ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: 15ನೇ ಹಣಕಾಸು ಆಯೋಗದಲ್ಲಿ ವಿಶೇಷ ಅನುದಾನ ಪ್ರಸ್ತಾಪವೇ ಇಲ್ಲ: ಜೋಶಿ

NDA Government: 2004ರಿಂದ 2014ರವರೆಗಿನ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಅಂದಿನ ಯುಪಿಎ ಸರ್ಕಾರ ಕೇವಲ ₹81,795 ಕೋಟಿ ತೆರಿಗೆ ಹಂಚಿಕೆ ಅನುದಾನ ನೀಡಿದೆ. ಆದರೆ 2014ರಿಂದ 2024ರವರೆಗಿನ ಹತ್ತು ವರ್ಷದಲ್ಲಿ ಎನ್‌ಡಿಎ ಸರ್ಕಾರ ಬರೋಬ್ಬರಿ ₹2.93 ಲಕ್ಷ ಕೋಟಿ ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ. ಇದು ಯುಪಿಎ ಸರ್ಕಾರಕ್ಕೆ ಹೋಲಿಸಿದಲ್ಲಿ ಶೇ.273ಕ್ಕೂ ಅಧಿಕವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

15ನೇ ಹಣಕಾಸು ಆಯೋಗದಲ್ಲಿ ವಿಶೇಷ ಅನುದಾನ ಪ್ರಸ್ತಾಪವೇ ಇಲ್ಲ: ಜೋಶಿ

-

Profile Siddalinga Swamy Oct 24, 2025 10:17 PM

ನವ ದೆಹಲಿ, ಅ. 24: ಕರ್ನಾಟಕಕ್ಕೆ ಅನುದಾನ ನೀಡಿಕೆಯಲ್ಲಿ 15ನೇ ಹಣಕಾಸು ಆಯೋಗ ಕೆಲ ಶಿಫಾರಸುಗಳನ್ನು ಮಾಡಿದೆ. ಆದರೆ ಅದರ ಅಂತಿಮ ವರದಿಯಲ್ಲಿ ಎರೆಡು ಶಿಫಾರಸುಗಳಿರಲಿಲ್ಲ. ಹೀಗಾಗಿ ಕೇಂದ್ರದಿಂದ (Central Government) ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಇದನ್ನು ಅರ್ಥೈಸಿಕೊಳ್ಳದ ರಾಜ್ಯ ಸರ್ಕಾರ (State Congress Government) ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಚಿವರು, ರಾಜ್ಯಕ್ಕೆ ಅನುದಾನ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು. ಮತ್ತಿದು ಸತ್ಯಕ್ಕೆ ದೂರವಾದ ಮಾತು. ಯುಪಿಎ ಸರ್ಕಾರಕ್ಕಿಂತ ದುಪ್ಪಟ್ಟು ಅನುದಾನವನ್ನು ಪ್ರಧಾನಿ ಮೋದಿ ಸರ್ಕಾರ ನೀಡಿದೆ ಎಂದು ಸಮರ್ಥಿಸಿಕೊಂಡರು.

ರಾಜ್ಯ ಸರ್ಕಾರದ 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಕೆಲವು ನಿರ್ದಿಷ್ಟ ಶಿಫಾರಸುಗಳನ್ನು ಮಾಡಿತ್ತು. ಇದರಲ್ಲಿ 14ನೇ ಹಣಕಾಸು ಆಯೋಗದ ಅವಧಿಯಲ್ಲಿ ನೀಡುತ್ತಿದ್ದ ಶೇ.4.71ರ ತೆರಿಗೆ ಹಂಚಿಕೆ ಅನುದಾನವನ್ನು 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.64ಕ್ಕೆ ಇಳಿಸಿದ್ದರಿಂದ ಅದನ್ನು ಸರಿದೂಗಿಸಲು ₹5,495 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, 15ನೇ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಇದರ ಪ್ರಸ್ತಾಪವೇ ಇರಲಿಲ್ಲ. ಹೀಗಾಗಿ ಕೇಂದ್ರದಿಂದ ಈ ಅನುದಾನ ಬಿಡುಗಡೆಯಾಗಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಶೇ.273ಕ್ಕೂ ಅಧಿಕ ಅನುದಾನ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ NDA ಸರ್ಕಾರ ಹತ್ತು ವರ್ಷದ ಅವಧಿಯಲ್ಲಿ ಕರ್ನಾಟಕಕ್ಕೆ UPA ಸರ್ಕಾರ ನೀಡಿದ್ದಕ್ಕಿಂತ ಶೇ.273ಕ್ಕೂ ಅಧಿಕ ಅನುದಾನವನ್ನೇ ನೀಡಿದೆ. ಆದರೆ ರಾಜ್ಯ ಸರ್ಕಾರ ಇದರ ಬಗ್ಗೆ ಸೊಲ್ಲೆತ್ತುವುದಿಲ್ಲ ಎಂದರು. 2004ರಿಂದ 2014ರವರೆಗಿನ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಅಂದಿನ ಯುಪಿಎ ಸರ್ಕಾರ ಕೇವಲ ₹81,795 ಕೋಟಿ ತೆರಿಗೆ ಹಂಚಿಕೆ ಅನುದಾನ ನೀಡಿದೆ. ಆದರೆ 2014ರಿಂದ 2024ರವರೆಗಿನ ಹತ್ತು ವರ್ಷದಲ್ಲಿ NDA ಸರ್ಕಾರ ಬರೋಬ್ಬರಿ ₹2.93 ಲಕ್ಷ ಕೋಟಿ ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ. ಇದು ಯುಪಿಎ ಸರ್ಕಾರಕ್ಕೆ ಹೋಲಿಸಿದಲ್ಲಿ ಶೇ.273ಕ್ಕೂ ಅಧಿಕವಾಗಿದೆ ಎಂದು ಅವರು ಅಂಕಿ-ಅಂಶ ಸಹಿತ ವಿವರಣೆ ನೀಡಿದರು.

