ʻಆರ್‌ಸಿಬಿಗೆ ಸೇರ್ಪಡೆಯಾಗಲು ನನಗೆ ಇಷ್ಟವಿರಲಿಲ್ಲʼ: ಹಳೆಯ ದಿನಗಳನ್ನು ಮೆಲುಕು ಹಾಕಿದ ರಜತ್ ಪಾಟಿದಾರ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಪ್ರಶಸ್ತಿ ಗೆದ್ದುಕೊಟ್ಟು 10 ದಿನಗಳ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅವರು 2022ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಗೆ ಸೇರಲು ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
2022ರ ದಿನಗಳನ್ನು ನೆನೆದ ರಜತ್ ಪಾಟಿದಾರ್. -
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸತತ ಎರಡು ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಅವರು 2022ರ ಟೂರ್ನಿಯ ವೇಳೆ ಆಗಿದ್ದ ತಮ್ಮ ಅನುಭವವನ್ನು ನಾಲ್ಕು ವರ್ಷಗಳ ಬಳಿಕ ಬಹಿರಂಗಪಡಿಸಿದ್ದಾರೆ. 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಬಳಿಕ ಗಾಯಾಳು ಆಟಗಾರನ ಬದಲಿ ಸ್ಥಾನಕ್ಕೆ ಆರ್‌ಸಿಬಿ ಕರೆದಾಗ, ನಿಜವಾಗಲೂ ಬೆಂಗಳೂರು ತಂಡಕ್ಕೆ ಮರಳಲು ನನಗೆ ಇಷ್ಟವಿರಲಿಲ್ಲ. ಏಕೆಂದರೆ ಮದುವೆ ಸಮೀಪದಲ್ಲಿತ್ತು ಹಾಗೂ ತಂಡಕ್ಕೆ ಸೇರಿದರೂ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಗದೆ ಬೆಂಚ್ ಕಾಯಬೇಕೆಂಬ ಮನಸ್ಥಿತಿಯನ್ನು ಹೊಂದಿದ್ದೆ ಎಂದು ಹೇಳಿಕೊಂಡಿದ್ದಾರೆ.
2021ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಗೆ ಮೊದಲ ಬಾರಿ ಸೇರ್ಪಡೆಯಾಗಿದ್ದ ರಜತ್ ಪಾಟಿದಾರ್, ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಹಾಗಾಗಿ ಅವರನ್ನು ಮೆಗಾ ಹರಾಜಿಗೆ ಆರ್‌ಸಿಬಿ ರಿಲೀಸ್ ಮಾಡಿತ್ತು ಹಾಗೂ ಅವರು ಅನ್‌ಸೋಲ್ಡ್ ಆಗಿದ್ದರು. ನಂತರ ನವನೀತ್ ಸಿಸೋಡಿಯಾ ಅವರು ಗಾಯಕ್ಕೆ ತುತ್ತಾದ ಬಳಿಕ ಅವರ ಸ್ಥಾನಕ್ಕೆ ರಜತ್ ಪಾಟಿದಾರ್ ಅವರನ್ನು ಆರ್‌ಸಿಬಿ ಪುನಃ ಕರೆಸಿಕೊಂಡಿತ್ತು. ಈ ಸೀಸನ್ ಪಾಟಿದಾರ್ ಅವರ ವೃತ್ತಿ ಜೀವನವನ್ನ ಬದಲಿಸಿತು. ಅವರು ಎರಡನೇ ಲೆಗ್‌ನಲ್ಲಿ ಬಲವಾಗಿ ಕಮ್‌ಬ್ಯಾಕ್ ಮಾಡಿದರು. ವಿಶೇಷವಾಗಿ ಪ್ಲೇಆಫ್ಸ್‌ನಲ್ಲಿ ರಜತ್ ಭರ್ಜರಿ ಶತಕವನ್ನು ಬಾರಿಸಿದ್ದರು. ಆ ಮೂಲಕ ಆರ್‌ಸಿಬಿ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು.
ಸತತ ಎರಡು ಐಪಿಎಲ್ ಗೆದ್ದರೂ ರಜತ್ ಪಾಟಿದಾರ್‌ಗೆ ಭಾರತ ಟಿ20 ತಂಡದಲ್ಲಿ ಏಕೆ ಸ್ಥಾನವಿಲ್ಲ?
ಆರ್‌ಸಿಬಿಗೆ ಸೇರಲು ನನಗೆ ಇಷ್ಟವಿರಲಿಲ್ಲ: ರಜತ್
ಸಂದರ್ಶನವೊಂದರಲ್ಲಿ ಮಾತನಾಡಿದ ರಜತ್ ಪಾಟಿದಾರ್,"ನಾನು ಯಾವತ್ತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲು ಬಯಸಿರಲಿಲ್ಲ. ಏಕೆಂದರೆ ಅವರು ನನ್ನನ್ನು ಬದಲಿ ಆಟಗಾರನಾಗಿ ಕರೆಯುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿತ್ತು. ಹೀಗಾಗಿ ನನಗೆ ಆಡುವ ಅವಕಾಶ ಸಿಗುವುದಿಲ್ಲ ಎಂಬ ನಂಬಿಕೆ ಇತ್ತು. ತಂಡವನ್ನು ಸೇರಿದ ನಂತರವೂ ನನಗೆ ಇದೇ ರೀತಿಯ ಪ್ರತಿಕ್ರಿಯೆ ಸಿಕ್ಕಿತು. ತಂಡದವರು ಸ್ಪಷ್ಟವಾಗಿ, ‘ನೀವು ಬದಲಿ ಆಟಗಾರ. ಆದ್ದರಿಂದ ನಿರಾಳವಾಗಿರಿ, ವಿಶ್ರಾಂತಿ ಪಡೆಯಿರಿ. ಯಾರಾದರೂ ಗಾಯಗೊಂಡರೆ ಮಾತ್ರ ನಿಮಗೆ ಅವಕಾಶ ಸಿಗುತ್ತದೆ’ ಎಂದು ಹೇಳಿದ್ದರು. ನಿಜ ಹೇಳಬೇಕೆಂದರೆ, ನಾನು ತಂಡವನ್ನು ಸೇರಲು ಇಚ್ಛಿಸಿರಲಿಲ್ಲ," ಎಂದು ಹೇಳಿದ್ದಾರೆ.
