ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ ತಂಡಕ್ಕೆ ಏಷ್ಯಾ ಕಪ್‌ ಟ್ರೋಫಿ ನೀಡಲು ತಿರಸ್ಕರಿಸಿದ ಮೊಹ್ಸಿನ್‌ ನಖ್ವಿ!

2025ರ ಏಷ್ಯಾ ಕಪ್ ಟ್ರೋಫಿಯ ಸುತ್ತಲಿನ ವಿವಾದ ಮುಂದುವರಿದಿದೆ. ಮೊಹ್ಸಿನ್ ನಖ್ವಿ ಟೀಮ್ ಇಂಡಿಯಾಗೆ ಟ್ರೋಫಿಯನ್ನು ಪ್ರದಾನ ಮಾಡಿರಲಿಲ್ಲ. ಏಷ್ಯಾ ಕಪ್‌ ಮುಗಿದು ಒಂದು ತಿಂಗಳ ಕಳೆದರೂ ಇನ್ನೂ ಭಾರತಕ್ಕೆ ಸಿಕ್ಕಿಲ್ಲ. ಟ್ರೋಫಿ ನೀಡುವಂತೆ ಬಿಸಿಸಿಐ, ಮೊಹ್ಸಿನ್‌ ನಖ್ವಿಗೆ ಪತ್ರ ಬರೆದಿತ್ತು. ಆದರೆ, ನಖ್ವಿ ಅವರು ಇದನ್ನು ನಿರಾಕರಿಸಿದ್ದಾರೆ.

ಭಾರತಕ್ಕೆ ಏಷ್ಯಾ ಕಪ್‌ ನೀಡಲು ತಿರಸ್ಕರಿಸಿದ ಮೊಹ್ಸಿನ್‌ ನಖ್ವಿ!

ಬಿಸಿಸಿಐ ಮಾತನ್ನು ತಿರಸ್ಕರಿಸಿದ ಮೊಹ್ಸಿನ್‌ ನಖ್ವಿ. -

Profile Ramesh Kote Oct 21, 2025 8:11 PM

ನವದೆಹಲಿ: ಭಾರತ ತಂಡ 2025ರ ಏಷ್ಯಾ ಕಪ್ ( Asia Cup 2025) ಗೆದ್ದು ಒಂದು ತಿಂಗಳು ಕಳೆದರೂ ಇನ್ನೂ ಟ್ರೋಫಿ ಸಿಕ್ಕಿಲ್ಲ. ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಮೊಹ್ಸಿನ್‌ ನಖ್ವಿ (Mohsin Naqvi) ಅವರಿಂದ ಭಾರತ ತಂಡ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇದಾದ ಬಳಿಕ ನಾಟಕೀಯ ಬೆಳವಣಿಗೆಗಳು ನಡೆದಿವೆ. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗಳಿಂದ ಬಿಸಿಸಿಐ ಬೆಂಬಲ ಪಡೆದಿದ್ದರೂ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪಾಕಿಸ್ತಾನಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಟ್ರೋಫಿ ಬಿಟ್ಟುಕೊಡಲು ಸಿದ್ಧರಿಲ್ಲ. ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಟ್ರೋಫಿಯನ್ನು ಇನ್ನೂ ಹಸ್ತಾಂತರಿಸಲಾಗಿಲ್ಲ. ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಯಲ್ಲಿ ಬಿಸಿಸಿಐ (BCCI) ಪ್ರತಿನಿಧಿಯೊಬ್ಬರು ತಮ್ಮಿಂದಲೇ ಟ್ರೋಫಿಯನ್ನು ಪಡೆಯಬೇಕು ಎಂದು ನಖ್ವಿ ಪಟ್ಟು ಹಿಡಿದಿದ್ದಾರೆ. ಆದರೆ ಭಾರತೀಯ ಮಂಡಳಿ ನಿರಾಕರಿಸಿದೆ ಎಂದು ಎಸಿಸಿಯ ಉನ್ನತ ಮೂಲವೊಂದು ಪಿಟಿಐಗೆ ತಿಳಿಸಿದೆ. ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲಿದೆ.

"ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಎಸಿಸಿಯಲ್ಲಿ ಬಿಸಿಸಿಐ ಪ್ರತಿನಿಧಿ ರಾಜೀವ್ ಶುಕ್ಲಾ ಮತ್ತು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಇತರ ಸದಸ್ಯ ಮಂಡಳಿಗಳ ಪ್ರತಿನಿಧಿಗಳು ಕಳೆದ ವಾರ ಎಸಿಸಿಗೆ ಪತ್ರ ಬರೆದು ಟ್ರೋಫಿಯನ್ನು ಭಾರತಕ್ಕೆ ನೀಡಬೇಕೆಂದು ವಿನಂತಿಸಿದ್ದಾರೆ," ಎಂದು ಎಸಿಸಿ ಮೂಲಗಳು ತಿಳಿಸಿವೆ. "ಆದರೆ ಅವರ (ನಖ್ವಿ) ಪ್ರತಿಕ್ರಿಯೆಯೆಂದರೆ ಬಿಸಿಸಿಐನಿಂದ ಯಾರಾದರೂ ದುಬೈಗೆ ಬಂದು ಅವರಿಂದ ಟ್ರೋಫಿಯನ್ನು ಪಡೆಯಬೇಕು ಎಂಬುದು. ಹಾಗಾಗಿ ಈ ವಿಷಯ ಸದ್ಯ ಸ್ಥಗಿತಗೊಂಡಿದೆ. ಬಿಸಿಸಿಐ, ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ," ಎಂದು ಮೂಲಗಳು ಹೇಳಿವೆ.

BCCI warns Naqvi: ಏಷ್ಯಾಕಪ್ ಭಾರತಕ್ಕೆ ಹಸ್ತಾಂತರಿಸುವಂತೆ ನಖ್ವಿಗೆ ಬಿಸಿಸಿಐ ಖಡಕ್‌ ಎಚ್ಚರಿಕೆ

ಐಸಿಸಿಯ ನೇತೃತ್ವವನ್ನು ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ ವಹಿಸಿದ್ದಾರೆ. ಸೆಪ್ಟೆಂಬರ್ 28 ರಂದು ನಡೆದ ಏಷ್ಯಾ ಕಪ್ ಫೈನಲ್ ನಂತರ ಭಾರತ ತಂಡ, ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ ನಂತರ, ಅವರು ಟ್ರೋಫಿಯೊಂದಿಗೆ ನಿರ್ಗಮಿಸಿದ್ದರು ಹಾಗೂ ಟ್ರೋಫಿಯನ್ನು ಎಸಿಸಿ ಪ್ರಧಾನ ಕಚೇರಿಯ ಲಾಕರ್‌ನಲ್ಲಿ ಇಡಲಾಗಿದೆ. ನಖ್ವಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ಮತ್ತು ಅವರ ದೇಶದ ಗೃಹ ಸಚಿವರೂ ಆಗಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ತಂಡವು ಏಷ್ಯಾ ಕಪ್ ಟೂರ್ನಿಯ ಸಮಯದಲ್ಲಿ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ. ಎರಡೂ ತಂಡಗಳು ಮೂರು ಪಂದ್ಯಗಳನ್ನು ಆಡಿದ್ದವು ಮತ್ತು ಭಾರತ ಮೂರನ್ನೂ ಗೆದ್ದಿತು. ಏಷ್ಯಾ ಕಪ್ ಸಮಯದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಮಿಲಿಟರಿ ಕ್ರಮವನ್ನು ಅಣಕಿಸುವ ವೀಡಿಯೊಗಳು ಮತ್ತು ಮೀಮ್‌ಗಳನ್ನು ನಖ್ವಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು.

ʻನನ್ನ ಒಪ್ಪಿಗೆ ಇಲ್ಲದೆ ಭಾರತಕ್ಕೆ ಏಷ್ಯಾ ಕಪ್‌ ಟ್ರೋಫಿ ನೀಡಬಾರದುʼ: ಮೊಹ್ಸಿನ್‌ ನಖ್ವಿಯ ಮತ್ತೊಂದು ಚಿಲ್ಲರೆ ಬುದ್ದಿ ಬಯಲು!

ಟ್ರೋಫಿ ಘಟನೆಯ ನಂತರ, ಎರಡೂ ದೇಶಗಳ ಪ್ರತಿನಿಧಿಗಳು ಎಸಿಸಿ ಸಭೆಯಲ್ಲಿಯೂ ಘರ್ಷಣೆ ನಡೆಸಿದ್ದರು, ಅಲ್ಲಿ ಬಿಸಿಸಿಐ ಅಧಿಕಾರಿಗಳು ನಖ್ವಿ ಟ್ರೋಫಿಯನ್ನು ಪ್ರದಾನ ಮಾಡದಿದ್ದಕ್ಕಾಗಿ ಟೀಕಿಸಿದ್ದರು. ಪಾಕಿಸ್ತಾನಕ್ಕೆ ತೆರಳುವ ಮುನ್ನ ನಖ್ವಿ ಎಸಿಸಿ ಸಿಬ್ಬಂದಿಗೆ ತನ್ನ ಸೂಚನೆಗಳಿಲ್ಲದೆ ಟ್ರೋಫಿಯನ್ನು ನೀಡಬಾರದು ಅಥವಾ ತೆಗೆಯಬಾರದು ಎಂದು ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.