ನಾನು ಅಪರಾಧಿ ಎಂದು ಎಂದಿಗೂ ಭಾವಿಸಿರಲಿಲ್ಲ: ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅಚ್ಚರಿ ಹೇಳಿಕೆ!
ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಭಾರತೀಯ ಕುಸ್ತಿ ಮಂಡಳಿಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರು, ತಮ್ಮ ವಿರುದ್ಧ ದೂರು ನೀಡಿದ್ದರನ್ನು ಟೀಕಿಸಿದ್ದಾರೆ. ನಾನು ಎಂದಿಗೂ ಅಪರಾಧಿ ಎಂದು ಭಾವಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆಯಾದ ಬ್ರಿಜ್ ಭೂಷಣ್ ಸಿಂಗ್. -
ನವದೆಹಲಿ: ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಷನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಹಾಗೂ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ. ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರು ಮುಚ್ಚಿದ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದರು.
ಖುಲಾಸೆಯಾದ ಬಳಿಕ ಎಎನ್ಐಗೆ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್, "ನಾನು ನಿರಪರಾಧಿ. ಸುಳ್ಳು ಪ್ರಕರಣಗಳು ಈಗ ಕೆಲವು ರಾಜಕೀಯ ಗುಂಪುಗಳು ಹಣ ಮತ್ತು ರಾಜಕೀಯ ಲಾಭಕ್ಕಾಗಿ ಬಳಸುವ ಸಾಧನವಾಗಿವೆ," ಎಂದು ಆರೋಪಿಸಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಯಾದ ಬಳಿಕ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್ ಶರಣ್ ಸಿಂಗ್, ತಮ್ಮ ವಿರುದ್ಧದ ಆರೋಪಗಳನ್ನು ರಾಜಕೀಯ ಸಂಚು ಎಂದು ಬಣ್ಣಿಸಿದ್ದಾರೆ.
ʼಇಡೀ ವ್ಯವಸ್ಥೆಯು ಅವರನ್ನು ರಕ್ಷಿಸುತ್ತದೆʼ: ಬ್ರಿಜ್ ಭೂಷಣ್ ತೀರ್ಪಿಗೆ ವಿನೇಶ್ ಫೋಗಟ್ ಪ್ರತಿಕ್ರಿಯೆ
"ನಾನು ಮೊದಲ ದಿನದಿಂದಲೂ ನನ್ನನ್ನು ಅಪರಾಧಿ ಎಂದು ಎಂದಿಗೂ ಭಾವಿಸಿಲ್ಲ. ಮಧ್ಯದಲ್ಲಿಯೂ ಹಾಗೆ ಅನಿಸಿಲ್ಲ. ಆಗ ನನ್ನ ನಂಬಿಕೆ ಏನಿತ್ತೋ, ಇಂದಿಗೂ ಅದೇ ಇದೆ. ಇದು ಸುಳ್ಳು ಆರೋಪವಾಗಿದ್ದು, ಪೂರ್ವಯೋಜಿತ ಸಂಚಿನ ಭಾಗವಾಗಿತ್ತು. ದೇಶದ ಹಲವು ರಾಜಕೀಯ ಪಕ್ಷಗಳು ಇದರಲ್ಲಿ ಭಾಗಿಯಾಗಿದ್ದವು. ಇದು ಕ್ರೀಡಾಪಟುಗಳ ಹೋರಾಟವಾಗಿರದೆ, ಪ್ರತಿಪಕ್ಷಗಳ ಚಳವಳಿಯಾಗಿ ಮಾರ್ಪಟ್ಟಿತ್ತು. ಇಂದು ನ್ಯಾಯಾಂಗದಿಂದ ನನಗೆ ಸಂಪೂರ್ಣ ಖುಲಾಸೆ ದೊರೆತಿದೆ. ಆಗಲೂ ನನಗೆ ಹೆಚ್ಚಿನ ಆತಂಕ ಇರಲಿಲ್ಲ, ಈಗಲೂ ಇಲ್ಲ," ಎಂದು ಅವರು ಹೇಳಿದರು.
