IND vs ENG: ʻನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲʼ-ರಿಷಭ್ ಪಂತ್‌ಗೆ ಆಕಾಶ್ ಚೋಪ್ರಾ ಮೆಚ್ಚುಗೆ!
ಇಂಗ್ಲೆಂಡ್ ವಿರುದ್ದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನ ಗಾಯದ ಹೊರತಾಗಿಯೂ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಬ್ಯಾಟಿಂಗ್‌ಗೆ ಇಳಿದಿದ್ದರು ಹಾಗೂ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ರಿಷಭ್ ಪಂತ್ ಅವರ ಹೋರಾಟದ ಮನೋಭಾವವನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ.

ರಿಷಭ್ ಪಂತ್ ಅವರ ಹೋರಾಟದ ಮನೋಭಾವವನ್ನು ಶ್ಲಾಘಿಸಿದ ಆಕಾಶ್ ಚೋಪ್ರಾ.

ನವದೆಹಲಿ: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಕಾದಾಟ ನಡೆಸುತ್ತಿವೆ.ಈ ಪಂದ್ಯದ ಮೊದಲನೇ ದಿನ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh pant) ಗಾಯಕ್ಕೆ ತುತ್ತಾಗಿದ್ದರು ಹಾಗೂ ಬ್ಯಾಟಿಂಗ್ ಮುಂದುವರಿಸದೆ ಮೈದಾನವನ್ನು ತೊರೆದಿದ್ದರು. ಆದರೆ, ಎರಡನೇ ದಿನ ಗಂಭೀರ ಗಾಯದ ಹೊರತಾಗಿಯೂ ಕ್ರೀಸ್‌ಗೆ ಬಂದಿದ್ದ ರಿಷಭ್ ಪಂತ್ ಬ್ಯಾಟಿಂಗ್ ನಡೆಸುವ ಮೂಲಕ ಹೋರಾಟದ ಮನೋಭಾವವನ್ನು ತೋರಿದ್ದರು. ಈ ಹಿನ್ನೆಲೆಯಲ್ಲಿ ರಿಷಭ್ ಪಂತ್ ಅವರನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಆಕಾಶ್ ಚೋಪ್ರಾ (Aakash Chopra) ಶ್ಲಾಘಿಸಿದ್ದಾರೆ.
ಪಂದ್ಯದ ಮೊದಲನೇ ದಿನ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಿಷಭ್ ಪಂತ್ 37 ರನ್‌ಗಳನ್ನು ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಕ್ರಿಸ್ ವೋಕ್ಸ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಆಡಲು ಹೋಗಿ ಚೆಂಡನ್ನು ಬಲಗಾಲಿ ಪಾದಕ್ಕೆ ತಗುಲಿಸಿಕೊಂಡಿದ್ದರು. ಇದರಿಂದ ಅವರ ಬೆರಳಿನ ಕೆಳ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮೊದಲನೇ ದಿನ ಅಂಗಣವನ್ನು ತೊರೆದಿದ್ದರು. ನಂತರ ಎರಡನೇ ದಿನ ರಿಷಭ್ ಪಂತ್ ಆಡುವ ಬಗ್ಗೆ ಅನುಮಾನವಿತ್ತು. ಆದರೆ, ತಂಡದ ಬೇಡಿಕೆಯ ಹಿನ್ನೆಲೆಯಲ್ಲಿ ಗಾಯದ ಹೊರತಾಗಿಯೂ ಬ್ಯಾಟ್ ಮಾಡಿದ್ದ ಪಂತ್, 75 ಎಸೆತಗಳಲ್ಲಿ 54 ರನ್‌ಗಳನ್ನು ತಂಡಕ್ಕೆ ಕೊಡುಗೆ ನೀಡಿದ್ದರು.
IND vs ENG: ಎರಡನೇ ದಿನ ಶುಭಮನ್ ಗಿಲ್ ಎಸಗಿದ ತಪ್ಪನ್ನು ಬಹಿರಂಗಪಡಿಸಿದ ರಿಕಿ ಪಾಂಟಿಂಗ್!
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ರಿಷಭ್ ಪಂತ್ ಅವರ ಕಠಿಣ ಹೋರಾಟವನ್ನು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಹೋಲಿಸಿದ್ದಾರೆ. 2002ರಲ್ಲಿ ಅನಿಲ್ ಕುಂಬ್ಳೆ ಅವರು ಆಂಟಿಗುವಾದಲ್ಲಿ ಚೆಂಡನ್ನು ತಗುಲಿಸಿಕೊಂಡು ರಕ್ತ ಬಂದಿದ್ದರೂ ಬ್ಯಾಟಿಂಗ್ ಮುಂದುವರಿಸಿದ್ದರು ಹಾಗೂ ನಂತರ ಬೌಲ್ ಮಾಡಿದ್ದರು.
"ಮುರಿದ ದವಡೆಯೊಂದಿಗೆ ಅನಿಲ್ ಕುಂಬ್ಳೆ ಬೌಲ್ ಮಾಡಿದ್ದ ಘಟನೆ ನನ್ನ ನೆನಪಿಗೆ ಬಂದಿದೆ. ರಿಷಭ್ ಪಂತ್‌ಗೂ ಕೂಡ ನಡೆಯಲು ಆಗುತ್ತಿರಲಿಲ್ಲ. ಅವರನ್ನು ಲಘು ವಾಹನದಲ್ಲಿ ಕರೆದುಕೊಂಡು ಹೋಗಲಾಗಿತ್ತು. ಆದರೂ ಅವರು ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದರು ಹಾಗೂ ಕುಂಟುತ್ತಾ ಕ್ರೀಸ್‌ಗೆ ಬಂದಿದ್ದರು. ಇದನ್ನೇ ನಾವು ಮುರಿಯಲಾಗದ ಚೈತನ್ಯ ಎಂದು ಕರೆಯುತ್ತೇವೆ," ಎಂದು ಆಕಾಶ್ ಚೋಪ್ರಾ ಗುಣಗಾನ ಮಾಡಿದ್ದಾರೆ.
IND vs ENG: ಭಾರತ ಟೆಸ್ಟ್ ತಂಡದಲ್ಲಿ ರಿಷಭ್ ಪಂತ್ ಸ್ಥಾನಕ್ಕೆ ಸೇರ್ಪಡೆಯಾದ ಎನ್ ಜಗದೀಶನ್!
ಕ್ರೀಡೆಯು ಜೀವನದ ಒಂದು ಭಾಗ
ರಿಷಭ್ ಪಂತ್ ತೆಗೆದುಕೊಂಡ ಇಂಥಾ ನಿರ್ಧಾರಗಳನ್ನು ಎಂದಿಗೂ ಒತ್ತಾಯಿಸಲಾಗುವುದಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. "ಒಬ್ಬ ಆಟಗಾರ ಗಭೀರವಾಗಿ ಗಾಯಗೊಂಡರೆ, ಅಂಥಾ ಆಟಗಾರನನ್ನು ಆಡಲು ಯಾರು ಕೂಡ ಒತ್ತಾಯಿಸುವುದಿಲ್ಲ.ಇದರ ಸಂಪೂರ್ಣ ನಿರ್ಧಾರ ಆಟಗಾರನ ಮೇಲಿರುತ್ತದೆ. ಏಕೆಂದರೆ ಅಂತ್ಯದಲ್ಲಿ ಕ್ರೀಡೆಯು ಜೀವನದ ಒಂದು ಭಾಗವಾಗಿ ಉಳಿಯುತ್ತದೆ. ಆದರೆ, ರಿಷಭ್ ಪಂತ್ ತೋರಿಸಿದ್ದು ಅಸಾಧಾರಣವಾದ ನಡೆಯಾಗಿದೆ. ಬರೀ ನೋವಿನ ವಿರುದ್ಧದ ಹೋರಾಟವನ್ನ, ಭಯದ ವಿರುದ್ಧವೂ ಇತ್ತು," ಎಂದು ಆಕಾಶ್ ಚೋಪ್ರಾ ಗುಣಗಾನ ಮಾಡಿದ್ದಾರೆ.