BBK 13: ‘ನಿಂಗೆ ಸ್ತ್ರೀ ಮೋಹ ಇದೆ’ ಎಂದ ಮಂಜನಿಗೆ ‘ನೀನೇನು ಪುರುಷ ಮೋಹಿನಾ..?’ ಅಂತ ತಿರುಗೇಟು ನೀಡಿದ ಯಶಸ್; ʻಬಿಗ್ ಬಾಸ್ʼ ಮನೆಯಲ್ಲಿ ಮೋಹದ ವಾಕ್ಸಮರ!
ಸ್ಪರ್ಧಿಗಳಾದ ಯಶಸ್ ಕೃಷ್ಣ ಹಾಗೂ ಮಹಾಕವಿ ಮಂಜ ನಡುವೆ ನಡೆದ ಭಾರೀ ಜಗಳದಿಂದಾಗಿ ದೊಡ್ಡ ಮನೆಯಲ್ಲಿ ಕೋಲಾಹಲವೆದ್ದಿದೆ. ರಾಕ್ಷಸರು ಮತ್ತು ಗಂಧರ್ವರ ಟಾಸ್ಕ್ ವೇಳೆ ಯಶಸ್‌ಗೆ ಸ್ತ್ರೀ ಮೋಹವಿದೆ ಎಂದು ಕೆಣಕಿದ ಮಂಜನಿಗೆ, ಯಶಸ್ ನಿನಗೆ ಪುರುಷ ಮೋಹವಿದೆಯೇ ಎಂದು ಎದುರೇಟು ನೀಡಿದರು.
-
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ, ವೈಯಕ್ತಿಕ ವಾಕ್ಸಮರಗಳು ಹಾಗೂ ಹೈಡ್ರಾಮಾಗಳು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿವೆ. ಇತ್ತೀಚಿನ ಸಂಚಿಕೆಗಳಲ್ಲಿ ಸ್ಪರ್ಧಿಗಳ ನಡವಳಿಕೆ ಹಾಗೂ ಆಟದ ತಂತ್ರಗಳು ವೀಕ್ಷಕರ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿವೆ. ಅದರಲ್ಲೂ ಯಶಸ್ ಕೃಷ್ಣ, ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ ಹಾಗೂ ಮಾಡ್ರನ್ ಮಹಾಕವಿ ಮಂಜ ನಡುವೆ ನಡೆದ ಸಂಘರ್ಷ ಈಗ ದೊಡ್ಮನೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ನಿನಗೆ ಸ್ತ್ರೀ ಮೋಹ ಇದೆ
ದೊಡ್ಮನೆಯಲ್ಲಿ ಯಶಸ್ ಸದಾ ಮಹಿಳಾ ಸ್ಪರ್ಧಿಗಳ ಜೊತೆಯಲ್ಲೇ ಸುತ್ತಾಡುತ್ತಾರೆ, ಅವರ ಬೆಂಬಲ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬ ಆರೋಪ ಆರಂಭದಿಂದಲೂ ಕೇಳಿಬರುತ್ತಿತ್ತು. ಈ ವಿಚಾರವನ್ನೇ ಸರಿಯಾದ ಸಮಯಕ್ಕೆ ಅಸ್ತ್ರವಾಗಿ ಬಳಸಿಕೊಂಡ ಮಂಜ, ‘ರಾಕ್ಷಸರು vs ಗಂಧರ್ವರು’ ಟಾಸ್ಕ್ ವೇಳೆ ಯಶಸ್ ಅವರ ಈ ನಡವಳಿಕೆಯನ್ನು ನೇರವಾಗಿ ಬಯಲಿಗಿಟ್ಟರು. ಮಾತಿನ ಭರದಲ್ಲಿ ಯಶಸ್ ಮುಖಕ್ಕೆ ಹೊಡೆದಂತೆ, "ನಿನಗೆ ಸ್ತ್ರೀ ಮೋಹ ಇದೆ" ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.
ನಿನಗೇನು ಪುರುಷ ಮೋಹ ಇದೆಯೇ..?
