Astro Tips: ಪೂಜೆಯಲ್ಲಿ ತೆಂಗಿನಕಾಯಿ ಅರ್ಪಿಸುವುದಕ್ಕೂ ಇದೆ ನಿಯಮ; ಯಾವ ದೇವರಿಗೆ ಹೇಗೆ ಸಮರ್ಪಿಸಬೇಕು?; ಇಲ್ಲಿದೆ ಮಾಹಿತಿ
ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಶ್ರೀಫಲವೆಂದು ಪರಿಗಣಿಸಲಾಗುತ್ತದೆ. ಪೂಜೆ, ವ್ರತ ಹಾಗೂ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಗೆ ವಿಶೇಷ ಸ್ಥಾನವಿದ್ದು, ವಿವಿಧ ದೇವತೆಗಳಿಗೆ ವಿಭಿನ್ನ ರೀತಿಯಲ್ಲಿ ಅರ್ಪಿಸುವ ಸಂಪ್ರದಾಯವಿದೆ. ತೆಂಗಿನಕಾಯಿಯ ಧಾರ್ಮಿಕ ಮಹತ್ವ ಹಾಗೂ ಅದನ್ನು ಅರ್ಪಿಸುವ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಜ್ಯೋತಿಷ್ಯ ಶಾಸ್ತ್ರ -
ಬೆಂಗಳೂರು: ಹಿಂದೂ ಧರ್ಮದಲ್ಲಿ (Hinduism) ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ (Religious Rituals) ವಿಶೇಷ ಮಹತ್ವ (Special Significance)ವಿದೆ. ಪ್ರತಿಯೊಂದು ದೇವರು (God) ಹಾಗೂ ದೇವತೆಗಳ (Goddesses/Deities) ಆರಾಧನೆಗೆ ವಿಭಿನ್ನ ನಿಯಮಗಳು ಮತ್ತು ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ವಾರದ ಏಳು ದಿನಗಳಿಗೂ ಒಂದೊಂದು ದೇವತೆಯನ್ನು ಸಮರ್ಪಿಸಿರುವ ಹಿನ್ನೆಲೆ, ಭಕ್ತರು ಆ ದಿನಕ್ಕೆ ಅನುಗುಣವಾಗಿ ಪೂಜೆ ಮತ್ತು ವ್ರತಗಳನ್ನು ಆಚರಿಸುತ್ತಾರೆ.
ಇಂತಹ ಧಾರ್ಮಿಕ ಆಚರಣೆಗಳಲ್ಲಿ ತೆಂಗಿನಕಾಯಿಯ ಬಳಕೆ ಅತ್ಯಂತ ಪ್ರಮುಖವಾಗಿದೆ. ಗೃಹಪ್ರವೇಶ, ಮದುವೆ, ಹೊಸ ವ್ಯವಹಾರ ಆರಂಭ, ವಾಹನ ಪೂಜೆ, ಹಬ್ಬ-ಹರಿದಿನಗಳು ಸೇರಿದಂತೆ ಬಹುತೇಕ ಎಲ್ಲಾ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಪೂಜೆಯಲ್ಲಿ ತೆಂಗಿನಕಾಯಿಯನ್ನು ‘ಶ್ರೀಫಲ’ವೆಂದು ಗೌರವಿಸಲಾಗುತ್ತದೆ. ಆದರೆ ಎಲ್ಲ ದೇವರಿಗೆ ಒಂದೇ ರೀತಿಯಲ್ಲಿ ತೆಂಗಿನಕಾಯಿಯನ್ನು ಅರ್ಪಿಸುವುದಿಲ್ಲ. ಹಾಗಾದರೆ ಪೂಜೆಯಲ್ಲಿ ತೆಂಗಿನಕಾಯಿಯ ಮಹತ್ವವೇನು? ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಯಾವ ದೇವರಿಗೆ ಯಾವ ರೀತಿಯ ತೆಂಗಿನಕಾಯಿಯನ್ನು ಅರ್ಪಿಸಬೇಕು? ಎಂಬುದನ್ನು ತಿಳಿದುಕೊಳ್ಳೋಣ.
ತೆಂಗಿನಕಾಯಿಯ ಧಾರ್ಮಿಕ ಮಹತ್ವವೇನು?
ಪುರಾಣಗಳ ಪ್ರಕಾರ, ಭಗವಾನ್ ವಿಷ್ಣು ಭೂಮಿಗೆ ಅವತರಿಸಿದಾಗ ಲಕ್ಷ್ಮೀದೇವಿ, ಕಾಮಧೇನು ಹಾಗೂ ತೆಂಗಿನ ಮರವನ್ನು ತನ್ನೊಂದಿಗೆ ತಂದನೆಂದು ನಂಬಲಾಗಿದೆ. ಈ ಕಾರಣದಿಂದಲೇ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ತತ್ವಗಳು ತೆಂಗಿನ ಮರದಲ್ಲಿ ನೆಲೆಸಿವೆ ಎಂಬ ನಂಬಿಕೆಯೂ ಇದೆ.
ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ, ಋಷಿ ವಿಶ್ವಾಮಿತ್ರರು ಮಾನವ ರೂಪದ ಪ್ರತೀಕವಾಗಿ ತೆಂಗಿನಕಾಯಿಯನ್ನು ಸೃಷ್ಟಿಸಿದರು ಎನ್ನಲಾಗುತ್ತದೆ. ತೆಂಗಿನಕಾಯಿಯ ಮೇಲಿರುವ ಮೂರು ಗುರುತುಗಳನ್ನು ಕಣ್ಣು ಮತ್ತು ಬಾಯಿಯ ರೂಪಕ್ಕೆ ಹೋಲಿಸಲಾಗುತ್ತದೆ.
ಯಾವ ದೇವರಿಗೆ ಹೇಗೆ ತೆಂಗಿನಕಾಯಿ ಅರ್ಪಿಸಬೇಕು?
ತೆಂಗಿನಕಾಯಿಯನ್ನು ಶ್ರೀಫಲ ಎಂದು ಕರೆಯಲಾಗುತ್ತದೆ. ಇದು ಲಕ್ಷ್ಮೀದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ.
ಶಿವನಿಗೆ ಸಾಮಾನ್ಯವಾಗಿ ಒಡೆಯದ ಸಂಪೂರ್ಣ ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ. ಶಿವಲಿಂಗದ ಮುಂದೆ ತೆಂಗಿನಕಾಯಿ ಒಡೆಯುವುದನ್ನು ಅನೇಕ ಸಂಪ್ರದಾಯಗಳಲ್ಲಿ ತಪ್ಪಿಸಲಾಗುತ್ತದೆ.
ವಿಷ್ಣು ಹಾಗೂ ಲಕ್ಷ್ಮೀದೇವಿಗೆ ಒಡೆದ ತೆಂಗಿನಕಾಯಿಗಿಂತ ಸಂಪೂರ್ಣ ತೆಂಗಿನಕಾಯಿಯನ್ನೇ ಅರ್ಪಿಸುವುದು ಶುಭಕರವೆಂದು ಹೇಳಲಾಗುತ್ತದೆ.
ಭೈರವನ ಆರಾಧನೆಯಲ್ಲಿ ತೆಂಗಿನಕಾಯಿಯನ್ನು ಒಡೆದು ಅದರೊಳಗೆ ಕುಂಕುಮ, ಲವಂಗ, ಕರಿಮೆಣಸು ಇಟ್ಟು ಸಮರ್ಪಿಸುವ ಪದ್ಧತಿ ಕೆಲವು ಕಡೆಗಳಲ್ಲಿ ಇದೆ.
ಹನುಮಂತ ಹಾಗೂ ತಾಮಸಿಕ ಸ್ವರೂಪದ ದೇವತೆಗಳಿಗೆ ಜುಟ್ಟಿರುವ ತೆಂಗಿನಕಾಯಿಯನ್ನು ಅರ್ಪಿಸಬಹುದು ಎಂದು ಧಾರ್ಮಿಕ ನಂಬಿಕೆಗಳಿವೆ.
ಪೂಜೆಯಲ್ಲಿ ಯಾವ ತೆಂಗಿನಕಾಯಿಯನ್ನು ಬಳಸಬಾರದು?
ಎಳನೀರು ಅಥವಾ ಹಸಿರು ತೆಂಗಿನಕಾಯಿಯನ್ನು ಸಾಮಾನ್ಯವಾಗಿ ಪೂಜಾ ಕಾರ್ಯಗಳಿಗೆ ಬಳಸುವುದಿಲ್ಲ.
ಪೂಜೆಗೆ ಬಳಸುವ ತೆಂಗಿನಕಾಯಿ ಒಡೆದಿರಬಾರದು ಅಥವಾ ಹಾಳಾಗಿರಬಾರದು.
ತೆಂಗಿನಕಾಯಿಯ ಹೊರ ಸಿಪ್ಪೆಯನ್ನು ತೆಗೆಯಬಹುದಾದರೂ, ಅದರ ಗಟ್ಟಿ ಚಿಪ್ಪು ಮುರಿದಿರಬಾರದು.
ಗಮನಿಸಬೇಕಾದ ವಿಷಯ
ಪೂಜೆಯಲ್ಲಿ ದೇವರಿಗೆ ಅರ್ಪಿಸುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಆಧ್ಯಾತ್ಮಿಕ ಮಹತ್ವವಿದೆ. ಅದೇ ರೀತಿ ತೆಂಗಿನಕಾಯಿಯನ್ನು ಅರ್ಪಿಸುವಾಗಲೂ ಸಂಪ್ರದಾಯ ಮತ್ತು ಆಚರಣೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಶ್ರೇಯಸ್ಕರವೆಂದು ಧಾರ್ಮಿಕ ಗ್ರಂಥಗಳು ತಿಳಿಸುತ್ತವೆ.