ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs ENGW: ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್‌ ಸೋಲು, ಸೆಮಿಫೈನಲ್‌ಗೆ ಇಂಗ್ಲೆಂಡ್‌!

INDW vs ENGW Match Highlights: ದೀಪ್ತಿ ಶರ್ಮಾ ಆಲ್‌ರೌಂಡರ್‌ ಆಟದ ಹೊರತಾಗಿಯೂ ಭಾರತ ಮಹಿಳಾ ತಂಡ, ಇಂಗ್ಲೆಂಡ್‌ ಮಹಿಳಾ ತಂಡದ ವಿರುದ್ದ 4 ರನ್‌ ಸೋಲು ಅನುಭವಿಸಿತು. ಆ ಮೂಲಕ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸುವ ಮೂಲಕ ಭಾರತ ತಂಡದ ಸೆಮಿಫೈನಲ್‌ ಹಾದಿ ಕಠಿಣವಾಗಿದೆ.

ಇಂಗ್ಲೆಂಡ್‌ ವಿರುದ್ದ ಸೋತ ಭಾರತದ ಸೆಮೀಸ್‌ ಹಾದಿ ಕಠಿಣ!

ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್‌ ಸೋಲು, ಸೆಮಿಫೈನಲ್‌ಗೆ ಇಂಗ್ಲೆಂಡ್‌. -

Profile Ramesh Kote Oct 19, 2025 11:25 PM

ನವದೆಹಲಿ: ದೀಪ್ತಿ ಶರ್ಮಾ (50 ರನ್‌, 4 ವಿಕೆಟ್‌) ಅವರ ಆಲ್‌ರೌಂಡರ್‌ ಆಟದ ಹೊರತಾಗಿಯೂ ಹೀದರ್‌ ನೈಟ್‌ (Heather Knight) ಅವರ ಶತಕದ ಬಲದಿಂದ ಇಂಗ್ಲೆಂಡ್‌ ತಂಡ, ಭಾರತದ (India Women) ವಿರುದ್ದ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಇಂಗ್ಲೆಂಡ್‌ ತಂಡ, ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ (Women's World Cup 2025) ಸೆಮಿಫೈನಲ್‌ಗೆ ಪ್ರವೇಶ ಮಾಡಿತು. ಆದರೆ, ಈ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳಾ ತಂಡದ ಸೆಮಿಫೈನಲ್‌ ಹಾದಿ ಇನ್ನಷ್ಟು ಕಠಿಣವಾಗಿದೆ. ಭರ್ಜರಿ ಶತಕ ಬಾರಿಸಿ ಇಂಗ್ಲೆಂಡ್‌ ಗೆಲುವಿಗೆ ನೆರವು ನೀಡಿದ್ದ ಹೀದರ್‌ ನೈಟ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜರಾದರು.

ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ ತಂಡ, ಹೀದರ್‌ ನೈಟ್‌ (109 ರನ್‌) ಶತಕ ಹಾಗೂ ಎಮಿ ಜೋನ್ಸ್‌ (56 ರನ್)‌ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 288 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತಕ್ಕೆ 289 ರನ್‌ಗಳ ಸವಾಲಿನ ಗುರಿ ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ, ಸ್ಮೃತಿ ಮಂಧಾನಾ (88 ರನ್)‌, ಹರ್ಮನ್‌ಪ್ರೀತ್‌ ಕೌರ್‌ (70 ರನ್‌) ಹಾಗೂ ದೀಪ್ತಿ ಶರ್ಮಾ (50 ರನ್‌) ಅವರ ಅರ್ಧಶತಕಗಳ ಹೊರತಾಗಿಯೂ ತನ್ನ ಪಾಲಿನ 50 ಓವರ್‌ಗಳನ್ನು ಮುಗಿಸಿದರೂ 6 ವಿಕೆಟ್‌ಗಳ ನಷ್ಟಕ್ಕೆ 284 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಇದಕ್ಕೂ ಮುನ್ನ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿತ್ತು.

