ʻಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಲು 4 ವರ್ಷ ಬೇಕಾಯಿತುʼ: ದಿನೇಶ್ ಕಾರ್ತಿಕ್!
ನಾಲ್ಕ ವರ್ಷಗಳ ಬಳಿಕ ಭಾರತ ಟಿ20 ತಂಡಕ್ಕೆ ಮರಳಿದ ಭುವನೇಶ್ವರ್ ಕುಮಾರ್ ಆಯ್ಕೆಯ ಬಗ್ಗೆ ದಿನೇಶ್ ಕಾರ್ತಿಕ್ ಸಂತಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯ ಭಾರತ ತಂಡದಲ್ಲಿ ಭುವಿಗೆ ಅವಕಾಶ ನೀಡಲಾಗಿದೆ. ಅವರು ಕಳೆದ ಎರಡು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರ ಫಲವಾಗಿ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ
ಭುವನೇಶ್ವರ್ ಕುಮಾರ್ ಆಯ್ಕೆಯ ಬಗ್ಗೆ ದಿನೇಶ್ ಕಾರ್ತಿಕ್ ಸಂತಸ. -
ನವದೆಹಲಿ: ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಭಾರತ ತಂಡಕ್ಕೆ (India's T20 Squad) ಹಿರಿಯ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಆಯ್ಕೆ ಮಾಡಿರುವ ಬಿಸಿಸಿಐ ಸೆಲೆಕ್ಟರ್ಗಳ ನಿರ್ಧಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ದಿನೇಶ್ ಕಾರ್ತಿಕ್ (Dinesh Karthik) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸತತ ಉತ್ತಮ ಪ್ರದರ್ಶನ ಹಾಗೂ ಅಪರೂಪದ ಕೌಶಲದ ಕಾರಣ ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಾಯಿತು ಎಂದು ಡಿಕೆ ತಿಳಿಸಿದ್ದಾರೆ.
ಭುವನೇಶ್ವರ್ ಕುಮಾರ್ ಅವರು 2022 ರಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ಅಂದು ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಅಕ್ಟೋಬರ್ 22ರಂದು ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್ ಅವಕಾಶವನ್ನು ನೀಡಲಾಗಿದೆ.
2025 ಹಾಗೂ 2026ರ ಐಪಿಎಲ್ ಟೂರ್ನಿಗಳಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಭುವನೇಶ್ವರ್ ಕುಮಾರ್ ಒಟ್ಟು 45 ವಿಕೆಟ್ಗಳನ್ನು ಕಬಳಿಸಿದ್ದರು. ಆ ಮೂಲಕ ಆರ್ಸಿಬಿ ಸತತ ಎರಡು ಬಾರಿ ಚಾಂಪಿಯನ್ಸ್ ಆಗುವಲ್ಲಿ ಭುವಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆರ್ಸಿಬಿ ಕ್ಯಾಂಪ್ನಲ್ಲಿ ಭುವಿ ಜೊತೆ ಕೆಲಸ ಮಾಡಿದ್ದ ದಿನೇಶ್ ಕಾರ್ತಿಕ್ ಇದೀಗ ಭಾರತ ತಂಡಕ್ಕೆ ಮರಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
