ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Allahu Akbar: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಹಲವರನ್ನು ರಕ್ಷಿಸಿದ 'ಅಲ್ಲಾಹು ಅಕ್ಬರ್' ಪದದ ಅರ್ಥ, ಮಹತ್ವವೇನು?

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ವೇಳೆ ಭಯೋತ್ಪಾದಕರಿಂದ ತಮ್ಮನ್ನು ತಾವು ರಕ್ಷಿಸಲು ಕೆಲವರು 'ಅಲ್ಲಾಹು ಅಕ್ಬರ್' ಎಂದು ಜಪಿಸಲು ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮಸೀದಿಗಳಲ್ಲಿ, ಮುಸ್ಲಿಂ ಸಮುದಾಯದ ನಡುವೆ ಸಾಮಾನ್ಯವಾಗಿ 'ಅಲ್ಲಾಹು ಅಕ್ಬರ್' ಎಂಬ ಪದವನ್ನು ನಾವು ಕೇಳುತ್ತಿರುತ್ತೇವೆ. ಇದರ ಅರ್ಥ ಮತ್ತು ಸಾಂಸ್ಕೃತಿಕ ಮಹತ್ವವೇನು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ.

'ಅಲ್ಲಾಹು ಅಕ್ಬರ್'- ಏನಿದರ ಅರ್ಥ ?

ಸಾಂದರ್ಭಿಕ ಚಿತ್ರ.

ಬೆಂಗಳೂರು: ಮಸೀದಿಗಳಲ್ಲಿ, ಮುಸ್ಲಿಂ ಸಮುದಾಯದ (Muslim community) ನಡುವೆ ಸಾಮಾನ್ಯವಾಗಿ ಮೊಳಗುವ 'ಅಲ್ಲಾಹು ಅಕ್ಬರ್' (Allahu Akbar) ಎಂಬ ಪದವನ್ನು ನಾವು ಸದಾ ಕೇಳುತ್ತಿರುತ್ತೇವೆ. ಆದರೆ ಇದರ ಅರ್ಥ ಮತ್ತು ಸಾಂಸ್ಕೃತಿಕ ಮಹತ್ವವೇನು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ (Pahalgam attack) ನಡೆಸಿದಾಗ ರಕ್ಷಿಸಲು ಬಂದ ಕೆಲವು ಸ್ಥಳೀಯರು 'ಅಲ್ಲಾಹು ಅಕ್ಬರ್' ಎಂದು ಹೇಳಿ ನಮ್ಮನ್ನು ರಕ್ಷಿಸಿದ್ದಾರೆ ಎಂಬುದಾಗಿ ಪ್ರವಾಸಿಗರು ಹೇಳಿದ್ದಾರೆ. ಅಲ್ಲದೇ ಜಿಪ್‌ಲೈನ್ ಆಪರೇಟರ್ ಒಬ್ಬ 'ಅಲ್ಲಾಹು ಅಕ್ಬರ್' ಎಂದು ಹೇಳಿದ ಬಳಿಕ ಭಯೋತ್ಪಾದಕರು ದಾಳಿ ನಡೆಸಿರುವುದಾಗಿ ವೈರಲ್ ವಿಡಿಯೊವೊಂದು ತಿಳಿಸಿದೆ. ಇದಾದ ಬಳಿಕ 'ಅಲ್ಲಾಹು ಅಕ್ಬರ್' ಪದದ ಅರ್ಥದ ಬಗ್ಗೆ ಸಾಕಷ್ಟು ಹುಡುಕಾಟಗಳು ನಡೆಯುತ್ತಿವೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಕೆಲವು ಕ್ಷಣಗಳ ಮೊದಲು ಜಿಪ್‌ಲೈನ್ ಆಪರೇಟರ್ ಒಬ್ಬ 'ಅಲ್ಲಾಹು ಅಕ್ಬರ್' ಎಂದು ಜಪಿಸಿದ್ದಾನೆ. ಇದು ಆ ರೈಡ್‌ನಲ್ಲಿದ್ದ ರಿಷಿ ಭಟ್ ಅವರು ತಮ್ಮ ಕೆಮ್ಯಾರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಘಟನೆಯನ್ನು ನೆನಪಿಸಿಕೊಂಡ ರಿಷಿ ಭಟ್, ಗುಂಡಿನ ದಾಳಿಯ ಸಮಯದಲ್ಲಿ ತಾನು ಜಿಪ್‌ಲೈನ್ ನಲ್ಲಿ ಸವಾರಿ ಮಾಡುತ್ತಿದ್ದ ಕಾರಣ ಅಪಾಯದಿಂದ ಪಾರಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಂದ ಪತಿ ಕೊಲ್ಲಲ್ಪಟ್ಟ ಬಳಿಕ ಪುಣೆ ಮೂಲದ ಮಹಿಳೆ ಉಗ್ರರು ಪುರುಷರಿಗೆ ಕಲ್ಮಾ ಪಠಿಸಲು ಹೇಳುವುದನ್ನು ನೋಡಿದ ತಕ್ಷಣ ತಾನು ಮತ್ತು ಇತರ ಕೆಲವು ಮಹಿಳೆಯರು ತಮ್ಮ ಹಣೆಯಿಂದ ಬಿಂದಿ ತೆಗೆದು 'ಅಲ್ಲಾಹು ಅಕ್ಬರ್' ಎಂದು ಜಪಿಸಲು ಪ್ರಾರಂಭಿಸಿದ್ದಾಗಿ ಹೇಳಿದರು.

