Vastu Tips: ಕಾರಿನಲ್ಲಿ ಯಾವ ದೇವರ ವಿಗ್ರಹ ಇಡಬೇಕು?
Vastu Tips: ಮನೆ, ಅಂಗಡಿ, ಜಾಗ ಖರೀದಿ ಮಾತ್ರವಲ್ಲ ಹೊಸ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಯಾವ ದೇವರ ವಿಗ್ರಹವನ್ನು ಇಡಬೇಕು ಎಂಬುದನ್ನೂ ವಾಸ್ತುಶಾಸ್ತ್ರ ಹೇಳುತ್ತದೆ. ಅಲ್ಲದೇ ಹೊಸ ಕಾರಿನಲ್ಲಿ ದೇವರ ವಿಗ್ರಹವನ್ನು ಸ್ಥಾಪಿಸುವಾಗ ವಾಸ್ತುವಿನ ಕುರಿತು ಸರಿಯಾದ ಜ್ಞಾನ ಹೊಂದಿರಬೇಕು ಎನ್ನುತ್ತದೆ ವಾಸ್ತು ನಿಯಮ.


ಬೆಂಗಳೂರು: ಕುಟುಂಬ ಸಣ್ಣದಾಗಿದ್ದರೂ ಮನೆ ಮಂದಿ ಎಲ್ಲ ಒಟ್ಟಿಗೆ ಓಡಾಡಲು ಕಾರೊಂದು (New car) ಮನೆಗೆ ಬೇಕೇಬೇಕು ಎಂಬುದು ಎಲ್ಲರ ಆಸೆ. ಇದನ್ನು ನನಸು ಮಾಡಲು ಹಗಲು ರಾತ್ರಿ ಎನ್ನದೆ ಕೆಲವರು ಶ್ರಮ ಪಡುತ್ತಾರೆ. ಅಂತೂ ಇಂತು ಮನೆಗೆ ಕಾರು ಬಂತು. ಪೂಜೆ ಮಾಡಿ ಅದನ್ನು ಮನೆಗೆ ತಂದ ಮೇಲೆ ಮೊದಲು ಎಲ್ಲರಿಗೂ ಕಾಡುವ ಪ್ರಶ್ನೆ ಕಾರಿನ ಡ್ಯಾಶ್ ಬೋರ್ಡ್ (Car dashboard) ಮೇಲೆ ಯಾವ ದೇವರ ವಿಗ್ರಹ (Vastu tips) ಇಡಬೇಕು ? ಅವರಿವರನ್ನು ಕೇಳಿ ಯಾವುದೋ ಒಂದು ವಿಗ್ರಹವಿಟ್ಟರೆ ಮನಸ್ಸಿಗೆ ಸಮಾಧಾನವಾಗುವುದಿಲ್ಲ.
ಮನೆ, ಅಂಗಡಿ, ಜಾಗ ಖರೀದಿ ಮಾತ್ರವಲ್ಲ ಹೊಸ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಯಾವ ದೇವರ ವಿಗ್ರಹವನ್ನು ಇಡಬೇಕು ಎಂಬುದನ್ನೂ ವಾಸ್ತುಶಾಸ್ತ್ರ ಹೇಳುತ್ತದೆ. ಅಲ್ಲದೇ ಹೊಸ ಕಾರಿನಲ್ಲಿ ದೇವರ ವಿಗ್ರಹವನ್ನು ಸ್ಥಾಪಿಸುವಾಗ ವಾಸ್ತುವಿನ ಕುರಿತು ಸರಿಯಾದ ಜ್ಞಾನ ಹೊಂದಿರಬೇಕು ಎನ್ನುತ್ತದೆ ವಾಸ್ತು ನಿಯಮ.
ಕಾರು ಕೇವಲ ಮನೆ ಮಂದಿಗೆಲ್ಲ ಓಡಾಡಲು ಖರೀದಿ ಮಾಡಿರುವ ಸಾರಿಗೆ ಸಾಧನ ಮಾತ್ರವಲ್ಲ. ಎಲ್ಲರಿಗೂ ಇದರೊಂದಿಗೆ ಒಂದು ಭಾವನಾತ್ಮಕ ಬಾಂಧವ್ಯವಿರುತ್ತದೆ. ಕಷ್ಟಪಟ್ಟು ಖರೀದಿ ಮಾಡಿರುವ, ಜೀವನದಲ್ಲಿ ಏನೋ ಮಹತ್ವವಾದುದನ್ನು ಸಾಧಿಸಿರುವ ಸಂಕೇತವಾಗಿರುತ್ತದೆ. ಯಾರೇ ಆಗಿರಲಿ ಹೊಸ ಕಾರನ್ನು ಖರೀದಿಸಿದಾಗಲೆಲ್ಲ ಅವರು ಅದರಲ್ಲಿ ತಮ್ಮ ಪ್ರಯಾಣ ಸುರಕ್ಷಿತ, ಮಂಗಳಕರವಾಗಿರಬೇಕು ಮತ್ತು ಸಕಾರಾತ್ಮಕ ಶಕ್ತಿ ಅದರಲ್ಲಿ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಅದರಲ್ಲಿ ದೇವರ ಪ್ರತಿಮೆ ಅಥವಾ ಫೋಟೋ ಇಡುತ್ತಾರೆ. ಇದು ಕಾರನ್ನು ಅಪಾಯದಿಂದ ರಕ್ಷಿಸುತ್ತದೆ ಎನ್ನುವುದು ಎಲ್ಲರ ನಂಬಿಕೆ.
ಕಾರಿನಲ್ಲಿ ದೇವರ ಪ್ರತಿಮೆ ಇಡುವುದು ವಾಸ್ತು ಪ್ರಕಾರ ವಿಶೇಷ ಮಹತ್ವವನ್ನು ಹೊಂದಿದೆ. ಆದರೆ ಯಾವುದೇ ವಾಹನದಲ್ಲಿ ದೇವರ ವಿಗ್ರಹವನ್ನು ಇಡುವ ಮೊದಲು ಕೆಲವು ನಿಯಮಗಳನ್ನು ಅನುಸರಿಸುವುದು ಮುಖ್ಯ. ಹೊಸ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಕೆಲವು ವಿಶೇಷ ದೇವರುಗಳ ವಿಗ್ರಹವನ್ನು ಇಡಲು ಸಲಹೆ ನೀಡುತ್ತದೆ ವಾಸ್ತುಶಾಸ್ತ್ರ. ಇದು ವಾಹನವನ್ನು ರಕ್ಷಿಸುವುದಲ್ಲದೆ ಪ್ರಯಾಣದಲ್ಲಿ ಅನಗತ್ಯ ಅಡೆತಡೆಗಳನ್ನು ದೂರ ಮಾಡುತ್ತದೆ. ಈ ಕುರಿತು ಜ್ಯೋತಿಷಿ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಅವರು ನೀಡಿರುವ ಸಲಹೆ ಇಂತಿದೆ.
ಹೊಸ ವಾಹನದಲ್ಲಿ ದೇವರ ವಿಗ್ರಹ ಏಕೆ ಇಡಬೇಕು?
ಇದು ಕೇವಲ ನಂಬಿಕೆಗೆ ಸಂಬಂಧಿಸಿದ ವಿಚಾರವಲ್ಲ. ಇದರ ಹಿಂದೆ ವಾಸ್ತು ಮತ್ತು ಮಾನಸಿಕ ಶಾಂತಿಗೆ ಸಂಬಂಧಿಸಿದ ಅನೇಕ ಕಾರಣಗಳಿವೆ. ಪ್ರತಿಯೊಂದು ಕಾರ್ಯವನ್ನು ದೇವರ ಆಶೀರ್ವಾದದೊಂದಿಗೆ ಪ್ರಾರಂಭಿಸುವುದು ಶುಭವೆಂದು ಹಿಂದೂ ಸಂಪ್ರದಾಯದ ನಂಬಿಕೆ. ವಾಹನದಲ್ಲಿ ದೇವರ ವಿಗ್ರಹ ಅಥವಾ ಚಿತ್ರವನ್ನು ಇಡುವುದು ನಮ್ಮೊಳಗೆ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ, ಪ್ರಯಾಣಿಸುವವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ.
ಯಾವ ದೇವರ ವಿಗ್ರಹ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ವಾಹನದಲ್ಲಿ ಶುಭ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಈ ನಾಲ್ಕು ದೇವರ ವಿಗ್ರಹ ಅಥವಾ ಫೋಟೋ ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ.

ಗಣೇಶ
ಶುಭ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾದ ಗಣಪತಿಯ ವಿಗ್ರಹವನ್ನು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇರಿಸಬಹುದು. ವಿಘ್ನವಿನಾಶಕ ಎಂದೇ ಕರೆಯಲ್ಪಡುವ ಗಣೇಶನ ವಿಗ್ರಹವನ್ನು ಇಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತದೆ, ಮನದಲ್ಲಿ ಭದ್ರತೆಯ ಭಾವನೆ ಉಂಟಾಗುತ್ತದೆ, ದಾರಿಯಲ್ಲಿಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಮತ್ತು ನಕಾರಾತ್ಮಕ ಶಕ್ತಿ ಹತ್ತಿರ ಬರುವುದಿಲ್ಲ. ಕಾರಿಗೆ ಗಣಪತಿಯ ವಿಗ್ರಹವನ್ನು ಆರಿಸುವಾಗ ಗಣೇಶನ ಮುಖವು ನೇರವಾಗಿರಬೇಕು, ವಾಹನದ ಎದುರು, ಮಧ್ಯದಲ್ಲಿ ಇರಬೇಕು ಎನ್ನುತ್ತದೆ ವಾಸ್ತುಶಾಸ್ತ್ರ.

ಹನುಮ
ವಾಹನವು ಅಪಘಾತಗಳಿಂದ ಸುರಕ್ಷಿತವಾಗಿರಬೇಕೆಂದು ಬಯಸಿದರೆ ವಾಹನದಲ್ಲಿ ಹನುಮನ ಚಿತ್ರ ಅಥವಾ ಸಣ್ಣ ವಿಗ್ರಹವನ್ನು ಇಟ್ಟುಕೊಳ್ಳುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಹನುಮನನ್ನು ಶಕ್ತಿ, ಬುದ್ಧಿವಂತಿಕೆ ಮತ್ತು ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೂರ ಪ್ರಯಾಣಕ್ಕೆ ಹೋಗುವಾಗ ಹನುಮನನ್ನು ನೆನಪಿಸಿಕೊಳ್ಳುವುದರಿಂದ ಪ್ರಯಾಣ ಸುರಕ್ಷಿತವಾಗಿರುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಮನೆ ಮುಂದೆ ಗುಲಾಬಿ ಗಿಡಗಳನ್ನು ನೆಡಬಹುದಾ...?

ಆದಿಯೋಗಿ
ಆದಿಯೋಗಿ ಶಿವನ ವಿಗ್ರಹವನ್ನು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇರಿಸುವುದರಿಂದ ಆಧ್ಯಾತ್ಮಿಕ ಮತ್ತು ಮಾನಸಿಕವಾಗಿ ಸಕಾರಾತ್ಮಕ ಅನುಭವ ದೊರೆಯುತ್ತದೆ. ಧ್ಯಾನಸ್ಥ ರೂಪದ ಶಿವನು ಮನಸ್ಸಿಗೆ ಶಾಂತಿ, ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ವಾಹನ ಚಾಲನೆ ಮಾಡುವಾಗ ಅತ್ಯಂತ ಉಪಯುಕ್ತವಾಗಿದೆ. ಆದಿಯೋಗಿಯ ವಿಗ್ರಹವು ವಾಹನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಕೋಪ, ಚಡಪಡಿಕೆ ಮತ್ತು ಒತ್ತಡದಂತಹ ನಕಾರಾತ್ಮಕ ಭಾವನೆಗಳನ್ನು ದೂರ ಮಾಡುತ್ತದೆ.

ದುರ್ಗಾ ದೇವಿ
ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದುರ್ಗಾ ದೇವಿಯ ವಿಗ್ರಹವನ್ನು ಇರಿಸಿದರೆ ಶಕ್ತಿ, ಧೈರ್ಯ ಮತ್ತು ರಕ್ಷಣೆ ಪ್ರಾಪ್ತವಾಗುವುದು. ದಾರಿಯಲ್ಲಿ ಎದುರಾಗುವ ತೊಂದರೆಗಳನ್ನು ನಾಶ ಮಾಡುತ್ತದೆ. ವಿಶೇಷವಾಗಿ ಮಹಿಳೆಯರು ತಮ್ಮ ವಾಹನದಲ್ಲಿ ದುರ್ಗಾ ದೇವಿಯ ವಿಗ್ರಹವನ್ನು ಇಟ್ಟುಕೊಳ್ಳುವುದು ಶುಭವೆಂದು ಪರಿಗಣಿಸಲಾಗಿದೆ. ದುರ್ಗಾ ದೇವಿಯ ವಿಗ್ರಹವು ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ವಾಹನದೊಳಗೆ ಪ್ರವೇಶಿಸುವುದಿಲ್ಲ ಎಂದು ನಂಬಲಾಗುತ್ತದೆ.
ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಸ್ಥಾಪಿಸಲಾಗುವ ವಿಗ್ರಹವು ಚಿಕ್ಕದಾಗಿರಬೇಕು, ಸ್ವಚ್ಛವಾಗಿರಬೇಕು ಮತ್ತು ವಾಹನದ ದಿಕ್ಕಿಗೆ ಎದುರಾಗಿರಬೇಕು. ಇದರಿಂದ ದೇವರ ದೃಷ್ಟಿ ಯಾವಾಗಲೂ ಮುಂದಿರುತ್ತದೆ ಮತ್ತು ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳು ದೂರವಾಗುತ್ತದೆ.