IND vs NZ: 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಗೆಲ್ಲುವ ತಂಡ ಯಾವುದು? ಲೆಕ್ಕಾಚಾರ ಏನು ಹೇಳುತ್ತೆ?
India vs New Zealand Match prediction: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪರಸ್ಪರ ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಯಾವುದೆಂದು ಇಲ್ಲಿ ವಿವರಿಸಲಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್ ಫೈನಲ್. -
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 8 ರಂದು ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಫೈನಲ್‌ನಲ್ಲಿ ಕಾದಾಟ ನಡೆಸಲು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು (IND vs NZ) ಸಜ್ಜಾಗುತ್ತಿವೆ. ನಾಲ್ಕು ಬಾರಿ ಚುಟುಕು ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ಬರೆದಿದೆ. ಆದರೆ, ನ್ಯೂಜಿಲೆಂಡ್ ತಂಡ ಇನ್ನೂ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದೆ. ಹಾಗಾಗಿ ಉಭಯ ತಂಡಗಳ ನಡುವಣ ಈ ಪಂದ್ಯ ಹೈವೋಲ್ಟೇಜ್‌ನಿಂದ ಕೂಡಿರುತ್ತದೆ. 2007 ಮತ್ತು 2024ರಲ್ಲಿ ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ, ಇದೀಗ ಮೂರನೇ ಚುಟುಕು ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ನೀಡಿದ್ದ 254 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಇಂಗ್ಲೆಂಡ್, ಜಾಕೋಬ್ ಬೆಥೆಲ್ ಅವರ ಶತಕದ ಹೊರತಾಗಿಯೂ ಡೆತ್ ಓವರ್‌ಗಳಲ್ಲಿ ರನ್ ಗಳಿಸದ ಕಾರಣ ಸೋಲು ಅನುಭವಿಸಿತ್ತು. ಭಾರತ ತಂಡದ ಪರ ಸಂಜು ಸ್ಯಾಮ್ಸನ್ ಅವರು 89 ರನ್ ಗಳಿಸಿ ಭಾರತ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
T20 World Cup 2026: ಭಾರತದ ಪಂದ್ಯಗಳನ್ನು ನೋಡಲ್ಲ ಎಂದ ಮೊಹಮ್ಮದ್ ರಿಝ್ವಾನ್!
ಇನ್ನು ಎದುರಾಳಿ ನ್ಯೂಜಿಲೆಂಡ್ ತಂಡ ಕೂಡ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಾ ಬಂದಿದೆ. ಕಳೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಿವೀಸ್ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ಹರಿಣ ಪಡೆ 170 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್, ಫಿನ್ ಆಲೆನ್ (100*) ಅವರ ಶತಕ ಹಾಗೂ ಟಿಮ್ ಸೀಫರ್ಟ್ ಅವರ ಅರ್ಧಶತಕದ ಬಲದಿಂದ 13ನೇ ಓವರ್‌ನಲ್ಲಿಯೇ ಗೆದ್ದು ಬೀಗಿತ್ತು.
2026ರ ಟಿ20 ವಿಶ್ವಕಪ್ ಫೈನಲ್ ಗೆಲ್ಲುವ ತಂಡ ಯಾವುದು?
ಪ್ರಸ್ತುತ ಟೂರ್ನಿಯಲ್ಲಿನ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಪ್ರದರ್ಶನವನ್ನು ಗಮನಿಸಿದರೆ, ಯಾವ ತಂಡ ಭಾನುವಾರ ಗೆಲ್ಲಲಿದೆ ಎಂದು ಭವಿಷ್ಯ ನುಡಿಯುವುದು ಕಷ್ಟ. ಏಕೆಂದರೆ ಎರಡೂ ತಂಡಗಳ ಬಲಾ-ಬಲ ಸಮಬಲದಿಂದ ಕೂಡಿದೆ. ಹಾಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಗೆಲುವು ಶೇ 50-50 ಎಂದು ಅಂದಾಜಿಸಬಹುದು. ಭಾರತ ತಂಡ, ತವರು ಅಭಿಮಾನಿಗಳ ಬೆಂಬಲದ ಮೂಲಕ ಫೈನಲ್‌ಗೆ ಇಳಿದರೆ, ಕಿವೀಸ್, ಭಾರತದ ವಿರುದ್ಧ ಐಸಿಸಿ ಟೂರ್ನಿಗಳಲ್ಲಿನ ತಮ್ಮ ಹಿಂದಿನ ಅತ್ಯುತ್ತಮ ಅಂಕಿಅಂಶಗಳ ಬಲದಿಂದ ಕಣಕ್ಕೆ ಇಳಿಯಲಿದೆ.
ʻನಿಮ್ಮ ರೀತಿ ಫೀಲ್ಡಿಂಗ್‌ನಿಂದ ರಾಷ್ಟ್ರೀಯ ತಂಡಕ್ಕೆ ಆಡಿಲ್ಲʼ: ಮೊಹಮ್ಮದ್ ಕೈಫ್‌ಗೆ ಮೊಹಮ್ಮದ್ ಆಮಿರ್ ತಿರುಗೇಟು!
ಭಾರತದ ಹಾಗೂ ನ್ಯೂಜಿಲೆಂಡ್ ತಂಡಗಳು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ಮೂರು ಬಾರಿ ಕಾದಾಟ ನಡೆಸಿವೆ. ಇದರಲ್ಲಿ ಕಿವೀಸ್ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವನ್ನು ಕಿವೀಸ್ ಮಣಿಸಿದೆ. 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿಯೂ ಭಾರತವನ್ನು ಮಣಿಸಿದೆ. ಅಂದ ಹಾಗೆ ಕಿವೀಸ್ ಎದುರು ದ್ವಿಪಕ್ಷೀಯ ಟಿ20ಐ ಸರಣಿಗಳಲ್ಲಿ ಭಾರತ ತವರಿನಲ್ಲಿ ಉತ್ತಮ ದಾಖಲೆ ಹೊಂದಿದೆ. ಆದರೂ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಎದುರು ಭಾರತ ತಂಡದ ಮಾನಸಿಕ ಅಂಶಗಳು ಪ್ರಭಾವ ಬೀರಬಹುದು.
IND vs NZ: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ತರಬೇಕೆಂದ ಮೊಹಮ್ಮದ್ ಕೈಫ್!
ಪಂದ್ಯದ ವಿವರ
ಭಾರತ vs ನ್ಯೂಜಿಲೆಂಡ್
2026ರ ಐಸಿಸಿ ಟಿ20 ವಿಶ್ವಕಪ್ ಫೈನಲ್
ದಿನಾಂಕ: ಮಾರ್ಚ್ 8, 2026
ಸಮಯ: ಸಂಜೆ 07 : 00ಕ್ಕೆ
ಸ್ಥಳ: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ, ಅಹಮದಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೊ ಸಿನಿಮಾ ಹಾಟ್ ಸ್ಟಾರ್