IND vs NZ: ನಾಲ್ಕನೇ ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘಿಸಿದ ಗುರ್ನೂರ್ ಬ್ರಾರ್ಗೆ ಐಸಿಸಿ ಎಚ್ಚರಿಕೆ!
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಿಮ್ ಸೈಫರ್ಟ್ ಔಟಾದ ಬಳಿಕ ಆಕ್ರಮಣಕಾರಿಯಾಗಿ ಸಂಭ್ರಮಿಸಿದ ಟೀಮ್ ಇಂಡಿಯಾ ವೇಗಿ ಗುರ್ನೂರ್ ಬ್ರಾರ್ಗೆ ಐಸಿಸಿ ಎಚ್ಚರಿಕೆ ನೀಡಿದೆ. ಅಲ್ಲದೆ, ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆ ಮಾಡಿದೆ.
ಗುರ್ನೂರ್ ಬ್ರಾರ್ಗೆ ವಾರ್ನಿಂಗ್ ಕೊಟ್ಟ ಐಸಿಸಿ. -
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ (IND vs NZ) ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಟೀಮ್ ಇಂಡಿಯಾದ ವೇಗಿ ಗುರ್ನೂರ್ ಬ್ರಾರ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧಿಕೃತ ಎಚ್ಚರಿಕೆ ನೀಡಿದೆ. ಶುಕ್ರವಾರ ಮೌಂಟ್ ಮೌಂಗನುಯಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಮೊದಲ ಹಂತದ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5ರ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟ್ಸ್ಮನ್ ಔಟಾದ ಸಂದರ್ಭದಲ್ಲಿ ಅವರನ್ನು ಕೆಣಕುವ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆ ನೀಡುವಂತೆ ಪ್ರಚೋದಿಸುವ ರೀತಿಯಲ್ಲಿ ಸನ್ನೆ, ಮಾತು ಅಥವಾ ವರ್ತನೆ ತೋರುವುದು ನಿಯಮ ಉಲ್ಲಂಘನೆಯಾಗಿದೆ.
ಇದರ ಜೊತೆಗೆ ಗುರ್ನೂರ್ ಬ್ರಾರ್ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆ ಮಾಡಲಾಗಿದೆ. ಕಳೆದ 24 ತಿಂಗಳ ಅವಧಿಯಲ್ಲಿ ಇದು ಅವರ ಎರಡನೇ ನಿಯಮ ಉಲ್ಲಂಘನೆಯಾಗಿದ್ದು, ಒಟ್ಟು ಡಿಮೆರಿಟ್ ಪಾಯಿಂಟ್ಗಳ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
IND vs NZ: ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ದೊಡ್ಡ ಗಣೇಶ್!
ನ್ಯೂಜಿಲೆಂಡ್ನ ಬ್ಯಾಟರ್ ಟಿಮ್ ಸೈಫರ್ಟ್ 12ನೇ ಓವರ್ನ ಅಂತ್ಯದಲ್ಲಿ ಔಟಾದ ಬಳಿಕ ಬ್ರಾರ್ ಆಕ್ರಮಣಕಾರಿ ರೀತಿಯಲ್ಲಿ ಸಂಭ್ರಮಿಸಿದ್ದರು. ಈ ವರ್ತನೆಯು ಬ್ಯಾಟರ್ಗೆ ಅವಮಾನ ಮಾಡುವಂತಿದ್ದು, ಪ್ರತಿ ಆಕ್ರಮಣಕಾರಿ ಪ್ರತಿಕ್ರಿಯೆಗೆ ಪ್ರಚೋದನೆ ನೀಡುವ ಸಾಧ್ಯತೆಯಿತ್ತು ಎಂದು ಐಸಿಸಿ ತಿಳಿಸಿದೆ.
ಬ್ರಾರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಐಸಿಸಿ ಮ್ಯಾಚ್ ರೆಫರಿಗಳ ಎಮಿರೇಟ್ಸ್ ಎಲೈಟ್ ಪ್ಯಾನೆಲ್ನ ರಂಜನ್ ಮದುಗಲ್ಲೆ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರಣೆ ನಡೆಸುವ ಅಗತ್ಯ ಎದುರಾಗಲಿಲ್ಲ. ಆನ್ಫೀಲ್ಡ್ ಅಂಪೈರ್ಗಳಾದ ಕ್ರಿಸ್ ಬ್ರೌನ್ ಮತ್ತು ಕುಮಾರ್ ಧರ್ಮಸೇನ, ಮೂರನೇ ಅಂಪೈರ್ ಪಾಲ್ ರೀಫೆಲ್ ಹಾಗೂ ನಾಲ್ಕನೇ ಅಂಪೈರ್ ವೇಯ್ನ್ ನೈಟ್ಸ್ ಅವರು ಬ್ರಾರ್ ವಿರುದ್ಧ ಆರೋಪ ಹೊರಿಸಿದ್ದರು.
IND vs NZ: 5ನೇ ಒಡಿಐ ಗೆದ್ದರೂ ಭಾರತ ತಂಡದ ನಿರ್ಧಾರಗಳನ್ನು ಟೀಕಿಸಿದ ಮುರಳಿ ಕಾರ್ತಿಕ್!
ಐಸಿಸಿ ನಿಯಮದ ಪ್ರಕಾರ, ಮೊದಲ ಹಂತದ ಉಲ್ಲಂಘನೆಗೆ ಅಧಿಕೃತ ಎಚ್ಚರಿಕೆಯಿಂದ ಹಿಡಿದು ಆಟಗಾರನ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಬಹುದು. ಇದರ ಜೊತೆಗೆ ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್ಗಳನ್ನು ನೀಡುವ ಅವಕಾಶವೂ ಇದೆ.