ಅಡುಗೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಎಫ್‌ಐಆರ್ ದಾಖಲಾದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಶಶಾಂಕ್ ಸಿಂಗ್!
ತಮ್ಮ ವಿರುದ್ಧ ಮಾಜಿ ಅಡುಗೆ ಸಿಬ್ಬಂದಿ ಮಾಡಿರುವ ಹಲ್ಲೆ ಮತ್ತು ಅಕ್ರಮ ಬಂಧನದ ಆರೋಪಗಳನ್ನು ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟಿಗ ಶಶಾಂಕ್ ಸಿಂಗ್ ತಳ್ಳಿಹಾಕಿದ್ದಾರೆ. ಭೋಪಾಲ್‌ನಲ್ಲಿ ಅವರ ಹಾಗೂ ಅವರ ತಂದೆಯ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಒಂದು ದಿನದ ಬಳಿಕ, ಶಶಾಂಕ್ ಈ ಆರೋಪಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ ಶಶಾಂಕ್ ಸಿಂಗ್. -
ನವದೆಹಲಿ: ಅಡುಗೆ ಸಿಬ್ಬಂದಿಯೊಬ್ಬರು ಮಾಡಿದ ಹಲ್ಲೆ ಮತ್ತು ಅಕ್ರಮ ಬಂಧನದ ಆರೋಪಗಳನ್ನು ಪಂಜಾಬ್ ಕಿಂಗ್ಸ್ (PBKS) ತಂಡದ ಕ್ರಿಕೆಟಿಗ ಶಶಾಂಕ್ ಸಿಂಗ್ (Shashank Singh) ತಳ್ಳಿಹಾಕಿದ್ದಾರೆ. ಬದಲಾಗಿ, ಆ ಉದ್ಯೋಗಿಯು ಕುಟುಂಬದ ಮನೆಯ ಖಾಸಗಿ ಸ್ಥಳಗಳಿಗೆ ಅನುಮತಿಯಿಲ್ಲದೆ ಪ್ರವೇಶಿಸಿ, ವಿಡಿಯೊಗಳನ್ನು ಚಿತ್ರೀಕರಿಸಿದ್ದರಿಂದಲೇ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಶಾಂಕ್ ಸಿಂಗ್ ಹಾಗೂ ಅವರ ತಂದೆ ಮತ್ತು ಮಾಜಿ ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ಅವರ ವಿರುದ್ಧ ಅಡುಗೆ ಸಿಬ್ಬಂದಿ ವಿಪೇಂದ್ರ ಸಿಂಗ್ ತೋಮರ್ ದೈಹಿಕ ಹಲ್ಲೆ, ನಿಂದನೆ ಹಾಗೂ ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧನದಲ್ಲಿರಿಸಿದ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭೋಪಾಲ್‌ನ ರತಿಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಶಶಾಂಕ್, ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ದೂರಿನಲ್ಲಿ ಉಲ್ಲೇಖಿಸಲಾದ ಘಟನೆಗಳನ್ನು ಪ್ರಶ್ನಿಸಿದ್ದಾರೆ.
ಅಡುಗೆ ಸಿಬ್ಬಂದಿ ಮೇಲೆ ಹಲ್ಲೆ: ಕ್ರಿಕೆಟಿಗ ಶಶಾಂಕ್ ಸಿಂಗ್, ತಂದೆ ವಿರುದ್ಧ ಎಫ್‌ಐಆರ್
"ಹಲ್ಲೆಯಂತಹ ಯಾವುದೇ ಘಟನೆಗಳು ನಡೆದಿಲ್ಲ. ಜೂನ್ 25ರ ಸಂಜೆ ನಮ್ಮ ಮನೆಗೆ ಬಂದು, ಜೂನ್ 28ರ ಬೆಳಿಗ್ಗೆ ಅಲ್ಲಿಂದ ಹೊರಟ ವ್ಯಕ್ತಿಯನ್ನು ಹೇಗೆ ಒತ್ತೆಯಾಳಾಗಿ ಇರಿಸಲಾಗಿದೆ?" ಎಂದು ಶಶಾಂಕ್ ಅವರು ಮಂಗಳವಾರ (ಜೂನ್ 30) ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದರು.
ಅಡುಗೆ ಮಾಡುವ ವ್ಯಕ್ತಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಶಶಾಂಕ್ ಆರೋಪಿಸಿದರು. ಆರಂಭದಲ್ಲಿ ವಿವಿಧ ರೀತಿಯ ಅಡುಗೆಗಳನ್ನು ಮಾಡಬಲ್ಲೆ ಎಂದು ಹೇಳಿದ್ದ ಆತ, ನಂತರ ತಾನೇ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.
"ಆ ವ್ಯಕ್ತಿ ನಮ್ಮ ಬಳಿ ಬಂದು, 'ನನಗೆ ಅಡುಗೆ ಮಾಡಲು ಬರುತ್ತದೆ. ಎಲ್ಲ ರೀತಿಯ ಆಹಾರಗಳನ್ನು ತಯಾರಿಸಬಲ್ಲೆ' ಎಂದು ಹೇಳಿದ್ದ. ಆದರೆ ನಂತರ ಆತನೇ ತನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡ. ಅಂತಹ ವ್ಯಕ್ತಿಯನ್ನು ಹೇಗೆ ನಂಬಲು ಸಾಧ್ಯ?" ಎಂದು ಶಶಾಂಕ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
IND vs ENG ಒಡಿಐ ಸರಣಿಗೂ ಮುನ್ನ ರೋಹಿತ್ ಶರ್ಮಾಗೆ ಸುನೀಲ್ ಗವಾಸ್ಕರ್ ವಾರ್ನಿಂಗ್!
