IND vs SL: ʻಭಾರತ ತಂಡವನ್ನು ಶ್ರೀಲಂಕಾ ಮಣಿಸಲಿದೆʼ-ಶುಭಮನ್ ಗಿಲ್ ಬಳಗಕ್ಕೆ ಧನಂಜಯ್ ಡಿ ಸಿಲ್ವಾ ಎಚ್ಚರಿಕೆ!
ಆಗಸ್ಟ್ 15 ರಂದು ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಲು ಶ್ರೀಲಂಕಾ ಎದುರು ನೋಡುತ್ತಿದೆ. ಮೊದಲನೇ ಪಂದ್ಯಕ್ಕೂ ಮುನ್ನ ಮಾತನಾಡಿದ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ, ಆತಿಥೇಯರ ಪರ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಧನಂಜಯ್ ಡಿ ಸಿಲ್ವಾ. -
ಗಾಲೆ: ಭಾರತ ಹಾಗೂ ಶ್ರೀಲಂಕಾ ತಂಡಗಳು ಆಗಸ್ಟ್ 15 ರಂದು ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲನೇ ಟೆಸ್ಟ್‌ಗೆ (IND vs SL) ಸಜ್ಜಾಗುತ್ತಿವೆ. ಮೊದಲನೇ ಪಂದ್ಯದಲ್ಲಿ ಭಾರತ ತಂಡಕ್ಕೆ ನಮ್ಮ ತಂಡದ ಬಲವಾದ ಪೈಪೋಟಿ ನೀಡಲಿದೆ ಎಂಬ ವಿಶ್ವಾಸವನ್ನು ಶ್ರೀಲಂಕಾ ನಾಯಕ ಧನಂಜಯ್ ಡಿ ಸಿಲ್ವಾ ( Dhananjaya de Silva) ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಮೂಲಕ ಭಾರತ ತಂಡದ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಭಿಯಾನವನ್ನು ಮುಂದುವರಿಸಲಿದೆ. ಕುಸಾಲ್ ಮೆಂಡಿಸ್ ಹಾಗೂ ಪಥುಮ್ ನಿಸಾಂಕ ಅವರ ಅನುಪಸ್ಥಿತಿಯ ಹೊರತಾಗಿಯೂ ಭಾರತ ತಂಡದ ವಿರುದ್ಧ ಉತ್ತಮ ಪ್ರದರ್ಶನವನ್ನು ತೋರಲಿದ್ದೇವೆಂಬ ವಿಶ್ವಾಸವನ್ನು ಡಿ ಸಿಲ್ವಾ ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಧನಂಜಯ್ ಡಿ ಸಿಲ್ವಾ, "ಭಾರತ ತಂಡ ತನ್ನ ತವರಿನಲ್ಲಿ ಎರಡು ಸರಣಿಗಳನ್ನು (ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ) ಸೋತಿದೆ. ಟರ್ನಿಂಗ್ ವಿಕೆಟ್‌ನಲ್ಲಿ ಆಡುವುದನ್ನು ಅವರು ಮರೆತಿದ್ದಾರೆಂದು ಇದು ಅರ್ಥವಲ್ಲ. ಅವರು ಖಂಡಿತವಾಗಿಯೂ ಕಮ್‌ಬ್ಯಾಕ್ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸುಲಭವಲ್ಲ. ನಾನು ಪಂದ್ಯವನ್ನು ನಾಲ್ಕು ಅಥವಾ ಐದನೇ ದಿನಕ್ಕೆ ತೆಗೆದುಕೊಂಡರೆ, ನಮಗೆ ಈ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಲು ಅತ್ಯುತ್ತಮ ಅವಕಾಶವಿದೆ," ಎಂದು ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತದ ಸಂಭಾವ್ಯ XI; ಪಡಿಕ್ಕಲ್ ಇನ್, ಸರ್ಫರಾಜ್ ಔಟ್
ಶ್ರೀಲಂಕಾ ತಂಡಕ್ಕೆ ಕೆಎಲ್ ರಾಹುಲ್ ದೊಡ್ಡ ಭೀತಿ: ಡಿ ಸಿಲ್ವಾ
ಈ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ಕೆಎಲ್ ರಾಹುಲ್ ಅವರಿಂದ ದೊಡ್ಡ ಭೀತಿ ಇದೆ ಎಂದು ಡಿ ಸಿಲ್ವಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 2017ರ ಶ್ರೀಲಂಕಾ ಪ್ರವಾಸದಲ್ಲಿ ಕೆಎಲ್ ರಾಹುಲ್ ಆಡಿದ್ದರು. ಅವರು ಮೂರೂ ಸ್ವರೂಪದಲ್ಲಿ ಶ್ರೀಲಂಕಾ ಕಂಡೀಷನ್ಸ್‌ನಲ್ಲಿ ಆಡಿದ ಅಪಾರ ಅನುಭವವನ್ನು ಹೊಂದಿದ್ದಾರೆ. ಕೆಎಲ್ ರಾಹುಲ್ ಅವರನ್ನು ಕಟ್ಟಿ ಹಾಕಿದರೆ, ಈ ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ಸರಣಿ ಗೆಲ್ಲಲು ಅತ್ಯುತ್ತಮ ಅವಕಾಶವಿದೆ ಎಂಬುದು ಧನಂಜಯ ಡಿ ಸಿಲ್ವಾ ಅಭಿಪ್ರಾಯ.
