ಪಂದ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಂಗ್ಲಾ ಕ್ರಿಕೆಟಿಗನಿಗೆ ಮನಬಂದಂತೆ ಥಳಿಸಿದ ಪೊಲೀಸ್; ತನಿಖೆಗೆ ಒತ್ತಾಯ
Nayeem Hasan: ಈ ಘಟನೆಯು ಬಾಂಗ್ಲಾದೇಶ ಕ್ರಿಕೆಟ್ ಸಮುದಾಯದಿಂದ ವ್ಯಾಪಕ ಖಂಡನೆಗೆ ಗುರಿಯಾಯಿತು. ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಮುಷ್ಫಿಕರ್ ರಹೀಮ್ ನಯೀಮ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು, ಆಪಾದಿತ ಹಲ್ಲೆಯನ್ನು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿ ನ್ಯಾಯಯುತ ತನಿಖೆಗೆ ಒತ್ತಾಯಿಸಿದರು.
Nayeem Hasan -
ಢಾಕಾ, ಜೂ.13: ಬಾಂಗ್ಲಾದೇಶದ ಸ್ಪಿನ್ನರ್ ನಯೀಮ್ ಹಸನ್(Nayeem Hasan) ಅವರು ಚಟ್ಟೋಗ್ರಾಮ್‌ನಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಅನಾವಶ್ಯಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಬಾಂಗ್ಲಾದೇಶ ಕ್ರಿಕೆಟ್ ತಂಡದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಒತ್ತಾಯಿಸಿದೆ.
ವರದಿಗಳ ಪ್ರಕಾರ, 25 ವರ್ಷದ ಕ್ರಿಕೆಟಿಗ ಸವಾರ್‌ನಲ್ಲಿ ನಡೆದ ಪ್ರೈಮ್ ಬ್ಯಾಂಕ್ ಕ್ರಿಕೆಟ್ ಕ್ಲಬ್‌ನ ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯದ ನಂತರ ಢಾಕಾ ವಿಮಾನ ನಿಲ್ದಾಣದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಯೀಮ್ ಸಿಎನ್‌ಜಿ ಚಾಲಿತ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಚಟ್ಟೋಗ್ರಾಮ್‌ನ ಲಾಲ್‌ಖಾನ್ ಬಜಾರ್ ಪ್ರದೇಶದ ಬಳಿ ಪೊಲೀಸ್ ಅಧಿಕಾರಿಗಳು ವಾಹನವನ್ನು ತಡೆದರು.
ತನ್ನನ್ನು ತಡೆಯಲು ಕಾರಣವನ್ನು ವಿವರಿಸದೆ ಅಧಿಕಾರಿಗಳು ಆಕ್ರಮಣಕಾರಿಯಾಗಿ ವರ್ತಿಸಿದರು ಎಂದು ನಯೀಮ್ ಹೇಳಿಕೊಂಡಿದ್ದಾರೆ. ಪೊಲೀಸರು ತನ್ನ ಗಂಟಲು ಹಿಡಿದು ಮತ್ತೊಂದು ಆಟೋರಿಕ್ಷಾದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲು ಒತ್ತಾಯಿಸಿದರು ಎಂದು ಅವರು ಆರೋಪಿಸಿದ್ದಾರೆ. ಪಕ್ಕದಲ್ಲಿದ್ದವರು ತಾನು ಬಾಂಗ್ಲಾದೇಶದ ರಾಷ್ಟ್ರೀಯ ಕ್ರಿಕೆಟಿಗ ಎಂದು ಅಧಿಕಾರಿಗಳಿಗೆ ತಿಳಿಸಿದ್ದರೂ, ಪೊಲೀಸರು ತಮ್ಮ ಮನವಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ನಯೀಮ್ ಹೇಳಿದ್ದಾರೆ.
"ನಾನು ಯಾರೆಂದು ಅವರಿಗೆ ಪದೇ ಪದೇ ಹೇಳಿದ್ದೆ, ಆದರೆ ಅವರು ಕೇಳಲು ನಿರಾಕರಿಸಿದರು. ಪೊಲೀಸರು ನನ್ನನ್ನು ದೊಣ್ಣೆ ಮತ್ತು ಪ್ಲಾಸ್ಟಿಕ್ ಪೈಪ್‌ಗಳಿಂದ ಮನಬಂದಂತೆ ಹೊಡೆದರು" ಎಂದು ನಯೀಮ್ ಘಟನೆ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು.
ಆಸ್ಟ್ರೇಲಿಯನ್ ಓಪನ್: ಸೆಮಿಫೈನಲ್‌ನಲ್ಲಿ ಸೋತ ಪಿ.ವಿ ಸಿಂಧು
ಅಧಿಕಾರಿಗಳ ನಡವಳಿಕೆಯನ್ನು ಪ್ರಶ್ನಿಸಿದ ನಯೀಮ್, ಇಡೀ ಘಟನೆಯ ಬಗ್ಗೆ ನ್ಯಾಯಯುತ ತನಿಖೆ ಮತ್ತು ನ್ಯಾಯವನ್ನು ನಾನು ಬಯಸುತ್ತೇನೆ ಎಂದು ಹೇಳಿದರು. ಚಟ್ಟೋಗ್ರಾಮ್ ಮೆಟ್ರೋಪಾಲಿಟನ್ ಪೊಲೀಸ್ ಉಪ ಆಯುಕ್ತ ಅಮಿರುಲ್ ಇಸ್ಲಾಂ ಅವರು, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
"ಕಾರ್ಯಾಚರಣೆಯ ಸಮಯದಲ್ಲಿ ಭಾಗಿಯಾದ ಅಧಿಕಾರಿಗಳು ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲಿಲ್ಲ ಎಂದು ಆರಂಭದಲ್ಲಿ ತೋರುತ್ತದೆ. ನಯೀಮ್‌ಗೆ ನ್ಯಾಯ ಸಿಗುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಮತ್ತು ಯಾರೇ ತಪಿತಸ್ಥರೆಂದು ಕಂಡುಬಂದರೂ ಅವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ" ಎಂದರು.
ಈ ಘಟನೆಯು ಬಾಂಗ್ಲಾದೇಶ ಕ್ರಿಕೆಟ್ ಸಮುದಾಯದಿಂದ ವ್ಯಾಪಕ ಖಂಡನೆಗೆ ಗುರಿಯಾಯಿತು. ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಮುಷ್ಫಿಕರ್ ರಹೀಮ್ ನಯೀಮ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು, ಆಪಾದಿತ ಹಲ್ಲೆಯನ್ನು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿ ನ್ಯಾಯಯುತ ತನಿಖೆಗೆ ಒತ್ತಾಯಿಸಿದರು.