ಇದೇ ವೇಳೆ, ತಮ್ಮ ವಿರುದ್ಧ ಆರೋಪ ಮಾಡಿದವರ ಮೇಲೆ ಹಾಗೂ ರಾಜಕೀಯ ವಿರೋಧಿಗಳ ವಿರುದ್ಧವೂ ಬ್ರಿಜ್ ಭೂಷಣ್ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ಸುಳ್ಳು ಕಾನೂನು ಪ್ರಕರಣಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅವರು ಆರೋಪಿಸಿದರು.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಕೇಸ್: ಬ್ರಿಜ್ ಭೂಷಣ್ ಸಿಂಗ್ಗೆ ಬಿಗ್ ರಿಲೀಫ್
ನ್ಯಾಯಾಲಯದ ತೀರ್ಪಿನ ಬಳಿಕ ಮಾತನಾಡಿದ ಬ್ರಿಜ್ ಭೂಷಣ್ ಶರಣ್ ಸಿಂಗ್, ಈ ತೀರ್ಪು ಕೇವಲ ತಮ್ಮ ವೈಯಕ್ತಿಕ ಗೆಲುವಲ್ಲ, ದೇಶದಲ್ಲಿ ಹೆಚ್ಚುತ್ತಿರುವ ಸುಳ್ಳು ಆರೋಪಗಳ ಸಂಸ್ಕೃತಿಯ ವಿರುದ್ಧ ನ್ಯಾಯಾಂಗ ನೀಡಿದ ಸ್ಪಷ್ಟ ಸಂದೇಶವಾಗಿದೆ ಎಂದು ಹೇಳಿದ್ದಾರೆ. ದೇಶದಾದ್ಯಂತ ಸಂಘಟಿತ ಜಾಲಗಳು ಕಾರ್ಯನಿರ್ವಹಿಸುತ್ತಿದ್ದು, ಸುಳ್ಳು ದೂರುಗಳನ್ನು ದಾಖಲಿಸುವುದನ್ನೇ ಲಾಭದಾಯಕ ವ್ಯವಹಾರವನ್ನಾಗಿ ಮಾಡಿಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ.
"ದೇಶದಲ್ಲಿ ಸಾವಿರಾರು ಜನರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಇಂದು ಅದು ಒಂದು ಫ್ಯಾಷನ್ ಹಾಗೂ ಆಯುಧವಾಗಿ ಪರಿಣಮಿಸಿದೆ. ಪ್ರತಿಯೊಂದು ಜಿಲ್ಲೆಗಳಲ್ಲೂ ಹಣಕ್ಕಾಗಿ ಪ್ರಕರಣಗಳನ್ನು ದಾಖಲಿಸುವ ಒಂದು 'ಗ್ಯಾಂಗ್' ಕಾರ್ಯನಿರ್ವಹಿಸುತ್ತಿದೆ," ಎಂದ ಆರೋಪಿಸಿದ ಬ್ರಿಜ್ ಭೂಷಣ್ ಶರಣ್ ಸಿಂಗ್, "ಈ ತೀರ್ಪಿನಿಂದ ಸುಳ್ಳು ಪ್ರಕರಣಗಳನ್ನು ಎದುರಿಸುತ್ತಿರುವ ಎಲ್ಲರಿಗೂ ಧೈರ್ಯ ಸಿಗಲಿದೆ. ನಿಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಾದರೆ ಕುಗ್ಗುವ ಅಗತ್ಯವಿಲ್ಲ. ಅಂತಹವರ ವಿರುದ್ಧ ಕಾನೂನುಬದ್ಧವಾಗಿ ಹೋರಾಡಬೇಕು," ಎಂದು ಅವರು ತಿಳಿಸಿದ್ದಾರೆ.
ʻಮಗ ಡಾಕ್ಟರ್ ಆಗಬೇಕೆಂದು ಅಪ್ಪ ಕನಸು ಕಂಡಿದ್ದರುʼ: ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಆಯ್ಕೆಯಾದ ಆಕಿಬ್ ನಬಿ ಯಾರು?
'ನನ್ನ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ': ಬ್ರಿಜ್ ಭೂಷಣ್
"ನನ್ನ ವರ್ಚಸ್ಸಿಗೆ ಎಂದಿಗೂ ಧಕ್ಕೆಯಾಗಿಲ್ಲ. ಈ ಪ್ರಕರಣಕ್ಕೂ ಮುನ್ನ ನನ್ನ ಸಾರ್ವಜನಿಕ ಸಭೆಗಳು ಅಥವಾ ಸಾಮಾಜಿಕ ಕಾರ್ಯಕ್ರಮಗಳ ವಿಡಿಯೊಗಳನ್ನು ನೋಡಿ. ಆಗ ಜನರ ಬೆಂಬಲ ಹೇಗಿತ್ತೋ, ಈ ಪ್ರಕರಣದ ನಂತರವೂ ಅದೇ ರೀತಿಯ ಬೆಂಬಲ ಮುಂದುವರಿದಿದೆ. ನನ್ನ ವರ್ಚಸ್ಸು ಎಂದಿಗೂ ಕುಗ್ಗಿಲ್ಲ, ಇಂದಿಗೂ ಕುಗ್ಗಿಲ್ಲ. ಏಕೆಂದರೆ ನನ್ನ ವಿರುದ್ಧದ ಆರೋಪಗಳು ಸುಳ್ಳಾಗಿದ್ದವು," ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.