ಮಂಜ ಎಸೆದ ಈ ಮಾತಿನ ಬಾಣಕ್ಕೆ ವಿಚಲಿತರಾಗದ ಯಶಸ್, ಮುಗುಳ್ನಗುತ್ತಲೇ ಸೈಲೆಂಟ್ ಆಗಿ ಖಡಕ್ ಕೌಂಟರ್ ಕೊಟ್ಟರು. "ಹೌದಾ..? ಹಾಗಾದ್ರೆ ನಿನಗೇನು ಪುರುಷ ಮೋಹ ಇದೆಯೇ..?" ಎಂದು ಯಶಸ್ ಮರುಪ್ರಶ್ನೆ ಹಾಕುತ್ತಿದ್ದಂತೆ ಮಂಜ ಕೆಲಕಾಲ ತಬ್ಬಿಬ್ಬಾಗಿ ಮೌನಕ್ಕೆ ಶರಣಾದರು. ಸದ್ಯ ಇಬ್ಬರ ನಡುವಿನ ಈ ವಾಕ್ಸಮರದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೆಚ್ಚಿದ ಮಂಜನ ಆಕ್ರೋಶ
ಮನೆಯಲ್ಲಿ ಆಸಿಯಾ ಫಿರ್ದೋಸ್ ಹಾಗೂ ಸೌಂದರ್ಯ ಶೆಟ್ಟಿ ಅವರೊಂದಿಗೆ ಯಶಸ್ ಸದಾ ಆಪ್ತವಾಗಿ ಕಾಲ ಕಳೆಯುತ್ತಾ ಫ್ಲರ್ಟ್ ಮಾಡುತ್ತಿದ್ದಾರೆ ಎಂಬ ಆರೋಪ ವೀಕ್ಷಕರಲ್ಲೂ ಇತ್ತು. ಉಳಿದ ಮಹಿಳಾ ಸದಸ್ಯರನ್ನು ಅಕ್ಕ-ತಂಗಿ ಎಂದು ಕರೆಯುವ ಯಶಸ್, ಈ ಇಬ್ಬರ ಜೊತೆ ಮಾತ್ರ ನಡೆದುಕೊಳ್ಳುವ ಶೈಲಿ ಹಲವರಿಗೆ ನೆಗೆಟಿವ್ ಆಗಿ ಕಾಣಿಸುತ್ತಿತ್ತು. ಟಾಸ್ಕ್ ನಿಯಮದ ಪ್ರಕಾರ ರಾಕ್ಷಸರು ಕೆಣಕಿದಾಗ ಗಂಧರ್ವರು ಮರುಉತ್ತರ ನೀಡದೆ ತಾಳ್ಮೆ ಕಾಪಾಡಿಕೊಳ್ಳಬೇಕಿತ್ತು. ಆದರೆ ಯಶಸ್ ನೀಡಿದ ‘ಪುರುಷ ಮೋಹ’ ಎಂಬ ಕೌಂಟರ್ ಮಂಜನ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.
ಬಿಳಿ ಮೂಲಂಗಿ, ಮಾಡುವುದೆಲ್ಲಾ ಹಲ್ಕಾ ಕೆಲಸ
ಯಶಸ್ ಮಾತಿನಿಂದ ಕೆಂಡಾಮಂಡಲರಾದ ಮಂಜ, "ನನ್ನ ಮಾತಿಗೆ ಯಾವುದೇ ಬೆಲೆ ಕೊಡದೆ, ನನ್ನನ್ನೇ ನಿಂದಿಸಿದ್ದಾನೆ. ಕಾರ್ನರ್ ಸೀಟ್‌ನಲ್ಲಿ ಕುಳಿತುಕೊಂಡು ಗೊಂದಲ ಸೃಷ್ಟಿಸುವುದೇ ಇವನ ಕೆಲಸ. ಬಿಳಿ ಮೂಲಂಗಿ, ಮಾಡುವುದೆಲ್ಲಾ ಹಲ್ಕಾ ಕೆಲಸ" ಎಂದು ಆಕ್ರೋಶ ಹೊರಹಾಕಿದರು. ಅಷ್ಟಕ್ಕೇ ನಿಲ್ಲದೆ, "ನಾನು ಹೇಳಿದ್ದು ನೂರಕ್ಕೆ ನೂರು ಸತ್ಯ. ಆದರೆ ಈ ಗಂಧರ್ವ ನನಗೆ ತಿರುಗಿ ಮಾತನಾಡಿ ಗಂಡು ವ್ಯಾಮೋಹಿ ಎಂದು ಕರೆಯುತ್ತಾನೆ. ಇದು ನಿಯಮಕ್ಕೆ ವಿರುದ್ಧ, ಈತ ನನ್ನ ಮಾತು ಕೇಳಬೇಕು" ಎಂದು ಟಾಸ್ಕ್ ಉಸ್ತುವಾರಿ ಆಸಿಯಾ ಬಳಿ ದೂರು ಸಲ್ಲಿಸಿದರು.
ಹರಟೆ ಕಟ್ಟೆಯಲ್ಲಿ ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಕಾಲ ಕಳೆಯುವ ಯಶಸ್ ವಿರುದ್ಧ ‘ಕಾರ್ನರ್ ಸೀಟ್’ ಮತ್ತು ‘ಸ್ತ್ರೀ ವ್ಯಾಮೋಹಿ’ ಪದಗಳ ಬಾಣ ಪ್ರಯೋಗಿಸಿ ಅವರ ತಾಳ್ಮೆಯ ಕಟ್ಟೆ ಒಡೆಯುವುದು ಮಂಜನ ಪ್ಲಾನ್ ಆಗಿತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲೂ ಮಂಜ ಅವರ ಮಾತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, "ಯಶಸ್ ಗೇಮ್ ಪ್ಲಾನ್ ಮಾಡುವುದಕ್ಕಿಂತ ಮಹಿಳಾ ಸ್ಪರ್ಧಿಗಳ ಜೊತೆ ಕಾಲ ಕಳೆಯುವುದಕ್ಕೇ ಆದ್ಯತೆ ನೀಡುತ್ತಿದ್ದಾರೆ, ಮಂಜು ಹೇಳಿದ್ದು ಸತ್ಯ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಮಂಜನ ಈ ನೇರ ಆರೋಪದ ನಂತರ ಯಶಸ್ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳುತ್ತಾರಾ ಅಥವಾ ಇಬ್ಬರ ನಡುವಿನ ಈ ಶೀತಲ ಸಮರ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಕೋಪಕ್ಕೆ ಹೋಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.