IND vs ZIM: ʻಶಿವಂ ದುಬೆ ಆಲ್‌ರೌಂಡರ್ ಅಲ್ಲ, ಬ್ಯಾಟ್ಸ್‌ಮನ್ʼ-ಮೊಹಮ್ಮದ್ ಕೈಫ್ ಅಚ್ಚರಿ ಹೇಳಿಕೆ!
T20 World Cup: ಭಾರತ ತಂಡದ ಆಲ್‌ರೌಂಡರ್ ಶಿವಂ ದುಬೆ ಅವರ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅನುಮಾನ ವ್ಯಕ್ತಪಡಿಸಿದ್ದಾರೆ. ದುಬೆ ಅವರನ್ನು ಆಲ್‌ರೌಂಡರ್ ಎಂದು ಪರಿಗಣಿಸುವುದಿಲ್ಲ, ಬದಲಿಗೆ ಶುದ್ಧ ಬ್ಯಾಟರ್ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದುಬೆ ಬೌಲಿಂಗ್‌ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ.
ಶಿವಂ ದುಬೆ ಅವರ ಬೌಲಿಂಗ್ ಸಾಮರ್ಥ್ಯವನ್ನು ಪ್ರಶ್ನಿಸಿದ ಕೈಫ್. -
ಚೆನ್ನೈ: ಭಾರತ ತಂಡದ (India) ಆಲ್‌ರೌಂಡರ್ ಶಿವಂ ದುಬೆ (Shivam Dube) ಅವರ ಬೌಲಿಂಗ್ ಸಾಮರ್ಥ್ಯವನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಪ್ರಶ್ನೆ ಮಾಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ತಮ್ಮ ಬೌಲಿಂಗ್‌ನಲ್ಲಿ ಸುಧಾರಣೆಯ ಲಕ್ಷಣಗಳನ್ನು ತೋರಿದ್ದರೂ, ಕೈಫ್ ಇದನ್ನು ಒಪ್ಪುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ವೇಳೆ ದುಬೆ ಅವರ ದುರ್ಬಲ ಬೌಲಿಂಗ್ ಪ್ರದರ್ಶನದ ನಂತರ, ಅವರನ್ನು ಆಲ್‌ರೌಂಡರ್ ಎಂದು ಪರಿಗಣಿಸುವುದಿಲ್ಲ, ಶುದ್ಧ ಬ್ಯಾಟರ್ ಎಂದು ಮಾತ್ರ ನೋಡುತ್ತೇನೆ ಎಂದು ಮಾಜಿ ಭಾರತೀಯ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದುಬೆ ಎಸೆದ ಎರಡು ಓವರ್‌ಗಳಲ್ಲಿ 32 ರನ್‌ಗಳನ್ನು ನೀಡಿದ್ದು, ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದರು. ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ನಲ್ಲಿ ಮರುಹೋರಾಟ ನಡೆಸಿ ಪಂದ್ಯವನ್ನು ಆತಿಥೇಯರ ಕೈಯಿಂದ ಕಸಿದುಕೊಂಡಿತ್ತು. ಈ ವರ್ಷ ದುಬೆ 10 ಪಂದ್ಯಗಳಿಂದ 19.57ರ ಸರಾಸರಿಯಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಅವರ ಎಕಾನಮಿ ರೇಟ್ 10 ಕ್ಕಿಂತ ಹೆಚ್ಚಾಗಿದೆ. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿಯೂ ಅವರು ಚೆಂಡಿನಿಂದ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, 10ನೇ ಓವರ್‌ನಲ್ಲಿ ದುಬೆ ಆಕ್ರಮಣವಾಗಿ ಬೌಲ್ ಮಾಡುವ ಬದಲು ರಕ್ಷಣಾತ್ಮಕವಾಗಿ ನಡೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
NZ vs SL: ಶ್ರೀಲಂಕಾ ಟಿ20 ವಿಶ್ವಕಪ್‌ನಿಂದ ಔಟ್, ನ್ಯೂಜಿಲೆಂಡ್‌ಗೆ ಸಂಘಟಿತ ಹೋರಾಟದ ಜಯ!
