ಐಪಿಎಲ್‌ನಿಂದ ಹಿಂದೆ ಸರಿದ ಬೆನ್ ಡಕೆಟ್‌ಗೆ 2 ವರ್ಷ ನಿಷೇಧ ಭೀತಿ!
Ben Duckett: ಕೆಲ ಆಟಗಾರರು ಐಪಿಎಲ್ ಹರಾಜಿನ ಮೂಲಕ ತಂಡಕ್ಕೆ ಆಯ್ಕೆಯಾದರೂ, ಟೂರ್ನಿ ಆರಂಭದಲ್ಲಿ ಬೇರೆ ಬೇರೆ ಕಾರಣಗಳಿಂದ ಹಿಂದೆ ಸರಿಯುತ್ತಿದ್ದರು. ವಿದೇಶಿ ಆಟಗಾರರ ಈ ನಡೆ ಫ್ರಾಂಚೈಸಿಗಳ ಅಸಮಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿಯಮವನ್ನು 2024ರಲ್ಲಿ ಜಾರಿಗೊಳಿಸಿತ್ತು.
ben duckett -
ನವದೆಹಲಿ, ಮಾ.25: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಬೆನ್ ಡಕೆಟ್(Ben Duckett) ಐಪಿಎಲ್ 2026(IPL 2026) ರಿಂದ ಹಿಂದೆ ಸರಿದ ಕಾರಣ ಅವರಿಗೆ ಎರಡು ವರ್ಷ ಲೀಗ್ ನಿಷೇಧ ಮತ್ತು ಆಕ್ಷನ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ಬಂಧದ ಭೀತಿ ಎದುರಾಗಿದೆ. ಕಳೆದ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಡಕೆಟ್ ಅವರನ್ನು 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಖರೀದಿಸಿತ್ತು. ಕೆಎಲ್ ರಾಹುಲ್ ಜೊತೆಗೆ ಆರಂಭಿಕ ಸ್ಥಾನಕ್ಕೆ ಸ್ಪರ್ಧಿಸುವ ನಿರೀಕ್ಷೆಯಿತ್ತು. ಆದಾಗ್ಯೂ, ಟೂರ್ನಮೆಂಟ್‌ಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ, ಡಕೆಟ್ ಮುಂಬರುವ ಋತುವಿನಲ್ಲಿ ಆಡುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ನಿಯಮದನ್ವಯ ಐಪಿಎಲ್ ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರನ್ನು ಟೂರ್ನಿಯಿಂದ ಎರಡು ವರ್ಷ ಬ್ಯಾನ್ ಮಾಡಲಾಗುತ್ತದೆ. ಕಳೆದ ಆವೃತ್ತಿ ಆರಂಭಕ್ಕೂ ಮುನ್ನ ಡೆಲ್ಲಿ ತಂಡದ ಆಟಗಾರನಾಗಿದ್ದ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಟೂರ್ನಿ ಆರಂಭಕ್ಕೂ ಮುನ್ನ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರು. ಹೀಗಾಗಿ ಅವರಿಗೆ ಐಪಿಎಲ್ 2 ವರ್ಷ ನಿಷೇಧ ಹೇರಿತ್ತು. ಇದರಿಂದಾಗಿ ಅವರು 2026 ಮತ್ತು 2027ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಇದೀಗ ಡಕೆಟ್ ಕೂಡ ಈ ಶಿಕ್ಷೆಗೆ ಗುರಿಯಾಗುವ ಭೀತಿಯಲ್ಲಿದ್ದಾರೆ.
ಆಂಡ್ರೆ ರಸೆಲ್ ಐಪಿಎಲ್ ಜೆರ್ಸಿ 12 ಪೋಷಾಕಿಗೆ ವಿಶ್ರಾಂತಿ ಗೌರವ
ಕೆಲ ಆಟಗಾರರು ಐಪಿಎಲ್ ಹರಾಜಿನ ಮೂಲಕ ತಂಡಕ್ಕೆ ಆಯ್ಕೆಯಾದರೂ, ಟೂರ್ನಿ ಆರಂಭದಲ್ಲಿ ಬೇರೆ ಬೇರೆ ಕಾರಣಗಳಿಂದ ಹಿಂದೆ ಸರಿಯುತ್ತಿದ್ದರು. ವಿದೇಶಿ ಆಟಗಾರರ ಈ ನಡೆ ಫ್ರಾಂಚೈಸಿಗಳ ಅಸಮಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿಯಮವನ್ನು 2024ರಲ್ಲಿ ಜಾರಿಗೊಳಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್, ಫ್ಯಾನ್ಸ್ ಬಳಿ ಕ್ಷಮೆಯಾಚಿಸಿದ ಡಕೆಟ್
“ಡೆಲ್ಲಿ ತಂಡದ ಎಲ್ಲರಿಗೂ ನಾನು ಹೃತ್ಪೂರ್ವಕ ಕ್ಷಮೆಯಾಚಿಸುತ್ತೇನೆ. ಈ ಫ್ರಾಂಚೈಸಿಯನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ನಾನು ತುಂಬಾ ಉತ್ಸಾಹದಿಂದ ಇದ್ದೆ. ತಂಡ ನಿರ್ಮಾಣಕ್ಕೆ ಬೇಕಾಗುವ ಸಮಯ ಮತ್ತು ಯೋಜನೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ನನ್ನ ಈ ನಿರ್ಧಾರದಿಂದ ಉಂಟಾಗಬಹುದಾದ ಅಡಚಣೆಗಳಿಗೆ ಕ್ಷಮೆಯಾಚಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಡೆಲ್ಲಿ ತಂಡವು ಯಾವುದೇ ಬದಲಿ ಆಟಗಾರನನ್ನು ಘೋಷಿಸಿಲ್ಲ. ಆದಾಗ್ಯೂ, ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಋತು ಆರಂಭವಾಗಲಿದ್ದು, ಘೋಷಣೆ ಸನ್ನಿಹಿತವಾಗಿದೆ. ಈ ಮಧ್ಯೆ, ಫ್ರಾಂಚೈಸಿಯು ಪಾತುಮ್ ನಿಸ್ಸಂಕಾ, ಪೃಥ್ವಿ ಶಾ ಮತ್ತು ಸಾಹಿಲ್ ಪಾರಿಖ್ ಅವರಂತಹ ಹಲವಾರು ಆರಂಭಿಕ ಆಯ್ಕೆಗಳನ್ನು ಹೊಂದಿದೆ.