ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

U19 Asia Cup: ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ಅನ್ವವ್‌ ದ್ರಾವಿಡ್‌, ಆರ್ಯವೀರ್‌ ಸೆಹ್ವಾಗ್‌!

ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್ ಅವರು ಅಂಡರ್-19 ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಭರ್ಜರಿ ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಅವರ ಈ ಅಮೋಘ ಪ್ರದರ್ಶನದ ಫಲವಾಗಿ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ದ್ರಾವಿಡ್‌, ಸೆಹ್ವಾಗ್‌ ಪುತ್ರರು!

ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ಆರ್ಯವೀರ್‌ ಸೆಹ್ವಾಗ್‌, ಅನ್ವಯ್‌ ದ್ರಾವಿಡ್‌. -

Profile
Ramesh Kote Oct 30, 2026 4:14 PM

ನವದೆಹಲಿ: ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜ ಮಾಜಿ ಬ್ಯಾಟರ್‌ಗಳ ಪುತ್ರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಅವಕಾಶ ಲಭಿಸಿದೆ. ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಪುತ್ರ ಕರ್ನಾಟಕದ ಅನ್ವಯ್ ದ್ರಾವಿಡ್ (Anvay Dravid) ಮತ್ತು ವೀರೇಂದ್ರ ಸೆಹ್ವಾಗ್‌ ಅವರ ಪುತ್ರ ದೆಹಲಿಯ ಆರ್ಯವೀರ್ ಸೆಹ್ವಾಗ್ (Aaryavir Sehwag ) ಅವರು ಮುಂಬರುವ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶುಕ್ರವಾರ ಪ್ರಕಟವಾದ 15 ಸದಸ್ಯರ ತಂಡವು ನವೆಂಬರ್ 5ರಿಂದ 14ರವರೆಗೆ ಒಮಾನ್‌ನ ಮಸ್ಕತ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.

ಭಾರತದ ಮಾಜಿ ನಾಯಕ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮತ್ತು ತಮ್ಮ ಕಾಲದ ಅತ್ಯಂತ ಸ್ಫೋಟಕ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಇತ್ತೀಚೆಗೆ ಮುಕ್ತಾಯಗೊಂಡ ವಿನೂ ಮಂಕಡ್ ಟ್ರೋಫಿಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

IND vs NZ: ನಾಲ್ಕನೇ ಟಿ20ಐ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ಏಕೆ ಆಡುತ್ತಿಲ್ಲ?

ದೇಶಿ ಅಂಡರ್-19 ಟೂರ್ನಿಯಲ್ಲಿ ಈ ಇಬ್ಬರು ಯುವ ಆಟಗಾರರು ಆಕರ್ಷಕ ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಇದೀಗ ತಮ್ಮ ಕ್ರಿಕೆಟ್ ವೃತ್ತಿಜೀವನದ ಮಹತ್ವದ ಘಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ. 17ರ ವಯಸ್ಸಿನ ಅನ್ವಯ್ ದ್ರಾವಿಡ್ ಟೂರ್ನಿಯ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಅಕ್ಟೋಬರ್ ಆರಂಭದಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೇವಲ 100 ಎಸೆತಗಳಲ್ಲಿ 151 ರನ್ ಸಿಡಿಸಿ ಮಿಂಚಿದ್ದರು. ವಿಶೇಷವಾಗಿ ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ಅನ್ವಯ್ ಪ್ರದರ್ಶಿಸಿದ್ದರು.

ಈ ವರ್ಷದ ಆರಂಭದಲ್ಲಿಯೂ ಅನ್ವಯ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗಮನ ಸೆಳೆದಿದ್ದರು. ಜುಲೈನಲ್ಲಿ ಹಂಬನ್‌ತೋಟದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಯೂತ್ ಏಕದಿನ ಪಂದ್ಯದಲ್ಲಿ 67 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಈ ಮೂಲಕ ಭಾರತ ಅಂಡರ್-19 ತಂಡದ ಭರವಸೆಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.



173 ರನ್‌ ಬಾರಿಸಿದ್ದ ಆರ್ಯವೀರ್‌

ಇನ್ನು ಆರ್ಯವೀರ್ ಸೆಹ್ವಾಗ್ ಕೂಡ ವಿನೂ ಮಂಕಡ್ ಟ್ರೋಫಿಯಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 19 ವರ್ಷದ ಆರ್ಯವೀರ್, ವಿಜಯನಗರಂನಲ್ಲಿ ಚಂಡೀಗಢ ವಿರುದ್ಧ ನಡೆದ ಪಂದ್ಯದಲ್ಲಿ 143 ಎಸೆತಗಳಲ್ಲಿ ಭರ್ಜರಿ 173 ರನ್ ಗಳಿಸಿದ್ದರು. ದೊಡ್ಡ ಮೊತ್ತದ ಇನ್ನಿಂಗ್ಸ್ ಕಟ್ಟುವ ತಮ್ಮ ಸಾಮರ್ಥ್ಯವನ್ನು ಈ ಮೂಲಕ ಪ್ರದರ್ಶಿಸಿದ್ದರು.

ಭಾರತ ಅಂಡರ್-19 ತಂಡವನ್ನು ಲಕ್ಷ್ಯ ರೈಚಂದಾನಿ ಮುನ್ನಡೆಸಲಿದ್ದು, ಯಶವರ್ಧನ್ ಸಿಂಗ್ ಚೌಹಾಣ್ ಉಪನಾಯಕನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ತಂಡದಲ್ಲಿ ವಿಕೆಟ್ ಕೀಪರ್‌ಗಳಾದ ರಜತ್ ಬಘೇಲ್ ಮತ್ತು ಅನ್ವಯ್ ದ್ರಾವಿಡ್ ಸೇರಿದಂತೆ ಹಲವು ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಲಾಗಿದೆ.

ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಹೊರಬಿದ್ದ ಪ್ರಸಿದ್ಧ್ ಕೃಷ್ಣ; ʼಎʼ ತಂಡ ಸೇರಿದ ಮೊಹಮ್ಮದ್ ಸಿರಾಜ್

ಭಾರತ ಅಂಡರ್-19 ತಂಡ: ಲಕ್ಷ್ಯ ರೈಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಯಶವರ್ಧನ್ ಸಿಂಗ್ ಚೌಹಾಣ್ (ಉಪನಾಯಕ), ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ರಜತ್ ಬಘೇಲ್ (ವಿಕೆಟ್ ಕೀಪರ್), ವಿ. ಯಶ್ವೀರ್, ಆರ್ಯನ್ ಸಾವ್ಸಾನಿ, ಮೋಹಿತ್ ಉಲ್ವಾ, ಕಾವ್ಯ ಪಟೇಲ್, ಶವಿನ್ ವಿನೋದ್ ಮತ್ತು ಇಶಾನ್ ಸೂದ್