ಸನಾತನ ಧರ್ಮದ ಮಾನವೀಯತೆ, ಸಮಾನತೆಯ ತತ್ವಗಳನ್ನು ಪಸರಿಸಬೇಕು: ಸಚಿವ ಕೆ.ಎಚ್.ಮುನಿಯಪ್ಪ
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಶಿವ ಪಂಚಾಕ್ಷರಿ ಹೋಮ ಹಾಗೂ ಸಪ್ತದ್ರವ್ಯ ಮೃತ್ಯುಂಜಯ ಹೋಮದ ಬಳಿಕ ಮಾತನಾಡಿದ ಅವರು, ಸನಾತನ ಧರ್ಮವು ಎಲ್ಲರನ್ನೂ ಸಮಾನವಾಗಿ ಕಾಣುವ ಶ್ರೇಷ್ಠ ಜೀವನ ಪದ್ಧತಿಯಾಗಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಉದಾತ್ತ ಆಶಯಕ್ಕೆ ಸತ್ಯ ಸಾಯಿ ಗ್ರಾಮದಲ್ಲಿ ಪ್ರಾಯೋಗಿಕ ರೂಪ ನೀಡಲಾಗುತ್ತಿದೆ.
-
ಚಿಕ್ಕಬಳ್ಳಾಪುರ: ಸನಾತನ ಧರ್ಮದ ಮೂಲ ತತ್ವಗಳಾದ ಮಾನವೀಯತೆ ಮತ್ತು ಸಮಾನತೆ ಯನ್ನು ಸಮಾಜದ ಎಲ್ಲ ಸ್ತರಗಳಿಗೂ ತಲುಪಿಸುವ ಮಹತ್ವದ ಕಾರ್ಯ ನಡೆಯಬೇಕಿದೆ. ಈ ದಿಸೆಯಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ(K H Muniyappa) ಹೇಳಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಶಿವ ಪಂಚಾಕ್ಷರಿ ಹೋಮ ಹಾಗೂ ಸಪ್ತದ್ರವ್ಯ ಮೃತ್ಯುಂಜಯ ಹೋಮದ ಬಳಿಕ ಮಾತನಾಡಿದ ಅವರು, ಸನಾತನ ಧರ್ಮವು ಎಲ್ಲರನ್ನೂ ಸಮಾನವಾಗಿ ಕಾಣುವ ಶ್ರೇಷ್ಠ ಜೀವನ ಪದ್ಧತಿಯಾಗಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಉದಾತ್ತ ಆಶಯಕ್ಕೆ ಸತ್ಯ ಸಾಯಿ ಗ್ರಾಮದಲ್ಲಿ ಪ್ರಾಯೋಗಿಕ ರೂಪ ನೀಡಲಾಗುತ್ತಿದೆ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಆಶಯಗಳನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಸಾಕಾರಗೊಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballapur News: ಬೂದುಗುಂಬಳ, ಹೂವು, ಹಣ್ಣು, ಸಿಹಿ ಖರೀದಿಗೆ ಮುಗಿಬಿದ್ದ ಜನತೆ; ಪ್ರಮುಖ ರಸ್ತೆಗಳಲ್ಲಿ ಹಬ್ಬದ ಕಳೆ
ಭಾರತದ ಸಂವಿಧಾನ ಮತ್ತು ಮಹಾತ್ಮ ಗಾಂಧೀಜಿಯವರ ಆಶಯದಂತೆ ಎಲ್ಲ ಧರ್ಮಗಳೂ ಮಾನವೀಯತೆಯನ್ನೇ ಸಾರುತ್ತವೆ. ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳಿರಲಿ, ಏಸುಕ್ರಿಸ್ತರ ಸಂದೇಶವಿರಲಿ ಅಥವಾ ಭಗವದ್ಗೀತೆಯ ತತ್ವಗಳಿರಲಿ, ಎಲ್ಲವೂ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದನ್ನೇ ಪ್ರತಿಪಾದಿಸುತ್ತವೆ ಎಂದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್(S R Vishwanath) ಮಾತನಾಡಿ, ದೇಶ, ಮಣ್ಣು, ನೀರು ಸೇರಿದಂತೆ ಪ್ರಕೃತಿಯ ಎಲ್ಲ ಅಂಶಗಳನ್ನೂ ತಾಯಿಯ ಸ್ಥಾನದಲ್ಲಿಟ್ಟು ಪೂಜಿಸುವ ವಿಶಿಷ್ಟ ಪರಂಪರೆ ಭಾರತದ ಸನಾತನ ಹಿಂದೂ ಧರ್ಮದಲ್ಲಿದೆ ಎಂದರು.
