ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ 4 ದಿನಗಳ 3 ಪಂದ್ಯಗಳನ್ನು ಆಡಲಿರುವ ಭಾರತ ಎ!

ಭಾರತ ಎ ತಂಡ ಅಕ್ಟೋಬರ್ 24ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಮೂರು 4 ದಿನಗಳ ಪಂದ್ಯಗಳ ಸರಣಿಯನ್ನು ಆಡಲಿದೆ. ವರ್ಷದ ಕೊನೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೂ ಮುನ್ನ ಭಾರತೀಯ ಆಟಗಾರರಿಗೆ ಆರಂಭಿಕ ಅನುಭವ ಪಡೆಯಲು ಈ ಸರಣಿ ಮಹತ್ವದ ಅವಕಾಶ ನೀಡಲಿದೆ.

ನ್ಯೂಜಿಲೆಂಡ್‌ನಲ್ಲಿ 4 ದಿನಗಳ ಪಂದ್ಯಗಳನ್ನು ಆಡಲಿರುವ ಭಾರತ ಎ!

ನ್ಯೂಜಿಲೆಂಡ್‌ ಎ ವಿರುದ್ಧ 4 ದಿನಗಳ ಪಂದ್ಯಗಳನ್ನ ಆಡಲಿರುವ ಭಾರತ ಎ. -

Profile
Ramesh Kote Sep 2, 2026 12:17 AM

ಕ್ರೈಸ್ಟ್‌ಚರ್ಚ್: ಭಾರತ ಎ ತಂಡ, ನ್ಯೂಜಿಲೆಂಡ್ ಎ ವಿರುದ್ಧ ಮೂರು ಪಂದ್ಯಗಳ ಪ್ರಥಮ ದರ್ಜೆ ಸರಣಿಯನ್ನು ಆಡಲಿದೆ. ಅಕ್ಟೋಬರ್ 24ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಈ ಪಂದ್ಯಗಳು ಆರಂಭವಾಗಲಿವೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಗಳವಾರ ಅಧಿಕೃತವಾಗಿ ತಿಳಿಸಿದೆ. ರೆಡ್-ಬಾಲ್ ಮಾದರಿಯಲ್ಲಿ ಈ ಪಂದ್ಯಗಳು ನಡೆಯಲಿವೆ. ಬಳಿಕ ಭಾರತದ ಹಿರಿಯರ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿ (IND vs NZ) ಆಡಲಿದೆ. ಭಾರತ ಎ (India A) ತಂಡದ ಆಟಗಾರರಿಗೆ ನ್ಯೂಜಿಲೆಂಡ್‌ನ ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹಾಗೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಬಯಸುತ್ತಿರುವ ಆಟಗಾರರಿಗೆ ಪಂದ್ಯದ ಅಭ್ಯಾಸ ಪಡೆಯಲು ಇದು ಉತ್ತಮ ಅವಕಾಶವಾಗಲಿದೆ.

ನ್ಯೂಜಿಲೆಂಡ್ ಕ್ರಿಕೆಟ್ ಮುಂಬರುವ ಪ್ಲಂಕೆಟ್ ಶೀಲ್ಡ್ ವೇಳಾಪಟ್ಟಿಯನ್ನು ಪ್ರಕಟಿಸುವ ವೇಳೆ ಭಾರತ ಎ ತಂಡದ ಪಂದ್ಯಗಳನ್ನೂ ಘೋಷಿಸಿದೆ. ನ್ಯೂಜಿಲೆಂಡ್‌ನ ಪ್ರಮುಖ ದೇಶಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾದ ಪ್ಲಂಕೆಟ್ ಶೀಲ್ಡ್ ಇದೀಗ ತನ್ನ 101ನೇ ಆವೃತ್ತಿಗೆ ಕಾಲಿಡುತ್ತಿದೆ.

“ನ್ಯೂಜಿಲೆಂಡ್‌ನ ಪ್ರಮುಖ ಪ್ರಥಮ ದರ್ಜೆ ಸ್ಪರ್ಧೆ 101ನೇ ಆವೃತ್ತಿಗೆ ಮರಳುತ್ತಿದೆ. ತವರಿನಲ್ಲಿ ಭಾರತ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಗಳು ಹಾಗೂ ಆಸ್ಟ್ರೇಲಿಯಾ ಪ್ರವಾಸ ಸೇರಿದಂತೆ ರೆಡ್-ಬಾಲ್ ಕ್ರಿಕೆಟ್‌ನಿಂದ ತುಂಬಿರುವ ವೇಳಾಪಟ್ಟಿಗೆ ಕಿವೀಸ್‌ ಟೆಸ್ಟ್‌ ಸರಣಿ ಸೇರ್ಪಡೆಯಾಗಿದೆ,” ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಿಳಿಸಿದೆ.

IND vs AFG: ಭಾರತ ಟಿ20 ತಂಡದಲ್ಲಿ ಮೇಜರ್‌ ಸರ್ಜರಿ, 7 ಮಂದಿಗೆ ಕೊಕ್‌! ಕಂಪ್ಲಿಟ್‌ ಲಿಸ್ಟ್‌ ಇಲ್ಲಿದೆ...

“ಅಕ್ಟೋಬರ್ 24ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ಎ ತಂಡ, ಭಾರತ ಎ ವಿರುದ್ಧ ಮೂರು 4 ದಿನಗಳ ಪಂದ್ಯಗಳನ್ನು ಆಡಲಿದ್ದು, ದೇಶಿ ರೆಡ್-ಬಾಲ್ ಕ್ರಿಕೆಟ್‌ಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಮತ್ತಷ್ಟು ಮೆರುಗು ಸಿಗಲಿದೆ,” ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಭಾರತ ತಂಡ ಈ ಹಿಂದೆ ಕೂಡ ಇದೇ ರೀತಿಯ ‘ಎ’ ತಂಡದ ಪಂದ್ಯಗಳನ್ನು ಆಡಿತ್ತು. ಇತ್ತೀಚೆಗೆ ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಧ್ರುವ್ ಜುರೆಲ್, ದೇವದತ್ ಪಡಿಕ್ಕಲ್, ಸಾರಂಶ್ ಜೈನ್ ಮತ್ತು ಗುರ್ನೂರ್ ಬ್ರಾರ್ ಸೇರಿದಂತೆ ಭಾರತ ಎ ತಂಡದ ಹಲವು ಆಟಗಾರರು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಅಮೂಲ್ಯ ಅನುಭವ ಪಡೆದಿದ್ದರು. ಬಳಿಕ ಹಿರಿಯರ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು.

ಇದೀಗ ನ್ಯೂಜಿಲೆಂಡ್ ವಿರುದ್ಧದ ಭಾರತ ಎ ಸರಣಿ ಭಾರತೀಯ ತಂಡದ ನಿರಂತರ ಪ್ರವಾಸದ ಭಾಗವಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್‌ನಲ್ಲಿ ಐದು ಟಿ20, ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 19ರಿಂದ 23ರವರೆಗೆ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ನವೆಂಬರ್ 27ರಿಂದ ಡಿಸೆಂಬರ್ 1ರವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

ಪಾಕಿಸ್ತಾನದ ಆಯ್ಕೆ ಸಮಿತಿ ಸದಸ್ಯತ್ವ ಸ್ಥಾನಕ್ಕೆ ಮಿಸ್ಬಾ-ಉಲ್‌-ಹಕ್‌ ರಾಜೀನಾಮೆ!

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ಮುಂಬರುವ ಟೆಸ್ಟ್ ಸರಣಿಯು ನ್ಯೂಜಿಲೆಂಡ್ ವಿರುದ್ಧದ ಹಿಂದಿನ ಅನುಭವಕ್ಕೆ ಪ್ರತಿಕ್ರಿಯೆ ನೀಡಲು ಭಾರತಕ್ಕೆ ಮತ್ತೊಂದು ಅವಕಾಶವಾಗಲಿದೆ. 2024-25ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು.

ಹೀಗಾಗಿ ಭಾರತ ಎ ತಂಡದ ಸರಣಿಯು ಯುವ ಹಾಗೂ ರಾಷ್ಟ್ರೀಯ ತಂಡದ ಅಂಚಿನಲ್ಲಿರುವ ಆಟಗಾರರಿಗೆ ನ್ಯೂಜಿಲೆಂಡ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನೆರವಾಗುವುದರ ಜೊತೆಗೆ, ಹಿರಿಯರ ತಂಡದ ಟೆಸ್ಟ್ ಸರಣಿಗೆ ಉತ್ತಮ ಪೂರ್ವತಯಾರಿಯಾಗಲಿದೆ.