"ಅನುಭವದ ಆಧಾರದ ಮೇಲೆ ಹೇಳುವುದಾದರೆ, ನಮಗೆ ಕೆಎಲ್ ರಾಹುಲ್ ಅವರಿಂದ ದೊಡ್ಡ ಭೀತಿ ಉಂಟಾಗಿದೆ. ಇಡೀ ವಿಶ್ವದಾದ್ಯಂತ ಅವರು ಉತ್ತಮವಾಗಿ ಆಡಿದ್ದಾರೆ ಹಾಗೂ ಶ್ರೀಲಂಕಾದಲ್ಲಿಯೂ ಅವರು ಆಡಿದ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ ಅವರಿಗೆ ಇಲ್ಲಿನ ಕಂಡೀಷನ್ಸ್ ಬಗ್ಗೆ ಚೆನ್ನಾಗಿ ತಿಳಿದಿದೆ," ಎಂದು ಶ್ರೀಲಂಕಾ ನಾಯಕ ಹೇಳಿದ್ದಾರೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಹುದ್ದೆ ಸುರಕ್ಷಿತವೋ, ಅಸುರಕ್ಷಿತವೋ?
ಪ್ರಭತ್ ಜಯಸೂರ್ಯ ಶ್ರೀಲಂಕಾ ತಂಡಕ್ಕೆ ಕೀ ಆಟಗಾರ
ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆಡಿದ ಅನುಭವನ್ನು ಪ್ರಭತ್ ಜಯಸೂರ್ಯ ಹೊಂದಿದ್ದು, ಇದು ಆತಿಥೇಯ ತಂಡಕ್ಕೆ ಲಾಭವನ್ನು ತಂದುಕೊಡಲಿದೆ. ಗಾಲೆಯಲ್ಲಿ ಆಡಿದ ಇತರೆ ಆಟಗಾರರಿಗಿಂತ ಪ್ರಭತ್ ಜಯಸೂರ್ಯಗೆ ಅತ್ಯುತ್ತಮ ಅನುಭವವಿದೆ. ಇವರು ತಮ್ಮ ಸ್ಪಿನ್ ಮೋಡಿಯಿಂದ ಸಾಕಷ್ಟು ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡವನ್ನು ಹೇರಿದ್ದಾರೆ. ಈ ಒಂದು ರಣತಂತ್ರ ಈ ಪಂದ್ಯದಲ್ಲಿ ನಮಗೆ ಲಾಭವಾಗುವ ಸಾಧ್ಯತೆ ಇದೆ," ಎಂದು ಶ್ರೀಲಂಕಾ ಕಪ್ತಾನ ಪ್ರವಾಸಿ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
"ಅಂಕಿಅಂಶಗಳ ಪ್ರಕಾರ ನೋಡುವುದಾದರೆ, ನಾವು ಒಂದು ಕೈ ಮೇಲಿದ್ದೇವೆ. ಎರಡೂ ತಂಡಗಳ ಆಟಗಾರರ ಪೈಕಿ ಗಾಲೆ ವಿಕೆಟ್‌ನಲ್ಲಿ ಆಡಿದ ಅಪಾರ ಅನುಭವನ್ನು ಪ್ರಭತ್ ಹೊಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರವಾಸಿ ಬ್ಯಾಟ್ಸ್‌ಮನ್‌ಗಳ ಎದುರು ಜಯಸೂರ್ಯ ಪ್ರಾಬಲ್ಯ ಸಾಧಿಸಿದ್ದಾರೆ. ಇದು ಶ್ರೀಲಂಕಾ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ," ಎಂದು ಧನಂಜಯ್ ಡಿ ಸಿಲ್ವಾ ತಿಳಿಸಿದ್ದಾರೆ.