ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs PBKS: ಪಂಜಾಬ್‌ ಕಿಂಗ್ಸ್‌ ಸೋಲುಣಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

RCB vs PBKS Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಎದುರಾಳಿ ಪಂಜಾಬ್‌ ಕಿಂಗ್ಸ್‌ ಎದರು 23 ರನ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ಆರ್‌ಸಿಬಿ ಭಾಜನವಾಯಿತು.

IPL 2026: ಪಂಜಾಬ್‌ ವಿರುದ್ಧ ಗೆದ್ದು ಪ್ಲೇಆಫ್ಸ್‌ಗೇರಿದ ಆರ್‌ಸಿಬಿ!

ಪಂಜಾಬ್‌ ಕಿಂಗ್ಸ್‌ ಎದುರು ಆರ್‌ಸಿಬಿಗೆ 23 ರನ್‌ ಜಯ. -

Profile
Ramesh Kote May 17, 2026 8:02 PM

ಧರ್ಮಶಾಲಾ: ವಿರಾಟ್‌ ಕೊಹ್ಲಿ ಮತ್ತು ವೆಂಕಟೇಶ್‌ ಅಯ್ಯರ್‌ (Venkatesh Iyer) ಅರ್ಧಶತಕಗಳು ಹಾಗೂ ಭುವನೇಶ್ವರ್‌ ಕುಮಾರ್‌ ಶಿಸ್ತುಬದ್ದ ಬೌಲಿಂಗ್‌ ಪ್ರದರ್ಶನದ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಎದುರಾಳಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 23 ರನ್‌ಗಳಿಂದ ಮಣಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಭಾಜನವಾಯಿತು. ಆದರೆ, ಸತತ ಆರನೇ ಸೋಲು ಅನುಭವಿಸಿದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ತಂಡದ ಪ್ಲೇಆಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ. ಮೊದಲನೇ ಲೆಗ್‌ನಲ್ಲಿ ಸತತ ಗೆಲುವುಗಳಿಂದ ಟಾಪ್‌-2ರ ಸ್ಥಾನಕ್ಕೆ ನೆಚ್ಚಿನ ತಂಡವಾಗಿದ್ದ ಪಂಜಾಬ್‌ ಇದೀಗ, ಎರಡನೇ ಲೆಗ್‌ನಲ್ಲಿ ಸತತ ಸೋಲುಗಳಿಂದ ತನ್ನ ಪ್ಲೇಆಫ್ಸ್‌ ಹಾದಿಯನ್ನೇ ಕಠಿಣವಾಗಿಸಿಕೊಂಡಿದೆ.

ಭಾನುವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯ ಪ್ಲೇಆಫ್ಸ್‌ ನಿಮಿತ್ತ ಆರ್‌ಸಿಬಿ ಹಾಗೂ ಪಿಬಿಕೆಎಸ್‌ ಎರಡೂ ತಂಡಗಳಿಗೂ ನಿರ್ಣಾಯಕವಾಗಿತ್ತು. ಅದರಂತೆ ಆರ್‌ಸಿಬಿ ನೀಡಿದ್ದ 223 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಹೊಸ ಚೆಂಡಿನಲ್ಲಿ ಭುವನೇಶ್ವರ್‌ ಕುಮಾರ್‌ ಆಘಾತ ನೀಡಿದ್ದರು. ಅಪಾಯಕಾರಿ ಆರಂಭಿಕರಾದ ಪ್ರಿಯಾಂಶ್‌ ಆರ್ಯ ಹಾಗೂ ಪ್ರಭ್‌ಸಿಮ್ರನ್‌ ಸಿಂಗ್‌ ಅವರನ್ನು ಭುವಿ ಬಹುಬೇಗ ಔಟ್‌ ಮಾಡಿದರು. ನಂತರ ಬಂದ ಶ್ರೇಯಸ್‌ ಅಯ್ಯರ್‌ ಅವರನ್ನು ರಸಿಖ್‌ ದಾರ್‌ ಸಲಾಮ್‌ ಔಟ್‌ ಮಾಡಿದರು. ಆ ಮೂಲಕ ಪಂಜಾಬ್‌ 19 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.

IPL 2026: ನಾಯಕನಾಗಿ 100 ಪಂದ್ಯಗಳನ್ನು ಆಡಿ ದಿಗ್ಗಜರನ್ನೊಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ಶ್ರೇಯಸ್‌ ಅಯ್ಯರ್!

ನಂತರ ಸೂರ್ಯಾಂಶ್‌ ಶೆಡ್ಗೆ ಹಾಗೂ ಕೂಪರ್‌ ಕನೋಲಿ ನಾಲ್ಕನೇ ವಿಕೆಟ್‌ಗೆ 43 ರನ್‌ ಗಳಿಸಿ ತಂಡಕ್ಕೆ ಭರವಸೆ ಮೂಡಿಸಿದರು. 37 ರನ್‌ ಗಳಿಸಿದ ಬಳಿಕ ಕನೋಲಿ ಔಟ್‌ ಆದರು. ನಂತರ 22 ಎಸೆತಗಳಲ್ಲಿ 35 ರನ್‌ ಗಳಿಸಿದ್ದ ಶೆಡ್ಗೆ ಅವರನ್ನು ಸುಯಾಶ್‌ ಶರ್ಮಾ ಔಟ್‌ ಮಾಡಿದರು. ನಂತರ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಶಶಾಂಕ್‌ ಸಿಂಗ್‌ ಮಧ್ಯಮ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ 67 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಪಂಜಾಬ್‌ಗೆ ಗೆಲುವಿನ ವಿಶ್ವಾಸವನ್ನು ಮೂಡಿಸಿದರು. 25 ಎಸೆತಗಳಲ್ಲಿ 37 ರನ್‌ ಗಳಿಸಿ ಆಡುತ್ತಿದ್ದ ಸ್ಟೋಯ್ನಿಸ್‌ ಅವರನ್ನು ನಿರ್ಣಾಯಕ ಸಮಯದಲ್ಲಿ ಜಾಶ್‌ ಹೇಝಲ್‌ವುಡ್‌ ಎಲ್‌ಬಿಡ್ಬ್ಲ್ಯು ಮಾಡಿದರು.



ನಂತರ ಕೊನೆಯವರೆಗೂ ಹೋರಾಟ ನಡೆಸಿದ ಶಶಾಂಕ್‌ ಸಿಂಗ್‌, 27 ಎಸೆತಗಳಲ್ಲಿ 56 ರನ್‌ ಗಳಿಸಿ ಪಂಜಾಬ್‌ ತಂಡಕ್ಕೆ ಆಸೆಯಾಗಿದ್ದರು. ಆದರೆ, ಕೊನೆಯ ಓವರ್‌ನಲ್ಲಿ ಅವರು ರಸಿಖ್‌ ದಾರ್‌ಗೆ ಔಟ್‌ ಆದರು. ಇವರ ಬೆನ್ನಲ್ಲೆ ಅಝಮತ್‌ ಒಮರ್ಜಾಯ್‌ (14) ಅವರನ್ನೂ ರಸಿಖ್‌ ಔಟ್‌ ಮಾಡಿದರು. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 199 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಪರ ರಸಿಖ್‌ 3 ವಿಕೆಟ್‌ ಕಿತ್ತರೆ, ಭುವನೇಶ್ವರ್‌ ಎರಡು ವಿಕೆಟ್‌ ಪಡೆದರು.



222 ರನ್‌ ಗಳಿಸಿದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಆರ್‌ಸಿಬಿ ತಂಡ, ವಿರಾಟ್‌ ಕೊಹ್ಲಿ ಹಾಗೂ ವೆಂಕಟೇಶ್‌ ಅಯ್ಯರ್‌ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಂಜಾಬ್‌ಗೆ 223 ರನ್‌ಗಳ ಗುರಿಯನ್ನು ನೀಡಿತು. ವಿರಾಟ್‌ ಕೊಹ್ಲಿ ಜೊತೆ ಇನಿಂಗ್ಸ್‌ ಆರಂಭಿಸಿದ ಜೇಕಬ್‌ ಬೆಥೆಲ್‌ ಮತ್ತೊಮ್ಮೆ ವಿಫಲರಾದರು. ಆದರೆ, ವಿರಾಟ್‌ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್‌ ಎರಡನೇ ವಿಕೆಟ್‌ಗೆ 76 ರನ್‌ಗಳನ್ನು ಕಲೆ ಹಾಕಿದರು. ಪಡಿಕ್ಕಲ್‌ ಕೇವಲ 25 ಎಸೆತಗಳಲ್ಲಿ 45 ರನ್‌ ಗಳಿಸಿ ಆರ್‌ಸಿಬಿಗೆ ಉತ್ತಮ ಆರಂಭ ತಂದುಕೊಟ್ಟು ಔಟ್‌ ಆದರು.



ವಿರಾಟ್‌ ಕೊಹ್ಲಿ, ವೆಂಕಟೇಶ್‌ ಅಯ್ಯರ್‌ ಅರ್ಧಶತ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ 37 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 58 ರನ್‌ ಗಳಿಸಿ ಆರ್‌ಸಿಬಿ ಮೊತ್ತವನ್ನು 150ರ ಗಡಿ ದಾಟಿಸಿ ವಿಕೆಟ್‌ ಒಪ್ಪಿಸಿದರು. ಅಲ್ಲದೆ ವೆಂಕಟೇಶ್‌ ಅಯ್ಯರ್‌ ಜೊತೆ 60 ರನ್‌ ಜೊತೆಯಾಟವನ್ನು ಆಡಿದರು. ಪಾಟಿದಾರ್‌ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಸಿಕ್ಕ ಅವಕಾಶವನ್ನು ವೆಂಕಟೇಶ್‌ ಅಯ್ಯರ್‌ ಸದುಪಯೋಗಪಡಿಸಿಕೊಂಡರು. ಅವರು ಆಡಿದ 40 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 73 ರನ್‌ ಸಿಡಿಸಿದರು ಹಾಗೂ ಕೊನೆಯಲ್ಲಿ ಟಿಮ್‌ ಡೇವಿಡ್‌ ಜೊತೆಗೆ 65 ರನ್‌ ಜೊತೆಯಾಟವನ್ನು ಆಡಿದರು. ಟಿಮ್‌ ಡೇವಿಡ್‌ 12 ಎಸೆತಗಳಲ್ಲಿ 28 ರನ್‌ ಚಚ್ಚಿದರು. ಆರ್‌ಸಿಬಿ ಪರ ಮೊದಲ ಅರ್ಧಶತಕ ಸಿಡಿಸಿದ ವೆಂಕಟೇಶ್‌ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.