ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿಯೂ ದೇವದತ್ ಪಡಿಕ್ಕಲ್‌ಗೆ 3ನೇ ಕ್ರಮಾಂಕ ಬೀಡಬೇಕೆಂದ ಆರ್ ಅಶ್ವಿನ್!
ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಅವರನ್ನು ಆಡಿಸಬೇಕೆಂದು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಆಗ್ರಹಿಸಿದ್ದಾರೆ. ಸಾಯಿ ಸುದರ್ಶನ್ ಬದಲು ಪಡಿಕ್ಕಲ್‌ಗೆ ಈ ಸ್ಥಾನ ನೀಡುವುದು ಉತ್ತಮ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದೇವದತ್ ಪಡಿಕ್ಕಲ್‌ಗೆ ಆರ್ ಅಶ್ವಿನ್ ಬೆಂಬಲ. -
ನವದೆಹಲಿ: ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SL) ಶತಕ ಸೇರಿದಂತೆ 211 ರನ್‌ಗಳನ್ನು ಕಲೆ ಹಾಕಿದ ಭಾರತ ತಂಡದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal) ಅವರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕೊಲಂಬೊ ಟೆಸ್ಟ್ ಪಂದ್ಯದಲ್ಲಿಯೂ ಪಡಿಕ್ಕಲ್ ಉತ್ತಮವಾಗಿ ಆಡಿದರೆ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಕರ್ನಾಟಕ ಆಟಗಾರ ಮೂರನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ ಎಂದು ಹೇಳಿದ್ದಾರೆ.
ಚೇತೇಶ್ವರ್ ಪೂಜಾರ ಅವರನ್ನು ಭಾರತ ತಂಡದಿಂದ ಕೈ ಬಿಟ್ಟ ಬಳಿಕ ಮೂರನೇ ಕ್ರಮಾಂಕದಲ್ಲಿ ಸಾಕಷ್ಟು ಬ್ಯಾಟ್ಸ್‌ಮನ್‌ಗಳನ್ನು ಪ್ರಯತ್ನಿಸಲಾಗಿತ್ತು. ಶುಭಮನ್ ಗಿಲ್, ಸಾಯಿ ಸುದರ್ಶನ್, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ ಅವರನ್ನು ಪ್ರಯತ್ನಿಸಲಾಗಿದೆ. ಆದರೆ, ಇದೀಗ ಸಾಯಿ ಸುದರ್ಶನ್ ಅವರು ತಮ್ಮ ಯೋಗ್ಯ ಪ್ರದರ್ಶನದ ಮೂಲಕ ಸದ್ಯ ಭಾರತ ತಂಡದ ಮೂರನೇ ಕ್ರಮಾಂಕದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಆದರೆ, ಶ್ರೀಲಂಕಾ ಸರಣಿಗೂ ಮುನ್ನ ಗಾಯಕ್ಕೆ ತುತ್ತಾಗಿರುವ ಅವರು ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದರು. ಹಾಗಾಗಿ ಅವರ ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಆಡುತ್ತಿದ್ದಾರೆ.
ಅದರಂತೆ ಸಿಕ್ಕ ಅವಕಾಶದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್, ಗಾಲೆ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಿಂದ ಕ್ರಮವಾಗಿ 167 ರನ್ ಹಾಗೂ 44 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಗ್ಗೆ ಇದೀಗ ಸ್ಪಿನ್ ದಂತಕತೆ ಆರ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರಕಾರ, ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿಯೂ ಪಡಿಕ್ಕಲ್ ಅವರೇ ಮೂರನೇ ಕ್ರಮಾಂಕದಲ್ಲಿ ಆಡಬೇಕೆಂದು ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ- ಸಚಿನ್ ತೆಂಡೂಲ್ಕರ್ ನಡುವೆ ಉತ್ತಮ ವಿದೇಶಿ ಟೆಸ್ಟ್ ಆಟಗಾರನನ್ನು ಆರಿಸಿದ ಎಬಿಡಿ!
