ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎನ್‌ವಿಡಿಯಾ ಸಿಇಒ ಆಗಿ ಜನ್ಸನ್ ಹುವಾಂಗ್ ಮರುನೇಮಕ; ಷೇರು ಬೆಲೆ ಶೇಕಡಾ 30ರಷ್ಟು ಏರಿಕೆ

Jensen Huang: 2 ವಾರಗಳ ಹಿಂದೆ ಎನ್‌ವಿಡಿಯಾ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದ ಜನ್ಸನ್ ಹುವಾಂಗ್ ಇದೀಗ ಮರುನೇಮಕಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ನಡೆಯನ್ನು ಸ್ವಾಗತಿಸಿದ್ದು, ಕಂಪನಿ ಷೇರು ಒಮ್ಮೆಲೆ ಏರಿಕೆಯಾಗಿದೆ.

2 ವಾರಗಳ ಬಳಿಕ ಎನ್‌ವಿಡಿಯಾ ಸಿಇಒ ಆಗಿ ಜನ್ಸನ್ ಹುವಾಂಗ್ ಮರುನೇಮಕ

-

Ramesh Ballamoole
Ramesh Ballamoole Nov 23, 2026 8:39 PM

ವಾಷಿಂಗ್ಟನ್‌, ನ. 23: ಚೀನಾ ಗೂಢಚಾರಣಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಎನ್‌ವಿಡಿಯಾ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದ ಜನ್ಸನ್ ಹುವಾಂಗ್ (Jensen Huang) ಇದೀಗ ಮರುನೇಮಕಗೊಂಡಿದ್ದಾರೆ. ಸುಮಾರು 2 ವಾರಗಳ ಬಳಿಕ ಅವರು ಹುದ್ದೆಗೆ ಮರಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ನಡೆಯನ್ನು ಸ್ವಾಗತಿಸಿದ್ದು, ಕಂಪನಿ ಷೇರು ಒಮ್ಮೆಲೆ ಏರಿಕೆಯಾಗಿದೆ.

ಜನ್ಸನ್ ಹುವಾಂಗ್ ಎನ್‌ವಿಡಿಯಾ ಕಂಪನಿಯ ಅಧ್ಯಕ್ಷ, ಸಿಇಒ ಮತ್ತು ಬೋರ್ಡ್‌ ಡೈರಕ್ಟರ್‌ ಆಗಿ ಮರಳಿದ್ದಾರೆ. ಚೀನಾ ಬೇಹುಗಾರಿಕೆ ವಿವಾದದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಎನ್‌ವಿಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜನ್ಸನ್ ಹುವಾಂಗ್ 2 ವಾರ ಎಕಳೆಯುವ ಮೊದಲೇ ಮತ್ತೆ ಕಂಪನಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವುದು ಕುತೂಹಲ ಕೆರಳಿಸಿದೆ.

ʼʼಸೋಮವಾರ (ನವೆಂಬರ್‌ 23) ನಡೆದ ಕಂಪನಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡು ಹುವಾಂಗ್ ಅವರನ್ನು ಮತ್ತೆ ಅಧ್ಯಕ್ಷ (ಪ್ರೆಸಿಡೆಂಟ್), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ನಿರ್ದೇಶಕರ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹುವಾಂಗ್ ಅವರೊಂದಿಗೆ ಸರಣಿ ಸಭೆ ಹಾಗೂ ಚರ್ಚೆ ನಡೆಸಿದ ಬಳಿಕ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಅಲ್ಲದೆ, ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳ ಅಭಿಪ್ರಾಯವನ್ನೂ ಪಡೆಯಲಾಗಿದೆ ಎಂದು ವರದಿಯಾಗಿದೆ.

ಅಕ್ರಮ ಸಂಬಂಧಕ್ಕೆ ಎನ್‌ವಿಡಿಯಾ ಸಿಇಒ ತಲೆದಂಡ; ಕೊನೆಗೂ ರಾಜೀನಾಮೆ ಕೊಟ್ಟ ಜನ್ಸನ್ ಹುವಾಂಗ್

ಎನ್‌ವಿಡಿಯಾ ನೀಡಿರುವ ಹೇಳಿಕೆಯೊಂದರಲ್ಲಿ, ಕಂಪನಿಯನ್ನು ಮುನ್ನಡೆಸಲು ಹುವಾಂಗ್ ಸೂಕ್ತ ವ್ಯಕ್ತಿ ಎಂದು ಮಂಡಳಿಯು ದೃಢವಾಗಿ ನಂಬಿದೆ ಎಂದು ತಿಳಿಸಿದೆ. ಅಲ್ಲದೆ ಅವರ ಮರಳುವಿಕೆಯು ಕಂಪನಿಯ ಷೇರುದಾರರು, ಉದ್ಯೋಗಿಗಳು, ಪಾಲುದಾರರು ಮತ್ತು ಗ್ರಾಹಕರ ಹಿತಾಸಕ್ತಿಗಳಿಗೆ ಪೂರಕವಾಗಿರಲಿದೆ ಎಂದೂ ಹೇಳಿದೆ.

ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸಿದ ಕೊಲೆಟ್ ಕ್ರೆಸ್ ಅವರಿಗೆ ಮಂಡಳಿಯ ಅಧ್ಯಕ್ಷ ಹಾರ್ವೆ ಸಿ. ಜೋನ್ಸ್ ಧನ್ಯವಾದ ಅರ್ಪಿಸಿದರು. ಅಲ್ಲದೆ ಕ್ರೆಸ್ ಎನ್‌ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ತಮ್ಮ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದರು. ಹಾರ್ವೆ ಜೋನ್ಸ್ ಕಂಪನಿಯ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಎನ್‌ವಿಡಿಯಾ ತಿಳಿಸಿದೆ.

ಹುವಾಂಗ್ ಅವರ ಮರುನೇಮಕವು ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ ಎಂಬ ವಿಶ್ವಾಸವನ್ನು ಮಂಡಳಿ ವ್ಯಕ್ತಪಡಿಸಿದೆ. ಹುವಾಂಗ್ ಅವರೊಂದಿಗೆ ನಡೆಸಿದ ಚರ್ಚೆಗಳು ಮತ್ತು ಸಭೆಗಳ ನಂತರ ಈ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ತಮ್ಮ ಮೇಲಿಟ್ಟ ವಿಶ್ವಾಸಕ್ಕಾಗಿ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ ಹುವಾಂಗ್, ಕಂಪನಿಯನ್ನು ಮುನ್ನಡೆಸಲು ಮರಳಿ ಬಂದಿರುವುದನ್ನು ತಮಗೆ ಸಂದ ಗೌರವ ಎಂದು ಬಣ್ಣಿಸಿದರು.

"ನಾನು ಎನ್‌ವಿಡಿಯಾ ಸಂಸ್ಥೆಗೆ ಮರಳಿರುವುದನ್ನು ಮತ್ತು ಹೊಸ ಕೈಗಾರಿಕಾ ಕ್ರಾಂತಿಯ ಆರಂಭದ ಈ ಹಂತದಲ್ಲಿ ಜಗತ್ತಿನ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದನ್ನು ನಾನು ಗೌರವವೆಂದು ಭಾವಿಸುತ್ತೇನೆ" ಎಂದು ಅವರು ಹೇಳಿದರು. ತಾನು ವಿನಮ್ರತೆಯಿಂದ ಮತ್ತು ಹೊಸ ಬದ್ಧತೆಯೊಂದಿಗೆ ಈ ಜವಾಬ್ದಾರಿಯನ್ನು ಸ್ವೀಕರಿಸುತ್ತಿರುವುದಾಗಿ ತಿಳಿಸಿದರು.

ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.