ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿಯ ಅನುಪಸ್ಥಿತಿ ವಿಚಿತ್ರ ಅನುಭವವಾಗಿದೆ ಎಂದ ಕೆಎಲ್ ರಾಹುಲ್!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಸೇವೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಈ ಕುರಿತು ಮಾತನಾಡಿದ ಕನ್ನಡಿಗ ಕೆಎಲ್ ರಾಹುಲ್, ಇಬ್ಬರು ದಿಗ್ಗಜರು ಇಲ್ಲದ ಡ್ರೆಸ್ಸಿಂಗ್ ರೂಮ್ ನನಗೆ ವಿಚಿತ್ರ ಅನುಭವ ನೀಡಿದೆ ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಬಗ್ಗೆ ಕೆಎಲ್‌ ರಾಹುಲ್‌ ಹೇಳಿಕೆ!

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಬಗ್ಗೆ ಕೆಎಲ್‌ ರಾಹುಲ್‌ ಹೇಳಿಕೆ.

Profile Ramesh Kote Jun 19, 2025 5:37 PM

ಲೀಡ್ಸ್: ಕ್ರಿಕೆಟ್ ಜಗತ್ತಿನ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಇಲ್ಲದ ಭಾರತ ತಂಡದ ಡ್ರೆಸ್ಸಿಂಗ್ ರೂಮ್ ನನಗೆ ವಿಚಿತ್ರ ಅನುಭವ ನೀಡಿದೆ ಎಂದು ಕನ್ನಡಿಗ ಕೆಎಲ್ ರಾಹುಲ್ (KL Rahul) ಹೇಳಿದ್ದಾರೆ. ಸುದೀರ್ಘ ಕಾಲದಿಂದ ರೋಹಿತ್ ಹಾಗೂ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ರಾಹುಲ್, ಇದೇ ಮೊದಲ ಬಾರಿ ಈ ಆಟಗಾರರ ಒಡನಾಟವನ್ನು ಕಳೆದುಕೊಂಡಿದ್ದಾರೆ. ಜೂನ್ 20 ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ತಂಡದಲ್ಲಿ ಹಿರಿಯ ಹಾಗೂ ಅನುಭವಿ ಆಟಗಾರರಾಗಿ ಆಡಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅಲಭ್ಯತೆ ತುಂಬಾ ಕಾಡಲಿದೆ. ಆದರೆ ಈಗ ತಂಡದಲ್ಲಿರುವ ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.

ಭಾರತ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಸಂಪೂರ್ಣವಾಗಿ ಲಭ್ಯವಾಗುವುದಾಗಿ ಹೇಳಿದ್ದರು. ಆದರೆ ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮಧ್ಯಭಾಗದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಇಬ್ಬರು ದಿಗ್ಗಜರು ವಿದಾಯ ಘೋಷಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.

IND vs ENG: ಲೀಡ್ಸ್‌ನಲ್ಲಿ ಭಾರತಕ್ಕೆ ಒಲಿಯಲಿ ಗೆಲುವಿನ ಲೀಡ್‌

ರೋಹಿತ್, ವಿರಾಟ್ ಕೊರತೆ ಕಾಡಲಿದೆ: ಕೆಎಲ್ ರಾಹುಲ್

ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಿನ ಟೆಸ್ಟ್ ಸರಣಿಗೂ ಮುನ್ನ ಡೆಲ್ಲಿ ಕ್ಯಾಪಟಲ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನಡೆಸಿದ ಸಂವಾದಲ್ಲಿ ರಾಹುಲ್, ಭಾರತ ತಂಡಕ್ಕೆ ಅನುಭವಿ ಆಟಗಾರರಾದ ರೋಹಿತ್, ವಿರಾಟ್ ಅಲಭ್ಯತೆ ಕಾಡಲಿದೆ ಎಂದು ಹೇಳಿದ್ದಾರೆ.

