IND vs AUS 2nd ODI: ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಲು ಭಾರತ ಸಜ್ಜು!
IND vs AUS 2nd ODI Match Preview: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಎರಡನೇ ಏಕದಿನ ಪಂದ್ಯ ಅಕ್ಟೋಬರ್ 23 ರಂದು ಗುರುವಾರ ಅಡಿಲೇಡ್‌ನಲ್ಲಿ ನಡೆಯಲಿದೆ. ಮೊದಲನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ, ಇದೀಗ ಎರಡನೇ ಪಂದ್ಯದಲ್ಲಿ ಆಸೀಸ್‌ಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಒಡಿಐ ಪಂದ್ಯ. -

ಅಡಿಲೇಡ್: ಮೊದಲನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ, ನಾಳೆ (ಅ 23) ಇಲ್ಲಿನ ಅಡಿಲೇಡ್ ಓವಲ್‌ನಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ (IND vs AUS) ಆತಿಥೇಯರಿಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ. ಆದರೆ, ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ(Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರಿಗೆ ಎರಡನೇ ಏಕದಿನ ಪಂದ್ಯದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಅದರಲ್ಲಿಯೂ ವಿಶೇಷವಾಗಿ ವಿರಾಟ್ ಕೊಹ್ಲಿ ಅಡಿಲೇಡ್ ಅಂಗಣದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇದರಲ್ಲಿ ಅವರು ಎರಡು ಶತಕಗಳೊಂದಿಗೆ 244 ರನ್‌ಗಳನ್ನು ಕಲೆ ಹಾಕಿದ್ದಾರೆ. ಒಟ್ಟಾರೆ ಈ ಅಂಗಣದಲ್ಲಿ ಅವರು ಆಡಿದ 12 ಪಂದ್ಯಗಳಿಂದ 65ರ ಸರಾಸರಿಯಲ್ಲಿ 975 ರನ್‌ಗಳನ್ನು ಗಳಿಸಿದ್ದಾರೆ.
ಇನ್ನು ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಆಡಬೇಕೆಂದು ಬಯಸಿರುವ ರೋಹಿತ್ ಶರ್ಮಾಗೂ ಕೂಡ ಎರಡನೇ ಪಂದ್ಯ ಮುಖ್ಯವಾಗಿದೆ. ಇವರು ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಬೇಕೆಂದು ಬಯಸಿದ್ದಾರೆ. ಅಂದ ಹಾಗೆ ಮೊದಲನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಹಾಗಾಗಿ ಈ ಪಂದ್ಯವನ್ನು 26 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, 9 ವಿಕೆಟ್‌ಗಳ ನಷ್ಟಕ್ಕೆ 136 ರನ್‌ಗಳನ್ನು ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ 21.1 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 131 ರನ್‌ಗಳನ್ನು ಗಳಿಸಿ 7 ವಿಕೆಟ್‌ಗಳಿಂದ ಗೆದ್ದಿತ್ತು. ಆ ಮೂಲಕ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು.
IND vs AUS 2nd ODI: ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ
ಅಪ್ಟಸ್ ಕ್ರೀಡಾಂಗಣದಲ್ಲಿ ಬೌನ್ಸ್ ಹಾಗೂ ನಿಧಾನಗತಿಯಿಂದ ಕೂಡಿದ್ದರಿಂದ ಬ್ಯಾಟಿಂಗ್‌ಗೆ ಕಠಿಣವಾಗಿತ್ತು. ಆದರೆ, ಅಡಿಲೇಡ್ ಓವಲ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿತ್ತು. ಹಾಗಾಗಿ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಹಾಗೂ ರೋಹಿತ್ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಬಹುದು. ಮಂಗಳವಾರ ಅಡಿಲೇಡ್‌ನಲ್ಲಿ ನಡೆದಿದ್ದ ನೆಟ್ ಸೆಷನ್‌ನಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಂಡಿರುವ ರೀತಿ ಕಂಡಿದ್ದಾರೆ. ಹಾಗಾಗಿ ಎರಡನೇ ಪಂದ್ಯದಲ್ಲಿ ನಾವು ಇವರ ಕಡೆಯಿಂದ ದೊಡ್ಡ ಇನಿಂಗ್ಸ್‌ಗಳನ್ನು ನಿರೀಕ್ಷೆ ಮಾಡಬಹುದಾಗಿದೆ.
ಭಾರತದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆ?
