ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ರಾಕಿ ಭಾಯ್‌’ ಯಶ್ ಮಕ್ಕಳಾದ ಆಯ್ರಾ - ಯಥರ್ವ್‌ಗೆ ‘ರಾಮಾಯಣ’ ಸಿನಿಮಾ ಸಖತ್‌ ಸ್ಪೆಷಲ್‌; ಯಾಕೆ ಗೊತ್ತಾ?

Rocking Star Yash: ನಟ ಯಶ್‌ ಮತ್ತು ರಾಧಿಕಾ ಪಂಡಿತ್‌ ಅವರ ಮುದ್ದಿನ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಪಾಲಿಗೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಅತ್ಯಂತ ಸ್ಪೆಷಲ್‌ ಸಿನಿಮಾವಾಗಿ ಮಾರ್ಪಟ್ಟಿದೆ. ಹೌದು, ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಮಕ್ಕಳಿಬ್ಬರೂ ಜೀವನದಲ್ಲೇ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಸಿನಿಮಾ ವೀಕ್ಷಿಸಿದ್ದಾರೆ.

ಯಶ್ ಮಕ್ಕಳಾದ ಆಯ್ರಾ - ಯಥರ್ವ್‌ಗೆ ‘ರಾಮಾಯಣ’ ಸಿನಿಮಾ ಸಖತ್‌ ಸ್ಪೆಷಲ್‌!

-

Avinash GR
Avinash GR Oct 30, 2026 4:59 PM

ಸ್ಯಾಂಡಲ್‌ವುಡ್‌ನ ತಾರಾ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದಿನ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಪಾಲಿಗೆ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಎಂದಿಗೂ ಮರೆಯಲಾಗದ ವಿಶೇಷ ನೆನಪಾಗಿ ಉಳಿಯಲಿದೆ. ಕಾರಣ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ಈ ಮಹಾಕಾವ್ಯ ಆಧಾರಿತ ಚಿತ್ರವೇ ಅವರ ಜೀವನದ ಮೊಟ್ಟಮೊದಲ ಸಿನಿಮಾ ವೀಕ್ಷಣೆಯ ಅನುಭವಕ್ಕೆ ಸಾಕ್ಷಿಯಾಗಿದೆ.

ಅಮೆರಿಕದಲ್ಲಿ ಸಿನಿಮಾ ನೋಡಿದ ಯಶ್‌ ಮಕ್ಕಳು

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗಿದ್ದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಆಯ್ರಾ ಹಾಗೂ ಅಕ್ಟೋಬರ್ 30ರಂದು 7ನೇ ವರ್ಷಕ್ಕೆ ಕಾಲಿಟ್ಟಿರುವ ಕಿರಿಯ ಮಗ ಯಥರ್ವ್ ಮೊದಲ ಬಾರಿಗೆ ಚಿತ್ರವನ್ನು ವೀಕ್ಷಿಸಿದ್ದಾರೆ. ತಮ್ಮ ತಂದೆಯ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿರುವ ಚಿತ್ರದ ಮೂಲಕವೇ ಮಕ್ಕಳಿಬ್ಬರೂ ಮೊದಲ ಬಾರಿಗೆ ಸಿನಿಮಾ ನೋಡಿರುವುದು ಕುಟುಂಬಕ್ಕೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಅಪಾರ ಸಂಭ್ರಮ ತಂದಿದೆ. ಮಕ್ಕಳು ಈ ಚಿತ್ರವನ್ನು ಹೇಗೆ ಆಸ್ವಾದಿಸಿದರು ಎಂಬ ಮಾಹಿತಿಗಳನ್ನು ಕುಟುಂಬ ಗೌಪ್ಯವಾಗಿರಿಸಿದ್ದರೂ, ಈ ಅಪರೂಪದ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Ramayana Movie: ‘ರಾಮಾಯಣ’ ಹಾಡುಗಳ ಬಗ್ಗೆ ಟೀಕೆ; ಎಆರ್ ರೆಹಮಾನ್ ತಿರುಗೇಟು

ಯಶ್‌ ಮಕ್ಕಳ ಹೆಸರಿನ ಅರ್ಥವೇನು?

ವಿಶೇಷವೆಂದರೆ, ಈ ಯಶ್‌ ಮಕ್ಕಳ ಹೆಸರುಗಳ ಹಿಂದೆಯೂ ಆಳವಾದ ಅರ್ಥವಿದೆ. ‘ಆಯ್ರಾ’ ಎಂಬ ಹೆಸರು ಐರಾವತಿಯಿಂದ ಪ್ರೇರಿತವಾಗಿದ್ದು, ಇದು ಶ್ರೀಲಕ್ಷ್ಮೀ ದೇವಿಯ ಮತ್ತೊಂದು ಹೆಸರಾಗಿದೆ. ಇನ್ನು ‘ಯಥರ್ವ್’ ಎಂದರೆ ‘ಪೂರ್ಣತೆ’ ಎಂದರ್ಥ. ಯಥರ್ವ್ ಹೆಸರಿನಲ್ಲಿ ಯಶ್, ರಾಧಿಕಾ ಮತ್ತು ಆಯ್ರಾ ಅವರ ಹೆಸರುಗಳ ಪ್ರಮುಖ ಅಕ್ಷರಗಳು ಸಮ್ಮಿಳಿತವಾಗಿವೆ ಎಂದು ದಂಪತಿ ಈ ಹಿಂದೆಯೇ ಹೇಳಿಕೊಂಡಿದ್ದರು. ತಲೆಮಾರುಗಳಿಂದ ಭಾರತೀಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಾಮಾಯಣ ಮಹಾಕಾವ್ಯ, ಇದೀಗ ಯಶ್ ಅವರ ಕುಟುಂಬದ ವೈಯಕ್ತಿಕ ಭಾವನಾತ್ಮಕ ನೆನಪಿನ ಭಾಗವಾಗಿಯೂ ರೂಪಾಂತರಗೊಂಡಿದೆ.

ನವೆಂಬರ್‌ 5ರಂದು ವಿಶ್ವಾದ್ಯಂತ ತೆರೆಗೆ

ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸಂಸ್ಥೆಯ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಅದ್ದೂರಿ ಚಿತ್ರಕ್ಕೆ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ-ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಅಷ್ಟೇ ಅಲ್ಲದೆ, ಕರ್ನಾಟಕದ ವಿತರಣೆಯ ಹಕ್ಕನ್ನೂ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಲಂಕಾಧಿಪತಿ ರಾವಣನಾಗಿ ಯಶ್ ಅಬ್ಬರಿಸಲಿದ್ದು, ನವೆಂಬರ್ 5ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿರುವ ಈ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.