ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಜನರು ಸೂಕ್ಷ್ಮಮತಿಗಳು, ಮರೆಯದಿರಿ!

‘ಪಾಕಿಸ್ತಾನ ನಮ್ಮ ವಿರೋಧಿ ರಾಷ್ಟ್ರ, ಅದರ ಮೇಲೆ ಕೇಂದ್ರ ಸರಕಾರವು ಯುದ್ಧ ಸಾರಿದರೆ ನನಗೆ ಅವಕಾಶ ನೀಡಲಿ; ನಾನು ಗಡಿಯಲ್ಲಿ ಯುದ್ಧಕ್ಕೆ ಹೋಗಲು ಸಿದ್ಧ’ ಎಂಬ ಆಣಿಮುತ್ತುಗಳನ್ನು ಉದುರಿಸಿ ಬಿಟ್ಟಿದ್ದಾರೆ ಈ ಜನನಾಯಕರು. ಒಂದೊಮ್ಮೆ ಯುದ್ಧದ ಘೋಷಣೆಯಾದರೂ, ಅಲ್ಲಿ ಹೋರಾಡು ವವರು ನಿಯೋಜಿತ ಯೋಧರೇ ಹೊರತು ತಾವಲ್ಲ ಎಂಬುದು ನಮ್ಮ ಜನರಿಗೂ ಗೊತ್ತಿದೆ,

ಜನರು ಸೂಕ್ಷ್ಮಮತಿಗಳು, ಮರೆಯದಿರಿ!

Profile Ashok Nayak May 5, 2025 6:40 AM

ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು’ ಎಂದಿದ್ದಾರೆ ಭಕ್ತಿ ಭಂಡಾರಿ ಬಸವಣ್ಣನವರು. ಎಷ್ಟೋ ಸಂದರ್ಭದಲ್ಲಿ ನಾವಾಡುವ ಮಾತೇ ಆಗಬೇಕಿರುವ ನಮ್ಮ ಕೆಲಸವನ್ನು ಸರಾಗವಾಗಿಸಿಬಿಡುತ್ತದೆ. ಆದರೆ ಇಲ್ಲೊಬ್ಬರು ಜನನಾಯಕರು ತಮ್ಮ ‘ರಾಜ ಕೀಯ-ಬೇಳೆ’ ಬೇಯಿಸಿಕೊಳ್ಳಲೆಂದು, ಸಮಯ-ಸಂದರ್ಭದ ಔಚಿತ್ಯವನ್ನೂ ಅರಿಯದೆ, ಸಾರ್ವ ಜನಿಕವಾಗಿ ಬಾಯಿಗೆ ಬಂದಂತೆ ಮಾತನಾಡಿ ನಗೆಪಾಟಲಿಗೆ ಈಡಾಗಿದ್ದಾರೆ.

‘ಪಾಕಿಸ್ತಾನ ನಮ್ಮ ವಿರೋಧಿ ರಾಷ್ಟ್ರ, ಅದರ ಮೇಲೆ ಕೇಂದ್ರ ಸರಕಾರವು ಯುದ್ಧ ಸಾರಿದರೆ ನನಗೆ ಅವಕಾಶ ನೀಡಲಿ; ನಾನು ಗಡಿಯಲ್ಲಿ ಯುದ್ಧಕ್ಕೆ ಹೋಗಲು ಸಿದ್ಧ’ ಎಂಬ ಆಣಿಮುತ್ತುಗಳನ್ನು ಉದುರಿಸಿಬಿಟ್ಟಿದ್ದಾರೆ ಈ ಜನನಾಯಕರು. ಒಂದೊಮ್ಮೆ ಯುದ್ಧದ ಘೋಷಣೆಯಾದರೂ, ಅಲ್ಲಿ ಹೋರಾಡುವವರು ನಿಯೋಜಿತ ಯೋಧರೇ ಹೊರತು ತಾವಲ್ಲ ಎಂಬುದು ನಮ್ಮ ಜನರಿಗೂ ಗೊತ್ತಿದೆ,

ಇದನ್ನೂ ಓದಿ: Vishwavani Editorial: ಅಭಿಮಾನವೋ ಅತಿರೇಕವೋ?

ಹೀಗೊಂದು ‘ಭೀಷ್ಮ ಪ್ರತಿಜ್ಞೆ’ ಮಾಡಿದ ಸದರಿ ಜನನಾಯಕರಿಗೂ ಗೊತ್ತಿದೆ. ಇಷ್ಟಾಗಿಯೂ ಇಂಥ ಮಾತುಗಳು ಹೊಮ್ಮುವುದೇ ತಮಾಷೆಯ ಸಂಗತಿ. ಆದ್ದರಿಂದಲೇ ಈ ಮಾತಿಗೆ ಅವರ ರಾಜಕೀಯ ಎದುರಾಳಿಯೊಬ್ಬರು, ‘ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ. ಮಿಲಿಟರಿಯನ್ನು ನಂಬಿ ಸುಮ್ಮನಿರಿ’ ಎಂದು ಟಾಂಗ್ ಕೊಟ್ಟಿದ್ದಾರೆ.

ಒಂದು ಕಾಲಕ್ಕೆ ಶ್ರೀಸಾಮಾನ್ಯರು ಇಂಥ ಮಾತುಗಳನ್ನು ನಂಬುತ್ತಿದ್ದುದುಂಟು, ಇಂಥವರಿಂದ ಕಾಲಾನುಕಾಲಕ್ಕೆ ಹಣೆಯ ಮೇಲೆ ‘ಡಬಲ್ ವೈಟ್, ಸಿಂಗಲ್ ರೆಡ್’ ಗುರುತನ್ನು ಹಾಕಿಸಿಕೊ ಳ್ಳುತ್ತಿದ್ದುದೂ ಉಂಟು. ಆದರೀಗ ಕಾಲ ಬದಲಾಗಿದೆ, ಜನರೂ ಬದಲಾಗಿದ್ದಾರೆ ಮತ್ತು ಸೂಕ್ಷ್ಮಮತಿ ಗಳಾಗಿದ್ದಾರೆ.

ಇಂಥ ಹೇಳಿಕೆಗಳಿಗೆ ಮನಸೋತು ‘ಉಘೇ ಉಘೇ’ ಎನ್ನುತ್ತಾ ‘ಇರುಳು ಕಂಡ ಬಾವಿಯಲ್ಲಿ ಹಗಲಲ್ಲಿ ಬೀಳುವ’ ಮುಠ್ಠಾಳತನ ಜನರಲ್ಲಿ ಈಗ ಇಲ್ಲ. ಇಂಥ ‘ನವರಂಗಿ ನಾಟಕ’ಗಳನ್ನು ಕಣ್ತುಂಬಿ ಕೊಳ್ಳುವಷ್ಟು ಸಮಯವಾಗಲೀ ತಾಳ್ಮೆಯಾಗಲೀ ಜನರಲ್ಲಿ ಇಲ್ಲ. ಚುನಾಯಿತ ಪ್ರತಿನಿಧಿಯೊಬ್ಬರು ತಮ್ಮ ಪಾಲಿನ ಜನಕಲ್ಯಾಣದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾಭಾವದಿಂದ ನಿರ್ವಹಿಸಿದರೆ ಸಾಕು ಎಂಬುದಷ್ಟೇ ನಮ್ಮ ಜನರ ಆಶಯ ಮತ್ತು ನಿರೀಕ್ಷೆ.