ಅಡಿಲೇಡ್ ಪಿಚ್‌ನಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯವನ್ನು ಸಾಧಿಸಲಿದ್ದಾರೆ ಆದರೂ ಆಸ್ಟ್ರೇಲಿಯಾದ ಕಂಡೀಷನ್ಸ್‌ನಲ್ಲಿ ಲೆಗ್ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ. ಆದರೆ, ಇಲ್ಲಿನ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಇನ್ನು ಆಸ್ಟ್ರೇಲಿಯಾ ಪ್ಲೇಯಿಂಗ್ XIಗೆ ಆಡಂ ಝಾಂಪ ಮರಳುವ ಸಾಧ್ಯತೆ ಇದೆ. ಇನ್ನು ಕಳೆದ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕುಲ್ದೀಪ್ ಯಾದವ್ ಅವರು ಆಡಬಹುದು. ಆ ಮೂಲಕ ವಾಷಿಂಗ್ಟನ್ ಸುಂದರ್‌ಗೆ ಈ ಪಂದ್ಯದಲ್ಲಿ ಬೆಂಚ್ ಕಾಯಿಸಬಹುದು. ಇನ್ನು ಕನ್ನಡಿಗ ಪ್ರಸಿಧ್ ಕೃಷ್ಣಗೆ ಈ ಪಂದ್ಯದಲ್ಲಿ ಅವಕಾಶ ನೀಡಬಹುದು. ಏಕೆಂದರೆ ಅವರು ಹಾರ್ಡ್ ಲೆನ್ತ್ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಕಳೆದ ಪಂದ್ಯದಲ್ಲಿ ದುಬಾರಿಯಾಗಿ ಹರ್ಷಿತ್ ರಾಣಾಗೆ ವಿಶ್ರಾಂತಿ ನೀಡಬಹುದು.
AUS vs IND 2nd ODI: ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ಯಾವಾಗ?; ಮಳೆ ಭೀತಿ ಇದೆಯೇ?
ಆಸ್ಟ್ರೇಲಿಯಾ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆ ಸಾಧ್ಯತೆ
ಇನ್ನು ಮೊದಲನೇ ಪಂದ್ಯದ ಗೆಲುವಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ XIನಲ್ಲಿಯೂ ಎರಡು ಬದಲಾವಣೆಯನ್ನು ತರಬಹುದಾಗಿದೆ. ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಹಾಗೂ ಸ್ಪಿನ್ನರ್ ಆಡಂ ಝಾಂಪ ಪ್ಲೇಯಿಂಗ್ XIಗೆ ಮರಳಬಹುದಾಗಿದೆ. ಮೊದಲನೇ ಪಂದ್ಯದಲ್ಲಿ ಜಾಶ್ ಇಂಗ್ಲಿಸ್ ಯೋಗ್ಯ ಪ್ರದರ್ಶನವನ್ನು ತೋರಿದ್ದರೂ ಎರಡನೇ ಪಂದ್ಯದಲ್ಲಿ ಕೇರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಕಳೆದ ಪಂದ್ಯದಲ್ಲಿ ಮ್ಯಾಥ್ಯೂ ಕುಹ್ನೇಮನ್ ಅವರು 26ಕ್ಕೆ ಎರಡು ವಿಕೆಟ್ ಕಿತ್ತಿದ್ದರೂ ಅವರು ಝಾಂಪಗೆ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ.
ಅಡಿಲೇಡ್ ಪಿಚ್ ರಿಪೋರ್ಟ್
ಅಡಿಲೇಡ್ ಓವಲ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿ ಭಾರತ ತಂಡದ ಅಂಕಿಅಂಶಗಳು ಉತ್ತಮವಾಗಿವೆ. ಅಡಲೇಡ್‌ನಲ್ಲಿ ಭಾರತ ತಂಡ ಆಡಿದ 15 ಏಕದಿನ ಪಂದ್ಯಗಳಲ್ಲಿ 9ರಲ್ಲಿ ಗೆಲುವು ಪಡೆದಿದೆ. 2008ರಿಂದಲೂ ಇಲ್ಲಿಯವರೆಗೂ ಟೀಮ್ ಇಂಡಿಯಾ ಸೋತಿಲ್ಲ. ಈ ಅಂಗಣದಲ್ಲಿ ವಿರಾಟ್ ಕೊಹ್ಲಿ ಹಲವು ಮ್ಯಾಚ್ ವಿನ್ನಿಂಗ್ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಅನ್ನು ನಾವು ನಿರೀಕ್ಷೆ ಮಾಡಬಹುದು. ಪಂದ್ಯ ಸಾಗುತ್ತಿದ್ದಂತೆ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ತೋರಬಹುದಾಗಿದೆ.
IND vs AUS: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಗರಡಿಯಲ್ಲಿ ಅಭ್ಯಾಸ ನಡೆಸಿದ ಅಭಿಷೇಕ್ ಶರ್ಮಾ!
ಭಾರತ ತಂಡದ ಪ್ಲೇಯಿಂಗ್ XI
ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಕ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್/ಕುಲ್ದೀಪ್ ಯಾದವ್, ಹರ್ಷಿತ್ ರಾಣಾ/ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ಆಸ್ಟ್ರೇಲಿಯಾದ ಪ್ಲೇಯಿಂಗ್ XI
ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಟ್ ಶಾರ್ಟ್, ಅಲೆಕ್ಸ್ ಕೇರಿ (ವಿಕೆಟ್ ಕೀಪರ್), ಮಿಚೆ ಓವೆನ್, ಕೂಪರ್ ಕಾನೆಲಿ/ಮಾರ್ನಸ್ ಲಾಬುಶೇನ್, ಮಿಚೆಲ್ ಸ್ಟಾರ್ಕ್, ನೇಥಮ್ ಎಲ್ಲಿಸ್. ಆಡಂ ಝಾಂಪ-ಮ್ಯಾಥ್ಯೂ ಕುಹ್ನೇಮನ್, ಜಾಶ್ ಹೇಝಲ್‌ವುಡ್