ʻಸಚಿನ್‌ಗಿಂತ 5000 ರನ್ ಜಾಸ್ತಿ ಹೊಡೆಯುತ್ತಿದ್ದೆʼ: ಅಚ್ಚರಿ ಹೇಳಿಕೆ ನೀಡಿದ ಮೈಕಲ್ ಹಸ್ಸಿ!
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದಂತೆ ನಾನು ಆರಂಭಿಸಿದ್ದರೆ, ಅವರಿಗಿಂತ 5000 ರನ್‌ಗಳನ್ನು ಹೆಚ್ಚಿನ ರನ್‌ಗಳನ್ನು ಕಲೆ ಹಾಕುತ್ತಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಹಸ್ಸಿ ಹೇಳಿದ್ದಾರೆ.

ಸಚಿನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಮೈಕಲ್ ಹಸ್ಸಿ! -

ನವದೆಹಲಿ: ಕ್ರಿಕೆಟ್ ದಂತಕತೆ ಹಾಗೂ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆದರೂ ಮಾಸ್ಟರ್ ಬ್ಲಾಸ್ಟರ್ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ಮೈಕಲ್ ಹಸ್ಸಿ (Michael Hussey) ಮಹತ್ತರ ಹೇಳಿಕೆ ನೀಡಿದ್ದಾರೆ. ಸಚಿನ್ ರೀತಿ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದ್ದಂತೆ ನಾನು ಆರಂಭಿಸಿದ್ದರೆ ಅವರಿಗಿಂತ 5000 ರನ್‌ಗಳನ್ನು ಹೆಚ್ಚಾಗಿ ಗಳಿಸುತ್ತಿದ್ದೆ ಎಂದು ಹಸ್ಸಿ ತಿಳಿಸಿದ್ದಾರೆ. ಆಸೀಸ್ ದಿಗ್ಗಜರಲ್ಲಿ ಒಬ್ಬರೆನಿಸಿಕೊಂಡಿರುವ ಮೈಕಲ್ ಹಸ್ಸಿ, ಎಲ್ಲಾ ಸ್ವರೂಪದಲ್ಲಿ ಆಡಿದ 324 ಇನಿಂಗ್ಸ್‌ಗಳಿಂದ 22 ಶತಕಗಳು ಹಾಗೂ 72 ಅರ್ಧಶತಕಗಳ ಮೂಲಕ 12398 ರನ್‌ಗಳನ್ನು ಕಲೆ ಹಾಕಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ತಮ್ಮ 28ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದರೂ ಅವರು 273 ಪಂದ್ಯಗಳಿಂದ 61 ಶತಕಗಳನ್ನು 23000 ಸನಿಹ ರನ್ ಗಳಿಸಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೂ ತಮಗೆ ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಲ್ಲಿ ಅಪ್ಪಿಕೊಂಡಿದ್ದರು. 2007ರ ವಿಶ್ವಕಪ್, 2006 ಮತ್ತು 2009ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಚಾಂಪಿಯನ್ಸ್ ಆಗಿದ್ದ ಆಸ್ಟ್ರೇಲಿಯಾ ತಂಡದಲ್ಲಿ ಮೈಕಲ್ ಹಸ್ಸಿ ಇದ್ದರು.
IND vs AUS: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಬಗ್ಗೆ ಆರೋನ್ ಫಿಂಚ್ ದೊಡ್ಡ ಹೇಳಿಕೆ!
ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ ಮೈಕಲ್ ಹಸ್ಸಿ, "ನಾನು ಇದರ ಬಗ್ಗೆ ತುಂಬಾ ಯೋಚನೆ ಮಾಡಿದ್ದೇನೆ. ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ 5000 ರನ್‌ಗಳಿಂದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕುತ್ತಿದ್ದೆ. ಹೆಚ್ಚಿನ ಶತಕಗಳು, ಹೆಚ್ಚಿನ ಗೆಲುವುಗಳು, ಹೆಚ್ಚಿನ ಆಶಸ್ ಗೆಲುವುಗಳು ಮತ್ತು ಹೆಚ್ಚಿನ ವಿಶ್ವಕಪ್ ಗೆಲುವುಗಳು, ಬಹುಶಃ ಇವೆಲ್ಲವೂ. ತದನಂತರ, ದುರದೃಷ್ಟವಶಾತ್, ನಾನು ಬೆಳಿಗ್ಗೆ ಎಚ್ಚರಗೊಳ್ಳುತ್ತೇನೆ ಮತ್ತು ಅದು ಕೇವಲ ಕನಸು. ನಾನು ಮೊದಲೇ ಅವಕಾಶವನ್ನು ಇಷ್ಟಪಡುತ್ತಿದ್ದೆ, ಆದರೆ ನನಗೆ ಒಳ್ಳೆಯ ವಿಷಯವೆಂದರೆ ನಾನು ಆಯ್ಕೆಯಾದಾಗ, ನನ್ನ ಆಟದ ಬಗ್ಗೆ ನನಗೆ ಉತ್ತಮ ತಿಳುವಳಿಕೆ ಇತ್ತು, " ಎಂದು ಹೇಳಿದ್ದಾರೆ.
ಸ್ಥಿರ ಪ್ರದರ್ಶನದ ಹೊರತಾಗಿಯೂ ಮೈಕಲ್ ಹಸ್ಸಿ, ಸಚಿನ್ ತೆಂಡೂಲ್ಕರ್ ಅವರಿಗಿಂತ 78 ಶತಕಗಳ ಹಿಂದೆ ಬಿದ್ದಿದ್ದಾರೆ. ಸಚಿನ್ ಎಲ್ಲಾ ಮಾದರಿಗಳಲ್ಲಿ 34357 ರನ್ ಗಳಿಸಿ 100 ಶತಕಗಳನ್ನು ಗಳಿಸಿದ್ದರು. ಆದರೆ ಮೈಕಲ್ ಹಸ್ಸಿ, ಸಚಿನ್ ಅವರಿಗಿಂತ ಸುಮಾರು 450 ಇನಿಂಗ್ಸ್‌ಗಳು ಕಡಿಮೆ ಆಡಿದ್ದರು.