ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಇದು ಸ್ವರ್ಣ ಕಾಲವಲ್ಲ

ಇಂಥ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಗೆ ನಿಲ್ಲುವುದು ಪ್ರಜೆಗಳ ಕರ್ತವ್ಯ. ಆದರೆ ಸರ್ಕಾರದ ದಿಡೀರ್ ಕ್ರಮಗಳು ಪ್ರಜೆಗಳಲ್ಲಿ ಆತಂಕ ಮೂಡಿಸುತ್ತವೆ. ಯುದ್ಧದಿಂದ ಇಂಥ ಪರಿಣಾಮ ಆಗಲಿದೆ ಎಂದು ಗೊತ್ತಿದ್ದರೂ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣವನ್ನು ಹೆಚ್ಚಿಸದೆ ಹೋದದ್ದು ಖಂಡಿತವಾಗಿಯೂ ಪ್ರಮಾದ.

Vishwavani Editorial: ಇದು ಸ್ವರ್ಣ ಕಾಲವಲ್ಲ

-

Profile
Ashok Nayak May 15, 2026 9:58 AM

ಚಿನ್ನ ಬೆಳ್ಳಿ ಖರೀದಿ ಕಡಿಮೆ ಮಾಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಜೆಗಳಲ್ಲಿ ವಿನಂತಿ ಮಾಡಿಕೊಂಡ ಬೆನ್ನಲ್ಲೇ, ಚಿನ್ನದ ತೆರಿಗೆ ಏರಿಕೆ ಮಾಡಲಾಗಿದೆ. ಚಿನ್ನ ಹಾಗೂ ಬೆಳ್ಳಿಯ ಮೇಲಿನ ಆಮದು ಸುಂಕನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ.

ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರಗಳು ದುಬಾರಿ ಯಾಗಲಿವೆ ಎಂಬ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೂ ಮೀರಿ, ಆಮದು ಸುಂಕ ಏರಿಕೆ ಘೋಷಣೆಯಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿಡೀರ್ ಜಿಗಿತ ದಾಖಲಿಸಿದೆ.

ಚಿನ್ನ ಗ್ರಾಂಗೆ 735 ರೂ. ಹಾಗೂ ಬೆಳ್ಳಿ ದರ ಕಿಲೋಗೆ 20000 ರೂ ಏರಿಕೆ ಕಂಡಿದೆ. ವಿದೇಶಿ ವಿನಿಮಯ ಸಂಗ್ರಹವನ್ನು ಕಾಪಾಡಿಕೊಳ್ಳಲು ಚಿನ್ನ ಖರೀದಿ ಇಳಿಕೆ ಹಾಗೂ ಆಮದು ಸುಂಕ ಏರಿಕೆ ಮಾಡುವುದು ಅನಿವಾರ‍್ಯ ಆಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ.

ಇದನ್ನೂ ಓದಿ: Vishwavani Editorial: ಹಿಜಾಬ್ ಜೇನುಗೂಡಿಗೆ ಕಲ್ಲು

ಅಮೆರಿಕ- ಇರಾನ್ ಯುದ್ಧ, ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಪರಿಣಾಮವಿದು. ಇದರಿಂದ ಆಗಿರುವ ಕಚ್ಚಾ ತೈಲ ಬೆಲೆ ಏರಿಕೆಯಿಂದ -ರೆಕ್ಸ್ ಸಂಗ್ರಹದ ಮೇಲೆ ಉಂಟಾ ಗಿರುವ ದುಷ್ಪರಿಣಾಮವನ್ನು ಪ್ರಜೆಗಳ ಮೇಲೆ ಹೇರಲು ಸಾಧ್ಯವಿಲ್ಲದುದರಿಂದ, ಸರ್ಕಾರ ಪರ್ಯಾಯ ಕ್ರಮಗಳನ್ನುಕೈಗೊಳ್ಳುತ್ತಿದೆ.

ಇಂಥ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಗೆ ನಿಲ್ಲುವುದು ಪ್ರಜೆಗಳ ಕರ್ತವ್ಯ. ಆದರೆ ಸರ್ಕಾರದ ದಿಡೀರ್ ಕ್ರಮಗಳು ಪ್ರಜೆಗಳಲ್ಲಿ ಆತಂಕ ಮೂಡಿಸುತ್ತವೆ. ಯುದ್ಧದಿಂದ ಇಂಥ ಪರಿಣಾಮ ಆಗಲಿದೆ ಎಂದು ಗೊತ್ತಿದ್ದರೂ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣ ವನ್ನು ಹೆಚ್ಚಿಸದೆ ಹೋದದ್ದು ಖಂಡಿತವಾಗಿಯೂ ಪ್ರಮಾದ.

ಅತ್ತ ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿಯುತ್ತಿದೆ. ಇದರಿಂದ ಹಣದುಬ್ಬರ ಖಚಿತ. ಬೆಲೆ ಏರಿಕೆಯ ಹೊಡೆತಗಳಿಂದ ಖಂಡಿತವಾಗಿಯೂ ದೇಶದ ಸಾಮಾನ್ಯ ನಾಗರಿಕ ನಲುಗಲಿದ್ದಾನೆ. ಆದರೆ ಚಿನ್ನದ ವಿಚಾರ ಬೇರೆ. ಅದು ಭಾರತೀಯ ಮಧ್ಯಮ, ಕೆಳ, ಶ್ರೀಮಂತ ಹೀಗೆ ಎಲ್ಲ ವರ್ಗದ ಮಹಿಳೆಯರ ನಿತ್ಯಸಂಗಾತಿ.

ಒಂದೆಳೆ ಚಿನ್ನವೂ ಇಲ್ಲದೆ ಯಾವ ಮಹಿಳೆಯೂ ಇರಲು ಇಷ್ಟಪಡುವುದಿಲ್ಲ. ಹೀಗೆ ಅದು ಮಹಿಳೆಯರ ಭಾವನಾತ್ಮಕ ಸಂಗಾತಿಯಾಗಿರುವಂತೆ, ಹೂಡಿಕೆಯ ಸಂಗತಿಯೂ ಹೌದು. ಇಂಥ ಚಿನ್ನದೊಂದಿಗೆ ಸರಸ ಆಡುವುದು ಅಷ್ಟೇನೂ ಒಳ್ಳೆಯದಲ್ಲ. ವಿದೇಶಿ ವಿನಿಮಯ ಹೆಚ್ಚಿಸಲು ಬೇರೆ ದಾರಿಗಳನ್ನು ಕಂಡುಕೊಳ್ಳುವ ಸಾಧ್ಯತೆಗಳಿದ್ದರೆ, ಅಂಥ ಹಾದಿಗಳನ್ನು ಶೋಧಿಸಬೇಕು. ಇದೇ ವೇಳೆಗೆ, ಪ್ರಜೆಗಳೂ ಒಟ್ಟಾರೆ ದೇಶದ ಸುರಕ್ಷತೆಗಾಗಿ ಚಿನ್ನದ ಆಸೆಯನ್ನು ಮಿತಿಯಲ್ಲಿಟ್ಟುಕೊಳ್ಳುವುದು ಅಪೇಕ್ಷಣೀಯ.