ಶಶಾಂಕ್ ಅವರು ದೂರುದಾರನ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದ್ದು, ಆ ಉದ್ಯೋಗಿಯು ಕುಟುಂಬದ ಮನೆಯ ಖಾಸಗಿ ಭಾಗಗಳಲ್ಲಿ ಅನುಮತಿಯಿಲ್ಲದೆ ವಿಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಎಂದು ಹೇಳಿದ್ದಾರೆ.
"ಅವರು ಮನೆಗೆ ಬಂದು ಮಲಗುವ ಕೊಠಡಿಗಳ ವಿಡಿಯೊಗಳನ್ನು ಚಿತ್ರೀಕರಿಸಲು ಆರಂಭಿಸಿದ. ದುಬಾರಿ ಮತ್ತು ಐಷಾರಾಮಿ ವಸ್ತುಗಳನ್ನು ಇಟ್ಟಿದ್ದ ಮಲಗುವ ಕೊಠಡಿಗೂ ಪ್ರವೇಶಿಸಿ, ಅಲ್ಲಿಯೂ ವಿಡಿಯೊಗಳನ್ನು ಮಾಡಿ ಅವುಗಳನ್ನು ಇತರರಿಗೆ ಕಳುಹಿಸಿದ್ದ," ಎಂದು ಶಶಾಂಕ್ ಸಿಂಗ್ ಆರೋಪಿಸಿದರು.
ಪಂಜಾಬ್ ಕಿಂಗ್ಸ್ ಬ್ಯಾಟರ್ ಶಶಾಂಕ್ ಅವರ ಪ್ರಕಾರ, ಅಡುಗೆಗಾರನೊಂದಿಗೆ ತಮ್ಮ ಸಂಭಾಷಣೆ ತುಂಬಾ ಸೀಮಿತವಾಗಿದ್ದು, ಅದು ಹೆಚ್ಚಾಗಿ ಅವರ ಅಡುಗೆ ಅನುಭವದ ಬಗ್ಗೆ ಮಾತ್ರ ಇತ್ತು. ತಮ್ಮ ತಂದೆಯ ಸ್ನೇಹಿತರೊಬ್ಬರ ಶಿಫಾರಸಿನ ಮೇರೆಗೆ ಆತನನ್ನು ಕೆಲಸಕ್ಕೆ ಕರೆಸಲಾಗಿತ್ತು. ಆದರೆ ಮನೆಗೆ ಬಂದ ತಕ್ಷಣವೇ ಆತ ಮುಂಗಡ ಹಣವನ್ನು ಕೇಳಿದ್ದಾನೆ ಎಂದು ಶಶಾಂಕ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ ಸ್ಟೋಕ್ಸ್‌ಗೆ ಸಂದೇಶ ರವಾನಿಸಿದ ಸಚಿನ್ ತೆಂಡೂಲ್ಕರ್!
"ನನ್ನ ತಂದೆಯ ಸ್ನೇಹಿತರೊಬ್ಬರು ಈ ವ್ಯಕ್ತಿಯನ್ನು ಶಿಫಾರಸು ಮಾಡಿದ್ದರು. ಅವರಿಗೆ ಎಲ್ಲ ರೀತಿಯ ಅಡುಗೆಗಳನ್ನು ಮಾಡಲು ಬರುತ್ತದೆ ಎಂದು ಹೇಳಿದ್ದರಿಂದಲೇ ಅವರನ್ನು ಮನೆಗೆ ಕರೆಸಿಕೊಂಡೆವು," ಎಂದು ಶಶಾಂಕ್ ಹೇಳಿದರು.
"ಆದರೆ ಮನೆಗೆ ಬಂದ ತಕ್ಷಣವೇ ಅವರು 20,000 ಮುಂಗಡ ಹಣವನ್ನು ನೀಡುವಂತೆ ಬೇಡಿಕೆ ಇಟ್ಟರು," ಎಂದು ಅವರು ತಿಳಿಸಿದ್ದಾರೆ.
ಅಡುಗೆ ಮಾಡುವ ವ್ಯಕ್ತಿಗೆ ಮೊದಲು ಕೆಲವು ದಿನ ಕೆಲಸ ಮಾಡಲು ಹೇಳಲಾಗಿತ್ತು. ನಂತರವೇ ವೇತನದ ಬಗ್ಗೆ ಚರ್ಚಿಸಿ, ಮುಂದುವರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಉದ್ದೇಶ ಕುಟುಂಬಕ್ಕಿತ್ತು. ಇನ್ನೊಂದೆಡೆ, ತಾನು ಕೆಲಸ ಬಿಡುವ ಇಚ್ಛೆಯನ್ನು ವ್ಯಕ್ತಪಡಿಸಿದ ಬಳಿಕ ತನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ವಿಪೇಂದ್ರ ಸಿಂಗ್ ತೋಮರ್ ಆರೋಪಿಸಿದ ಹಿನ್ನೆಲೆಯಲ್ಲಿ, ಶಶಾಂಕ್, ಅವರ ತಂದೆ ಹಾಗೂ ಕುಟುಂಬದ ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.