“ಅವರನ್ನು ಮತ್ತೆ ಭಾರತೀಯ ತಂಡಕ್ಕೆ ಆಯ್ಕೆ ಮಾಡಲು ನಾಲ್ಕು ವರ್ಷಗಳು ಬೇಕಾಯಿತು. ಮೊದಲು, ಯಾರನ್ನಾದರೂ ಮತ್ತೆ ಆಯ್ಕೆ ಮಾಡಲು ಧೈರ್ಯ ತೋರಿದ ಆಯ್ಕೆದಾರರಿಗೆ ಅಭಿನಂದನೆಗಳು,” ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಭಾರತ ತಂಡ ಹಲವು ವೇಗದ ಬೌಲಿಂಗ್ ಆಯ್ಕೆಗಳನ್ನು ಪ್ರಯತ್ನಿಸಿದೆ. ಆದರೆ ಕೇವಲ ಬೌಲಿಂಗ್ ಕೌಶಲದ ದೃಷ್ಟಿಯಿಂದ ನೋಡಿದರೆ ಭವನೇಶ್ವರ್ ಕುಮಾರ್ ಇನ್ನೂ ಅತ್ಯುತ್ತಮ ಬೌಲರ್ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಹೊಸ ಚೆಂಡಿನಲ್ಲಿ ಎರಡೂ ದಿಕ್ಕಿಗೆ ಸ್ವಿಂಗ್
ಭುವನೇಶ್ವರ್ ಕುಮಾರ್ ಅವರ ಪ್ರಮುಖ ಸಾಮರ್ಥ್ಯವೆಂದರೆ ಹೊಸ ಚೆಂಡಿನಲ್ಲಿ ಎರಡೂ ದಿಕ್ಕಿಗೆ ಸ್ವಿಂಗ್ ಮಾಡಿಸುವ ಕೌಶಲ. ಟಿ20 ಕ್ರಿಕೆಟ್ನಲ್ಲಿ ಆರಂಭಿಕ ಓವರ್ಗಳ ಜೊತೆಗೆ ಡೆತ್ ಓವರ್ಗಳಲ್ಲೂ ಬೌಲಿಂಗ್ ಮಾಡುವ ಅನುಭವ ಅವರಿಗಿದೆ.
🚨 Announcement 🚨 #TeamIndia's T20I squad and India A squads for New Zealand tour announced 📝 Bhuvneshwar Kumar makes a comeback to the T20I side 🙌 More Details ▶️ https://t.co/oJ52QSH0DO #NZvIND https://t.co/btbXlQ0nQD
— BCCI (@BCCI) October 6, 2026
“ಅವರು ತಂಡಕ್ಕೆ ತರುವ ಗುಣಮಟ್ಟ ಅದ್ಭುತವಾಗಿದೆ. ಹೊಸ ಚೆಂಡಿನಲ್ಲಿ ಬೌಲ್ ಮಾಡಬಹುದು, ಎರಡೂ ದಿಕ್ಕಿನಲ್ಲಿ ಚೆಂಡನ್ನು ಸ್ವಿಂಗ್ ಮಾಡಿಸಬಹುದು. ನಂತರ ಡೆತ್ ಓವರ್ಗಳಲ್ಲೂ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಅವರಿಗಿದೆ,” ಎಂದು ಕಾರ್ತಿಕ್ ಹೇಳಿದ್ದಾರೆ.
ಇದರಿಂದಾಗಿ ಭವನೇಶ್ವರ್ ಒಬ್ಬರೇ ಬೌಲರ್ ಆಗಿ ಪಂದ್ಯದ ವಿವಿಧ ಹಂತಗಳಲ್ಲಿ ಭಾರತಕ್ಕೆ ನೆರವಾಗಬಲ್ಲರು ಎಂಬುದು ಕಾರ್ತಿಕ್ ಅವರ ಅಭಿಪ್ರಾಯ. ಹೊಸ ಚೆಂಡಿನ ಸ್ವಿಂಗ್ ಹಾಗೂ ಡೆತ್ ಓವರ್ಗಳ ಅನುಭವವು ಟಿ20 ತಂಡದಲ್ಲಿ ಅವರಿಗೆ ವಿಶೇಷ ಪಾತ್ರ ನೀಡಬಹುದು. ಭಾರತ ಇತ್ತೀಚಿನ ವರ್ಷಗಳಲ್ಲಿ ಹಲವು ವೇಗದ ಬೌಲರ್ಗಳನ್ನು ಪರೀಕ್ಷಿಸಿದ್ದರೂ, ಭುವನೇಶ್ವರ್ ಅವರ ಅನುಭವ ಮತ್ತು ಸ್ವಿಂಗ್ ಬೌಲಿಂಗ್ ಕೌಶಲವನ್ನು ಬದಲಿಸುವುದು ಸುಲಭವಲ್ಲ ಎಂದು ಕಾರ್ತಿಕ್ ತಮ್ಮ ವಿಶ್ಲೇಷಣೆಯಲ್ಲಿ ಹೇಳಿದ್ದಾರೆ.