"ನನ್ನ ಮದುವೆಯ ದಿನಾಂಕವೂ ಆಗಲೇ ನಿಗದಿಯಾಗಿತ್ತು. ಆದರೂ ನಾನು ತಂಡವನ್ನು ಸೇರಲು ಬಯಸುವುದಿಲ್ಲ ಎಂಬ ವಿಚಾರದಲ್ಲಿ ಸಂಪೂರ್ಣ ಸ್ಪಷ್ಟವಾಗಿದ್ದೆ. ಏಕೆಂದರೆ ನಾನು ಬೆಂಚ್ ಮೇಲೆ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ದೃಷ್ಟಿಯಲ್ಲಿ ನಾನು ಒಂದು ತಂಡಕ್ಕೆ ಹೋಗುತ್ತಿದ್ದೇನೆ ಎಂದರೆ ಅದು ಆಡುವುದಕ್ಕಾಗಿಯೇ. ಅಲ್ಲಿ ಹೋಗಿ ಕೇವಲ ಕುಳಿತುಕೊಳ್ಳುವುದಕ್ಕಲ್ಲ. ಆಡುವ ಅವಕಾಶ ಸಿಗದಿದ್ದರೆ ಹೋಗದೇ ಇರುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಇದೇ ನನ್ನ ಮನಸ್ಥಿತಿ ಮತ್ತು ದೃಷ್ಟಿಕೋನವಾಗಿತ್ತು," ಎಂದು ಆರ್‌ಸಿಬಿ ಕ್ಯಾಪ್ಟನ್ ಹಳೆಯ ದಿನಗಳನ್ನು ನೆನೆಪಿಸಿಕೊಂಡರು.
IPL 2026: ʻನಾನು ಈ ರೀತಿಯ ನೋಡಿರಲಿಲ್ಲʼ-ವೈಭವ್ ಸೂರ್ಯವಂಶಿ ಬಗ್ಗೆ ಲಿವಿಂಗ್‌ಸ್ಟೋನ್ ದೊಡ್ಡ ಹೇಳಿಕೆ!
ನಿರ್ಧಾರವನ್ನು ಬದಲಿಸಿ ಆರ್‌ಸಿಬಿಗೆ ಸೇರಿದ್ದ ರಜತ್
ಪಾಟಿದಾರ್ ತಾವು ತಂಡವನ್ನು ಸೇರಲು ಬಯಸುವುದಿಲ್ಲ ಎಂಬುದನ್ನು ಕುಟುಂಬದ ಸದಸ್ಯರು, ಕೋಚ್‌ಗಳು ಹಾಗೂ ಹಿರಿಯ ಆಟಗಾರರಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ ಅವರ ಆಪ್ತ ವಲಯದ ಬಹುತೇಕ ಎಲ್ಲರೂ ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದು, ಮದುವೆಯನ್ನು ಎರಡು ತಿಂಗಳು ಮುಂದೂಡಲು ಸೂಚಿಸಿದ್ದರು. ಅದೃಷ್ಟವಶಾತ್, 2022ರ ಐಪಿಎಲ್ ಋತುವಿನಲ್ಲಿ ಪಾಟಿದಾರ್ ಎಂಟು ಪಂದ್ಯಗಳಲ್ಲಿ ಅವಕಾಶ ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ವಿಶೇಷವಾಗಿ ಎಲ್‌ಎಸ್‌ಜಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್‌ಗಳ ಭರ್ಜರಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದರು.
ಆರ್‌ಸಿಬಿಗೆ ಟ್ರೋಫಿ ಬರವನ್ನು ನೀಗಿಸಿದ್ದ ಪಾಟಿದಾರ್
ಅವರ ಅದ್ಭುತ ಪ್ರದರ್ಶನದ ಪರಿಣಾಮವಾಗಿ, ಅವರನ್ನು 2024ರ ಋತುವಿಗೂ ಉಳಿಸಿಕೊಳ್ಳಲಾಯಿತು. ಮಧ್ಯಮ ಕ್ರಮಾಂಕದ ವಿಶ್ವಾಸಾರ್ಹ ಫಿನಿಷರ್ ಆಗಿ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡ ಅವರು, ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ 2025ರಲ್ಲಿ ಆರ್‌ಸಿಬಿ ತಂಡದ ನಾಯಕನಾಗಿ ನೇಮಕಗೊಂಡರು. ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕ, ಆರ್‌ಸಿಬಿಯ ದೀರ್ಘಕಾಲದ ಟ್ರೋಫಿ ಬರವನ್ನು ಕೊನೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಅಲ್ಲದೆ, 2026ರಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದರು.