Vishwavani Editorial: ಆರ್‌ಸಿಬಿ ಅರ್ಹ ವಿಜಯ
ದೇವದತ್ ಪಡಿಕ್ಕಲ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್ ಮೊದಲಾದ ಅತ್ಯುತ್ತಮ ದಾಂಡಿಗರ ಸಾಲನ್ನೇ ಹೊಂದಿರುವ ಆರ್‌ಸಿಬಿ ಆಕ್ರಮಣಕಾರಿ ಆಟವನ್ನೇ ನೆಚ್ಚಿಕೊಂಡಿದ್ದು, ಪವರ್ ಪ್ಲೇನಲ್ಲಿ ಗರಿಷ್ಠ ರನ್‌ಗಳನ್ನು ದಾಖಲಿಸಿ ಎದುರಾಳಿ ತಂಡದ ಮೇಲೆ ಒತ್ತಡ ಸೃಷ್ಟಿಸಿದೆ. ಜೊತೆಗೆ ಅತ್ಯುತ್ತಮ ಬೌಲರ್‌ಗಳ ಪಡೆಯನ್ನೂ ಹೊಂದಿದೆ.
-
ಇಂಡಿಯನ್ ಪ್ರೀಮಿಯರ್ ಲೀಗ್- 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದಿದೆ. ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವ ಮೂಲಕ ಅಭಿಮಾನಿಗಳ ನಿರೀಕ್ಷೆ ಯನ್ನು ಈಡೇರಿಸಿದೆ. ಕಳೆದ ಬಾರಿಯೂ ಆರ್‌ಸಿಬಿ ಕಪ್ ಗೆದ್ದಿತ್ತು.
ಅದು 17 ವರ್ಷಗಳ ಸತತ ಪ್ರಯತ್ನ, ಸೋಲುಗಳ ಬಳಿಕ ಗೆದ್ದ ಕಪ್ ಆಗಿತ್ತು. ಆದರೆ ಆ ಗೆಲುವಿನ ಸಂಭ್ರಮವನ್ನು ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತ ದುರಂತ ಮಸುಕಾ ಗಿಸಿತ್ತು. ಈ ಬಾರಿ ಸಂಭ್ರಮವನ್ನಷ್ಟೇ ನಮ್ಮದಾಗಿಸಿಕೊಳ್ಳಲು ಸಾಧ್ಯವಾಗಿದೆ. ಆರ್‌ಸಿಬಿ ತಂಡವನ್ನು ಕನ್ನಡ ನಾಡಿನ ಐಪಿಎಲ್ ಕ್ರಿಕೆಟ್ ರಸಿಕರು ‘ತಮ್ಮದು’ ಎಂದು ಶುರುವಾತಿ ನಿಂದಲೂ ಎದೆಗಪ್ಪಿಕೊಂಡಿದ್ದಾರೆ.
ಆಗ ಅದರ ಮಾಲಿಕರೂ ಕನ್ನಡಿಗರಾಗಿದ್ದರು, ತಂಡದಲ್ಲೂ ಕನ್ನಡಿಗರು ಇದ್ದರು. ಇಂದು ಅದರ ಮಾಲಿಕರು ಕನ್ನಡಿಗರಲ್ಲ, ತಂಡದಲ್ಲಿಯೂ ಒಬ್ಬ ಮಾತ್ರ ಕನ್ನಡಿಗ ಇರುವುದು. ಆದರೆ ಇದ್ಯಾವುದೂ ಕ್ರಿಕೆಟ್ ಪ್ರಿಯರಿಗೆ ಸಂಭ್ರಮಿಸಲು ಅಡೆತಡೆಯಲ್ಲ. ತಂಡದೊಂದಿಗೆ ಅಂಟಿಕೊಂಡಿರುವ ‘ಬೆಂಗಳೂರು’ ನಮ್ಮದಾಗಿರುವ ತನಕ ನಿರೀಕ್ಷೆ, ಸಂಭ್ರಮ ಇರುತ್ತದೆ. ಹಾಗೇ ಉತ್ತಮ ಆಟವನ್ನು ಕ್ರಿಕೆಟ್ ಪ್ರಿಯರು ಆನಂದಿಸಿದ್ದಾರೆ. ಆರ್‌ಸಿಬಿ ದಿಟ್ಟ ಹೋರಾಟದ ಮೂಲಕ ಈ ಐಪಿಎಲ್ ಸೀಸನ್‌ನಲ್ಲಿ ಮುನ್ನಡೆ ಕಾಪಾಡಿಕೊಂಡು ಬಂದಿದ್ದು, ಅರ್ಹವಾಗಿಯೇ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ತಂಡದಲ್ಲಿ ಎಲ್ಲರೂ ಸ್ಟಾರ್ ಆಟಗಾರರಂತೆ ಆಡಿದ್ದಾರೆ. ಅನುಭವಿ ವಿರಾಟ್ ಕೊಹ್ಲಿ ಮಾರ್ಗ ದರ್ಶನ ನೀಡಿದ್ದಲ್ಲದೆ ಫೈನಲ್ ಪಂದ್ಯದಲ್ಲಿ ಸ್ಫೋಟಕ 75 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ರಜತ್ ಪಾಟೀದಾರ್ ತಂಡಕ್ಕೆ ಒಳ್ಳೆಯ ನಾಯಕತ್ವ ನೀಡಿ ಮುನ್ನಡೆಸಿ ದ್ದಾರೆ.
ದೇವದತ್ ಪಡಿಕ್ಕಲ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್ ಮೊದಲಾದ ಅತ್ಯುತ್ತಮ ದಾಂಡಿಗರ ಸಾಲನ್ನೇ ಹೊಂದಿರುವ ಆರ್‌ಸಿಬಿ ಆಕ್ರಮಣಕಾರಿ ಆಟವನ್ನೇ ನೆಚ್ಚಿಕೊಂಡಿ ದ್ದು, ಪವರ್ ಪ್ಲೇನಲ್ಲಿ ಗರಿಷ್ಠ ರನ್‌ಗಳನ್ನು ದಾಖಲಿಸಿ ಎದುರಾಳಿ ತಂಡದ ಮೇಲೆ ಒತ್ತಡ ಸೃಷ್ಟಿಸಿದೆ. ಜೊತೆಗೆ ಅತ್ಯುತ್ತಮ ಬೌಲರ್‌ಗಳ ಪಡೆಯನ್ನೂ ಹೊಂದಿದೆ.
ಇದರ ಜೊತೆಗೆ ನಮ್ಮ ಮಹಿಳಾ ಐಪಿಎಲ್ ತಂಡವನ್ನೂ ನೆನೆಯಬೇಕು. ಈ ವರ್ಷ ಆರ್‌ಸಿಬಿ ಮಹಿಳಾ ತಂಡವೂ ಟ್ರೋಫಿ ಗೆದ್ದು ಖುಷಿ ಇಮ್ಮಡಿಸಿದೆ. ಟ್ರೋಫಿಗಳ ಜಯದ ಹಿಂದೆ ಕೋಚ್‌ಗಳ ಪರಿಶ್ರಮವೂ ಇದೆ. ಇದಲ್ಲದೆ ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿಯ ‘ವೈಭವ’ ಪ್ರದರ್ಶನದೊಂದಿಗೆ ಇಡೀ ಐಪಿಎಲ್ ಸೀಸನ್ ಕ್ರೀಡಾ ಪ್ರೇಮಿಗಳ ಮನರಂಜಿಸಿದೆ.