗಳ ಮಳೆಯ ಪ್ರಮಾಣ ಹಾಗೂ ನಿಗದಿತ ಮಾನ ದಂಡಗಳನ್ನು ಪರಿಶೀಲಿಸಿ, ಈ ತಿಂಗಳ ಅಂತ್ಯದ ವೇಳೆಗೆ ಅಭಾವ ಎದುರಿಸುತ್ತಿರುವ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.