ಜಗತ್ತಿಗೆ ಮಾದರಿಯಾಗಿರುವ ಹಿಂದೂ ಧರ್ಮ ಕ್ರಮೇಣ ದುರ್ಬಲಗೊಳ್ಳುತ್ತಿರುವುದು ವಿಷಾದ ನೀಯ. ಒಂದು ಕಾಲದಲ್ಲಿ ಭಾರತದ ಸಾಂಸ್ಕೃತಿಕ ಪ್ರಭಾವದೊಂದಿಗೆ ಗುರುತಿಸಿಕೊಂಡಿದ್ದ ಗಾಂಧಾರ ಪ್ರದೇಶ (ಇಂದಿನ ಅಫ್ಘಾನಿಸ್ತಾನದ ಭಾಗ), ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಕೈಲಾಸ ಪರ್ವತದಂತಹ ಪ್ರದೇಶಗಳನ್ನು ಉಲ್ಲೇಖಿಸಿದ ಅವರು, ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಮಹತ್ವವನ್ನು ಅರಿಯಬೇಕಿದೆ ಎಂದು ಹೇಳಿದರು.
ಸತ್ಯದ ಅರಿವೇ ಸಮಸ್ಯೆಗಳಿಗೆ ಪರಿಹಾರ: ಸದ್ಗುರು
ಜಗತ್ತು ಇಂದು ಎದುರಿಸುತ್ತಿರುವ ವಿವಿಧ ವಿಪತ್ತುಗಳು ಮತ್ತು ಸಮಸ್ಯೆಗಳಿಗೆ ಸತ್ಯದ ಬೋಧನೆ ಹಾಗೂ ಬ್ರಹ್ಮತತ್ವದ ಅರಿವು ಪರಿಹಾರವಾಗಬಲ್ಲದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದಿಸಿದರು.
ತಾವು ಧರ್ಮಗುರುವಲ್ಲ, ಸತ್ಯದ ಬೋಧಕ ಮಾತ್ರ ಎಂದು ಸ್ಪಷ್ಟಪಡಿಸಿದ ಅವರು, ಪ್ರತಿಯೊಬ್ಬ ರಲ್ಲೂ ದೈವತ್ವ ನೆಲೆಸಿದೆ ಎಂಬ ಸತ್ಯವನ್ನು ತಿಳಿಸುವುದೇ ತಮ್ಮ ಬೋಧನೆಯ ಉದ್ದೇಶ ಎಂದರು.
ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಆದಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತವು ಜಗತ್ತಿನ ಎಲ್ಲ ಜೀವಿಗಳಲ್ಲೂ ಒಂದೇ ದೈವಿಕ ತತ್ವ ನೆಲೆಸಿದೆ ಎಂಬುದನ್ನು ಸಾರುತ್ತವೆ. ಈ ಸತ್ಯವನ್ನು ಅರಿತುಕೊಂಡಾಗ ಒಬ್ಬರು ಮತ್ತೊಬ್ಬರಿಗೆ ಹಾನಿ ಮಾಡುವ ಮನೋಭಾವ ದೂರವಾಗುತ್ತದೆ ಎಂದು ಹೇಳಿದರು.
