‘ಕಾಯಕ’ ಜೀವಿಗಳ ಕಷ್ಟ ತಪ್ಪಲಿ
ಇಂದು ಸರಕಾರಿ ಇಲಾಖೆಗಳಿಂದ ಹಿಡಿದು ಖಾಸಗಿ ವಲಯದವರೆಗೆ ‘ಗುತ್ತಿಗೆ ಆಧಾರಿತ ನೇಮ ಕಾತಿ’ ಎಂಬ ಪಿಡುಗು ವ್ಯಾಪಿಸಿದೆ. ಕಾಯಂ ನೌಕರರಿಗಿಂತ ಹಂಗಾಮಿ ನೌಕರರ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಆತಂಕಕಾರಿ. ಇವರಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ, ಪಿಂಚಣಿ ಯಿಲ್ಲ, ಕನಿಷ್ಠ ವಿಮೆಯ ಸೌಲಭ್ಯವೂ ಇಲ್ಲ.
-
ಇಂದು ಮೇ 1, ವಿಶ್ವ ಕಾರ್ಮಿಕರ ದಿನ. ಬೆವರು ಸುರಿಸುವ ಕೈಗಳಿಗೆ ಗೌರವ ಸಲ್ಲಿಸಬೇಕಾದ ಈ ದಿನದಂದು, ಕಾರ್ಮಿಕರ ಬದುಕು ಮಾತ್ರ ಹಿಂದೆಂದಿಗಿಂತಲೂ ಹೆಚ್ಚು ಅಸುರಕ್ಷಿತ ವಾಗಿದೆ. ಒಂದು ಕಾಲದಲ್ಲಿ ಬಲಿಷ್ಠ ಕಾರ್ಮಿಕ ಸಂಘಟನೆಗಳು ಸರಕಾರದ ನಿರ್ಧಾರ ಗಳನ್ನೇ ಬದಲಿಸುವ ತಾಕತ್ತು ಹೊಂದಿದ್ದವು. ಆದರೆ ಇಂದು ಜಾಗತೀಕರಣ ಮತ್ತು ಉದಾರೀಕರಣದ ಸುಳಿಯಲ್ಲಿ ಕಾರ್ಮಿಕ ಕಾಯಿದೆಗಳು ಕೇವಲ ಕಾಗದದ ಹುಲಿಗಳಾಗಿ ಉಳಿದಿವೆ.
ಇಂದು ಸರಕಾರಿ ಇಲಾಖೆಗಳಿಂದ ಹಿಡಿದು ಖಾಸಗಿ ವಲಯದವರೆಗೆ ‘ಗುತ್ತಿಗೆ ಆಧಾರಿತ ನೇಮಕಾತಿ’ ಎಂಬ ಪಿಡುಗು ವ್ಯಾಪಿಸಿದೆ. ಕಾಯಂ ನೌಕರರಿಗಿಂತ ಹಂಗಾಮಿ ನೌಕರರ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಆತಂಕಕಾರಿ. ಇವರಿಗೆ ಯಾವುದೇ ಉದ್ಯೋಗ ಭದ್ರತೆ ಯಿಲ್ಲ, ಪಿಂಚಣಿಯಿಲ್ಲ, ಕನಿಷ್ಠ ವಿಮೆಯ ಸೌಲಭ್ಯವೂ ಇಲ್ಲ.
ಇದನ್ನೂ ಓದಿ: Vishwavani Editorial: ಯೋಜನೆ ಪ್ರಚಾರದ ಸರಕಾಗದಿರಲಿ
‘ಬಳಸಿ ಬಿಸಾಡುವ’ (Hire and Fire) ಸಂಸ್ಕೃತಿ ಇಂದು ಆಡಳಿತದ ಮಂತ್ರವಾಗಿದೆ. ಐಟಿ ಉದ್ಯಮದಲ್ಲಿ ರಾತ್ರೋರಾತ್ರಿ ಉದ್ಯೋಗಿಗಳನ್ನು ಕಿತ್ತು ಹಾಕುವುದು ಸಾಮಾನ್ಯವಾಗಿದೆ. ಕಳೆದ ಒಂದು ವರ್ಷದ (2025-26) ಅಂಕಿಅಂಶಗಳನ್ನು ಗಮನಿಸಿದರೆ, ದೇಶದ ನಿರುದ್ಯೋಗ ದರವು 2026ರ ಮಾರ್ಚ್ ವೇಳೆಗೆ 5.1% ಕ್ಕೆ ಏರಿಕೆಯಾಗಿದೆ.
ಐಟಿ, ಎಡ್ಯುಟೆಕ್ ಮತ್ತು ಇ-ಕಾಮರ್ಸ್ ವಲಯಗಳಲ್ಲಿ ಲಕ್ಷಾಂತರ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೆ ರಾತ್ರೋರಾತ್ರಿ ಮನೆಗೆ ಕಳುಹಿಸಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಆಟೋಮೇಷನ್ ನೆಪದಲ್ಲಿ ನುರಿತ ನೌಕರರೂ ಬೀದಿಗೆ ಬೀಳುತ್ತಿದ್ದಾರೆ. ಮತ್ತೊಂದೆಡೆ, ಬಹುರಾಷ್ಟ್ರೀಯ ಕಂಪನಿಗಳು ದೇಶದ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರುತ್ತಿವೆ.
ತಮ್ಮ ಲಾಭಕ್ಕಾಗಿ ಉದ್ಯೋಗಿಗಳನ್ನು ‘ಪಾಲುದಾರರು’ ಅಥವಾ ‘ಫ್ರೀಲ್ಯಾನ್ಸರ್ʼಗಳು’ ಎಂದು ಕರೆದು, ಅವರಿಗೆ ಸಿಗಬೇಕಾದ ಶಾಸನಬದ್ಧ ಸೌಲಭ್ಯಗಳನ್ನು ನಾಜೂಕಾಗಿ ತಪ್ಪಿಸು ತ್ತಿವೆ. ಸರಕಾರದ ಹೊಸ ಕಾರ್ಮಿಕ ಸಂಹಿತೆಗಳು ( Labour Codes 2025 ) ಜಾರಿಗೆ ಬಂದಿದ್ದರೂ, ಅವು ಕಾರ್ಮಿಕರ ಹಿತ ಕಾಯುವಲ್ಲಿ ಸೋಲುತ್ತಿವೆ ಎಂಬ ಮಾತು ಕೇಳಿ ಬರುತ್ತಿದೆ.
ಕಾರ್ಮಿಕ ಕಾಯಿದೆಗಳು ಕಾಲಕ್ಕೆ ತಕ್ಕಂತೆ ಪರಿಷ್ಕರಣೆಯಾಗಬೇಕಾಗಿದೆ. ಜಾಗತೀಕರಣದ ತಲ್ಲಣಗಳಿಗೂ ಇವು ಸ್ಪಂದಿಸಬೇಕಾಗಿದೆ. ಕಾರ್ಮಿಕರ ದಿನ ಕೇವಲ ಚರಣೆಯಾಗದೆ, ಅವರ ಹಕ್ಕುಗಳ ಮರುಸ್ಥಾಪನೆಯ ಸಂಕಲ್ಪವಾಗಲಿ.