IND vs AFG: ʻಭಾರತ ಟೆಸ್ಟ್ ತಂಡದಲ್ಲಿ ಗುಜರಾತ್ ಟೈಟನ್ಸ್ ಆಟಗಾರರಿಗೆ ಹೆಚ್ಚಿನ ಅವಕಾಶʼ-ಆಕಾಶ್ ಚೋಪ್ರಾ ಅಭಿಪ್ರಾಐ!
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಭಾರತ ತಂಡದಲ್ಲಿ ಗುಜರಾತ್ ಟೈಟನ್ಸ್ ತಂಡದ ಹೆಚ್ಚಿನ ಆಟಗಾರರಿಗೆ ಅವಕಾಶವನ್ನು ನೀಡಿದ ಬಗ್ಗೆ ಅಭಿಮಾನಿಗಳು ಹಾಗೂ ಕೆಲ ಮಾಜಿ ಕ್ರಿಕೆಟಿಗರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತ ತಂಡದಲ್ಲಿ ಗುಜರಾತ್ ಟೈಟನ್ಸ್ ಆಟಗಾರರ ಬಗ್ಗೆ ಚೋಪ್ರಾ ಅಭಿಪ್ರಾಯ! -
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಇತ್ತೀಚೆಗೆ ಅಂತ್ಯವಾಗಿದ್ದ ಏಕೈಕ ಟೆಸ್ಟ್ ಪಂದ್ಯದ(IND vs AFG) ಭಾರತ ತಂಡದಲ್ಲಿ ಗುಜರಾತ್ ಟೈಟನ್ಸ್ ತಂಡದ ಹೆಚ್ಚಿನ ಆಟಗಾರರಿಗೆ ಅವಕಾಶವನ್ನು ನೀಡಲಾಗಿತ್ತು. ಶುಭಮನ್ ಗಿಲ್ (Shubman Gill) ನಾಯಕ ಎಂಬ ಕಾರಣಕ್ಕೆ ಜಿಟಿ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ ಎಂದು ಅಭಿಮಾನಿಗಳು ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು ಆರೋಪ ಮಾಡಿದ್ದರು. ಇದೀಗ ಈ ಬಗ್ಗೆ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ (Aakash Chopra) ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಆಕಾಶ್ ಚೋಪ್ರಾ, " ಆ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಮೀಮ್ಸ್‌ಗಳನ್ನು ನಾನು ಕೂಡ ನೋಡಿದ್ದೇನೆ. ಅದರಲ್ಲಿ ಕಗಿಸೊ ರಬಾಡ ಅವರನ್ನು ಏಕೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆಯೂ ಇತ್ತು. ಅವರನ್ನೂ ಆಯ್ಕೆ ಮಾಡಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹಾಗೆಯೇ, ಕುಲ್ದೀಪ್ ಯಾದವ್ ಅವರು ಗುಜರಾತ್ ಟೈಟನ್ಸ್ ಪಂದ್ಯದ ಬೌಲಿಂಗ್ ಸ್ಕೋರ್‌ಕಾರ್ಡ್‌ನಲ್ಲಿ ಏನು ಮಾಡುತ್ತಿದ್ದರು ಎಂಬ ರೀತಿಯ ಚರ್ಚೆಗಳನ್ನೂ ನೋಡಿದ್ದೇನೆ. ಶುಭಮನ್ ಗಿಲ್ ನಾಯಕನಾಗಿರುವುದರಿಂದಲೇ ಗುಜರಾತ್ ತಂಡದ ಇಷ್ಟು ಆಟಗಾರರು ಭಾರತ ತಂಡದಲ್ಲಿ ಅವಕಾಶ ಪಡೆಯುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿರುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ,” ಎಂದು ಹೇಳಿದರು.
IND vs AFG ಟೆಸ್ಟ್ ಪಂದ್ಯವನ್ನು ಆಯೋಜಿಸಿದ ಐಸಿಸಿ ವಿರುದ್ಧ ಮದನ್ ಲಾಲ್ ಕಿಡಿ!
“ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಪರ ಆಡುವ ಆಟಗಾರರು ಭಾರತ ತಂಡಕ್ಕೆ ಬೇಗನೆ ಆಯ್ಕೆಯಾಗುತ್ತಿದ್ದಾರೆ ಎಂಬ ಅಭಿಪ್ರಾಯವೂ ಕೆಲವರಲ್ಲಿದೆ. ಆ ರೀತಿಯ ಭಾವನೆ ಮೂಡುವುದು ಸಹಜ. ಆದರೆ ಅವರ ಬದಲಿಗೆ ನೀವು ಯಾವ ಆಟಗಾರರನ್ನು ಆಯ್ಕೆ ಮಾಡುತ್ತಿದ್ದಿರಿ ಎಂಬ ಪ್ರಶ್ನೆಯನ್ನು ಯಾವಾಗಲೂ ನಿಮ್ಮನ್ನೇ ನೀವು ಕೇಳಿಕೊಳ್ಳಬೇಕು,” ಎಂದು ಅವರು ಪ್ರಶ್ನೆ ಮಾಡಿದರು.