ಇದನ್ನೂ ಓದಿ: Pahalgam Terror Attack: ಜೀವ ಉಳಿಸಿಕೊಳ್ಳಲು ಪ್ರವಾಸಿಗರು ಅಡಗಿಕೊಂಡಿರುವ ಭಯಾನಕ ವಿಡಿಯೋ ವೈರಲ್‌

ಅಲ್ಲಾಹು ಅಕ್ಬರ್ ಎಂದರೆ ಏನು?

ಇದೊಂದು ಅರೇಬಿಕ್ ಪದ. ಮುಸ್ಲಿಂ ಸಮುದಾಯದವರು ದೇವರ ಮೇಲಿರುವ ನಂಬಿಕೆಯನ್ನು ಸೂಚಿಸುವ ಮತ್ತು ದೇವರಿಗೆ ಕೃತಜ್ಞತೆ ಸಲ್ಲಿಸುವ ಪದ. ಸಾಮಾನ್ಯವಾಗಿ ಇದನ್ನು ನಮಾಜ್ ಮಾಡುವಾಗ ಹೇಳಲಾಗುತ್ತದೆ. ಹೆಚ್ಚಿನ ಸಂತೋಷ ಅಥವಾ ದುಃಖದ ಸಮಯದಲ್ಲಿ ಇದನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಇದರ ಅರ್ಥ 'ದೇವರು ಶ್ರೇಷ್ಠ' ಅಥವಾ 'ಅಲ್ಲಾಹನು ಎಲ್ಲಕ್ಕಿಂತ ದೊಡ್ಡವನು' ಎಂಬುದಾಗಿದೆ. ಈ ಪದಗುಚ್ಛವನ್ನು 'ತಕ್ಬೀರ್' ಎಂದು ಕರೆಯಲಾಗುತ್ತದೆ.

'ಅಲ್ಲಾಹು ಅಕ್ಬರ್' ಪದಗುಚ್ಛವು 'ದೇವರು ಶ್ರೇಷ್ಠ' ಎಂಬುದನ್ನು ಸಾರುವುದರಿಂದ ಪ್ರಪಂಚದಾದ್ಯಂತದ ಮುಸ್ಲಿಮರು ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾವುದೇ ಶಕ್ತಿಯನ್ನು ಪೂಜಿಸುವುದಿಲ್ಲ ಎಂದು ನಂಬುತ್ತಾರೆ.

ಮುಸ್ಲಿಂ ಸಮುದಾಯವು ಪ್ರಾರ್ಥನೆ ಮಾಡುವಾಗ, ಹಬ್ಬಗಳ ಆಚರಣೆಯಲ್ಲಿ, ಅಜಾನ್‌, ಹಜ್ ಯಾತ್ರೆ ಮಾಡುವಾಗ ಅಥವಾ ಹೆಚ್ಚು ದುಃಖ ಆಚರಣೆಗಳಲ್ಲಿ ಈ ಪದವನ್ನು ಬಳಸುತ್ತಾರೆ. ಈ ಪದವನ್ನು ಆಶ್ಚರ್ಯವನ್ನು ಅಭಿವ್ಯಕ್ತಗೊಳಿಸಲು ಬಳಸಲಾಗುತ್ತದೆ.

ಮಗುವಿನ ಜನನದ ಅನಂತರ, ಪ್ರಾಣಿ ಬಲಿಯ ಸಮಯದಲ್ಲೂ ಕೂಡ ಮುಸ್ಲಿಮರು ದೇವರನ್ನು ಸ್ತುತಿಸಲು ಈ ಪದವನ್ನು ಬಳಸುತ್ತಾರೆ. ಪ್ರಾಚೀನ ಕಾಲದಲ್ಲಿ ಕೆಲವು ಯುದ್ಧಕ್ಕೆ ಹೊರಡುವಾಗ ಮತ್ತು ವಿಜಯದ ಸಂಕೇತವಾಗಿ ಈ ಪದ ಗುಚ್ಛವನ್ನು ಘೋಷಣೆಯಾಗಿ ಬಳಸಲಾಗುತ್ತಿತ್ತು.