ಅನುಮತಿಯಿಲ್ಲದೆ ಆಕಾಶವಾಣಿ ಭವನ ಪ್ರವೇಶಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ವಿರುದ್ಧ ಎಫ್‌ಐಆರ್
FIR Against Rahul Gandhi, Priyanka: ಅನುಮತಿಯಿಲ್ಲದೆ ಆಕಾಶವಾಣಿ ಭವನ ಪ್ರವೇಶಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್, ಪ್ರಿಯಾಂಕಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ ಕಡೆಗೆ ಪ್ರತಿಪಕ್ಷಗಳ ಮೆರವಣಿಗೆಯನ್ನು ಪೊಲೀಸರು ತಡೆದ ನಂತರ, ನಾಯಕರು ಅನುಮತಿಯಿಲ್ಲದೆ ಕಚೇರಿ ಆವರಣವನ್ನು ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ವಿರುದ್ಧ ಎಫ್‌ಐಆರ್ -
ನವದೆಹಲಿ, ಅ.7: ಅನುಮತಿಯಿಲ್ಲದೆ ಆಕಾಶವಾಣಿ ಭವನ ಪ್ರವೇಶಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್, ಪ್ರಿಯಾಂಕಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯ ವೇಳೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸೇರಿದಂತೆ ಇತರ ಸಂಸದರು ಅನುಮತಿಯಿಲ್ಲದೆ ಆಕಾಶವಾಣಿ ಭವನದ ಆವರಣ ಪ್ರವೇಶಿಸಿದ್ದಾರೆ ಎಂಬ ಆರೋಪದ ಕುರಿತು ದೆಹಲಿ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಕಡೆಗೆ ಪ್ರತಿಪಕ್ಷಗಳ ಮೆರವಣಿಗೆಯನ್ನು ಪೊಲೀಸರು ತಡೆದ ನಂತರ, ನಾಯಕರು ಅನುಮತಿಯಿಲ್ಲದೆ ಕಚೇರಿ ಆವರಣವನ್ನು ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ 300 ಮಂದಿ ವಿರೋಧ ಪಕ್ಷದ ಶಾಸಕರು ಸಂಸತ್ತಿನಿಂದ ನಿರ್ವಚನ ಸದನದ ಕಡೆಗೆ ಮೆರವಣಿಗೆ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಹೊರಗೆ ಮೆರವಣಿಗೆಯನ್ನು ತಡೆದ ಪೊಲೀಸರು, 250ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದರು.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ
ಬಿಕ್ಕಟ್ಟಿನ ನಂತರ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ಸುಮಾರು 20 ಇತರ ವಿರೋಧ ಪಕ್ಷದ ನಾಯಕರು ನಿರ್ವಚನ ಸದನದ ಪಕ್ಕದಲ್ಲಿರುವ ಆಕಾಶವಾಣಿ ಭವನದ ಆವರಣಕ್ಕೆ ತೆರಳಿ ರಾತ್ರಿ 8 ಗಂಟೆಯ ಸುಮಾರಿಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ನಂತರ ಕೆಲಕಾಲ ಹೈಡ್ರಾಮಾ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪ್ರತಿಪಕ್ಷ ನಾಯಕರನ್ನು ವಶಕ್ಕೆ ಪಡೆದರು.
ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ರಾಹುಲ್ ಗಾಂಧಿ ಅವರನ್ನು ಕರೆದೊಯ್ದು ಬಸ್‌ನಲ್ಲಿ ಕೂರಿಸಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಇತರ ನಾಯಕರನ್ನು ಪೊಲೀಸರು ಬಲವಂತವಾಗಿ ಎಳೆದುಕೊಂಡು ಹೋಗಿ ಬಸ್‌ಗಳಲ್ಲಿ ಕೂರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬಂಧಿತ ನಾಯಕರನ್ನು ಕಿಂಗ್ಸ್‌ವೇ ಕ್ಯಾಂಪ್‌ಗೆ ಕರೆದೊಯ್ಯಲಾಯಿತು. ನಂತರ ರಾತ್ರಿ 10:15 ರ ಸುಮಾರಿಗೆ ಬಿಡುಗಡೆ ಮಾಡಲಾಯಿತು. ಆಕಾಶವಾಣಿ ಭವನದ ಆವರಣಕ್ಕೆ ನುಗ್ಗಿದ ಆರೋಪದ ಕುರಿತು ದೂರಿನ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಪ್ರಕರಣದಲ್ಲಿ ಯಾವ ಕಾನೂನು ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ ಮತ್ತು ದೂರಿನಲ್ಲಿ ಯಾರ್ಯಾರ ಹೆಸರುಗಳಿವೆ ಎಂಬ ಸಂಪೂರ್ಣ ವಿವರಗಳು ತಕ್ಷಣಕ್ಕೆ ಲಭ್ಯವಾಗಿರಲಿಲ್ಲ. ಕೆಲವು ಕಾಂಗ್ರೆಸ್ ಕಾರ್ಯಕರ್ತರು ನಂತರ ನ್ಯೂ ಪೊಲೀಸ್ ಲೈನ್ಸ್ ಪ್ರದೇಶವನ್ನು ತಲುಪಿ ಆವರಣದ ಗೋಡೆಗಳನ್ನು ಏರಲು ಪ್ರಯತ್ನಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟಿಸಿದವು. ಆದರೆ, ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಪ್ರತಿಪಕ್ಷಗಳ ಪ್ರತಿಭಟನೆಯನ್ನು ಟೀಕಿಸಿದೆ.