"ಡೆವಾಲ್ಡ್ ಬ್ರೇವಿಸ್‌ಗೆ ವೈಡ್ ಲೈನ್‌ನಲ್ಲಿ ಬೌಲ್ ಮಾಡುವ ಯೋಜನೆ ಮತ್ತು ಫೀಲ್ಡ್ ಸೆಟ್ಟಿಂಗ್ ನೋಡಿದರೆ, ದುಬೆ ತುಂಬಾ ರಕ್ಷಣಾತ್ಮಕವಾಗಿ ಬೌಲ್ ಮಾಡಲು ಬಯಸಿದಂತೆ ಕಂಡಿತು. 10ನೇ ಓವರ್‌ನಲ್ಲಿ ಯಾರೂ ರಕ್ಷಣಾತ್ಮಕವಾಗಿ ಬೌಲ್ ಮಾಡುವುದಿಲ್ಲ. ಆ ಸಮಯದಲ್ಲಿ ವಿಕೆಟ್ ಪಡೆಯಲು ಪ್ರಯತ್ನಿಸಬೇಕು. ನನ್ನ ಅಭಿಪ್ರಾಯದಲ್ಲಿ ದುಬೆ ಒಬ್ಬ ಬ್ಯಾಟರ್; ಅವರು ಆಲ್‌ರೌಂಡರ್ ಅಲ್ಲ,” ಎಂದು ಕೈಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“120 ಕಿಮೀ ವೇಗದಲ್ಲಿ ಬೌಲ್ ಮಾಡುವ ಆಲ್‌ರೌಂಡರ್ ನಮಗೆ ಅಗತ್ಯವಿಲ್ಲ. ಅವರು ಕೆಲವೊಮ್ಮೆ ವಿಕೆಟ್ ಪಡೆಯಬಹುದು, ಆದರೆ ಸದಾ ರನ್‌ಗಳನ್ನು ಬಿಟ್ಟುಕೊಡುತ್ತಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನೂ ನೀಡಬಹುದು,” ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
IND vs ZIM: ಜಿಂಬಾಬ್ವೆ ಪಂದ್ಯಕ್ಕೂ ಮುನ್ನ ಗೌತಮ್ ಗಂಭೀರ್‌ಗೆ ರಿಕಿ ಪಾಂಟಿಂಗ್ ಮಹತ್ವದ ಸಲಹೆ!
ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿ ಎಂದ ಕೈಫ್
ಕೈಫ್ ಭಾರತ ತಂಡದ ಪ್ಲೇಯಿಂಗ್ ಇಲೆವನ್‌ನಲ್ಲಿ ಹೆಚ್ಚು ಎಡಗೈ ಬ್ಯಾಟರ್‌ಗಳನ್ನು ಬಳಸುತ್ತಿರುವುದನ್ನೂ ಟೀಕಿಸಿದರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಬೇಕು ಎಂದು ಅವರು ಸಲಹೆ ನೀಡಿದರು.
“ಎಲ್ಲ ವಿಷಯದಲ್ಲೂ ಸಮತೋಲನ ಇರಬೇಕು. ನಾವು ಎಡಗೈ ಬ್ಯಾಟರ್‌ಗಳ ಬಳಕೆಯಲ್ಲಿ ಅತಿಯಾಗಿ ಅವಲಂಬಿಸಿದ್ದೇವೆ. ಅಗ್ರ ಎಂಟು ಮಂದಿ ಬ್ಯಾಟ್ಸ್‌ಮನ್‌ಗಳ ಪೈಕಿ ಆಡು ಮಂದಿ ಎಡಗೈ ಬ್ಯಾಟರ್‌ಗಳಿದ್ದಾರೆ. ಹಾರ್ದಿಕ್ ಎಡ-ಬಲ ಸಂಯೋಜನೆಗಾಗಿ 5ನೇ ಕ್ರಮದಲ್ಲಿ ಬರುತ್ತಿದ್ದಾರೆ. ಇದು ನಿಮ್ಮ ಗೆಲುವಿನ ಸೂತ್ರವೆಂದು ನೀವು ಭಾವಿಸುತ್ತಿದ್ದರೆ, ಅದನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ರಚಿಸಬೇಕು. ಎಡ-ಬಲ ಸಂಯೋಜನೆಗಾಗಿ ಸಂಜುವನ್ನು ತಂಡಕ್ಕೆ ತರಬೇಕು,” ಎಂದು ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ.