ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಹಣಕಾಸು ವಂಚನೆಗೆ ಶಿಕ್ಷೆಯಾಗಲಿ

ದೇಶದಲ್ಲಿ ಫೈನಾನ್ಸ್ ವಹಿವಾಟುಗಳನ್ನು ನಿಯಂತ್ರಿಸಲು ಆರ್‌ಬಿಐ, ಸೆಬಿ ಮುಂತಾದ ಸಂಸ್ಥೆಗಳಿವೆ. ಫೈನಾನ್ಸ್ ವ್ಯವಹಾರಗಳು ಇಂಥ ಸಂಸ್ಥೆಗಳಡಿ ನೋಂದಾಯಿಸಿಕೊಂಡು ಪಾರದರ್ಶಕವಾಗಿದ್ದರೆ ಮಾತ್ರ ನಂಬುವುದನ್ನು ಜನತೆ ರೂಢಿಸಿಕೊಳ್ಳಬೇಕು. ಈ ಹಿಂದೆ ಬಹುಕೋಟಿ ಹಣದ ವಂಚನೆ ಎಸಗಿದ ವಿನಿವಿಂಕ್, ಶಾರದಾ ಚಿಟ್ ಫಂಡ್, ಸತ್ಯಂ ಮುಂತಾದ ಹಗರಣಗಳನ್ನು ನೆನಪಿಸಿಕೊಳ್ಳ ಬಹುದು.

Vishwavani Editorial: ಹಣಕಾಸು ವಂಚನೆಗೆ ಶಿಕ್ಷೆಯಾಗಲಿ

-

Profile
Ashok Nayak May 19, 2026 9:34 AM

ಬೆಳಗಾವಿಯಲ್ಲಿ ನಾಡೇ ಬೆಚ್ಚಿ ಬೀಳುವಂಥ ಹಣಕಾಸು ವಂಚನೆಯ ಹಗರಣವೊಂದು ಹೊರ ಬಿದ್ದಿದೆ. ಇದು ಸುಮಾರು 4500 ಕೋಟಿ ರೂ.ಗಳಷ್ಟು ಬಹು ಮೊತ್ತದ ಮೋಸದ ಹಗರಣ. ಶಿವಂ ಅಸೋಸಿಯೇಟ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಕಾನೂನು ಉಲ್ಲಂಘಿಸಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿಸಿಕೊಂಡಿದ್ದಾನೆ ಶಿವಾನಂದ ನೀಲಣ್ಣನವರ ಎಂಬಾತ.

ಈ ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿಗೆ ವಹಿಸಿದೆ. ಈತ ಇಷ್ಟೊಂದು ಪ್ರಮಾಣದ ಹಣವನ್ನು ಸಾಲದ ರೂಪದಲ್ಲಿ ಸಂಗ್ರಹಿಸಿದ್ದು, ಅದರ ಬಡ್ಡಿಯೇ ತಿಂಗಳಿಗೆ 7 ಕೋಟಿ ರೂ.ಗಳಷ್ಟು ಆತನಿಗೆ ಬರುತ್ತಿತ್ತು. ಇನ್ನೊಂದು ವಿಲಕ್ಷಣ ಸಂಗತಿ ಎಂದರೆ, ಈತ ಜೈಲಿಗೆ ಹೋದರೆ ತಮ್ಮ ಹಣ ಹಿಂದಿರುಗಿ ಬರಲಾರದು ಎಂಬ ಆತಂಕದಲ್ಲಿ ಮೋಸಕ್ಕೊಳಗಾದವರು ಯಾರೂ ದೂರು ನೀಡಿಲ್ಲ.

ಯಾರೂ ದೂರು ನೀಡಿಲ್ಲದಿರುವುದರಿಂದ ತನಿಖೆ ಮುಂದುವರಿಕೆಯೂ ಕಷ್ಟವಾಗಿದೆಯಂತೆ. ಇಂಥ ಮನೋಭಾವವೇ ಆರ್ಥಿಕ ವಂಚನೆಗಳ ಸಂಖ್ಯೆ ಯದ್ವಾತದ್ವಾ ಹೆಚ್ಚುತ್ತಿರಲು ಕಾರಣ. ಬೀದಿ ಬೀದಿಗಳಲ್ಲಿ ನಡೆಯುವ ಸಣ್ಣ ಪ್ರಮಾಣದ ಚೀಟಿ ವ್ಯವಹಾರಗಳಿಂದ ಹಿಡಿದು, ಬಹುಕೋಟಿ ಸಂಸ್ಥೆಗಳ ವರೆಗೆ ಪ್ರಜೆಗಳು ತಾವು ಕಷ್ಟಪಟ್ಟು ದುಡಿದು ತಂದು ನೀಡಿದ ಹಣವನ್ನು ಕಳೆದುಕೊಳ್ಳು ತ್ತಿರುವುದು ವಿಷಾದನೀಯ.

ಇದನ್ನೂ ಓದಿ: Vishwavani Editorial: ನೆದರ್‌ಲ್ಯಾಂಡ್ ಜೊತೆಗೆ ನಂಟಸ್ತಿಕೆ

ಈತ ಸಾರ್ವಜನಿಕರಿಗೆ 30- 35 ಶೇಕಡದಷ್ಟು ಬಡ್ಡಿ ಹಣ ನೀಡುವ ಆಮಿಷ ಒಡ್ಡಿದ್ದ ಎನ್ನಲಾಗು ತ್ತಿದೆ. ಈ ಪ್ರಪಂಚದಲ್ಲಿ ಯಾರೂ ಈ ಪ್ರಮಾಣದ ಬಡ್ಡಿ ನೀಡಲು ಸಾಧ್ಯವಿಲ್ಲ. ಆಮಿಷಗಳು ಸುಂದರವಾಗಿದ್ದಷ್ಟೂ ಮೋಸದ ಪ್ರಮಾಣ ಹೆಚ್ಚು ಎಂಬುದನ್ನು ಜನತೆ ಮನಗಾಣಬೇಕು.

ದೇಶದಲ್ಲಿ ಫೈನಾನ್ಸ್ ವಹಿವಾಟುಗಳನ್ನು ನಿಯಂತ್ರಿಸಲು ಆರ್‌ಬಿಐ, ಸೆಬಿ ಮುಂತಾದ ಸಂಸ್ಥೆಗಳಿವೆ. ಫೈನಾನ್ಸ್ ವ್ಯವಹಾರಗಳು ಇಂಥ ಸಂಸ್ಥೆಗಳಡಿ ನೋಂದಾಯಿಸಿಕೊಂಡು ಪಾರದರ್ಶಕವಾಗಿದ್ದರೆ ಮಾತ್ರ ನಂಬುವುದನ್ನು ಜನತೆ ರೂಢಿಸಿಕೊಳ್ಳಬೇಕು. ಈ ಹಿಂದೆ ಬಹುಕೋಟಿ ಹಣದ ವಂಚನೆ ಎಸಗಿದ ವಿನಿವಿಂಕ್, ಶಾರದಾ ಚಿಟ್ ಫಂಡ್, ಸತ್ಯಂ ಮುಂತಾದ ಹಗರಣಗಳನ್ನು ನೆನಪಿಸಿಕೊಳ್ಳ ಬಹುದು.

ಎಲ್ಲದರಲ್ಲೂ ಸಾಮಾನ್ಯವಾಗಿರುವ ಅಂಶವೆಂದರೆ ಮೋಸ ಹೋದವರಲ್ಲಿ ಇದ್ದ ಆಸೆ. ಒಂದಕ್ಕೆ ಎರಡು, ಮೂರು ಪಟ್ಟು ಹಣ ದೊರೆಯುತ್ತದೆ ಎಂಬ ದುರಾಸೆ ಮೂಡಿದಾಗ ಮೋಸ ಶತಸ್ಸಿದ್ಧ. ವಂಚನೆಗೆ ಒಳಗಾಗುವವರು ಇರುವವರೆಗೂ ವಂಚನೆ ಎಸಗುವವರೂ ಇರುತ್ತಾರೆ. ಹಣಕಾಸು ಸಾಕ್ಷರತೆ, ಹೊಸ ಸ್ಕೀಮ್‌ಗಳ ಬಗ್ಗೆ ಎಚ್ಚರ, ಋಜುತ್ವ ವ್ಯವಹಾರದ ಬಗ್ಗೆ ನಂಬಿಕೆ ಎಲ್ಲರಿಗೂ ಅಗತ್ಯ.