ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮ್ಯಾಥ್ಯೂ ಬ್ರೀಟ್ಜ್ಕೆ ಶತಕದ ಅಬ್ಬರ: ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾಗೆ 67 ರನ್‌ಗಳ ಜಯ!

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 67 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಮ್ಯಾಥ್ಯೂ ಬ್ರೀಟ್ಜ್ಕೆ ಅವರ ಅದ್ಭುತ ಶತಕ ದಕ್ಷಿಣ ಆಫ್ರಿಕಾದ ಜಯದ ಪ್ರಮುಖ ಕಾರಣವಾಯಿತು. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾಗೆ 67 ರನ್‌ಗಳ ಜಯ!

ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ ಭರ್ಜರಿ ಜಯ. -

Profile
Ramesh Kote Sep 24, 2026 10:17 PM

ನವದೆಹಲಿ: ಮ್ಯಾಥ್ಯೂ ಬ್ರೀಟ್ಜ್ಕೆ (Matthew Breetzke) ಭರ್ಜರಿ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡ, ಮೊದಲನೇ ಏಕದಿನ ಪಂದ್ಯದಲ್ಲಿ (AUS vs SA) ಆಸ್ಟ್ರೇಲಿಯಾ ವಿರುದ್ಧ 67 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 1-0 ಮುನ್ನಡೆಯನ್ನು ಪಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 297 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು; ಇದಕ್ಕೆ ಪ್ರತಿಯಾಗಿ, ಆಸ್ಟ್ರೇಲಿಯಾ ತಂಡ 41.2 ಓವರ್‌ಗಳಲ್ಲಿ ಕೇವಲ 230 ರನ್‌ಗಳಿಗೆ ಆಲೌಟ್ ಆಯಿತು.

ಆರಂಭಿಕ ಬ್ಯಾಟರ್ ಮ್ಯಾಥ್ಯೂ ಬ್ರೀಟ್ಜ್ಕೆ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ರೀಟ್ಜ್ಕೆ 106 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 112 ರನ್‌ಗಳ ಭವ್ಯ ಇನಿಂಗ್ಸ್ ಆಡಿದರು. ಇದರೊಂದಿಗೆ, ಮಧ್ಯಮ ಕ್ರಮಾಂಕದಲ್ಲಿ ಮಾರ್ಕೊ ಯೆನ್ಸೆನ್ ಕೇವಲ 59 ಎಸೆತಗಳಲ್ಲಿ 75 ರನ್ ಸಿಡಿಸಿ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆಸ್ಟ್ರೇಲಿಯಾ ಪರವಾಗಿ ನೇಥನ್ ಎಲ್ಲಿಸ್ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು; ಅವರು ತಮ್ಮ 10 ಓವರ್‌ಗಳಲ್ಲಿ 57 ರನ್ ನೀಡಿ 3 ವಿಕೆಟ್ ಪಡೆದರು.

IND vs WI 2026 ಸರಣಿಯ ಸಂಪೂರ್ಣ ವೇಳಾಪಟ್ಟಿ, ತಂಡಗಳು, ಲೈವ್‌ ಸ್ಟ್ರೀಮಿಂಗ್‌ ವಿವರ!

ಆಸ್ಟ್ರೇಲಿಯಾದ ಭರ್ಜರಿ ಆರಂಭ

298 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆಕ್ರಮಣಕಾರಿ ಆರಂಭವನ್ನು ಪಡೆಯಿತು. ನಾಯಕ ಮಿಚೆಲ್ ಮಾರ್ಷ್ ಕ್ರೀಸ್‌ಗೆ ಬಂದ ತಕ್ಷಣವೇ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ, 5 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಕೇವಲ 36 ಎಸೆತಗಳಲ್ಲಿ 60 ರನ್ ಗಳಿಸಿದರು. ಮ್ಯಾಟ್ ರೆನ್‌ಶಾ (44 ರನ್) ಮತ್ತು ಕೂಪರ್ ಕೊನೊಲ್ಲಿ (38 ರನ್) ಕೂಡ ತಂಡದ ಇನಿಂಗ್ಸ್‌ಗೆ ಆಸರೆಯಾಗುವ ಪ್ರಯತ್ನ ಮಾಡಿದರು. ಆದರೆ, ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಔಟ್ ಆದ ನಂತರ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವು ಸಂಪೂರ್ಣವಾಗಿ ಕುಸಿಯಿತು ಮತ್ತು ಬೇರೆ ಯಾವುದೇ ಬ್ಯಾಟರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.



ಕೇಶವ್ ಮಹಾರಾಜ್ ಸ್ಪಿನ್‌ ಮೋಡಿ

ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಸ್ಪಿನ್ನರ್ ಕೇಶವ್ ಮಹಾರಾಜ್ ನಿಜವಾದ ಹೀರೋ ಎನಿಸಿಕೊಂಡರು; ಅವರ ಸ್ಪಿನ್ ಬೌಲಿಂಗ್ ಎದುರು ಆಸ್ಟ್ರೇಲಿಯಾದ ಬ್ಯಾಟರ್‌ಗಳು ಅಸಹಾಯಕರಾಗಿ ಕಂಡುಬಂದರು. ಮಿತವ್ಯಯಕಾರಿ ಹಾಗೂ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಹಾರಾಜ್, ಎರಡು ಮೇಡಿನ್ ಓವರ್‌ಗಳ ಸಹಿತ ಒಟ್ಟು 9.2 ಓವರ್‌ಗಳನ್ನು ಎಸೆದು, ಕೇವಲ 20 ರನ್‌ಗಳಿಗೆ ಆಸ್ಟ್ರೇಲಿಯಾದ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಅವರ ಈ ಅದ್ಭುತ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾ ತಂಡವು 230 ರನ್‌ಗಳಿಗೆ ಆಲೌಟ್ ಆಯಿತು ಮತ್ತು ದಕ್ಷಿಣ ಆಫ್ರಿಕಾ ಏಕಪಕ್ಷೀಯ ಗೆಲುವು ಸಾಧಿಸಿತು.



ಸ್ಕೋರ್‌ ವಿವರ

ದಕ್ಷಿಣ ಆಫ್ರಿಕಾ: 50 ಓವರ್‌ಗಳಿಗೆ 297-8 (ಮ್ಯಾಥ್ಯೂ ಬ್ರೀಟ್ಜ್ಕೆ 112 ರನ್‌, ಮಾರ್ಕೊ ಯೆನ್ಸನ್‌ 75 ರನ್‌; ನೇಥನ್‌ ಎಲ್ಲಿಸ್‌ 57 ಕ್ಕೆ 3, ಆಡಂ ಝಾಂಪ 50 ಕ್ಕೆ 2)

ಆಸ್ಟ್ರೇಲಿಯಾ: 41.2 ಓವರ್‌ಗಳಿಗೆ ಮಿಚೆಲ್‌ ಮಾರ್ಷ್‌ 60 ರನ್‌, ಮ್ಯಾಟ್‌ ರೆನ್‌ಶಾ 44 ರನ್‌, ಕೂಪರ್‌ ಕೊನೊಲ್ಲಿ 38 ರನ್‌; ಕೇಶವ್‌ ಮಹಾರಾಜ್‌ 20ಕ್ಕೆ 4)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಮ್ಯಾಥ್ಯೂ ಬ್ರೀಟ್ಜ್ಕೆ