IND vs ZI: ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಕೀ ಬೌಲರ್ ಆರಿಸಿದ ಟಿಮ್ ಸೌಥಿ!
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಗೆ ಕೀ ಬೌಲರ್ ಯಾರೆಂದು ಕಿವೀಸ್ ವೇಗಿ ಟಿಮ್ ಸೌಥಿ ಆರಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರನ್ನು ಕೈ ಬಿಟ್ಟ ಸೌಥಿ, ಮೊಹಮ್ಮದ್ ಸಿರಾಜ್ ಅವರನ್ನು ಆರಿಸಿದ್ದಾರೆ. ನವೆಂಬರ್ 19 ರಂದು ಟೆಸ್ಟ್ ಸರಣಿ ಆರಂಭವಾಗಲಿದೆ.
ಭಾರತ ತಂಡಕ್ಕೆ ಕೀ ಬೌಲರ್ ಆರಿಸಿದ ಟಿಮ್ ಸೌಥಿ. -
ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ (IND vs NZ) ನವೆಂಬರ್ 19ರಂದು ಆರಂಭವಾಗಲಿದೆ. ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (WTC 2026-27) ಫೈನಲ್ ರೇಸ್ನಲ್ಲಿ ಭಾರತ ತಂಡ ಉಳಿಯಬೇಕೆಂದರೆ, ಈ ಸರಣಿಯನ್ನು ಗೆಲ್ಲಬೇಕಾಗಿದೆ. ಅಂದ ಹಾಗೆ ಭಾರತ ತಂಡಕ್ಕೆ ಕೀ ಬೌಲರ್ ಯಾರೆಂದು ಕಿವೀಸ್ ವೇಗಿ ಟಿಮ್ ಸೌಥಿ (Tim Southee) ತಿಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರನ್ನು ಕಡೆಗಣಿಸಿದ ಅವರು, ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಜಸ್ಪ್ರೀತ್ ಬುಮ್ರಾ ಕೇವಲ ಒಂಬತ್ತು ವಿಕೆಟ್ಗಳನ್ನು ಪಡೆದಿದ್ದಾರೆ. ಈ ಪಂದ್ಯಗಳಲ್ಲಿ ಅವರ ಸ್ಟ್ರೈಕ್ ರೇಟ್ 92.8 ಆಗಿದ್ದು, ಅವರ ವೃತ್ತಿಜೀವನದ ಸರಾಸರಿ ಸ್ಟ್ರೈಕ್ ರೇಟ್ 42.80ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲದೆ, ಬುಮ್ರಾ ಆಡಿರುವ ನ್ಯೂಜಿಲೆಂಡ್ ವಿರುದ್ಧದ ಐದೂ ಟೆಸ್ಟ್ ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ.
“ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ತಂಡ ಬುಮ್ರಾ ಅವರನ್ನು ಅತ್ಯುತ್ತಮವಾಗಿ ಎದುರಿಸಿದೆ ಎಂದು ನಾನು ಭಾವಿಸುತ್ತೇನೆ. ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ಭಾರತ ತಂಡದಲ್ಲಿ ಬುಮ್ರಾ ಆಡಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಹೀಗಾಗಿ, ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಆಟಗಾರರು ಬುಮ್ರಾ ಅವರನ್ನು ಅಸಾಧಾರಣವಾಗಿ ಎದುರಿಸುತ್ತಾರೆ,” ಎಂದು ಟಿಮ್ ಸೌಥಿ ಗುರುವಾರ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಹೇಳಿದ್ದಾರೆ.
ಭಾರತದ ನ್ಯೂಜಿಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ
ಸಿರಾಜ್ ನ್ಯೂಜಿಲೆಂಡ್ ಬ್ಯಾಟರ್ಗಳಿಗೆ ಕಂಟಕವಾಗಬಹುದು
ತವರಿನ ಪರಿಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಲೆನ್ತ್ ಅನ್ನು ಸರಿಯಾಗಿ ಕಾಯ್ದುಕೊಂಡರೆ, ನ್ಯೂಜಿಲೆಂಡ್ ಬ್ಯಾಟರ್ಗಳಿಗೆ ತೊಂದರೆ ನೀಡಬಲ್ಲರು ಎಂದು ಸೌಥಿ ಅಭಿಪ್ರಾಯಪಟ್ಟಿದ್ದಾರೆ. 2020-21ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಿರಾಜ್, ಇದುವರೆಗೆ 48 ಪಂದ್ಯಗಳಲ್ಲಿ 144 ವಿಕೆಟ್ಗಳನ್ನು ಕಬಳಿಸಿದ್ದಾರೆ.
“ನಾನು ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಮತ್ತು ಅವರು ಬೌಲಿಂಗ್ ಮಾಡುವ ರೀತಿಯ ದೊಡ್ಡ ಅಭಿಮಾನಿ. ನ್ಯೂಜಿಲೆಂಡ್ನಲ್ಲಿ ಅವರು ತಮ್ಮ ಲೆನ್ತ್ ಅನ್ನು ಸರಿಯಾಗಿ ಕಾಯ್ದುಕೊಂಡರೆ, ಎದುರಾಳಿ ತಂಡಕ್ಕೆ ದೊಡ್ಡ ಸವಾಲಾಗಬಲ್ಲರು,” ಎಂದು ಸೌಥಿ ಹೇಳಿದ್ದಾರೆ.
“ಅವರು ಮೈದಾನಕ್ಕೆ ತರುವ ಉತ್ಸಾಹ, ಇಡೀ ದಿನ ಓಡಿ ಬಂದು ಬೌಲ್ ಮಾಡುವ ರೀತಿ ಹಾಗೂ ಅವರ ಬೌಲಿಂಗ್ ಶೈಲಿಯನ್ನು ಗಮನಿಸಿದರೆ, ನ್ಯೂಜಿಲೆಂಡ್ನ ಪರಿಸ್ಥಿತಿಗಳಲ್ಲಿ ಅವರು ಯಶಸ್ಸು ಸಾಧಿಸಲು ಯಾವುದೇ ಕಾರಣಕ್ಕೂ ಅಡ್ಡಿಯಿಲ್ಲ. ವಿಶೇಷವಾಗಿ ಅವರಲ್ಲಿ ಮೆಚ್ಚುವಂತಹ ಹಲವು ಗುಣಗಳಿವೆ,” ಎಂದು ಸೌಥಿ ತಿಳಿಸಿದ್ದಾರೆ.
IND vs NZ: ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ಮೊಹಮ್ಮದ್ ಶಮಿಗೆ ಸ್ಥಾನವಿಲ್ಲ!
ನವೆಂಬರ್ 19ರಿಂದ ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 19ರಂದು ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯ ನವೆಂಬರ್ 27ರಿಂದ ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ. 2020ರ ಫೆಬ್ರವರಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ, ಆತಿಥೇಯ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತ್ತು.
ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ನ್ಯೂಜಿಲೆಂಡ್ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ಕ್ರೈಸ್ಟ್ಚರ್ಚ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಏಳು ವಿಕೆಟ್ಗಳ ಜಯ ದಾಖಲಿಸಿತ್ತು. ಈ ಬಾರಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಹಿಂದಿನ ಸೋಲಿಗೆ ಪ್ರತೀಕಾರ ತೀರಿಸಿಕೊಂಡು ಸರಣಿ ಗೆಲ್ಲುವುದು ಭಾರತ ತಂಡದ ಗುರಿಯಾಗಿದೆ. ಬುಮ್ರಾ ಮತ್ತು ಸಿರಾಜ್ ಅವರ ಬೌಲಿಂಗ್ ಪ್ರದರ್ಶನ ಸರಣಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.