"ಭಾರತ ಕ್ರಿಕೆಟ್ ತಂಡಕ್ಕೆ ಕಳೆದ ದಶಕ ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಪ್ರಮುಖ ಆಟಗಾರರಾಗಿದ್ದರು. ಆದರೆ ಇಂಗ್ಲೆಂಡ್ ಸರಣಿಯಲ್ಲಿ ಅವರು ತಂಡದಲ್ಲಿ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರೊಂದಿಗೆ ಸಾಕಷ್ಟು ಪಂದ್ಯ ಆಡಿದ್ದೇನೆ. ಇದೇ ಮೊದಲ ಬಾರಿ ಇಬ್ಬರು ದಿಗ್ಗಜರಿಲ್ಲದೆ ಮೈದಾನಕ್ಕೆ ಇಳಿಯಲಿದ್ದೇನೆ," ಎಂದು ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

IND vs ENG 1st Test: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌

ವಿಚಿತ್ರ ಅನುಭವ ಉಂಟಾಯಿತು

"ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಇದುವರೆಗೂ 50 ಪಂದ್ಯಗಳನ್ನು ಆಡಿದ್ದೇನೆ. ವಿರಾಟ್ ಅಥವಾ ರೋಹಿತ್ ಇಲ್ಲದ ತಂಡದಲ್ಲಿ ಇದೇ ಮೊದಲ ಬಾರಿ ನಾನು ಸ್ಥಾನ ಪಡೆದಿದ್ದೇನೆ. ಅವರಿಲ್ಲದೆ ಡ್ರೆಸ್ಸಿಂಗ್ ರೂಮ್‌ಗೆ ಹೆಜ್ಜೆಯಿಟ್ಟಾಗ ನನಗೆ ಸ್ವಲ್ಪ ವಿಚಿತ್ರವೆನಿಸಿತು. ಆದರೆ ಅವರ ನಿರ್ಣಯವನ್ನು ನಾವು ಗೌರವಿಸಲೇಬೇಕು," ಎಂದು ಬಲಗೈ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ

"ಭಾರತ ತಂಡಕ್ಕೆ ಇಬ್ಬರು ದಿಗ್ಗಜರು (ರೋಹಿತ್, ವಿರಾಟ್) ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಲ್ಲದೆ ತಂಡಕ್ಕೆ ಅವರ ಪ್ರಾಮುಖ್ಯತೆ ಉಳಿಸಿ ಹೋಗಿದ್ದಾರೆ. ಈಗ ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಕಾಲ ಬಂದಿದೆ," ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

IND vs ENG 1st Test: ಲೀಡ್ಸ್‌ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಭಾರತ ಸಂಭಾವ್ಯ ಆಡುವ ಬಳಗ ಹೇಗಿದೆ?

2021-22ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ, ಆಂಗ್ಲರ ನಾಡಿನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಿದ್ದಾಗ, ಹಿಟ್‌ಮ್ಯಾನ್ ರೋಹಿತ್ ಶರ್ಮಾ 368 ರನ್ ಗಳಿಸಿ ತಂಡದ ಪರ ಟಾಪ್ ಸ್ಕೋರರ್ ಆಗಿದ್ದರೆ, ಕೆಎಲ್ ರಾಹುಲ್ 315 ರನ್ ಬಾರಿಸಿದ್ದರು. ಕೊರೊನಾದಿಂದಾಗಿ ಸರಣಿ ಮುಂದೂಡಿಕೆಗೂ ಮುನ್ನ ಭಾರತ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ನಂತರ ನಡೆದ ಸರಣಿಯು 2-2 ರಿಂದ ಸಮಬಲ ಕಂಡಿತ್ತು. ಆದರೆ ನಾಳೆ(ಜೂನ್ 20) ಯಿಂದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಅದರ ತವರು ನೆಲದಲ್ಲೇ ಮಣಿಸಲು ಶುಭಮನ್ ಗಿಲ್ ಸಾರಥ್ಯದ ಟೀಮ್ ಇಂಡಿಯಾದ ಆಟಗಾರರು ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.