₹3.45 ಲಕ್ಷ ಕೋಟಿ ಅನುದಾನ ರಾಜ್ಯಕ್ಕೆ

ಪ್ರಸಕ್ತ ಸಾಲಿನಲ್ಲಿ ₹51876 ಕೋಟಿ ಅನುದಾನ ನೀಡಲಾಗಿದ್ದು, ಕಳೆದ 11 ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು ತೆರಿಗೆ ಹಂಚಿಕೆ ಅನುದಾನವಾಗಿ ₹3.45 ಲಕ್ಷ ಕೋಟಿ ನೀಡಲಾಗಿದೆ ಎಂದು ತಿಳಿಸಿದರು.

ಸಹಾಯಧನದಲ್ಲಿ ಅನುದಾನ

2004ರಿಂದ 2014ರವರೆಗೆ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಯುಪಿಎ ಸರ್ಕಾರ ಒಟ್ಟು ₹60,000 ಕೋಟಿ ಸಹಾಯದನ ಅನುದಾನ ಕಲ್ಪಿಸಿದ್ದರೆ, ನಮ್ಮ NDA ಸರ್ಕಾರ 2014ರಿಂದ 2024ರವರೆಗೆ ₹2.39 ಲಕ್ಷ ಕೋಟಿ ಒದಗಿಸಿದೆ. ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಶೇ.290ಕ್ಕೂ ಅಧಿಕ ಅನುದಾನವಾಗಿದೆ. 2025-26ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ₹16,000 ಕೋಟಿ ನೀಡಲಾಗಿದ್ದು, ಕಳೆದ 11 ವರ್ಷಗಳಲ್ಲಿ ರಾಜ್ಯಕ್ಕೆ ನೀಡಿದ ಒಟ್ಟು ಸಹಾಯದನ ಅನುದಾನ ₹2.56 ಲಕ್ಷ ಕೋಟಿಯಾಗಿದೆ ಎಂದರು.

ರಾಜ್ಯಗಳಿಗೆ ವಿಶೇಷ ಅನುದಾನ

ರಾಜ್ಯಕ್ಕೆ 2020-21ರಿಂದ 50 ವರ್ಷಗಳವರೆಗೆ ಬಡ್ಡಿ ರಹಿತವಾಗಿ ₹14,641 ಕೋಟಿ ನೀಡಲಾಗಿದೆ. ಇದರ ಬಡ್ಡಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.

ಹಣಕಾಸು ಆಯೋಗ ವರದಿ ಮೇರೆಗೆ ತೆರಿಗೆ ಹಂಚಿಕೆ

ಕೇಂದ್ರ ಸರ್ಕಾರ ಯಾವತ್ತೂ ರಾಜ್ಯಗಳಿಗೆ ಹಣಕಾಸು ಆಯೋಗದ ವರದಿ ಮೇರೆಗೆ ಅನುದಾನ, ವಿಶೇಷ ಅನುದಾನ ಬಿಡುಗಡೆ ಮಾಡುತ್ತದೆ. 12ನೇ ಹಣಕಾಸು ಆಯೋಗದ ವರದಿಯಂತೆ 2005ರಿಂದ 2010ರಲ್ಲಿ ಶೇ.30.5ರಷ್ಟು ಅನುದಾನ ನೀಡಲಾಗಿದೆ. 2010-2015ರಲ್ಲಿ 13ನೇ ಹಣಕಾಸು ಆಯೋಗದ ವರದಿಯಂತೆ ಶೇ.32, 2015-2020ರಲ್ಲಿ 14ನೇ ಆಯೋಗದ ವರದಿಯಂತೆ ಶೇ.42ರಷ್ಟು ಹಾಗೂ 2020-2026ರ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಶೇ.41ರಷ್ಟು ಅನುದಾನವನ್ನು ಕಲ್ಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿದ್ದರಿಂದ ಶೇ.1 ಮಾತ್ರ ಇಳಿಕೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Chalavadi Narayanaswamy: ಪ್ರಿಯಾಂಕ್ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ದಲಿತರ ನೆನಪು: ಛಲವಾದಿ ನಾರಾಯಣಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಕಳೆದೆಲ್ಲಾ ಅವಧಿಗಿಂತ ಶೇ.10ಕ್ಕೂ ಅಧಿಕ ಅನುದಾನ ನೀಡುತ್ತಲೇ ಬಂದಿದೆ. ಹೀಗಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾತ್ರ ನಮಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಇನ್ನೂ ₹11,495 ಕೋಟಿ ಬರಬೇಕಿದ್ದು, ಕೇಂದ್ರ ಸರ್ಕಾರ ನೀಡುತ್ತಿಲ್ಲವೆಂದು ತಗಾದೆ ತೆಗೆಯುತ್ತಲೇ ಇದೆ. ಆದರೆ, ಈ ಸರ್ಕಾರ ವಾಸ್ತವ ಸಂಗತಿ ಮರೆಮಾಚಿ ಕೇಂದ್ರವನ್ನು ದೂಷಿಸುತ್ತಿದ್ದು, ಇದು ಸಲ್ಲದು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.