"ಡಬ್ಯುಎಸಿಎ ಮೈದಾನದಲ್ಲಿ ನಾವು ಅಭ್ಯಾಸ ಪಂದ್ಯಗಳನ್ನು (2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ) ಆಡಿದ್ದೆವು. ಪಡಿಕ್ಕಲ್ ನೋಡಲು ಅದ್ಭುತವಾಗಿ ಕಾಣುತ್ತಿದ್ದರು ಹಾಗೂ ಆರಾಮಾದಾಯಕವಾಗಿದ್ದರು. ವೇಗಿಗಳ ಎದುರು ಅವರು ಬ್ಯಾಟ್ ಮಾಡುವುದನ್ನೂ ನೋಡಿದಾಗ, ಅವರಿಗೆ ವೇಗದ ಬೌಲರ್‌ಗಳ ಎದುರು ಹೆಚ್ಚಿನ ಸಮಯವಿದೆ ಎಂದು ಕಾಣುತ್ತಿತ್ತು. ಇದೀಗ ಅವರು ಎರಡನೇ ಟೆಸ್ಟ್‌ನಲ್ಲಿ ಸ್ಕೋರ್ ಮಾಡಿದರೆ, ನ್ಯೂಜಿಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಅವರೇ ಬ್ಯಾಟ್ ಮಾಡಬಹುದು," ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್ ಅಶ್ವಿನ್ ತಿಳಿಸಿದ್ದಾರೆ.
ರಹಾನೆಗೆ ಹೋಲಿಸಿದ ಅಶ್ವಿನ್
ದೇವದತ್ ಪಡಿಕ್ಕಲ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದ ಮಾಜಿ ಭಾರತ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಅವರ ಫೀಲ್ಡಿಂಗ್ ಸಾಮರ್ಥ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸ್ಲಿಪ್‌ನಲ್ಲಿ ಕ್ಯಾಚ್ ಪಡೆಯುವ ಅವರ ಸಾಮರ್ಥ್ಯವನ್ನು ಮಾಜಿ ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ- ಸಚಿನ್ ತೆಂಡೂಲ್ಕರ್ ನಡುವೆ ಉತ್ತಮ ವಿದೇಶಿ ಟೆಸ್ಟ್ ಆಟಗಾರನನ್ನು ಆರಿಸಿದ ಎಬಿಡಿ!
“ದೇವದತ್ ಬ್ಯಾಟಿಂಗ್ ನಡೆಸಿದ ರೀತಿ, ಅದರಲ್ಲೂ ಬ್ಯಾಕ್‌ಫುಟ್‌ನಲ್ಲಿ ಆಡಿದ ರೀತಿ ಹಾಗೂ ತಮ್ಮ ಫುಟ್‌ವರ್ಕ್ ಬಳಸಿಕೊಂಡು ಬ್ಯಾಕ್‌ಫುಟ್‌ನಿಂದ ಫ್ರಂಟ್‌ಫುಟ್‌ಗೆ ಶಫಲ್ ಮಾಡಿದ ರೀತಿ ತುಂಬಾ ಚೆನ್ನಾಗಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಆಗುವ ಪ್ರಯೋಜನವೇನು ಎಂಬುದನ್ನು ಅವರು ತೋರಿಸಿದ್ದಾರೆ. ಅಲ್ಲಿಯೇ ತಮ್ಮ ಕೌಶಲಗಳನ್ನು ಬೆಳೆಸಿಕೊಂಡು, ಇದೀಗ ಟೆಸ್ಟ್‌ನಲ್ಲೂ ಅದನ್ನು ಪ್ರದರ್ಶಿಸಿದ್ದಾರೆ,” ಎಂದು ಅಶ್ವಿನ್ ಹೇಳಿದ್ದಾರೆ.
“ಅವರು ಉತ್ತಮ ಸ್ಲಿಪ್ ಫೀಲ್ಡರ್ ಕೂಡ ಹೌದು. ಸ್ಪಿನ್ನರ್‌ಗಳು ಬೌಲ್ ಮಾಡುವಾಗಲೂ ಅವರು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವ ಅವಕಾಶ ಪಡೆಯುತ್ತಾರೆ ಎಂದು ನಾನು ಆಶಿಸುತ್ತೇನೆ. ಸ್ಪಿನ್ನರ್‌ಗಳಿಗಾಗಿ ಸ್ಲಿಪ್‌ನಲ್ಲಿ ಅವರು ದೀರ್ಘಕಾಲದ ಪರಿಹಾರವಾಗಬಲ್ಲರು. ಅವರಲ್ಲಿ ಅಜಿಂಕ್ಯ ರಹಾನೆ ಅವರಂತಹ ಮನೋಧರ್ಮವೂ ಇದೆ. ದೇವದತ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನಾನು ನಿಜವಾಗಿಯೂ ಆಶಿಸುತ್ತೇನೆ. ಅವರು ಅತ್ಯಂತ ಉತ್ತಮ ಆಟಗಾರ,” ಎಂದು ಅಶ್ವಿನ್ ತಿಳಿಸಿದ್ದಾರೆ.