IND vs AUS 1st ODI: ಕೊಹ್ಲಿ, ರೋಹಿತ್‌ ಕಮ್‌ಬ್ಯಾಕ್‌ ಪಂದ್ಯದಲ್ಲಿ ಭಾರತಕ್ಕೆ ಸೋಲು

ಹೀದರ್ ನೈಟ್ ಭರ್ಜರಿ ಶತಕ

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಹೀದರ್‌ ನೈಟ್‌. ಅವರು ಭಾರತದ ಬೌಲರ್‌ಗಳನ್ನು ಅದ್ಭುತವಾಗಿ ಎದುರಿಸಿದರು. ಅವರು ಆಡಿದ 91 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 109 ರನ್‌ಗಳನ್ನು ಬಾರಿಸಿದರು. ಇವರ ಎಮಿ ಜೋನ್ಸ್‌ 68 ಎಸೆತಗಳಲ್ಲಿ 56 ರನ್‌ಗಳನ್ನು ಬಾರಿಸಿದ್ದರು. ನ್ಯಾಟ್‌ ಸೀವರ್‌ ಬ್ರಂಟ್‌ 38 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದ್ದರು. ಭಾರತದ ಪರ ಸ್ಪಿನ್‌ ಮೋಡಿ ಮಾಡಿದ್ದ ದೀಪ್ತಿ ಶರ್ಮಾ 10 ಓವರ್‌ಗಳಿಗೆ 51 ರನ್ ನೀಡಿ 4 ವಿಕೆಟ್‌ ಕಿತ್ತಿದ್ದರು.



ಸ್ಮೃತಿ ಮಂಧಾನಾ, ಹರ್ಮನ್‌ಪ್ರೀತ್‌, ದೀಪ್ತಿ ಅರ್ಧಶತಕ

ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಮೂವರು ಆಟಗಾರ್ತಿಯರು ಕಠಿಣ ಹೋರಾಟವನ್ನು ನಡೆಸಿದ್ದರು. ಮೊದಲಿಗೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಅವರು 94 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 88 ರನ್‌ಗಳನ್ನು ಸಿಡಿಸಿ 40ನೇ ಓವರ್‌ವರೆಗೂ ತಂಡವನ್ನು ಗೆಲ್ಲಿಸುವ ಭರವಸೆಯನ್ನು ನೀಡಿದ್ದರು. ಆದರೆ, ಅವರು ಲಿನ್ಸಿ ಸ್ಮಿತ್‌ಗೆ ವಿಕೆಟ್‌ ಒಪ್ಪಿಸಿದರು. ಇದಕ್ಕೂ ಮುನ್ನ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, 70 ಎಸೆತಗಳಲ್ಲಿ 70 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಕೊನೆಯವರೆಗೂ ಕಠಿಣ ಹೋರಾಟವನ್ನು ನಡೆಸಿದ್ದ ದೀಪ್ತಿ ಶರ್ಮಾ, 57 ಎಸೆತಗಳಲ್ಲಿ 50 ರನ್‌ ಗಳಿಸಿ ತಂಡವನ್ನು ಗೆಲ್ಲಿಸುವ ಸನಿಹದಲ್ಲಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಅಮನ್‌ಜೋತ್‌ ಕೌರ್‌ ಹಾಗೂ ಸ್ನೇಹಾ ರಾಣಾ ಅವರು ಕ್ರಮವಾಗಿ ಅಜೇಯ 18 ರನ್‌ ಹಾಗೂ 10 ರನ್‌ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.



ಭಾರತದ ಸೆಮಿಫೈನಲ್‌ ಲೆಕ್ಕಾಚಾರ ಹೇಗೆ?

ಭಾರತ ತಂಡಕ್ಕೆ ಸೆಮಿಪೈನಲ್‌ ರೇಸ್‌ನಲ್ಲಿ ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳು ಪೈಪೋಟಿ ನೀಡುತ್ತಿವೆ. ಮುಂದಿನ ಎರಡು ಪಂದ್ಯಗಳನ್ನು ಇದೇ ತಂಡಗಳ ವಿರುದ್ಧ ಭಾರತ ಆಡಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ಭಾರತ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ. ಒಂದು ವೇಳೆ ಇದರಲ್ಲಿ ಒಂದು ಪಂದ್ಯವನ್ನು ಗೆದ್ದು, ಇನ್ನೊಂದು ಪಂದ್ಯವನ್ನು ಸೋತರೆ, ಆಗ ಆರು ಅಂಕಗಳನ್ನು ಕಲೆ ಹಾಕುವ ತಂಡದ (ಬಾಂಗ್ಲಾದೇಶ ಅಥವಾ ನ್ಯೂಜಿಲೆಂಡ್‌) ಜೊತೆ ಭಾರತ ಪೈಪೋಟಿ ನಡೆಸಲಿದೆ. ಆಗ ರನ್‌ರೇಟ್‌ ಆಧಾರದ ಮೇಲೆ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಬಾಂಗ್ಲಾ ಹಾಗೂ ಕಿವೀಸ್‌ಗಿಂತ ಭಾರತ (+526) ಹೆಚ್ಚಿನ ಅಂಕಗಳನ್ನು ಕಲೆ ಹಾಕಿದೆ.