ಸತ್ಯ ಸಾಯಿ ಗ್ರಾಮಕ್ಕೆ ಆಗಮಿಸುವ ಗಣ್ಯರು ಈ ಸ್ಥಳವನ್ನು ಸ್ವರ್ಗದ ಮಾದರಿಯೆಂದು ಬಣ್ಣಿಸುತ್ತಾರೆ. ಇಲ್ಲಿ ನಡೆಯುತ್ತಿರುವ ಜನಪರ ಸೇವಾ ಕಾರ್ಯಗಳು, ಸಕಾರಾತ್ಮಕ ಚಿಂತನೆಗಳು ಮತ್ತು ಸಜ್ಜನರ ಸಾನ್ನಿಧ್ಯವೇ ಅದಕ್ಕೆ ಕಾರಣ. ಒಳ್ಳೆಯ ಆಲೋಚನೆಗಳು ಹಾಗೂ ಸತ್ಕಾರ್ಯಗಳು ನಡೆಯುವ ಪ್ರತಿಯೊಂದು ಸ್ಥಳವೂ ಸ್ವರ್ಗದಂತೆಯೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ವಾನ್ ಡಾ. ಗಿರಿಜಾ ಪ್ರಸಾದ್ ಮಾತನಾಡಿ, ನಾದೋಪಾಸನೆ ಮತ್ತು ಮಂತ್ರಗಳ ಉಚ್ಚಾರಣೆಗೆ ಭಾರತೀಯ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ ಎಂದು ವಿವರಿಸಿದರು. ಮಂತ್ರಗಳ ನಾದ ಶಕ್ತಿಯು ಮನಸ್ಸು ಮತ್ತು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು ಎಂದು ತಿಳಿಸಿದರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಸನಾತನ ಧರ್ಮ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸದ್ಗುರು
ಸನಾತನ ಧರ್ಮವು ನಿರ್ದಿಷ್ಟ ಧರ್ಮ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತವಾದುದಲ್ಲ; ಅದು ವಿಶಾಲ ತಳಹದಿಯ ಜೀವನ ಪದ್ಧತಿಯಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಸನಾತನ ಧರ್ಮವನ್ನು ಕೇವಲ ಧಾರ್ಮಿಕ ಆಚರಣೆಗಳ ವ್ಯಾಪ್ತಿಯಲ್ಲಿ ಅರ್ಥೈಸಬಾರದು. ಅದು ಬದುಕಿನ ಮೌಲ್ಯಗಳನ್ನು ಒಳಗೊಂಡ ಜೀವನಶೈಲಿ. ಆದರೆ, ಅದರ ನಿಜವಾದ ಆಶಯವನ್ನು ಅರಿತುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಇಂದು ಸನಾತನ ಧರ್ಮ ದುರ್ಬಲಗೊಳ್ಳುತ್ತಿದೆ ಎಂದಾದರೆ, ಅದಕ್ಕೆ ನಮ್ಮ ಆಧ್ಯಾತ್ಮಿಕ ಅಧಃಪತನವೂ ಒಂದು ಕಾರಣ. ಆಧ್ಯಾತ್ಮಿಕತೆಯೇ ಸನಾತನ ಧರ್ಮದ ಮೂಲ ಶಕ್ತಿ ಎಂದು ಅವರು ವಿಶ್ಲೇಷಿಸಿದರು.
ದುಷ್ಟ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ನಿವೃತ್ತ ನ್ಯಾಯಮೂರ್ತಿ ನಾರಾಯಣ ಸ್ವಾಮಿ
ದೇಶದ ವಿವಿಧ ಭಾಗಗಳಲ್ಲಿ ದಸರಾ ಮತ್ತು ನವರಾತ್ರಿಯನ್ನು ವಿಭಿನ್ನ ಹೆಸರುಗಳಲ್ಲಿ ಆಚರಿಸಿ ದರೂ, ದುರ್ಗೆಯ ಆರಾಧನೆಯ ಮೂಲ ಆಶಯ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವುದೇ ಆಗಿದೆ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನಾರಾಯಣ ಸ್ವಾಮಿ ಹೇಳಿದರು.
ಭ್ರಷ್ಟಾಚಾರ, ಹಸಿವು, ಅಸಮಾನತೆ, ಅನಕ್ಷರತೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರದಂತಹ ಸಾಮಾಜಿಕ ಪಿಡುಗುಗಳು ಇಂದಿಗೂ ದೇಶವನ್ನು ಕಾಡುತ್ತಿವೆ. ಇವುಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಸತ್ಯ ಸಾಯಿ ಗುರುಕುಲವು ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದರ ಜೊತೆಗೆ, ಪ್ರತಿಯೊಬ್ಬರೂ ತಮ್ಮೊಳಗಿನ ದೈವಿಕ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಆಂತರಿಕ ಶುದ್ಧತೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜವನ್ನು ಸ್ವಚ್ಛ ಹಾಗೂ ಸದೃಢವಾಗಿಸುವ ಪ್ರಯತ್ನ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು