ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ವಿರಾಟ್‌ ಕೊಹ್ಲಿ ಹೋರಾಟದ ಶತಕ ವ್ಯರ್ಥ, ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್‌!

IND vs NZ 3rd Match Highlights: ವಿರಾಟ್‌ ಕೊಹ್ಲಿಯ ಹೋರಾಟದ ಶತಕದ ಹೊರತಾಗಿಯೂ ಭಾರತ ತಂಡ, ಮೂರನೇ ಏಕದಿನ ಪಂದ್ಯವನ್ನು ನ್ಯೂಜಿಲೆಂಡ್‌ ವಿರುದ್ಧ 41 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಒಡಿಐ ಸರಣಿಯನ್ನು ಕಿವೀಸ್‌ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ವಿರಾಟ್‌ ಕೊಹ್ಲಿ ಹೋರಾಟ ವ್ಯರ್ಥ, ಕಿವೀಸ್‌ಗೆ ಏಕದಿನ ಸರಣಿ!

ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡಕ್ಕೆ 41 ರನ್‌ ಜಯ. -

Profile
Ramesh Kote Jan 18, 2026 9:41 PM

ಇಂದೋರ್‌: ವಿರಾಟ್‌ ಕೊಹ್ಲಿಯ (Virat Kohli) ಹೋರಾಟದ ಶತಕದ ಹೊರತಾಗಿಯೂ ಭಾರತ ತಂಡ, ಮೂರನೇ ಹಾಗೂ ಏಕದಿನ ಸರಣಿಯ (IND vs NZ) ನಿರ್ಣಾಯಕ ಪಂದ್ಯದಲ್ಲಿ 41 ರನ್‌ಗಳಿಂದ ನ್ಯೂಜಿಲೆಂಡ್‌ ವಿರುದ್ಧ ಸೋಲು ಅನುಭವಿಸಿತು. ಆ ಮೂಲಕ ಏಕದಿನ ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಟೀಮ್‌ ಇಂಡಿಯಾ ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತು. ಇನ್ನು ಡ್ಯಾರಿಲ್‌ ಮಿಚೆಲ್‌ (Daryl Mitchell) ಹಾಗೂ ಗ್ಲೆನ್‌ ಫಿಲಿಪ್ಸ್‌ ಶತಕಗಳ ಬಲದಿಂದ ಕಿವೀಸ್‌ ತಂಡ, ಮೂರನೇ ಪಂದ್ಯ ಗೆದ್ದು ಏಕದಿನ ಸರಣಿಯನ್ನು ಇದೇ ಮೊದಲ ಬಾರಿ ಭಾರತದಲ್ಲಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಶತಕ ಸಿಡಿಸಿದ ಡ್ಯಾರಿಲ್‌ ಮಿಚೆಲ್‌ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಭಾನುವಾರ ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 338 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ವಿರಾಟ್‌ ಕೊಹ್ಲಿ ಶತಕ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಮತ್ತು ಹರ್ಷಿತ್‌ ರಾಣಾ ಅರ್ಧಶತಕಗಳ ಹೊರತಾಗಿಯೂ 46 ಓವರ್‌ಗಳಿಗೆ 296 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಸತತ ಎರಡು ಪಂದ್ಯಗಳನ್ನು ಸೋತು ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ, ಏಕದಿನ ಸರಣಿಯನ್ನು ಕಳೆದುಕೊಂಡಿತು.

IND vs NZ: ಭಾರತದ ವಿರುದ್ಧ ಭರ್ಜರಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಡ್ಯಾರಿಲ್ ಮಿಚೆಲ್!

ವಿರಾಟ್‌ ಕೊಹ್ಲಿ ಹೋರಾಟದ ಶತಕ ವ್ಯರ್ಥ

ಭಾರತ ತಂಡದ ಚೇಸಿಂಗ್‌ನಲ್ಲಿ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ, ಕೊನೆಯವರೆಗೂ ಹೋರಾಟ ನಡೆಸಿದರು. ಅವರು ಆಡಿದ 108 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 124 ರನ್‌ಗಳನ್ನು ಗಳಿಸಿದರು. ಆ ಮೂಲಕ 54ನೇ ಒಡಿಐ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ, ನಿರ್ಣಾಯಕ ಅರ್ಧಶತಕಗಳನ್ನು ಗಳಿಸಿದ ನಿತೀಶ್‌ ಕುಮಾರ್‌ ರೆಡ್ಡಿ (53 ರನ್‌) ಅವರು ಜೊತೆ 88 ರನ್‌ ಹಾಗೂ ಹರ್ಷಿತ್‌ ರಾಣಾ (52 ರನ್‌) ಅವರ ಜೊತೆ 99 ರನ್‌ಗಳ ಜೊತೆಯಾಟವನ್ನು ಆಡಿದರು. ಇದರೊಂದಿಗೆ ಭಾರತ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, ಕ್ರಿಸಿಯನ್‌ ಕ್ಲಾರ್ಕ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಕೊಟ್ಟರು. ಆ ಮೂಲಕ ಭಾರತ ತಂಡದ ಗೆಲ್ಲುವ ಕನಸು ಭಗ್ನವಾಯಿತು.



ನ್ಯೂಜಿಲೆಂಡ್‌ ತಂಡದ ಪರ ಝ್ಯಾಕರಿ ಫೌಲ್ಕ್ಸ್‌ ಹಾಗೂ ಕ್ರಿಸ್ಟಿಯನ್‌ ಕ್ಲಾರ್ಕ್‌ ಅವರು ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರುವ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

337 ರನ್‌ ಕಲೆ ಹಾಕಿದ ನ್ಯೂಜಿಲೆಂಡ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರ ನಿರ್ಧಾರವನ್ನು ಆರಂಭದಲ್ಲಿ ಹರ್ಷಿತ್‌ ರಾಣಾ ಹಾಗೂ ಅರ್ಷದೀಪ್‌ ಸಿಂಗ್‌ ಸಮರ್ಥಿಸಿಕೊಂಡಿದ್ದರು. ಆದರೆ, ಡ್ಯಾರಿಲ್‌ ಮಿಚೆಲ್‌ ಹಾಗೂ ಗ್ಲೆನ್‌ ಫಿಲಿಪ್ಸ್‌ ಅವರು ಶತಕಗಳು ಪಂದ್ಯದ ದಿಕ್ಕನ್ನು ಬದಲಿಸಿತು. ನ್ಯೂಜಿಲೆಂಡ್‌ ತಂಡ ತನ್ನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 337 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 338 ರನ್‌ಗಳ ಗುರಿಯನ್ನು ನೀಡಿತು.



ಆರಂಭಿಕ ಆಘಾತ ಅನುಭವಿಸಿದ್ದ ಕಿವೀಸ್‌

ನ್ಯೂಜಿಲೆಂಡ್‌ ಪರ ಇನಿಂಗ್ಸ್‌ ಆರಂಭಿಸಿದ ಡೆವೋನ್‌ ಕಾನ್ವೆ ಹಾಗೂ ಹೆನ್ರಿ ನಿಕೋಲ್ಸ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು. ಮೂರನೇ ವಿಕೆಟ್‌ಗೆ ವಿಲ್‌ ಯಂಗ್‌ ಹಾಗೂ ಡ್ಯಾರಿಲೆ ಮಿಚೆಲ್‌ ಮೂರನೇ ವಿಕೆಟ್‌ಗೆ 53 ರನ್‌ಗಳನ್ನು ಕಲೆ ಹಾಕಿದರು. 41 ಎಸೆತಗಳಲ್ಲಿ 30 ರನ್‌ಗಳನ್ನು ಕಲೆ ಹಾಕಿ ಉತ್ತಮ ಆರಂಭ ಪಡೆದಿದ್ದರು.ಆದರೆ, ಅವರನ್ನು ಮುಂದುವರಿಯಲು ಹರ್ಷಿತ್‌ ರಾಣಾ ಬಿಡಲಿಲ್ಲ.



ಡ್ಯಾರಿಲ್‌ ಮಿಚೆಲ್‌-ಗ್ಲೆನ್‌ ಫಿಲಿಪ್ಸ್‌ ಶತಕ

ತಂಡದ ಮೊತ್ತ 58ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ವೇಳೆ ಜೊತೆಯಾದ ಡ್ಯಾರಿಲ್‌ ಮಿಚೆಲ್‌ ಹಾಗೂ ಗ್ಲೆನ್‌ ಫಿಲಿಪ್ಸ್‌ ದೀರ್ಘಾವಧಿ ಬ್ಯಾಟ್‌ ಮಾಡಿದ್ದರು. ಇವರು ನಾಲ್ಕನೇ ವಿಕೆಟ್‌ಗೆ 186 ಎಸೆತಗಳಲ್ಲಿ 219 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತವನ್ನು 277 ರನ್‌ಗಳಿಗೆ ಏರಿಸಿದರು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಗ್ಲೆನ್‌ ಫಿಲಿಪ್ಸ್‌ 88 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 106 ರನ್‌ ಗಳಿಸಿ ಶತಕವನ್ನು ಪೂರ್ಣಗೊಳಿಸಿದರು.



ಇನ್ನು ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಡ್ಯಾರಿಲ್‌ ಮಿಚೆಲ್‌ ಸತತ ಎರಡನೇ ಶತಕವನ್ನು ಬಾರಿಸಿದರು. ಅವರು ಆಡಿದ 131 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 137 ರನ್‌ಗಳನ್ನು ಕಲೆ ಹಾಕಿದರು. ಇದರೊಂದಿಗೆ ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ 9ನೇ ಶತಕವನ್ನು ಪೂರ್ಣಗೊಳಿಸಿದರು.

ಭಾರತದ ಪರ ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು. ಮೊಹಮ್ಮದ್‌ ಸಿರಾಜ್‌ ಹಾಗೂ ಕುಲ್ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.