ಆಯ್ಕೆದಾರರ ನಿಲುವನ್ನು ಸಮರ್ಥಿಸಿಕೊಂಡ ಚೋಪ್ರಾ
ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಮಾನವ್ ಸುತಾರ್ ಹಾಗೂ ಸಾಯಿ ಸುದರ್ಶನ್ ಅವರಂತಹ ಗುಜರಾತ್ ಟೈಟನ್ಸ್ ಆಟಗಾರರು, ನಾಯಕನಾಗಿ ಶುಭಮನ್ ಗಿಲ್ ಬದಲಿಗೆ ಕೆಎಲ್ ರಾಹುಲ್ ನಾಯಕನಾಗಿದ್ದರೂ ತಂಡಕ್ಕೆ ಆಯ್ಕೆಯಾಗುತ್ತಿದ್ದರು.
“ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಬಾರದಿತ್ತೇ? ಖಂಡಿತವಾಗಿಯೂ ಅವರನ್ನು ಆಯ್ಕೆ ಮಾಡಬೇಕಾಗಿತ್ತು. ಮನವ್ ಸುತಾರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಿರಾಜ್ ಮತ್ತು ಪ್ರಸಿಧ್ ಕೃಷ್ಣ ಅವರ ಆಯ್ಕೆಯ ಬಗ್ಗೆ ಯಾವುದೇ ಪ್ರಶ್ನೆಯೇ ಇಲ್ಲ. ಸಾಯಿ ಸುದರ್ಶನ ಈಗಾಗಲೇ ತಂಡದ ಭಾಗವಾಗಿದ್ದರು. ಈ ದೃಷ್ಟಿಕೋನದಿಂದ ನೋಡಿದರೆ, ಶುಭ್‌ಮನ್ ಗಿಲ್ ನಾಯಕನಾಗಿದ್ದರೂ ಅಥವಾ ಕೆಎಲ್ ರಾಹುಲ್ ನಾಯಕನಾಗಿದ್ದರೂ, ಈ ಆಟಗಾರರ ಹೆಸರುಗಳು ತಂಡದಲ್ಲಿ ಅನಿವಾರ್ಯವಾಗಿ ಬಂದೇ ಬರುತ್ತಿದ್ದವು,” ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.
IND vs AFG: ಒಡಿಐ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!
ಎಂಎಸ್ ಧೋನಿ ನಾಯಕನಾಗಿದ್ದಾಗಲೂ ಇದೇ ನಡೆದಿತ್ತು: ಚೋಪ್ರಾ
ಹಿಂದಿನ ದಿನಗಳಲ್ಲಿಯೂ ಇದೇ ರೀತಿಯ ಪ್ರವೃತ್ತಿ ಕಂಡುಬಂದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಾಯಕತ್ವ ವಹಿಸಿದ್ದ ಅವಧಿಗಳಲ್ಲಿಯೂ ಅವರ ಐಪಿಎಲ್ ಫ್ರಾಂಚೈಸಿಗಳ ಆಟಗಾರರಿಗೆ ಹೆಚ್ಚಿನ ಅವಕಾಶಗಳು ದೊರೆತಿದ್ದವು ಎಂದು ಅವರು ಹೇಳಿದ್ದಾರೆ.
“ಇದೇ ಪರಿಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುಗದಲ್ಲಿಯೂ ಕಂಡುಬಂದಿತ್ತು. ಎಂಎಸ್ ಧೋನಿ ನಾಯಕನಾಗಿದ್ದಾಗ ಸಿಎಸ್‌ಕೆ ತಂಡದ ಅನೇಕ ಆಟಗಾರರು ಭಾರತ ತಂಡದಲ್ಲಿ ಆಡುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಅವರಲ್ಲಿ ಹಲವರು ನಿಜವಾಗಿಯೂ ಮ್ಯಾಚ್ ವಿನ್ನರ್ ಆಟಗಾರರಾಗಿದ್ದರು. ನಂತರ ವಿರಾಟ್ ಕೊಹ್ಲಿ ನಾಯಕತ್ವವಾಗಲಿ ಅಥವಾ ರೋಹಿತ್ ಶರ್ಮಾ ನಾಯಕತ್ವವಾಗಲಿ, ಒಂದು ವಿಷಯ ಮಾತ್ರ ಖಚಿತ,” ಎಂದು ಚೋಪ್ರಾ ಹೇಳಿದ್ದಾರೆ.
ತಂಡದ ಆಯ್ಕೆ ಕುರಿತು ಅಭಿಮಾನಿಗಳಲ್ಲಿ ವಿವಿಧ ಅಭಿಪ್ರಾಯಗಳು ಇರಬಹುದು. ಆದರೆ ಅಂತಿಮವಾಗಿ ಆಯ್ಕೆಯಾಗುವ ಆಟಗಾರರು ತಮ್ಮ ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಅವಕಾಶ ಪಡೆಯುತ್ತಾರೆ ಎಂಬುದನ್ನು ಮರೆಯಬಾರದು ಎಂದು ಅವರು ಸೂಚಿಸಿದ್ದಾರೆ.